ಬಂಟರ ಸಂಘ ಬೆಂಗಳೂರು ಯುವ ವಿಭಾಗವು ಈ ಬಾರಿ ಹೊಸ ವರ್ಷಾಚರಣೆಯನ್ನು ಬಂಟರ ಸಂಘದ ಆವರಣದಲ್ಲಿ ಡಿಸೆಂಬರ್ 31ರಂದು ಆಚರಿಸಲು ಉದ್ದೇಶಿಸಿದೆ. ಯುವ ವಿಭಾಗವು ಈಗಾಗಲೇ ಸಂಪೂರ್ಣ ಸಿದ್ಧತೆಯಲ್ಲಿ ತೊಡಗಿದ್ದು, 22ನೇ ನವಂಬರ್ 20204 ರಂದು ಹೊಸ ವರ್ಷ ಆಚರಣೆಯ ಪೋಸ್ಟರ್ ಅನಾವರಣ ಕಾರ್ಯಕ್ರಮವನ್ನು ಸಂಘದ ಆಶಾ ಪ್ರಕಾಶ್ ಶೆಟ್ಟಿ ಸಭಾಭವನದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಗೌರವಾನ್ವಿತ ಅಧ್ಯಕ್ಷರಾದ ಸಿಎ ಅಶೋಕ್ ಶೆಟ್ಟಿಯವರು ವಹಿಸಿದ್ದು, ಸಂಜೆ 7 ಕ್ಕೆ ಸರಿಯಾಗಿ ಸಂಘದ ಶ್ರೀ ವರಸಿದ್ಧಿ ವಿನಾಯಕ ಪ್ರಾರ್ಥನಾ ಮಂದಿರದಲ್ಲಿ ಪೂಜೆ ಸಲ್ಲಿಸಿ ನಂತರ ಗಣ್ಯರೊಡಗೂಡಿ ಪೋಸ್ಟರನ್ನು ಅನಾವರಣಗೊಳಿಸಲಾಯಿತು. ಗೌರವ ಕಾರ್ಯದರ್ಶಿಗಳಾದ ವಿಜಯ್ ಜೆ ಶೆಟ್ಟಿ ಹಾಲಾಡಿ, ಕೋಶಾಧಿಕಾರಿ ಅಶೋಕ್ ಶೆಟ್ಟಿ, ಮಹಿಳಾ ಉಪಾಧ್ಯಕ್ಷೆ ಕಾಂತಿ ಶೆಟ್ಟಿ, ಜೊತೆ ಕಾರ್ಯದರ್ಶಿ ಜಯಶ್ರೀ ಸಿ ರೈ, ಯುವ ವಿಭಾಗದ ಚೇರ್ ಪರ್ಸನ್ ಅಜಿತ್ ವಿ ಶೆಟ್ಟಿ, ಸಂಚಾಲಕರಾದ ಪ್ರಸಾದ್ ಶೆಟ್ಟಿ ಅರೆಹೊಳೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂಧರ್ಭ ಸಂಘದ ಪದಾಧಿಕಾರಿಗಳು, ಯುವ ವಿಭಾಗದ ಸದಸ್ಯರು, ಕಾರ್ಯಕಾರಿ ಸಮಿತಿ ಸದಸ್ಯರು ಹಾಜರಿದ್ದು ಶುಭ ಕೋರಿದರು.
ಯುವ ವಿಭಾಗದ ಚೇರ್ ಪರ್ಸನ್ ಅಜಿತ್ ವಿ ಶೆಟ್ಟಿಯವರು ನೆರೆದ ಗಣ್ಯರು ಹಾಗೂ ಸಭಿಕರಿಗೆ ಕಾರ್ಯಕ್ರಮದ ಬಗ್ಗೆ ವಿವರಿಸಿ, ಈ ಬಾರಿ ಬಹಳ ಅದ್ದೂರಿಯಾಗಿ ಹೊಸ ವರ್ಷ ಆಚರಣೆ ಹಮ್ಮಿಕೊಂಡಿದ್ದು, ಪ್ರತಿಷ್ಠಿತ ಸರಿಗಮಪ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಲಾವಿದರು ಆಗಮಿಸಲಿದ್ದು, ಭಾಗವಹಿಸುವ ಎಲ್ಲರಿಗೂ ಚಟುವಟಿಕೆಗಳು ಹಾಗೂ ಪ್ರಸಿದ್ಧ ಡಿಜೆ ಕಲಾವಿದರನ್ನೊಳಗೊಂಡು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಪ್ರಖ್ಯಾತ ಕ್ಯಾಟರರ್ಸ್ ನವರಿಂದ ಅನಿಯಮಿತದ ಊಟೋಪಚಾರದ ವ್ಯವಸ್ಥೆಯನ್ನು ಮಾಡಲಾಗಿದೆ. ಎಲ್ಲರೂ ಕುಟುಂಬ ಸಮೇತರಾಗಿ ಬಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ವಿನಂತಿಸಿದರು.