ವಿಕ್ರೋಲಿ ಪರಿಸರದಲ್ಲಿ ತಮ್ಮ ಪೂರ್ವಜರು, ತುಳು ಕನ್ನಡಿಗರು ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕವಾಗಿ ನಾವೆಲ್ಲರೂ ಒಗ್ಗಟ್ಟಿನಲ್ಲಿದ್ದು ಯಾವುದೇ ಸಮಸ್ಯೆಗಳನ್ನು ಸಂಘಟಿತರಾಗಿ ಎದುರಿಸಲು ದೂರದರ್ಶಿತ್ವದ ಮುಂದಾಲೋಚನೆಯೊಂದಿಗೆ ಕನ್ನಡ ಸಂಘದ ಸ್ಥಾಪನೆಗೆ ನಾಂದಿಯಾಡಿದರು. ಅವರ ಸಾಧನೆ ಸ್ಮರಣೀಯವಾದದು. ಇದೀಗ ನಾವೆಲ್ಲರೂ 37ನೇ ವಾರ್ಷಿಕ ಮಹಾಸಭೆಯಲ್ಲಿ ಇದ್ದೇವೆ. ಯಾವುದೇ ಸಂಘಟನೆ ಪ್ರಗತಿ ಕಾಣಬೇಕಾದರೆ ಆರ್ಥಿಕವಾಗಿ ಸದೃಢರಾಗಿರಬೇಕು. ನಮ್ಮ ಪೂರ್ವಜರು ಸ್ಥಾಪನೆ ಮಾಡಿದ ವೀಕೇಸ್ ಇಂಗ್ಲಿಷ್ ಹೈಸ್ಕೂಲ್ ನಲ್ಲಿ ಇದೀಗ 1,100 ವಿದ್ಯಾರ್ಥಿಗಳು ವಿದ್ಯಾರ್ಜನೆಗೈಯುತ್ತಿದ್ದು ನಮ್ಮ ಸಂಘಕ್ಕೆ ಭೀಮ ಬಲ ಬಂದಂತಾಗಿದೆ. ನಮ್ಮ ಸಂಘದಲ್ಲಿ 425 ಸದಸ್ಯರಿದ್ದರೂ ಮಹಾಸಭೆಗೆ ಹೆಚ್ಚಿನವರು ಗೈರು ಹಾಜರಾಗಿರುವುದು ಶೋಚನೀಯ. ಇಂದು ನನ್ನನ್ನು ಮುಂದಿನ ಅವಧಿಗೆ ಅಧ್ಯಕ್ಷರನ್ನಾಗಿ ಮರು ಆಯ್ಕೆ ಮಾಡಿದ್ದೀರಿ. ತಮ್ಮೆಲ್ಲರಿಗೂ ಕೃತಜ್ಞತೆಗಳು. ವೀಕೇಸ್ ಹೈಸ್ಕೂಲ್ ಹಾಗೂ ಕನ್ನಡ ಸಂಘಕ್ಕೆ ಎಲ್ಲರ ಒಮ್ಮತದ ಸಹಕಾರವಿರಲಿ ಎಂದು ವಿಕ್ರೋಲಿ ಕನ್ನಡ ಸಂಘದ ಅಧ್ಯಕ್ಷ ಉದಯ ಎಲ್. ಶೆಟ್ಟಿ ಪೇಜಾವರ ನುಡಿದರು. ಅವರು ಜನವರಿ 5ರಂದು ವಿಕ್ರೋಲಿ ಪೂರ್ವ ಠಾಗೋರ್ ನಗರದ ವೀಕೇಸ್ ಹೈಸ್ಕೂಲ್ ನ ಸಭಾಗೃಹದಲ್ಲಿ ನಡೆದ ವಿಕ್ರೋಲಿ ಕನ್ನಡ ಸಂಘದ 37ನೇ ವಾರ್ಷಿಕ ಮಹಾಸಭೆಯನ್ನುದ್ದೇಶಿಸಿ ಮಾತನಾಡಿದರು.ಆರಂಭದಲ್ಲಿ ಪದಾಧಿಕಾರಿಗಳು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅವಿಷ್ಕ ಪೂಜಾರಿ ಪ್ರಾರ್ಥನೆ ಹಾಡಿದರು. ಗೌರವ ಕಾರ್ಯದರ್ಶಿ ಉಮೇಶ್ ಪೂಜಾರಿ ವಾರ್ಷಿಕ ವರದಿ ನೀಡಿದರು. ಪ್ರವೀಣ್ ಶೆಟ್ಟಿ ಲೆಕ್ಕಪತ್ರ ಮಂಡಿಸಿದರು. ಸುಧಾಕರ ಶೆಟ್ಟಿ, ಶಿವಾನಂದ ಶೆಟ್ಟಿ, ರಾಜೇಂದ್ರ ಪಾಲನ್, ನವೀನ್ ಶೆಟ್ಟಿ ಇನ್ನ ಬಾಳಿಕೆ ಅನುಮೋದಿಸಿದರು. ಇದೇ ಸಂದರ್ಭ ಮುಂದಿನ ಎರಡು ವರ್ಷಗಳ ಅವಧಿಗೆ ಅಧ್ಯಕ್ಷರನ್ನಾಗಿ ಉದಯ ಎಲ್ ಶೆಟ್ಟಿ ಪೇಜಾವರ ಮತ್ತು ಗೌರವ ಕಾರ್ಯದರ್ಶಿಯಾಗಿ ಉಮೇಶ್ ಪೂಜಾರಿಯವರನ್ನು ಸರ್ವಾನುಮತದಿಂದ ಮರು ಆಯ್ಕೆ ಮಾಡಲಾಯಿತು. ಲೆಕ್ಕ ಪರಿಶೋಧಕರನ್ನಾಗಿ ಸಿಎ ಸದಾಶಿವ ಶೆಟ್ಟಿ ಅಂಡ್ ಕಂಪನಿ ಚಾರ್ಟರ್ಡ್ ಅಕೌಂಟೆಂಟ್ ನ್ನು ಮರು ಆಯ್ಕೆಗೊಳಿಸಲಾಯಿತು. ಆಡಿಟ್ ಗಾಗಿ ರಾಜೇಂದ್ರ ಪಾಲನ್ ಅವರನ್ನು ನೇಮಿಸಲಾಯಿತು. ಸಲಹೆಗಾರರಾಗಿ ಸುಧಾಕರ್ ಶೆಟ್ಟಿ, ಉದಯ ಆರ್. ಶೆಟ್ಟಿ, ಶಿವಾನಂದ ಶೆಟ್ಟಿ, ನವೀನ್ ಶೆಟ್ಟಿ ಇನ್ನ ಬಾಳಿಕೆ, ಭಾಸ್ಕರ್ ಶೆಟ್ಟಿ ಅವರನ್ನು ಆಯ್ಕೆಗೊಳಿಸಲಾಯಿತು.ಸುಧಾಕರ್ ಶೆಟ್ಟಿ ಅವರು ಮಾತನಾಡಿ, ಸಂಘಟನೆಗೆ ಹೆಚ್ಚಿನ ಬಲ ಬರಬೇಕಾದರೆ ಸದಸ್ಯರು ಹೆಚ್ಚಾಗಬೇಕು. ತುಳು ಕನ್ನಡಿಗ ಸದಸ್ಯರ ನೋಂದಣಿ ಮಾಡಬೇಕು. ಸಂಘಟನೆಯ ಅಭಿವೃದ್ಧಿಗೆ ಎಲ್ಲರೂ ಕಾರ್ಯ ಪ್ರವೃತ್ತರಾಗಬೇಕು ಎಂದರು. ನವೀನ್ ಶೆಟ್ಟಿ ಇನ್ನ ಬಾಳಿಕೆ ಮಾತನಾಡಿ, ಯಾವುದೇ ಸಂಘಟನೆಗಳಲ್ಲಿ ಚರ್ಚೆ ಮಾತುಗಳು ಸಹಜ. ಸೌಹಾರ್ದತೆಯೊಂದಿಗೆ ಸಕರಾತ್ಮಕವಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಸಂಸ್ಥೆಯ ಪ್ರಗತಿ ಸಾಧ್ಯವಾಗುತ್ತದೆ ಎಂದರು. ಸತೀಶ್ ಸಾಲ್ಯಾನ್ ಅವರು ಮಾತನಾಡಿ, 1662 ರಲ್ಲಿ ಸ್ಥಾಪನೆಗೊಂಡ ವಿಕ್ರೋಲಿ ಕನ್ನಡ ಸಂಘದ ನೋಂದಣಿ ಮತ್ತು ಗೊಂದಲವನ್ನು ವಿವರಿಸಿ ಸಮಸ್ಯೆಗೆ ಸಮಾಧಾನ ನೀಡಿದರು. ಹಿರಿಯ ಸದಸ್ಯರನ್ನು, ಸಲಹೆಗಾರರನ್ನು ಹಾಗೂ ಸಹಕರಿಸಿದವರನ್ನು ಗೌರವಿಸಲಾಯಿತು. ಕಾರ್ಯಕ್ರಮವನ್ನು ಗೌರವ ಪ್ರಧಾನ ಕಾರ್ಯದರ್ಶಿ ಉಮೇಶ್ ಎನ್. ಪೂಜಾರಿ ನಿರೂಪಿಸಿ ವಂದಿಸಿದರು.