ಯುಎಇ ಬಂಟ್ಸ್ ಪ್ರೀಮಿಯರ್ ಲೀಗ್ ಸೀಸನ್ – 4 ಹಾಗೂ ದಿ. ದಿವೇಶ್ ಆಳ್ವ ಸ್ವರಣಾರ್ಥ ಕ್ರಿಕೆಟ್ ಪಂದ್ಯಾಟಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಎಲ್ಲಾ ತಂಡಗಳು ತಮ್ಮ ತಮ್ಮ ಗೆಲುವಿಗಾಗಿ ರಾತ್ರಿ ಹಗಲು ತಾಲೀಮು ನಡೆಸುತ್ತಿದೆ. ಜನವರಿ 26 ರಂದು ಶಾರ್ಜಾದ ಡಿಸಿಎಸ್ ಸೆಲೆಕ್ಟೆರೇನ ರಾಹ್ಮನಿಯಾದ ಮೈದಾನದಲ್ಲಿ ಬೆಳಿಗ್ಗೆ ಏಳರಿಂದ ಸಾಯಂಕಾಲದವರೆಗೆ ಪಂದ್ಯಾಟವು ನಡೆಯಲಿದ್ದು ಕ್ರಿಕೆಟ್ ಪಂದ್ಯಾಟದ ಸಂಘಟನಾ ಸಮಿತಿಯ ಸದಸ್ಯರು ಕಾರ್ಯಕ್ರಮದ ಯಶಸ್ವಿಗೆ ದುಡಿಯುತ್ತಿದ್ದಾರೆ.
ಬೆಳಿಗ್ಗೆ 7 ಗಂಟೆಗೆ ಪಂದ್ಯಾಟ ಆರಂಭವಾಗಲಿದ್ದು ಬೆಳಿಗ್ಗೆ 9 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕ ಕರಾವಳಿಯ ಬಂಟ ಕುವರ ಗುರುಕಿರಣ್ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ. ಯುಎಇ ಬಂಟ್ಸ್ ಅಧ್ಯಕ್ಷರಾದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ಯುಎಇ ಬಂಟ್ಸ್ ನ ಪೋಷಕರಾದ ಡಾ. ಬಿ.ಆರ್ ಶೆಟ್ಟಿ, ಯುಎಇ ಬಂಟ್ಸ್ ಮಹಾ ಪೋಷಕರಾದ ಸರ್ವೋತ್ತಮ ಶೆಟ್ಟಿ ಹಾಗೂ ಯುಎಇ ಬಂಟ್ಸ್ ಸಲಹಾ ಸಮಿತಿಯ ಸದಸ್ಯರು ಉಪಸ್ಥಿತರಿರುವರು.ಗುಣಶೀಲ್ ಶೆಟ್ಟಿಯವರ ಎಸಿಇ ಅವೇಂಜರ್ಸ್, ರವಿ ಶೆಟ್ಟಿ ಮೂಡಂಬೈಲ್ ಕತಾರ್ ರವರ ಎ.ಟಿ.ಎಸ್ ಗ್ರೂಪ್, ಪ್ರದೀಪ್ ಶೆಟ್ಟಿಯವರ ಕಾನ್ಸೆಪ್ಟ್ ವಾರಿಯರ್ಸ್, ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರ ಫಾರ್ಚೂನ್ ಗ್ಲಾಡಿಯೇಟರ್ಸ್, ದಿನೇಶ್ ಶೆಟ್ಟಿ ಕೊಟ್ಟಿಂಜರವರ ನವಚೇತನ ಫ್ರೆಂಡ್ಸ್, ರೇಷ್ಮಾ ದಿವೇಶ್ ಆಳ್ವರವರ ಪಯೋನೀರ್ ಮರೈನರ್ಸ್, ಉದಯ ಶೆಟ್ಟಿಯವರ ರೇಂಜರ್, ಶರತ್ ಶೆಟ್ಟಿಯವರ ಸೋಮ ಅರಸ ವಾರಿಯರ್ಸ್, ಪ್ರವೀಣ್ ಶೆಟ್ಟಿ ಅವರ ವರಾಹ ರೂಪ ಮಂಗಳೂರು, ವಿದ್ಯಾನಂದ ಶೆಟ್ಟಿಯವರ ವಿಡ್ ಒನ್ ವಿಕ್ಟರ್ಸ್ ಎಂಬ ಹತ್ತು ತಂಡಗಳು ಶಾರ್ಜಾದ ಮೈದಾನದಲ್ಲಿ ಕಣಕ್ಕಿಳಿಯಲಿದ್ದು ಯಾರ ಪಾಲಿಗೆ ವಿಜಯ ಲಭಿಸಲಿದೆ ಎಂಬುದು ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಯಾಗಿದೆ.
ಸಂಜೆ 6 ಗಂಟೆಗೆ ದಿ. ದಿವೇಶ್ ಆಳ್ವರವರ ಆತ್ಮೀಯ ಸ್ನೇಹಿತರು ಹಾಗೂ ಕುಟುಂಬಿಕರಿಂದ ವಿಶೇಷ ಆಕರ್ಷಣೆಯ ಪಂದ್ಯಾಟವು ಜರಗಲಿರುವುದು ಹಾಗೂ ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಸಂಗೀತ ನಿರ್ದೇಶಕ ಗುರುಕಿರಣ್ ಶೆಟ್ಟಿಯವರು ಕ್ರೀಡಾ ಪಟುಗಳಿಗೆ, ಕ್ರೀಡಾಭಿಮಾನಿಗಳಿಗೆ ಮನರಂಜನೆ ನೀಡಲಿದ್ದಾರೆ. ಯುಎಇಯ ಎಲ್ಲಾ ಕ್ರೀಡಾ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಕ್ರಿಕೆಟ್ ಪಂದ್ಯಾಟದ ಸಂಘಟನಾ ಸಮಿತಿಯ ಸದಸ್ಯರು ಮಾಧ್ಯಮದ ಮೂಲಕ ತಿಳಿಸಿದ್ದಾರೆ.