ಬಾಂಬೆ ಬಂಟ್ಸ್ ಅಸೋಸಿಯೇಷನ್ ಕಳೆದ 41 ವರ್ಷಗಳಿಂದ ಸಮಾಜಪರ ಕಾರ್ಯಗಳ ಮೂಲಕ ಮುಂಬೈ ಮಹಾನಗರದಲ್ಲಿ ಬಂಟರ ಸಮಾಜದ ಪ್ರತಿಷ್ಠಿತ ಸಂಸ್ಥೆಯಾಗಿ ಗುರುತಿಸಲ್ಪಟ್ಟಿದೆ. ಇದಕ್ಕೆ ನಮ್ಮ ಮಾಜಿ ಅಧ್ಯಕ್ಷರುಗಳು, ದಾನಿಗಳು, ಸಮಾಜದ ಗಣ್ಯರ ಸಹಕಾರ ಕಾರಣವಾಗಿದೆ. ಶೈಕ್ಷಣಿಕ ಕ್ಷೇತ್ರದಲ್ಲೂ ಬಾಂಬೆ ಬಂಟ್ಸ್ ಅಸೋಸಿಯೇಷನ್ ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದು, ನಮ್ಮ ಉನ್ನತ ಶಿಕ್ಷಣ ಸಂಸ್ಥೆಯು ನವಿಮುಂಬೈಯಲ್ಲಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿ ಬೆಳೆದಿದೆ ಎಂದು ಬಾಂಬೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಸಿಎ ಸುರೇಂದ್ರ ಕೆ. ಶೆಟ್ಟಿ ತಿಳಿಸಿದರು.
ನವಿಮುಂಬಯಿಯ ಜೂಯಿ ನಗರದ ಬಂಟ್ಸ್ ಸೆಂಟರ್ ನ ಶ್ರೀಮತಿ ಸೌಮ್ಯಲತಾ ಸದಾನಂದ ಶೆಟ್ಟಿ ಆಡಿಟೋರಿಯಂನಲ್ಲಿ ಮಾರ್ಚ್ 9ರಂದು ನಡೆದ ಬಾಂಬೆ ಬಂಟ್ಸ್ ಅಸೋಸಿಯೇಷನ್ ಬಹಿರಂಗ ಸಭೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ನನ್ನ ಅಧ್ಯಕ್ಷತೆ ಅವಧಿಯಲ್ಲಿ ಬಾಂಬೆ ಬಂಟ್ಸ್ ಅಸೋಸಿಯೇಷನ್ ಮುಖಾಂತರ ಹಲವಾರು ಸಮಾಜಪರ ಕಾರ್ಯಗಳನ್ನು ಮಾಡಿದ್ದೇನೆ. ಇದಕ್ಕೆ ನನಗೆ ಎಲ್ಲರ ಸಹಕಾರ ಪ್ರೋತ್ಸಾಹ ದೊರೆತಿದ್ದು, ಈ ಸಂದರ್ಭ ನಾನು ಅವರಿಗೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಭವಿಷ್ಯದಲ್ಲೂ ಬಾಂಬೆ ಬಂಟ್ಸ್ ಅಸೋಸಿಯೇಷನ್ ಇನ್ನಷ್ಟು ಅಭಿವೃದ್ಧಿಪರ ಕಾರ್ಯಗಳನ್ನು ಆಯೋಜಿಸುವಂತಾಗಬೇಕು. ನೂತನ ಕಾರ್ಯಕಾರಿ ಸಮಿತಿಗೆ ನನ್ನ ಎಲ್ಲಾ ರೀತಿಯ ಸಹಕಾರ ಇದೆ ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮತ್ತು ಚಂದ್ರಿಕಾ ಹರೀಶ್ ಶೆಟ್ಟಿ ದಂಪತಿಯನ್ನು ಅವರ ಸುದೀರ್ಘ ಕಾಲದ ಸಾಮಾಜಿಕ ಸೇವೆಗಳನ್ನು ಗುರುತಿಸಿ ಅಸೋಸಿಯೇಷನ್ ವತಿಯಿಂದ ಶಾಲು ಹೊದಿಸಿ, ಫಲಪುಷ್ಪ ಸ್ಮರಣಿಕೆಯನ್ನಿತ್ತು ಸನ್ಮಾನಿಸಲಾಯಿತು. ಐಕಳ ಹರೀಶ್ ಶೆಟ್ಟಿಯವರನ್ನು ಅಸೋಸಿಯೇಷನ್ ಉಪಾಧ್ಯಕ್ಷ ನ್ಯಾಯವಾದಿ ಡಿ.ಕೆ. ಶೆಟ್ಟಿ ಪರಿಚಯಿಸಿದರು.
ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮಾಜದ ಸಾಧಕರಾದ ಮಂಗಳೂರು ಅಡ್ಯಾರ್ ಗಾರ್ಡನ್ ಮಾಲಕ ಕಿಶನ್ ಶೆಟ್ಟಿ, ಹೋಟೆಲ್ ಉದ್ಯಮಿ ರಘುರಾಮ ಕೆ. ಶೆಟ್ಟಿ, ಶಿಕ್ಷಣ ಕ್ಷೇತ್ರದ ಸಾಧಕ ಡಾ. ಶ್ರೀಧರ ಶೆಟ್ಟಿ, ವೈದ್ಯಕೀಯ ಕ್ಷೇತ್ರದ ಸಾಧಕ ಡಾ. ಸುನಿಲ್ ಎಚ್. ಶೆಟ್ಟಿ ಮತ್ತು ಕ್ರೀಡಾ ಕ್ಷೇತ್ರದ ಸಾಧಕ ಪ್ರತಾಪ್ ವಿ. ಶೆಟ್ಟಿ ಅವರನ್ನು ಬಂಟ್ಸ್ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಾಂಬೆ ಬಂಟ್ಸ್ ಅಸೋಸಿಯೇಷನ್ ಮಾಜಿ ಅಧ್ಯಕ್ಷರಾದ ಟ್ರಸ್ಟಿ ಎನ್.ಸಿ ಶೆಟ್ಟಿ, ಟ್ರಸ್ಟಿ ಜಯರಾಮ್ ಎಸ್. ಮಲ್ಲಿ, ಜಯಂತ್ ಕೆ. ಶೆಟ್ಟಿ, ನ್ಯಾಯವಾದಿ ರತ್ನಾಕರ ವಿ. ಶೆಟ್ಟಿ, ಶ್ಯಾಮ್ ಎನ್. ಶೆಟ್ಟಿ, ನ್ಯಾಯವಾದಿ ಶೇಖರ್ ಶೆಟ್ಟಿ ಉಪ್ಪೂರು ಅವರನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಮಧ್ಯಾಹ್ನ ಮಹಿಳಾ ವಿಭಾಗದ ವತಿಯಿಂದ ಕುಣಿತ ಭಜನೆ ಸ್ಪರ್ಧೆ ನಡೆಯಿತು.

ಮುಖ್ಯ ಅತಿಥಿಯಾಗಿ ಸ್ಥಳೀಯ ಶಾಸಕಿ ಮಂದಾ ವಿ ಮ್ಯಾತ್ರೆ ಸಿಬಿಡಿ ಬೇಲಾಪುರ, ಗೌರವ ಅತಿಥಿಯಾಗಿ ಪ್ರಭಾ ಸುರೇಂದ್ರ ಶೆಟ್ಟಿ ಪಾಲ್ಗೊಂಡರು. ಬಾಂಬೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಸಿಎ ಸುರೇಂದ್ರ ಶೆಟ್ಟಿ ಮತ್ತು ಪ್ರಭಾ ಸುರೇಂದ್ರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಬಾಂಬೆ ಬಂಟ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ನ್ಯಾಯವಾದಿ ಡಿ.ಕೆ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಐಕಳ ಕಿಶೋರ್ ಕೆ ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ ವಿಶ್ವನಾಥ ಶೆಟ್ಟಿ, ಜತೆ ಕಾರ್ಯದರ್ಶಿ ನ್ಯಾಯವಾದಿ ಗುಣಕರ ಡಿ. ಶೆಟ್ಟಿ, ಕೋಶಾಧಿಕಾರಿ ಸಿಎ ದಿವಾಕರ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ತೇಜಾಕ್ಷಿ ಎಸ್. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷೆ ದೃಶ್ಯಾ ಕೆ. ಶೆಟ್ಟಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಹಿತೈಷಿಗಳು, ಮಾಜಿ ಅಧ್ಯಕ್ಷರು, ದಾನಿಗಳು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.
ಸುಮತಿ ಶೆಟ್ಟಿಯವರ ಪ್ರಾರ್ಥನೆಯೊಂದಿಗೆ ಅತಿಥಿ ಗಣ್ಯರು ದೀಪ ಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ರಂಗ ನಿರ್ದೇಶಕ ನಾರಾಯಣ ಶೆಟ್ಟಿ ನಂದಳಿಕೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.