ವಿದ್ಯಾಗಿರಿ:ಸಮಾಜದಿಂದ ಎಲ್ಲವನ್ನು ಪಡೆದು, ಸಮಾಜಕ್ಕೆ ಹಿಂತಿರುಗಿಸುವ ಬದ್ಧತೆಯನ್ನು ಪ್ರತಿಯೊಬ್ಬರು ಹೊಂದಿರಬೇಕು. ಇದು ದೇಶದ ಸಮತೋಲಿತ ಬೆಳವಣಿಗೆಗೆ ಸಹಕಾರಿ ಎಂದು ಮಂಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಅಂಥೋನಿ ಎಸ್. ಮರಿಯಪ್ಪ ಹೇಳಿದರು. ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಮಾನವಿಕ ವಿಭಾಗ ಕುವೆಂಪು ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಎರಡು ದಿನಗಳ ‘ಪ್ರಥ್ವಿ ಪರ್ವ’ ರಾಷ್ಟೀಯ ಮಟ್ಟದ ಅಂತರ್ ಕಾಲೇಜು ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. ಸಮಾಜಕ್ಕೆ ಕೊಡುಗೆ ಕೇವಲ ಆರ್ಥಿಕ ನೆರವಿನ ಮೂಲಕ ಮಾತ್ರ ಆಗಬೇಕೆಂದಿಲ್ಲ. ಪರಿಸರದ ರಕ್ಷಣೆ ಹಾಗೂ ಪರಿಸರ ಸ್ನೇಹಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ನಮ್ಮ ಭವಿಷ್ಯ ಪೀಳಿಗೆಗೆ ಉಚಿತವಾಗಿ ನೀಡಬಹುದಾದ ಅಮೂಲ್ಯ ಕೊಡುಗೆಯಾಗಿದೆ. ನಾವಿಂದು ಪ್ರಕೃತಿ ಯಿಂದ ಎಲ್ಲವನ್ನು ಪಡೆದು, ಅದೇ ಪ್ರಕೃತಿಯನ್ನು ನಾಶ ಮಾಡಲು ಹೊರಟಿದ್ದೇವೆ. ಪರಿಸರದ ಸಂರಕ್ಷಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡದಿದ್ದರೆ ಭವಿಷ್ಯದಲ್ಲಿ ಹಲವು ಸಂಕಟಗಳನ್ನು ಎದುರಿಸಬೇಕಾಗುತ್ತದೆ.

“ನಾವು ಪ್ರಕೃತಿಯನ್ನು ಸಂರಕ್ಷಿಸಿದರೆ, ಅದು ನಮ್ಮನ್ನು ಸಂರಕ್ಷಿಸುತ್ತದೆ” ಎಂಬ ಸತ್ಯವನ್ನು ಅರಿಯಬೇಕಿದೆ. ನೈಸರ್ಗಿಕ ಸಂಪನ್ಮೂಲಗಳನ್ನು ಮಿತವಾಗಿ ಬಳಸಬೇಕು. ನಾವು ಬಳಸುವ ಪ್ರತಿಯೊಂದು ವಸ್ತುವಿನಲ್ಲಿ ತ್ಯಾಜ್ಯ ಉತ್ಪಾದನೆಯಾಗುತ್ತದೆ. ಜೈವಿಕವಾಗಿ ವಿಘಟನೆಯಾಗುವ ವಸ್ತುಗಳನ್ನ ಹೆಚ್ಚೆಚ್ಚು ಬಳಸಬೇಕು. ಬಳಸಿದ ವಸ್ತುಗಳನ್ನು ಮರುಬಳಕೆ ಮಾಡಬೇಕು. ಅನಗತ್ಯ ತಿರುಗಾಟ, ಅನಗತ್ಯ ವಿದ್ಯುತ್ ಬಳಕೆ ಇವೆಲ್ಲವೂ ಪರಿಸರ ರಕ್ಷಣೆಯ ಭಾಗ ಎಂದು ತಿಳಿಸಿದರು. ಬಾಕ್ಸ್ ಐಟಮ್: ನಮ್ಮ ಸಂಪನ್ಮೂಲ ಸೀಮಿತವಾಗಿದ್ದು, ಜನಸಂಖ್ಯೆ ಮಾತ್ರ ಅನಿಯಂತ್ರಿತವಾಗಿ ಬೆಳವಣಿಗೆಯಾಗುತ್ತಿರುವುದು ನಮ್ಮ ಬಹುತೇಕ ಸಮಸ್ಯೆಗಳಿಗೆ ಕಾರಣವಾಗಿದೆ: ಡಾ ಮರಿಯಪ್ಪ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ ಕೇವಲ ಪರಿಸರ ಸಂರಕ್ಷಣೆಯ ಧ್ಯೇಯದೊಂದಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಸಾಲದು, ಪರಿಸರ ಸಂರಕ್ಷಣೆ ಕೆಲಸಗಳು ವಿದ್ಯಾರ್ಥಿ ಸಮುದಾಯದಿಂದ ಮೂಡಿಬರಬೇಕು ಎಂದರು ಕಲಾ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳಿದ್ದು, ಅವುಗಳ ಸದ್ಭಳಕೆಯಾದರೆ ದಕ್ಷಿಣ ಭಾರತದಲ್ಲೂ ಕಲಾ ವಿಭಾಗದ ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ನಿರ್ಮಿಸಿಕೊಳ್ಳಬಹುದು ಎಂದರು. ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ ಇಂದಿನ ಯುಗದಲ್ಲಿ “ಬಳಸಿ-ಬಿಸಾಡುವ’’ ಮನೋಭಾವ ವ್ಯಾಪಕವಾಗಿ ಹೆಚ್ಚುತ್ತಿದೆ. ಈ ಪ್ರವೃತ್ತಿ ಪರಿಸರದ ಮಟ್ಟದಲ್ಲಿ ದೊಡ್ಡ ಸಮಸ್ಯೆಯನ್ನು ಉಂಟುಮಾಡುತ್ತಿದೆ.
ಸಂಪನ್ಮೂಲಗಳನ್ನು ಮಿತವಾದ ಬಳಕೆ ಅತ್ಯಗತ್ಯ. ಪ್ಲಾಸ್ಟಿಕ್ ಉತ್ಪಾದನೆ ಕಡಿಮೆಯಾದಾಗ ಬಳಕೆಯೂ ಕಡಿಮೆಯಾಗುತ್ತದೆ. ಭೂಮಿಯೂ ನಮ್ಮ ಅಗತ್ಯಗಳನ್ನು ಈಡೇರಿಸಬಹುದೇ ಹೊರತು ನಮ್ಮ ಅತಿಯಾಸೆಯನ್ನಲ್ಲ. ಪ್ರತಿಯೊಬ್ಬರಲ್ಲೂ ಪರಿಸರ ಸಂರಕ್ಷಣೆಯ ಚಿಂತನೆ ಮೂಡಬೇಕಿದೆ ಎಂದರು. ಕಾರ್ಯಕ್ರಮದ ವಿದ್ಯಾರ್ಥಿ ಸಂಯೋಜಕಿ ದಿಶಾ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಶ್ರೀವಲ್ಲಿ ಹಾಗೂ ಸುದರ್ಶಿನಿ ನಿರೂಪಿಸಿದರು. ತೇಜಸ್ವಿನಿ ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತಧಿಕಾರಿ ಬಾಲಕೃಷ್ಣ ಶೆಟ್ಟಿ, ಮಾನವಿಕ ವಿಭಾಗದ ಡೀನ್ ಸಂಧ್ಯಾ ಕೆ. ಎಸ್. ಉಪನ್ಯಾಸಕಿ ರಕ್ಷಿತಾ ತೋಡಾರ್, ವಿದ್ಯಾರ್ಥಿ ಸಂಯೋಜಕ ಚೇತನ್ ಇದ್ದರು.