ಮಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಶ್ರೀರಾಮಕೃಷ್ಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಉಡುಪಿ ಶಾಖೆಯ ನವೀಕೃತ, ಹವಾನಿಯಂತ್ರಿತ ಕಚೇರಿ ಉದ್ಘಾಟನೆಯು ಗುರುವಾರ ನೆರವೇರಿತು. ಕಲ್ಸಂಕ ವಿದ್ಯಾಸಮುದ್ರತೀರ್ಥ ರಸ್ತೆ ಬಳಿಯ ಸತೀಶ್ಚಂದ್ರ ಬಿಲ್ಡಿಂಗಿನ ನೆಲಮಹಡಿಯಲ್ಲಿ ಸೊಸೈಟಿಯ ನಿರ್ದೇಶಕ ಹಾಗೂ ಉಡುಪಿ ಶಾಖಾ ಉಸ್ತುವಾರಿ ನಿರ್ದೇಶಕ ರವೀಂದ್ರನಾಥ ಜಿ. ಹೆಗ್ಡೆ ನವೀಕೃತ ಕಚೇರಿ ಉದ್ಘಾಟಿಸಿ, ಕೆ.ಬಿ. ಜಯಪಾಲ ಶೆಟ್ಟಿಯವರು ಶ್ರಮ ವಹಿಸಿ ಸ್ಥಾಪಿಸಿದ ಸೊಸೈಟಿಯು ಕೆ. ಜೈರಾಜ್ ಬಿ. ರೈ ಸಮರ್ಥ ನೇತೃತ್ವದಲ್ಲಿ ಮುನ್ನಡೆಯುತ್ತಿದ್ದು 1,050 ಕೋಟಿ ರೂ. ವ್ಯವಹಾರ ಹೊಂದಿದೆ. 13 ಜಿಲ್ಲಾ ಪ್ರಶಸ್ತಿ, ಆರು ರಾಜ್ಯ ಪ್ರಶಸ್ತಿ, ಸಹಕಾರ ಮಾಣಿಕ್ಯ ಪ್ರಶಸ್ತಿಯನ್ನು ಸೊಸೈಟಿ ಪಡೆದಿದ್ದು ಅಧ್ಯಕ್ಷ ಕೆ. ಜೈರಾಜ್ ಬಿ. ರೈ ದಕ್ಷ ನಾಯಕತ್ವ, 15 ನಿರ್ದೇಶಕರ ಮಾರ್ಗದರ್ಶನ, ಗ್ರಾಹಕರ ಸಹಕಾರ, ಸಿಬ್ಬಂದಿಗಳ ಶ್ರಮ ಸ್ಮರಣೀಯ ಎಂದರು.
ಹವಾನಿಯಂತ್ರಿತ ವ್ಯವಸ್ಥೆಗೆ ಉಡುಪಿ ಶಾಖಾ ಕಟ್ಟಡ ಮಾಲೀಕರಾದ ಪ್ರೇಮಲತಾ ಎಸ್. ಹೆಗ್ಡೆ ಚಾಲನೆ ನೀಡಿದರು. ಸೊಸೈಟಿಯ ಉಡುಪಿ ಶಾಖಾ ಸಲಹಾ ಸಮಿತಿ ಸದಸ್ಯರಾದ ಎಸ್. ರಾಜಮೋಹನ್, ಪ್ರವೀಣ್ ಕುಮಾರ್, ವಿಜಯ ಬ್ಯಾಂಕಿನ ನಿವೃತ್ತ ಅಧಿಕಾರಿ ಸುಬ್ಬಯ್ಯ ಹೆಗ್ಡೆ, ಮೋಹನ್ದಾಸ್ ಹೆಗ್ಡೆ ಉಪಸ್ಥಿತರಿದ್ದರು. ಮೊದಲ ಗ್ರಾಹಕರಾದ ಸತೀಶ್ ಹಾಗೂ ಸರಸ್ವತಿ ರಾವ್ ಅವರಿಂದ ನಗದನ್ನು ಸ್ವೀಕರಿಸಲಾಯಿತು. ಗ್ರಾಹಕರಾದ ಭುವನ ಪ್ರಸಾದ್ ಹೆಗ್ಡೆ ಹಾಗೂ ವೃಜನಾಥ ಆಚಾರ್ಯ ಮಾತನಾಡಿದರು. ಶಾಖಾ ಕಟ್ಟಡ ಮಾಲೀಕರಾದ ಪ್ರೇಮಲತಾ ಎಸ್. ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು. ಸೊಸೈಟಿ ಅಧ್ಯಕ್ಷ ಕೆ. ಜೈರಾಜ್ ಬಿ.ರೈ ಹಾಗೂ ಉಪಾಧ್ಯಕ್ಷೆ ಲಕ್ಷ್ಮೀ ಜಯಪಾಲ ಶೆಟ್ಟಿ ಉಡುಪಿ ಶಾಖೆಗೆ ಶುಭ ಹಾರೈಸಿದ ಸಂದೇಶವನ್ನು ವಾಚಿಸಲಾಯಿತು.
ಸುಶ್ಮಿತಾ ಪ್ರಾರ್ಥಿಸಿದರು. ಉಡುಪಿ ಶಾಖಾ ವ್ಯವಸ್ಥಾಪಕ ಅಣ್ಣಪ್ಪ ಶೆಟ್ಟಿ ಸ್ವಾಗತಿಸಿದರು. ಧನಂಜಯ್ ನಿರೂಪಿಸಿದರು. ಸೊಸೈಟಿಯ ಮಹಾಪ್ರಬಂಧಕ ಗಣೇಶ್ ಜಿ. ಕೆ. ವಂದಿಸಿದರು.