ಅಸ್ತ್ರ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಲಂಚು ಲಾಲ್ ಕೆ.ಎಸ್ ನಿರ್ಮಿಸಿರುವ, ಅಶ್ವಥ್ ನಿರ್ದೇಶನದ ‘ಮೀರಾ’ ಚಲನಚಿತ್ರ ಎಪ್ರಿಲ್ 11 ಕ್ಕೆ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಪಕ ಲಂಚುಲಾಲ್ ಕೆ.ಎಸ್. ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು. ಈ ಚಿತ್ರವನ್ನು ಲಂಚುಲಾಲ್ ಕೆ.ಎಸ್ ನಿರ್ಮಿಸಿದ್ದು, ಅಶ್ವಥ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರ ತುಳು ಚಿತ್ರರಂಗದಲ್ಲಿ ಮಹತ್ವದ ಮೈಲಿಗಲ್ಲು ಆಗಲಿದೆ. ಈ ಚಿತ್ರ ತುಳು ಸಿನಿಮಾ ಇಂಡಸ್ಟ್ರಿಯಲ್ಲಿ ಮೊದಲ ಮಹಿಳಾ ಪ್ರಧಾನ ಚಿತ್ರವಾಗಿದೆ.

ಚಿತ್ರದಲ್ಲಿ ಇಶಿತಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅರವಿಂದ್ ಬೋಳಾರ್, ಸ್ವರಾಜ್ ಶೆಟ್ಟಿ, ಜೆ.ಪಿ ತೂಮಿನಾಡು, ಪ್ರಕಾಶ್ ತೂಮಿನಾಡು, ಮಂಜು ರೈ ಮೂಳೂರು, ರೂಪಶ್ರೀ ವರ್ಕಾಡಿ, ಯತೀಶ್ ಪೂಜಾರಿ, ಅಶ್ವಥ್, ಬೇಬಿ ಲಕ್ಷ್ಯ ಎಲ್. ಮುಂತಾದ ಕೋಸ್ಟಲ್ ವುಡ್ ನ ಹೆಸರಾಂತ ಕಲಾವಿದರ ಜತೆ ಮುಂಬಯಿ ಮೂಲದ ತುಳು ಬ್ಲಾಗರ್ ನಟಿ ರಕ್ಷಿತಾ ಶೆಟ್ಟಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಲ್ಲದೆ ಕರಾವಳಿ ಭಾಗದ ಅನೇಕ ಪ್ರತಿಭೆಗಳೂ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.ಮೀರಾ ಚಲನಚಿತ್ರದ ಡಿಒಪಿ ಅಜಯ್ ಕೆ.ಎಸ್, ಸಂಕಲನ ಜಾಬಿನ್ಸ್ ಸೆಬಾಸ್ಟಿಯನ್ ನಿರ್ವಹಿಸುತ್ತಿದ್ದು, ಸಂಗೀತ ಸಂಯೋಜನೆ ರಜ್ಜು ಜಯ ಪ್ರಕಾಶ್, ಗೀತೆ ರಚನೆ ಜಯಪ್ರಕಾಶ್ ಕಳೇರಿ ನಿರ್ವಹಿಸುತ್ತಿದ್ದಾರೆ. ಮಲಯಾಳಂ ಸಿನೆಮಾ ‘ಭ್ರಮಯುಗಂ’ ಖ್ಯಾತಿಯ ಲಿಜು ಪ್ರಭಾಕರ್ ಚಿತ್ರದ ಡಿ.ಐ ವಿಭಾಗವನ್ನು ನಿರ್ವಹಿಸುತ್ತಿ ದ್ದಾರೆ. ಎಸ್.ಎಫ್.ಎಕ್ಸ್ ಮತ್ತು ಅಂತಿಮ ಮಿಶ್ರಣವನ್ನು ಯುನಿಟಿ ಸ್ಟುಡಿಯೋಸ್ ನಿರ್ವಹಿಸಿದ್ದು, ಜಿತಿನ್ ಕುಂಬ್ಳೆ ಸಹಾಯಕ ನಿರ್ದೇಶಕರಾಗಿ, ಜಯ ಸುವರ್ಣ ಮೇಕ್ ಅಪ್ ಹಾಗೂ ಪಿ.ಆರ್.ಒ ಆಗಿ ಬಾಳ ಜಗನ್ನಾಥ ಶೆಟ್ಟಿ ಉಸ್ತುವಾರಿ ವಹಿಸಿದ್ದಾರೆ. ಈ ಚಿತ್ರದಲ್ಲಿ 5 ಹಾಡುಗಳಿದ್ದು, ದಕ್ಷಿಣ ಭಾರತದ ಹೆಸರಾಂತ ಹಿನ್ನೆಲೆ ಗಾಯಕರಾದ ಮಧು ಬಾಲಕೃಷ್ಣ ಸೇರಿದಂತೆ ಹೆಸರಾಂತ ಗಾಯಕರ ಧ್ವನಿಯಲ್ಲಿ ಮೂಡಿ ಬಂದಿದೆ. ತುಳು ಚಿತ್ರರಂಗದಲ್ಲಿ ಇದೇ ಮೊದಲ ಬಾರಿಗೆ A.I ತಂತ್ರಜ್ಞಾನದಲ್ಲಿ ತಯಾರಿಸಿದ ಹಾಡು ಕೂಡ ಈ ಚಿತ್ರದಲ್ಲಿ ಇದೆ.
ತನ್ನ ಕನಸುಗಳನ್ನು ನನಸಾಗಿಸುವ ಪಯಣದಲ್ಲಿ ಸಮಾಜದಿಂದ ಸವಾಲುಗಳನ್ನು ಎದುರಿಸುವ ಯುವತಿಯ ಕಥೆಯನ್ನು ಈ ಚಿತ್ರ ಹೇಳುತ್ತದೆ. ಈ ಚಲನಚಿತ್ರವು ಮಹಿಳೆಯರಿಗೆ ಅವರ ಕನಸನ್ನು ಜಯಿಸಲು ಮತ್ತು ಸಾಧಿಸಲು ಸ್ಫೂರ್ತಿ ನೀಡುತ್ತದೆ. ಮಂಗಳೂರು, ಕಟೀಲು, ಕಾಸರಗೋಡು, ಸೀತಾಂಗೋಳಿ, ಕುಂಬಳ ಮತ್ತು ಕರಾವಳಿ ಪ್ರದೇಶದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣಗೊಂಡ ‘ಮೀರಾ’ ತುಳು ಚಿತ್ರರಂಗದಲ್ಲಿ ಒಂದು ಮೈಲಿಗಲ್ಲು ಆಗಲಿದ್ದು, ಉತ್ತಮ ಕಥೆ, ಅಭಿನಯ ಮತ್ತು ಸಾಮಾಜಿಕ ಸಂದೇಶದೊಂದಿಗೆ ಎಪ್ರಿಲ್ 11 ರಂದು ಬಿಡುಗಡೆಯಾದಾಗ ಪ್ರೇಕ್ಷಕರ ಮೇಲೆ ಗಮನಾರ್ಹ ಪರಿಣಾಮ ಬೀರುವ ನಿರೀಕ್ಷೆಯಿದೆ.
ಇತ್ತೀಚೆಗೆ ಅಸ್ತ್ರ ಪೊಡ್ರಕ್ಷನ್ ಲಾಂಛನದ ಆಶ್ರಯದಲ್ಲಿ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತೆ ರಜಿನಿ ಶೆಟ್ಟಿ ಅವರಿಗೆ ಒಂದು ಲಕ್ಷ ರೂಪಾಯಿ ಅಸ್ತ್ರ ಸಂಸ್ಥೆಯಿಂದ ನೀಡಲಾಯಿತು. ಅಲ್ಲದೆ 300 ಮಂದಿ ಟ್ರಾಫಿಕ್ ಪೋಲಿಸರಿಗೆ ಕೊಡೆಗಳನ್ನು ವಿತರಿಸಲಾಯಿತು. ಪತ್ರಿಕಾಗೋಷ್ಠಿಯಲ್ಲಿ ನಟ ಸ್ವರಾಜ್ ಶೆಟ್ಟಿ, ನಿರ್ದೇಶಕ ಅಶ್ವಥ್, ನಟಿ ಇಶಿತಾ ಶೆಟ್ಟಿ ಉಪಸ್ಥಿತರಿದ್ದರು.