ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ವತಿಯಿಂದ ನಡೆಸಲ್ಪಡುವ, ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ವಾರ್ಷಿಕೋತ್ಸವ ಡಿಸೆಂಬರ್ 14 ರಂದು ಪುತ್ತೂರು ಎಂ. ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ನಡೆಯಿತು.
ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಕಾರ್ಯಕ್ರಮ ಉದ್ಘಾಟಿಸಿ ಸಂಸ್ಥೆಯ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ, ದಕ್ಷಿಣ ಕನ್ನಡದಲ್ಲಿ ಸಾಂಸ್ಕೃತಿಕ ಸಂಪತ್ತು ಹೇರಳವಾಗಿದೆ, ಇಲ್ಲಿ ಆಧುನಿಕತೆ ಸೊಗಡಿನೊಂದಿಗೆ ಹಿಂದಿನ ಕಾಲದಿಂದ ನಡೆದು ಬಂದಿರುವ ಯಕ್ಷಗಾನ, ಕಂಬಳವನ್ನು ಜನ ಬಹಳ ಪ್ರೀತಿಯಿಂದ ಸ್ವೀಕಾರ ಮಾಡುತ್ತಾರೆ. ಒಳ್ಳೆಯ ವ್ಯಕ್ತಿಯಾಗಿ ಸಮಾಜದಲ್ಲಿ ಬದುಕಬೇಕು, ಯಾವುದೇ ಒತ್ತಡವನ್ನು ನಾವು ತಲೆಗೆ ಹಾಕಿಕೊಳ್ಳಬಾರದು, ಖುಷಿಯಾಗಿ ಬದುಕಬೇಕು ಎಂದು ಹೇಳಿದ ಅವರು, ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಾಧನೆಯ ಬಗ್ಗೆ ಹೆಮ್ಮೆಯಾಯಿತು. ಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿಯವರ ನಾಯಕತ್ವದಲ್ಲಿ ಶಾಲೆಯು ಅತ್ಯುತ್ತಮವಾದ ಪ್ರಗತಿಯನ್ನು ಸಾಧಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿರವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರೀ ರಾಮಕೃಷ್ಣ ಪ್ರೌಢಶಾಲೆಯು ದಾಖಲೆಯನ್ನು ನಿರ್ಮಿಸಿದೆ. ನಮ್ಮ ಸಂಸ್ಥೆಯ 22 ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈಯುವ ಮೂಲಕ ವಿಜ್ಞಾನ ಕ್ಷೇತ್ರಕ್ಕೆ ಕೊಡುಗೆಯನ್ನು ನೀಡಿದ್ದಾರೆ. ಒಳ್ಳೆಯ ಶಿಕ್ಷಣವನ್ನು ನುರಿತ ಶಿಕ್ಷಕರಿಂದ ನೀಡುವ ಮೂಲಕ ಸಂಸ್ಥೆಯು ಬಹುದೊಡ್ಡ ಸಾಧನೆಯನ್ನು ಮಾಡಿದೆ ಎಂದು ಹೇಳಿದ ಅವರು ಶಾಲೆಯಲ್ಲಿ ಹಾಸ್ಟೆಲ್ ಮತ್ತು ಬಸ್ ನ ವ್ಯವಸ್ಥೆ ವಿದ್ಯಾರ್ಥಿಗಳಿಗೆ ಇಲ್ಲ. ಆದರೂ ಇಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗಿದೆ, ಇಲ್ಲಿ ನೀಡುವ ಗುಣಮಟ್ಟದ ಶಿಕ್ಷಣವೇ ಇದಕ್ಕೆ ಕಾರಣವಾಗಿದೆ. ನಾವು ಯಾವುದೇ ವಿದ್ಯಾರ್ಥಿಗೆ ಅಂಕವನ್ನು ಪರಿಗಣಿಸದೆ ಎಂಟನೇ ತರಗತಿಯಲ್ಲಿ ದಾಖಲತಿ ನೀಡಿ, ಆ ವಿದ್ಯಾರ್ಥಿಯನ್ನು ಕಲಿಕೆಯಲ್ಲಿ ಮುಂದೆ ಬರುವಂತೆ ಮಾಡಲು ಸಂಸ್ಥೆಯು ಕಟಬದ್ದವಾಗಿದೆ. 100 ಶೇ. ಪಲಿತಾಂಶವನ್ನು ದಾಖಲಿಸುವ ಮೂಲಕ, ಶಿಕ್ಷಣ ಕ್ಷೇತ್ರದಲ್ಲಿ ರಾಮಕೃಷ್ಣ ಪ್ರೌಢಶಾಲೆಯು ತೋರುತ್ತಿರುವ ಸಾಧನೆಯನ್ನು ಕಂಡು ಸಮಾಜವೇ ಸಂತೋಷ ಪಡುತ್ತಿದೆ ಎಂದರು.
ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಂಚಾಲಕ ಕುಂಬ್ರ ದುರ್ಗಾಪ್ರಸಾದ್ ರೈಯವರು ಮಾತನಾಡಿ, ಇಲ್ಲಿನ ಶಿಕ್ಷಕರು ನೀಡುತ್ತಿರುವ ಶಿಕ್ಷಣದಿಂದ ವಿದ್ಯಾರ್ಥಿ ಸಮುದಾಯ ಬಹಳಷ್ಟು ಸಾಧನೆಯನ್ನು ಮಾಡಿದೆ. ಸಂಸ್ಥೆಯ ಸಂಚಾಲಕರಾದ ಕಾವು ಹೇಮನಾಥ ಶೆಟ್ಟಿಯವರು ಎಲ್ಲರನ್ನು ಒಟ್ಟಾಗಿ ಸೇರಿಸಿಕೊಂಡು ಸಂಸ್ಥೆಯನ್ನು ಚೆನ್ನಾಗಿ ನಡೆಸಿಕೊಂಡು ಬರುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿಯ ನಿರ್ದೇಶಕರುಗಳಾದ ದಯಾನಂದ ರೈ ಮನವಳಿಕೆ, ಜೈರಾಜ್ ಭಂಡಾರಿ ಡಿಂಬ್ರಿ, ಜಯಪ್ರಕಾಶ್ ರೈ ನೂಜಿಬೈಲು, ವಾಣಿ ಶೆಟ್ಟಿ ನೆಲ್ಯಾಡಿ, ಸದಾಶಿವ ರೈ ದಂಬೆಕ್ಕಾನ, ಸಂಜೀವ ಆಳ್ವ, ನಿತ್ಯಾನಂದ ಶೆಟ್ಟಿ ಮನವಳಿಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗೀತಾ ರೈ ಹಾಗೂ ಸಂಧ್ಯಾ ಕಾರ್ಯಕ್ರಮ ನಿರ್ವಹಿಸಿದರು.









































































































