ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿಯ ಮಾಸಿಕ ಸಭೆಯು ನವೆಂಬರ್ 21 ರಂದು ಸಂಘದ ಕಚೇರಿಯಲ್ಲಿ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ತಾಲೂಕು ಸಮಿತಿಯ ಸಂಚಾಲಕ ಕುಂಬ್ರ ದುರ್ಗಾ ಪ್ರಸಾದ್ ರೈಯವರು ಮಾತನಾಡಿ, ಸದಸ್ಯರ ಪ್ರಯೋಜನಕ್ಕಾಗಿ ವ್ಯಾಜ್ಯಗಳನ್ನು, ಬಂಟರ ವೈವಾಹಿಕ ಮನಸ್ತಾಪಗಳನ್ನು ಸೌಹಾರ್ದಯುತವಾಗಿ ಮುಗಿಸುವ ನಿಟ್ಟಿನಲ್ಲಿ ಸಾಮಾಜಿಕ ನ್ಯಾಯ ಸಮಿತಿಯನ್ನು ತಾಲೂಕು ಸಮಿತಿಯಡಿಯಲ್ಲಿ ರಚನೆ ಮಾಡುವ ಬಗ್ಗೆ ಪ್ರಸ್ತಾಪಿಸಿದರು. ಸಂಘಕ್ಕೆ ಬೇಕಾದ ಮೂಲ ಸೌಕರ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ 1500 ಮಂದಿಗೆ ಬೇಕಾದ ಅಡುಗೆ ತಯಾರಿಕಾ ಪಾತ್ರೆಗಳು, ಹೆಚ್ಚುವರಿ ಸಿಸಿ ಕ್ಯಾಮರಾ, ಗುಣಮಟ್ಟದ ಧ್ವನಿವರ್ಧಕಗಳನ್ನು ಅಳವಡಿಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದೆಂದು ತೀರ್ಮಾನಿಸಲಾಯಿತು. ಸಂಘಕ್ಕೆ ಬರುವ ರಸ್ತೆಯನ್ನು ಸಾರ್ವಜನಿಕರ ಅನುಕೂಲವಾಗಿ ಅಗಲೀಕರಣಗೊಳಿಸುವುದು ಅಥವಾ ಏಕಮುಖ ರಸ್ತೆಯಾಗಿ ಪರಿವರ್ತಿಸುವರೇ ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸುವುದು ಎಂದು ಚರ್ಚಿಸಲಾಯಿತು. ಸಂಘದ ದೀನದಲ್ಲಿರುವ ಸ್ಥಿರಾಸ್ತಿಯನ್ನು ಸರ್ವೆ ನಡೆಸಿ, ಒತ್ತುವರಿ ಕಂಡು ಬಂದಲ್ಲಿ ಕಾನೂನಿನಡಿಯಲ್ಲಿ ಸೂಕ್ತ ಕ್ರಮ ಜರಗಿಸುವುದು. ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಮುಂದಿನ ದಿನಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಾತೃ ಸಂಘದ ಅಧ್ಯಕ್ಷರನ್ನು, ಸಂಘದ ಉಪಾಧ್ಯಕ್ಷರಾದ ಕಾವು ಹೇಮನಾಥ ಶೆಟ್ಟಿಯವರ ನೇತೃತ್ವದಲ್ಲಿ ಭೇಟಿ ಮಾಡಿ ಚರ್ಚಿಸುವುದೆಂದು ತೀರ್ಮಾನಿಸಲಾಯಿತು.
ಬಂಟರ ಭವನದಲ್ಲಿ ಕಾರ್ಯಕ್ರಮ ನಡೆಸುವುದರ ಮೂಲಕ ಆರ್ಥಿಕವಾಗಿ ಸಂಘವನ್ನು ಬಲಪಡಿಸುವ ಸಮಾಜ ಬಂಧುಗಳನ್ನು ಮತ್ತು ಇತರ ಸಮಾಜ ಬಂಧುಗಳನ್ನು ಈ ಸಂದರ್ಭದಲ್ಲಿ ಸ್ಮರಿಸಿ, ವಿಶೇಷ ಕೃತಜ್ಞತೆಗಳನ್ನು ಅರ್ಪಿಸಲಾಯಿತು. ತಾಲೂಕು ಸಮಿತಿಯ ಸದಸ್ಯರಾದ ನೂಜಿಬೈಲು ಜಯಪ್ರಕಾಶ್ ರೈ, ಜೈರಾಜ್ ಭಂಡಾರಿ ಡಿಂಬ್ರಿ, ರಮೇಶ್ ರೈ ಸಾಂತ್ಯ, ಶಶಿಕುಮಾರ್ ರೈ ಬಾಲ್ಯೊಟ್ಟು, ನಿತ್ಯಾನಂದ ಶೆಟ್ಟಿ ಮನವಳಿಕೆಯವರುಗಳು ವಿವಿಧ ಸಲಹೆ ಸೂಚನೆಗಳನ್ನು ನೀಡಿದರು. ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಹ ಸಂಚಾಲಕ ರಾಧಾಕೃಷ್ಣ ಆಳ್ವ ಸಾಜ ವಂದಿಸಿದರು. ಬಂಟರ ಭವನದ ಸಿಬ್ಬಂದಿಗಳಾದ ರವಿಚಂದ್ರ ರೈ ಕುಂಬ್ರ ಹಾಗೂ ಭಾಸ್ಕರ್ ರೈ ಸಹಕರಿಸಿದರು.