ಅಜೆಕಾರು ಪದ್ಮ ಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷ ಡಾ| ಸುಧಾಕರ ಶೆಟ್ಟಿಯವರು ಜ್ಞಾನ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಮಾಡುತ್ತಿರುವ ಕಾರ್ಯ ಸ್ಪೂರ್ತಿದಾಯಕವಾದದ್ದು. ಭಯದಿಂದ ಕಾಣುವ ನಾಗದೇವರ ಪ್ರತಿಷ್ಠೆ ಮತ್ತು ನಾಗಬ್ರಹ್ಮಮಂಡಲೋತ್ಸವ ಮಾಡುವ ಮೂಲಕ ನಾಗದೇವರನ್ನು ಒಲಿಸಿಕೊಂಡಿರುವ ಅವರ ಕಾರ್ಯ ನಿತ್ಯನೂತನವಾಗಿರಲಿ ಎಂದು ಉಡುಪಿ ಕೃಷ್ಣಾಪುರ ಮಠದ ಪರಮಪೂಜ್ಯ ಸ್ವಾಮೀಜಿ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿಗಳು ಆಶೀರ್ವಚನ ನೀಡಿದರು. ಅವರು ಕಡಿಯಾಳಿ ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಏಪ್ರಿಲ್ 6ರಂದು ಜರುಗಿದ ನಾಗಬ್ರಹ್ಮ, ರಕ್ತೇಶ್ವರಿ ಕ್ಷೇತ್ರದ ಪುನರ್ ಪ್ರತಿಷ್ಠೆ ಮತ್ತು ನಾಗಬ್ರಹ್ಮಮಂಡಲೋತ್ಸವ ಸಂದರ್ಭ ನಡೆದ ಸಮಾಜ ಸೇವಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.



ಪ್ರಾಸ್ತಾವಿಕವಾಗಿ ಮಾತನಾಡಿದ ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷ ಡಾ| ಸುಧಾಕರ ಶೆಟ್ಟಿ, ಪರಮಪೂಜ್ಯ ಸ್ವಾಮೀಜಿಗಳಿಂದ ಪಡೆದ ಈ ಪುಣ್ಯ ಭೂಮಿಯಲ್ಲಿ ಇಂತಹ ಕಾರ್ಯಕ್ರಮಗಳು ನಡೆಯುತ್ತಿರುವುದು ಶ್ರೀಗಳ ಆಶೀರ್ವಾದವೆಂದು ಭಾವಿಸುತ್ತೇನೆ. ನಾಗಮಂಡಲದಿಂದ ನಾಡಿಗೆ ಮಂಗಳವಾಗಲಿ ಮತ್ತು ನಾಗ ಪ್ರತಿಷ್ಠೆಯಿಂದ ನಾಡಿನ ಪ್ರತಿಷ್ಠೆಯಾಗಲಿ ಎಂದು ಹೇಳಿದರು. ಆರ್ಥಿಕ ಸಂಕಷ್ಟದಲ್ಲಿರುವವರಿಗೆ, ವಿಶೇಷ ಚೇತನರಿಗೆ, ಸಮಾಜ ಸೇವಾ ಟ್ರಸ್ಟ್ ಗಳಿಗೆ ಒಟ್ಟು 8,60,000 ಮೊತ್ತವನ್ನು ಸಹಾಯಧನ ರೂಪವಾಗಿ ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ನ ವತಿಯಿಂದ ನೀಡಲಾಯಿತು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ವೇದಮೂರ್ತಿ ರಾಮಕೃಷ್ಣ ತಂತ್ರಿ, ಮಾರ್ಗದರ್ಶಕರಾದ ನಾರಾಯಣ ಭಟ್ ರೆಂಜಾಳ ಉಪಸ್ಥಿತರಿದ್ದರು.













































































































