ಯಕ್ಷಗಾನ ಕಲೆ ಅಂದರೆ ನಮ್ಮ ಭಾರತದ ಸಂಸ್ಕೃತಿಯನ್ನು ವಿಶ್ವವ್ಯಾಪಿ ಪಸರಿಸಿದ ಒಂದು ಶ್ರೇಷ್ಠ ಕಲೆ. ದೇವರ ಪೂಜೆಯೊಂದಿಗೆ ಆರಂಭವಾಗಿ ದೇವರ ಪೂಜೆಯೊಂದಿಗೆ ಮುಕ್ತಾಯಗೊಳ್ಳುವ ಕಲೆಯೊಂದಿದ್ದರೆ ಅದು ಯಕ್ಷಗಾನ ಕಲೆ. ಕಲಾವಿದರ ಮುಖಾಂತರ ಕಲೆಯ ಆರಾಧನೆಯೊಂದಿಗೆ ದೇವರನ್ನು ಸ್ಮರಿಸುವ, ಆರಾಧಿಸುವ ಕಲೆಯೊಂದಿದ್ದರೆ ಯಕ್ಷಗಾನ ಕಲೆ. ಅಂತಹ ಯಕ್ಷಗಾನ ಹಾಗೇ ತಾಳಮದ್ದಲೆ ಕಲೆಯನ್ನು ಉಳಿಸುವ ಕಾಯಕದಲ್ಲಿ ಕಳೆದ ಹಲವಾರು ವರ್ಷಗಳಿಂದ ತವರೂರ ಕಲಾವಿದರನ್ನು ಮುಂಬಯಿಗೆ ಆಹ್ವಾನಿಸಿ ಅಲ್ಲಲ್ಲಿ ಪ್ರತೀ ವರ್ಷ ಯಕ್ಷಗಾನ, ತಾಳಮದ್ದಳೆ ಕಲಾ ಪ್ರದರ್ಶನವನ್ನು ಆಯೋಜಿಸಿ, ಕಲಾ ರಸಿಕರನ್ನು ರಂಜಿಸುತ್ತಾ ಬಂದಿರುವ ಅಜೆಕಾರು ಬಾಲಕೃಷ್ಣ ಶೆಟ್ಟಿಯವರ ಕಾರ್ಯ ನಿಜವಾಗಿಯೂ ಮೆಚ್ಚುವಂತದ್ದು. ಯಕ್ಷಗಾನ ಮತ್ತು ತಾಳಮದ್ದಲೆ ಕಲೆಯನ್ನು ರಕ್ಷಿಸುವಲ್ಲಿ ಮತ್ತು ಪೋಷಿಸುವಲ್ಲಿ ಅಜೆಕಾರು ಬಾಲಕೃಷ್ಣ ಶೆಟ್ಟಿಯವರ ಶ್ರಮ ಶ್ಲಾಘನೀಯ ಎಂದು ಘಾಟ್ಕೋಪರ್ ದೇವಾಲಯದ ಅಧ್ಯಕ್ಷ ಕಡಂದಲೆ ಸುರೇಶ್ ಭಂಡಾರಿ ಅಭಿಮಾನದ ನುಡಿಗಳನ್ನಾಡಿದರು. ಅವರು ಸೆಪ್ಟೆಂಬರ್ 21ರ ಶನಿವಾರ ಸಂಜೆ ನಾಹುರ್ ರಾಯಲ್ ಸೆಲೆಬ್ರೇಶನ್ ಹಾಲ್ ನಲ್ಲಿ ಶ್ರೀ ಮುಕಾಂಬಿಕಾ ಬ್ರಹ್ಮಲಿಂಗೇಶ್ವರ ಪೂಜಾ ಸಮಿತಿ ಭಾಂಡೂಪ್ ಆಶ್ರಯದಲ್ಲಿ ಜರಗಿದ ಅಜೆಕಾರು ಕಲಾಭಿಮಾನ ಬಳಗ ಮುಂಬಯಿಯ ರೂವಾರಿ ಅಜೆಕಾರು ಬಾಲಕೃಷ್ಣ ಶೆಟ್ಟಿ ಸಂಚಾಲಕತ್ವದಲ್ಲಿ ಮುಂಬಯಿ ಪ್ರವಾಸದಲ್ಲಿರುವ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾ ಪೋಷಿತ ಯಕ್ಷಗಾನ ಮಂಡಳಿ ಮುಲ್ಕಿಯ ಮುಂಬಯಿ ಪ್ರವಾಸದ ಉದ್ಘಾಟನಾ ಸಮಾರಂಭ ಮತ್ತು ಸಾಧಕರ ಸನ್ಮಾನ ಸಮಾರಂಭದ ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡುತ್ತಿದ್ದರು.
ಯಾರು ಸಾಧನೆಯನ್ನು ಮಾಡುತ್ತಾರೋ ಅಂತವರನ್ನು ಗುರುತಿಸಿ, ಅವರ ಸಾಧನಯುಕ್ತ ಕಾರ್ಯವನ್ನು ಜನಸಾಮಾನ್ಯರಿಗೆ ತಿಳಿಸುವ ಕಾರ್ಯ ಸ್ವಾಗತಾರ್ಯ. ಈ ನಿಟ್ಟಿನಲ್ಲಿ ಇಂದು ಯಕ್ಷಗಾನ ಪ್ರದರ್ಶನದ ಸಂಪೂರ್ಣ ಖರ್ಚು ವೆಚ್ಚದ ಜವಾಬ್ದಾರಿಯನ್ನು ವಹಿಸಿ ಈ ಮೂಲಕ ಯಕ್ಷಗಾನ ಕಲೆಗೆ ಪ್ರೋತ್ಸಾಹವನ್ನು ನೀಡಿದ ಮತ್ತು ವಿವಿಧ ರೀತಿಯ ಸಮಾಜಪರ ಸೇವಾ ಕಾರ್ಯಗಳಲ್ಲಿ ತಮ್ಮನ್ನು ಸಕ್ರಿಯವಾಗಿರಿಸಿಕೊಂಡಿರುವ ಗುರುಸ್ವಾಮಿ ಅಶೋಕ್ ಮೂಲ್ಯರನ್ನು ಸನ್ಮಾನಿಸಿರುವುದು, ಹಾಗೆಯೇ 60 ವರ್ಷದ ಇತಿಹಾಸವನ್ನು ಹೊಂದಿದ ನಮ್ಮ ಗೀತಾಂಬಿಕಾ ಯಕ್ಷಗಾನ ಮಂಡಳಿಯಲ್ಲಿ ಗೆಜ್ಜೆ ಕಟ್ಟಿ ಇದೀಗ ತವರೂರ ಯಕ್ಷ ರಂಗದಲ್ಲಿ ತಮ್ಮ ಪ್ರತಿಭೆಯೊಂದಿಗೆ ಜನಪ್ರಿಯತೆಯನ್ನು ಗಳಿಸಿರುವ ಶ್ರೀನಿವಾಸ ರೈ ಕಡಬರವರನ್ನು ಸನ್ಮಾನಿಸಿ ಗೌರವಿಸಿರುವುದು ಅರ್ಥಪೂರ್ಣ ಸನ್ಮಾನವಾಗಿದೆ. ಅದರಲ್ಲೂ ಶ್ರೀನಿವಾಸ ರೈ ಕಡಬರವರ ಸನ್ಮಾನ ನಮ್ಮ ಮಂಡಳಿಗೆ ಸಂದ ಗೌರವವಾಗಿದೆ ಎಂದು ಈ ಸಂದರ್ಭದಲ್ಲಿ ಕಡಂದಲೆ ಸುರೇಶ್ ಶೆಟ್ಟಿ ತಮ್ಮ ಅಭಿಮತವನ್ನು ವ್ಯಕ್ತಪಡಿಸುತ್ತಾ ಸನ್ಮಾನಿತರನ್ನು ಅಭಿನಂದಿಸಿದರು.
ಅದರಂತೆ ಈ ಸಂದರ್ಭದಲ್ಲಿ ಥಾಣೆ ಪರಿಸರದ ಯುವ ಉದ್ಯಮಿ, ಕಲಾ ಪೋಷಕ ಅಶೋಕ್ ಮೂಲ್ಯ ಗುರುಸ್ವಾಮಿಯನ್ನು ಅವರ ಪತ್ನಿ ಸುಲತಾ ಎ. ಮೂಲ್ಯ ಮತ್ತು ಪುತ್ರಿಯರಾದ ಹನ್ಸಿಕಾ ಮತ್ತು ಹನ್ವಿತಾರವರೊಂದಿಗೆ ಹಾಗೂ ಬಪ್ಪನಾಡು ಮೇಳದ ಪ್ರಧಾನ ಸ್ತ್ರೀ ಪಾತ್ರಧಾರಿ ಶ್ರೀನಿವಾಸ ರೈ ಕಡಬ ಅವರನ್ನು ಅಧ್ಯಕ್ಷ ಸುರೇಶ್ ಭಂಡಾರಿ, ಮೇಳದ ಮುಂಬಯಿ ಸಂಚಾಲಕ ಅಜೆಕಾರು ಬಾಲಕೃಷ್ಣ ಶೆಟ್ಟಿ ಹಾಗೂ ವೇದಿಕೆಯ ಗಣ್ಯರು ಸೇರಿ ಶಾಲು ಹೊಂದಿಸಿ, ಪೇಟ ತೊಡಿಸಿ, ಫಲಪುಷ್ಪ ನೆನಪಿನ ಕಾಣಿಕೆಯೊಂದಿಗೆ ಸನ್ಮಾನಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಅತಿಥಿ ಗಣ್ಯರಲ್ಲಿ ಬಿಜೆಪಿ ದಕ್ಷಿಣ ಭಾರತ ಘಟಕ ಭಾಂಡೂಪ್ ನ ಕಾರ್ಯದರ್ಶಿ ಸದಾನಂದ ಪೂಜಾರಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುತ್ತಾ ತಮ್ಮ ಮಕ್ಕಳು ವಿದ್ಯಾವಂತರಾಗಿ ಅದೇನೇ ಸಾಧನೆ ಮಾಡಿದರೂ ಕೂಡಾ ಸಂಸ್ಕಾರ ಸಂಸ್ಕೃತಿಯನ್ನು ಮರೆಯಬಾರದು. ಸನಾತನ ಧರ್ಮ ರಕ್ಷಣೆಯ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಗುರು ಹಿರಿಯರನ್ನು ಗೌರವಿಸುವ ಗುಣವನ್ನು ಮೈಗೂಡಿಸಿಕೊಳ್ಳಬೇಕು ಎಂದೆನ್ನುತ್ತಾ ಕಲೆಗೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ನೀಡುವ ಇಂತಹ ಕಾರ್ಯಕ್ರಮ ನಿರಂತರ ನಡೆಯುತ್ತಿರಲಿ ಎಂದರು.
ಸಮಾರಂಭದ ವೇದಿಕೆಯಲ್ಲಿ ಅತಿಥಿಗಳಾಗಿ ಬಂಟರ ಸಂಘ ಮುಂಬಯಿಯ ಕುರ್ಲಾ ಭಾಂಡೂಪ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗಿರೀಶ್ ಆರ್. ಶೆಟ್ಟಿ, ಮುಲುಂಡ್ ಬಂಟ್ಸ್ ಜೊತೆ ಕಾರ್ಯದರ್ಶಿ ಸುರೇಶ್ ಶೆಟ್ಟಿ ಕಡಂದಲೆ, ಥಾಣೆ ಪರಿಸರದ ಜನಪ್ರಿಯ ಉದ್ಯಮಿ, ಕಲಾಪೋಷಕ ಲಕ್ಷ್ಮಣ್ ಮಣಿಯಾನಿ, ಅಜೆಕಾರು ಕಲಾಭಿಮಾನಿ ಬಳಗ ಭಾಂಡೂಪ್ ಘಟಕದ ಕೋಶಾಧಿಕಾರಿ ಭಾರತಿ ಕರ್ಕೇರ, ಶ್ರೀ ಮೂಕಾಂಬಿಕಾ ಬ್ರಹ್ಮಲಿಂಗೇಶ್ವರ ಪೂಜಾ ಸಮಿತಿ ಭಾಂಡೂಪ್ ನ ಅಧ್ಯಕ್ಷ ರಮೇಶ್ ಪೂಜಾರಿ, ಸನ್ಮಾನಿತ ಹಾಗೂ ಯಕ್ಷಗಾನ ಪ್ರದರ್ಶನದ ಪ್ರಾಯೋಜಕತ್ವವನ್ನು ವಹಿಸಿದ್ದ ಅಶೋಕ್ ಮೂಲ್ಯ ಗುರುಸ್ವಾಮಿ, ಥಾಣೆಯ ಜನಪ್ರಿಯ ಪುರೋಹಿತ ಸುಬ್ರಹ್ಮಣ್ಯ ಭಟ್ ಸಾಂತಿಂಜ, ಬಪ್ಪನಾಡು ಮೇಳದ ಮುಂಬಯಿಯ ಸಂಚಾಲಕ ಅಜೆಕಾರು ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.
ಶ್ರೀ ಮೂಕಾಂಬಿಕಾ ಬ್ರಹ್ಮಲಿಂಗೇಶ್ವರ ಪೂಜಾ ಸಮಿತಿಯ ಮಹಿಳಾ ಸದಸ್ಯರಿಂದ ಪ್ರಾರ್ಥನೆ ಮತ್ತು ಅತಿಥಿ ಗಣ್ಯರ ಹಸ್ತದಿಂದ ದೀಪ ಪ್ರಜ್ವಲಿಸಿ ಮೇಳದ ಮುಂಬಯಿ ಪ್ರವಾಸವನ್ನು ಉದ್ಘಾಟಿಸಲಾಯಿತು. ಅತಿಥಿ ಗಣ್ಯರನ್ನು ಅಜೆಕಾರು ಕಲಾಭಿಮಾನಿ ಬಳಗದ ರೂವಾರಿ ಬಾಲಕೃಷ್ಣ ಶೆಟ್ಟಿ ಅಜೆಕಾರು ಶಾಲು ಹೊದಿಸಿ, ಹೂಗುಚ್ಛ ನೀಡಿ ಗೌರವಿಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳನ್ನು ಶ್ರೀ ಮೂಕಾಂಬಿಕಾ ಬ್ರಹ್ಮಲಿಂಗೇಶ್ವರ ಪೂಜಾ ಸಮಿತಿಯ ಅಧ್ಯಕ್ಷ ರಮೇಶ್ ಪೂಜಾರಿ ಹೂಗುಚ್ಛ ನೀಡಿ ಗೌರವಿಸಿದರು. ಅತಿಥಿ ಗಣ್ಯರನ್ನು ಪರಿಚಯಿಸಿ, ಸನ್ಮಾನಿತರ ಸನ್ಮಾನ ಪತ್ರವನ್ನು ವಾಚಿಸಿ ಸಂಪೂರ್ಣ ಕಾರ್ಯಕ್ರಮವನ್ನು ಬಂಟರ ಸಂಘ ಮುಂಬಯಿಯ ಕುರ್ಲಾ ಭಾಂಡೂಪ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಅಮೃತಾ ಅಜಯ್ ಶೆಟ್ಟಿ ನಿರೂಪಿಸಿದರು. ಅಜೆಕಾರು ಬಳಗದ ರೂವಾರಿ ಅಜೆಕಾರು ಬಾಲಕೃಷ್ಣ ಶೆಟ್ಟಿ ವಂದಿಸಿದರು.
ಉದ್ಘಾಟನಾ ಸಮಾರಂಭಕ್ಕಿಂತ ಮೊದಲು ಶ್ರೀ ಮೂಕಾಂಬಿಕಾ ಬ್ರಹ್ಮಲಿಂಗೇಶ್ವರ ಪೂಜಾ ಸಮಿತಿಯ ಮಹಿಳೆಯರು, ಯುವ ವರ್ಗದವರು ವಿವಿಧ ನೃತ್ಯ ಪ್ರದರ್ಶನವನ್ನು ನೀಡಿ ಕಲಾ ರಸಿಕರನ್ನು ರಂಜಿಸಿದರು. ನೃತ್ಯ ಪ್ರದರ್ಶನವನ್ನು ನೀಡಿದ ಎಲ್ಲಾ ಕಲಾವಿದರನ್ನು ಅತಿಥಿ ಗಣ್ಯರ ಹಸ್ತದಿಂದ ಹೂಗುಚ್ಚ ನೆನಪಿನ ಕಾಣಿಕೆಯೊಂದಿಗೆ ಗೌರವಿಸಲಾಯಿತು. ಈ ಮನೋರಂಜನಾ ಕಾರ್ಯಕ್ರಮವನ್ನು ಅಮೃತಾ ಎ. ಶೆಟ್ಟಿ ನಿರೂಪಿಸಿದರು. ಉದ್ಘಾಟನಾ ಮತ್ತು ಸನ್ಮಾನ ಸಮಾರಂಭದ ಬಳಿಕ ಶ್ರೀ ಬಪ್ಪನಾಡು ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮುಲ್ಕಿಯ ಮುಂಬಯಿ ಪ್ರವಾಸದ ಪ್ರಥಮ ಪ್ರದರ್ಶನವಾಗಿ ‘ಅಜ್ಜ ಅಜ್ಜ ಕೊರಗಜ್ಜ’ ಪುಣ್ಯ ಕಥಾನಕವು ಯಕ್ಷಗಾನ ರೂಪದಲ್ಲಿ ಬಹುಸಂಖ್ಯಾ ರಸಿಕರ ಸಮ್ಮುಖದಲ್ಲಿ ಪ್ರದರ್ಶಿಸಲ್ಪಟ್ಟಿತು. ಈ ಯಕ್ಷಗಾನದಲ್ಲಿ ಹಿಮ್ಮೇಳದಲ್ಲಿ ವಿಶೇಷ ಆಹ್ವಾನಿತ ಭಾಗವತರಾಗಿ ಗಣೇಶ್ ಹೆಬ್ರಿ, ಮೇಳದ ಭಾಗವತರಾದ ಡಾ. ಸತ್ಯನಾರಾಯಣ ಪುಣಿಚಿತ್ತಾಯ, ಗಿರೀಶ್ ರೈ ಕಕ್ಕೆಪದವು, ಚೆಂಡೆಯಲ್ಲಿ ಪ್ರಶಾಂತ್ ಶೆಟ್ಟಿ ವಗೆನಾಡು, ಮದ್ದಳೆಯಲ್ಲಿ ರೋಹಿತ್ ಉಚ್ಚಿಲ್, ಚಕ್ರ ತಾಳದಲ್ಲಿ ದಿನೇಶ್ ನೀರ್ ಕೆರೆ, ಸ್ತ್ರೀ ಪಾತ್ರದಲ್ಲಿ ಕಡಬ ಶ್ರೀನಿವಾಸ ರೈ, ಪರಮೇಶ್ವರ ಗಂಗಾನಾಡು, ಮಹೇಶ್ ಸಾಲ್ಯಾನ್, ಕಾರ್ತಿಕ್ ಗಂಜಿಮಠ, ಹಾಸ್ಯದಲ್ಲಿ ದಿನೇಶ್ ಶೆಟ್ಟಿಗಾರ್ ಕೊಡಪದವು, ವೇಷಧಾರಿಗಳಾಗಿ ರಾಧಾಕೃಷ್ಣ ನಾವುಡ ಮಧೂರು, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಜಯಾನಂದ ಸಂಪಾಜೆ, ತಿಲಕ್ ಹೆಗ್ಡೆ ಪುತ್ತೂರು, ರಾಕೇಶ್ ರೈ ಅಡ್ಕ, ನಾಗಪ್ಪ ಪಡುಮಲೆ, ಸುರೇಶ್ ಹೆಗ್ಡೆ ಬಂಗಾಡಿ, ಪ್ರಕಾಶ್ ಪಂಜ, ಪುಷ್ಪರಾಜ್ ಗರ್ಗಲ್ ಮೊದಲಾದವರು ಭಾಗವಹಿಸಿದ್ದರು. ಯಕ್ಷಗಾನ ಪ್ರದರ್ಶನದ ಮಧ್ಯೆ ಲಘು ಉಪಾಹಾರದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಕಾರ್ಯಕ್ರಮದ ಯಶಸ್ವಿಗೆ ಶ್ರೀ ಮೂಕಾಂಬಿಕಾ ಬ್ರಹ್ಮಲಿಂಗೇಶ್ವರ ಪೂಜಾ ಸಮಿತಿಯ ಎಲ್ಲಾ ಮಹಿಳಾ ಮತ್ತು ಯುವ ವರ್ಗದವರು ಶ್ರಮಿಸಿದರು.