ಕನ್ನಡ ಸಂಘದ ‘ಕನ್ನಡ ಭವನ’ದಲ್ಲಿ ನವಂಬರ್ 16 ರ ಶನಿವಾರದಂದು ಆಚರಿಸಿದ ಕರ್ನಾಟಕ ರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಗಳಾದ ಕೆರಾಡಿ ಚಂದ್ರಶೇಖರ ಶೆಟ್ಟಿ ಅವರನ್ನು ಪೂರ್ಣ ಕುಂಭದೊಂದಿಗೆ ಸ್ವಾಗತಿಸಿ ವೇದಿಕೆಗೆ ಕರೆತಂದು ಅಧ್ಯಕ್ಷೆ ನಿಶಾ ಶೆಟ್ಟಿ, ವಿಶ್ವಸ್ಥ ಮಲ್ಹಾರ ನಿಂಬರಗಿ, ಮಹಿಳಾ ಮುಖ್ಯಸ್ಥೆ ಚಂದ್ರಿಕಾ ಕೋಟ್ಯಾನ್, ಗೌರವ ಕಾರ್ಯದರ್ಶಿ ವಿದ್ಯಾಧರ ಭಟ್ ಮತ್ತು ಸಂಚಾಲಕ ನಾಗರಾಜ್ ಶೆಟ್ಟಿ ಅವರೊಂದಿಗೆ ದೀಪ ಪ್ರಜ್ವಲಿಸಿ ತನಿಷ್ಕಾ ಭಟ್ ಅವರ ಪ್ರಾರ್ಥನೆಯ ನಂತರ ಮುಖ್ಯ ಅತಿಥಿ ಚಂದ್ರಶೇಖರ ಶೆಟ್ಟಿ ಅವರು ಚೆಂಡೆ ಬಾರಿಸಿ ರಾಜ್ಯೋತ್ಸವ ಉದ್ಘೋಷಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಸಂತಿ ಭಟ್, ಪ್ರಪುಲಾ ಶೆಟ್ಟಿ, ಚಂದ್ರಿಕಾ ಕೋಟ್ಯಾನ್ ಮತ್ತು ರಶ್ಮಿ ಭಟ್ ನಾಡಗೀತೆ ಮತ್ತು ಸಂಘ ಗೀತೆ ಪ್ರಸ್ತುತಪಡಿಸಿದರು.
ನಿಶಾ ಶೆಟ್ಟಿ ಅವರ ಸ್ವಾಗತ ಮತ್ತು ಸಾಂದರ್ಭಿಕ ನುಡಿಗಳ ನಂತರ ಮುಖ್ಯ ಅತಿಥಿ ಚಂದ್ರಶೇಖರ ಶೆಟ್ಟಿಯವರನ್ನು ಶಾಲು, ಪುಷ್ಪಗುಚ್ಛ, ಫಲ ತಾಂಬೂಲ, ಸ್ಮರಣಿಕೆ ಮತ್ತು ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ರಾಜೀವ ಶೆಟ್ಟಿ, ನಾರಾಯಣ ಶೆಟ್ಟಿ ಮತ್ತು ನಿಶಾಲ್ ಶೆಟ್ಟಿ, ಎ.ಎನ್ ರಾವ್, ಜಾನಕಿ ರಾವ್, ಮಲ್ಹಾರ ನಿಂಬರ್ಗಿ, ಮಮತಾ ಮಲ್ಹಾರ, ಪಿ.ಎಸ್. ಕಾರಂತ್, ನವೀನ್ ಶೆಟ್ಟಿ, ಅರುಂಧತಿ ಶೆಟ್ಟಿ ಮತ್ತು ವಾಣಿ ಭಟ್ ಸಹಕರಿಸಿದರು.
ಸನ್ಮಾನ ಸ್ವೀಕರಿಸಿ ಚಂದ್ರಶೇಖರ ಶೆಟ್ಟಿ ಮಾತನಾಡುತ್ತಾ, ದೂರದ ಊರಿನಲ್ಲಿದ್ದುಕೊಂಡು ನಿಮ್ಮ ಜೀವನವನ್ನು ಕಟ್ಟಿಕೊಂಡು, ಇಲ್ಲಿಯ ಭಾಷೆ ಸಂಸ್ಕೃತಿಗಳೊಂದಿಗೆ ಬೆರೆತು ನಮ್ಮ ಕನ್ನಡ ಭಾಷೆ ಸಂಸ್ಕೃತಿ ಬೆಳೆಸುತ್ತಾ, ಗೌರವದಿಂದ ಬಾಳಿ ಸ್ವಂತ ಕಟ್ಟಡವನ್ನು ಹೊಂದಿರುವುದು ದೊಡ್ಡ ಸಾಧನೆ. ನಿಮ್ಮ ಉಡುಗೆ ತೊಡುಗೆ, ಪಾಲಿಸುತ್ತಿರುವ ಆಚಾರ ವಿಚಾರಗಳನ್ನು ಕಂಡು ‘ಕರ್ನಾಟಕಕ್ಕೆ ಸೀಮೆ ಇದೆ ಕನ್ನಡಕ್ಕಿಲ್ಲ’ ಎಂದು ಹೇಳಲು ಸಂತೋಷವಾಗುತ್ತದೆ. ಕೃಷ್ಣ ದೇವಕಿ ಉದರದಲ್ಲಿ ಜನಿಸಿ ಯಶೋಧೆಯ ಮಡಿಲಲ್ಲಿ ಬೆಳೆದು ಎರಡೂ ಕಡೆಗಳಲ್ಲಿ ರಾಜಕುಮಾರನಾಗಿ ಬಾಳಿದ ಹಾಗೆ ತಾವುಗಳು ತಮ್ಮ ಜನ್ಮ ಭೂಮಿ ಮತ್ತು ಕರ್ಮ ಭೂಮಿ ಎರಡೂ ಕಡೆ ಸ್ವಂತಿಕೆಯನ್ನು ಉಳಿಸಿಕೊಂಡಿರುವ ಹೆಮ್ಮೆ ನಿಮ್ಮಲ್ಲಿ ಕಂಡು ಬರುತ್ತಿರುವುದೆಂದು ಪ್ರಶಂಸಿದರು.
ಸಂಚಾಲಕ ನಾಗರಾಜ್ ಶೆಟ್ಟಿ, ಮಾತನಾಡುತ್ತಾ, ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಅಭಿನಂದಿಸುತ್ತಾ, ನಮ್ಮ ಮಕ್ಕಳಿಗೆ ಕನ್ನಡ ಓದಲು ಬರೆಯಲು ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯವಾಗಿರಬೇಕೆಂದು ನುಡಿದರು. ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಸಂಘದ ಸ್ಪರ್ಶಾ ಶೆಟ್ಟಿ ಅವರ ಆರಂಭಿಕ ನೃತ್ಯದ ನಂತರ ಬೆಂಗಳೂರಿನಿಂದ ತಮ್ಮ 5 ತಂಡಗಳೊಂದಿಗೆ ಆಗಮಿಸಿದ ವಿದ್ವಾನ ರಮೇಶ್ ಕೋಲಾರ ಅವರ ರಾಷ್ಟ್ರಕವಿ ಕುವೆಂಪುರವರ ರಾಮಾಯಣ ದರ್ಶನ ನೃತ್ಯ ರೂಪಕ ಎಲ್ಲರನ್ನೂ ಮಂತ್ರ ಮುಗ್ದರನ್ನಾಗಿಸಿತ್ತು. ನಂತರದಲ್ಲಿ ಜಾನಪದ ಗೀತೆ ಮತ್ತು ಶಾಸ್ತ್ರೀಯ ನೃತ್ಯಗಳಿಂದ ಮೂರು ತಾಸಿನ ಕಾರ್ಯಕ್ರಮ ನಡೆಸಿಕೊಟ್ಟರು.
ವಿದ್ವಾನ್ ಕೋಲಾರ್ ರಮೇಶ್ ಅವರಿಗೆ ಶಾಲು, ಫಲ ತಾಂಬೂಲ, ಪಷ್ಪಗುಚ್ಛ ಮತ್ತು ಸ್ಮರಣಕೆಯನ್ನು ನೀಡಿ ಸನ್ಮಾನಿಸಿದ ನಂತರ ಉಳಿದ ಎಲ್ಲಾ 28 ಕಲಾವಿದರಿಗೂ ಸ್ಮರಣೆಗೆ ಮತ್ತು ಸರ್ಟಿಫಿಕೇಟ್ ಕೊಟ್ಟು ಗೌರವಿಸಲಾಯಿತು. ಈ ಕಾರ್ಯಕ್ಕೆ ವಿಶ್ವನಾಥ ಭಂಡಾರಿ, ಸಂಜಯ ಮತ್ತು ನೀತಾ ಮರ್ಬಳ್ಳಿ, ವಿದ್ಯಾಧರ ಮತ್ತು ವಾಂಸತಿ ಭಟ್, ಪರಮೇಶ್ವರ ಮತ್ತು ಸಂಗೀತಾ ಬೆಳಮಗಿ, ಚಂದ್ರಿಕಾ ಮತ್ತು ಅಶೋಕ್ ಕೋಟ್ಯಾನ್ ಪಾಲ್ಗೊಂಡಿದ್ದರು. ಆಹಾರ ಎಸೆಯದಂತೆ ಪ್ರತಿಜ್ಞಾ ವಿಧಿ ಪ್ರಭು ದೇಸಾಯಿ ನಡೆಸಿಕೊಟ್ಟ ನಂತರ ನೆರೆದ ಎಲ್ಲರೂ ಸಹ ಭೋಜನ ಸವಿದರು. ಪಾರಾಡಿ, ಉಂಬರಗಾಂವ್, ದಮನ್ ಮತ್ತು ಸಿಲ್ವಾಸದಿಂದ ಅಪಾರ ಕನ್ನಡಿಗರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಮಮತಾ ಮಲ್ಹಾರ ಮತ್ತು ರಶ್ಮಿ ಭಟ್ ನಿರ್ವಹಿಸಿದರು. ಕೊನೆಯಲ್ಲಿ ಪ್ರಪುಲ್ಲಾ ಶೆಟ್ಟಿಯವರಿಂದ ವಂದನಾರ್ಪಣೆ ಮತ್ತು ರಾಷ್ಟ್ರಗೀತೆಯೊಂದಿಗೆ ಕನ್ನಡಮ್ಮನ ಹೆಮ್ಮೆಯ ರಾಜ್ಯೋತ್ಸವ ಕಾರ್ಯಕ್ರಮ ಮುಕ್ತಾಯಗೊಂಡಿತು.