ಮೂಡುಬಿದಿರೆ: ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಮಹಿಳಾ ಕ್ಷೇಮಪಾಲನಾ ಸಮಿತಿ ಹಾಗೂ ಆಂತರಿಕ ಸಮಿತಿ ಆಶ್ರಯದಲ್ಲಿ ಕಾಲೇಜಿನ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ‘ಮಹಿಳೆಯರ ಯೋಗ ಕ್ಷೇಮದ ಅನ್ವೇಷಣೆ’ ವಿಷಯದ ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಆಳ್ವಾಸ್ ಸೆಂಟರ್ ಫಾರ್ ವೆಲ್ನೆಸ್ ಟ್ರೈನಿಂಗ್ನ ನಿರ್ದೇಶಕಿ ಡಾ ದೀಪ ಕೊಠಾರಿ ಮಾತನಾಡಿ, ವಿದ್ಯಾರ್ಥಿಗಳಿಗೆ ಹಲವು ಮಹಿಳಾ ಸಾಧಕರನ್ನು ಪರಿಚಯಿಸುತ್ತಾ, ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂದು ಹುರಿದುಂಬಿಸಿದರು. ವಿದ್ಯಾರ್ಥಿಗಳು ಹೆಚ್ಚು ಸಕರಾತ್ಮಕ ವಿಷಯಗಳನ್ನು ಹೇಗೆ ವಿಸ್ತರಿಸಿಕೊಳ್ಳಬೇಕು, ತಮ್ಮಲ್ಲಿರುವ ಭಾವನೆಗಳನ್ನು ಒಪ್ಪಿಕೊಂಡು ಅದರೊಂದಿಗೆ ಬದುಕುವ ಮನೋಸ್ಥೈರ್ಯ ಹೇಗೆ ಬೆಳೆಸಿಕೊಳ್ಳಬೇಕು ಎಂದು ವಿವರಿಸಿದರು. ಏಕಾಗ್ರತೆ ಮತ್ತು ಸ್ಥಿರತೆಯನ್ನು ಹೇಗೆ ಉಳಿಸಿಕೊಳ್ಳುವುದು ಎಂಬುದರ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು. ಜೀವನದಲ್ಲಿ ಕೃತಜ್ಞತೆ ಮತ್ತು ನಿರಂತರ ಕಲಿಕೆ ಎಷ್ಟು ಮುಖ್ಯ ಎಂದು ಉದಾಹರಣೆ ಸಹಿತ ಮಕ್ಕಳಿಗೆ ಮನವರಿಗೆ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲೆ ಝಾನ್ಸಿ ಪಿ. ಎನ್ ಮಾತನಾಡಿ ಮಹಿಳೆಯರು ಮನೆ, ಸಮಾಜ ಹಾಗೂ ರಾಷ್ಟ್ರದ ಅತ್ಯುತ್ತಮ ವಾಸ್ತುಶಿಲ್ಪಿಗಳು. ಹೆಣ್ಣಿನ ಹೃದಯದಲ್ಲಿ ದಯೆ, ಮುಖದಲ್ಲಿ ಆತ್ಮವಿಶ್ವಾಸ, ಮನಸಿನಲ್ಲಿ ಜ್ಞಾನ, ಆತ್ಮದಲ್ಲಿ ಜವಾಬ್ದಾರಿ ಹೊಂದಿರುತ್ತಾಳೆ. ವಿದ್ಯಾರ್ಥಿನಿಯರ ಪ್ರಶ್ನೆಗೆ ಉತ್ತರವಾಗಿ ಸಮಾಜದಲ್ಲಿ ಮಹಿಳೆಯರ ಸ್ಥಾನಮಾನ ಮತ್ತು ಅವರ ಇತಿಮಿತಿಗಳ ಬಗ್ಗೆ ತಿಳಿಸಿದರು.
ಮಹಿಳಾ ಕ್ಷೇಮಪಾಲನಾ ಸಮಿತಿಯ ಸಂಯೋಜಕಿ ಕೀರ್ತನಾ ಶೆಟ್ಟಿ ಹಾಗೂ ಆಂತರಿಕ ಸಮಿತಿಯ ಸಂಯೋಜಕಿ ಡಾ ಸುಲತಾ ವಿದ್ಯಾಧರ್ ಕಾರ್ಯಕ್ರಮದಲ್ಲಿ ಇದ್ದರು. ಮಹಿಳಾ ಕ್ಷೇಮಾಪಾಲನಾ ಸಂಘದ ಸದಸ್ಯರು ಹಾಗೂ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ವಿದ್ಯಾರ್ಥಿನಿ ರಿಯೋನ ಸ್ವಾಗತಿಸಿ, ಆನ್ಯ ವಂದಿಸಿ, ಭೂಮಿ ನಿರೂಪಿಸಿದರು.