ಕರ್ನಾಟಕ ಸಂಘ ಕತಾರ್ ತನ್ನ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಅವರ ಜನ್ಮದಿನದ ನೆನಪಿಗಾಗಿ ‘ಶಿಕ್ಷಕರ ದಿನ’ವನ್ನು ದೋಹಾದ ವೈಬ್ರೆಂಟ್ ಇಂಡಸ್ಟ್ರಿಯಲ್ ಸೇಫ್ಟಿ ಸೆಂಟರ್ ನಲ್ಲಿ ಆಯೋಜಿಸಿತು. ಸಂಘ ಸ್ಥಾಪನೆಯ 25ನೇ ವರ್ಷಾಚರಣೆ ಹಿನ್ನಲೆಯಲ್ಲಿ 25 ಸದಸ್ಯ ಶಿಕ್ಷಕರನ್ನು ಗೌರವಿಸಲಾಯಿತು. ಸಂಘವು ಆಯೋಜಿಸಿದ ವಾರಾಂತ್ಯದ ಭಾಷಾ ತರಗತಿಗಳನ್ನು ಸ್ವಯಂ ಪ್ರೇರಿತವಾಗಿ ನಡೆಸುತ್ತಿರುವ ಕನ್ನಡ ಶಿಕ್ಷಕರನ್ನೂ ಇದೇ ವೇಳೆ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಇಂಡಿಯನ್ ಕಲ್ಚರಲ್ ಸೆಂಟರ್ ನ ಅಧ್ಯಕ್ಷ ಮಣಿಕಂಠನ್ ಎ.ಪಿ, ಬ್ರಿಲಿಯಂಟ್ ಇಂಡಿಯನ್ ಇಂಟರ್ನ್ಯಾಷನಲ್ ಸ್ಕೂಲ್ ನ ಪ್ರಾಂಶುಪಾಲೆ ಆಶಾ ಶಿಜು ಭಾಗವಹಿಸಿದ್ದರು. ಕೇಂದ್ರದ ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು, ಸಲಹಾ ಮಂಡಳಿ ಅಧ್ಯಕ್ಷ ಮಹೇಶ್ ಗೌಡ, ಸಲಹಾ ಮಂಡಳಿ ಅಧ್ಯಕ್ಷರಾದ ಮನ್ನಂಗಿ ಅರುಣ್ ದೀಪಕ್ ಶೆಟ್ಟಿ ಮಧು, ಡಾ. ಸಂಜಯ್ ಕುದರಿ, ಕರ್ನಾಟಕ ಮೂಲದ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಕತಾರ್ ನ ವಿವಿಧ ಅಂತರಾಷ್ಟ್ರೀಯ ಶಾಲೆಗಳ ಶಿಕ್ಷಕರು, ಕರ್ನಾಟಕ ಸಂಘದ ಸದಸ್ಯರು ಹಾಗೂ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಅನಿಲ್ ಭಾಸಗಿ ಮತ್ತು ಸುಷ್ಮಾ ಹರೀಶ್ ನಿರ್ದೇಶಿಸಿದ ಗುರುವಂದನ ಗೀತೆಯನ್ನು ಕರ್ನಾಟಕ ಸಂಘದ ಮಕ್ಕಳು ಹಾಡಿದರು.
ಭಾರತೀಯ ಸಾಂಸ್ಕೃತಿಕ ಕೇಂದ್ರದ ಸಾಹಿತ್ಯ ಕ್ಲಬ್ ಗೆ ಕೊಡುಗೆ ನೀಡಲು ಕನ್ನಡ ಪುಸ್ತಕಗಳ ಸಂಗ್ರಹವನ್ನು ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಮಣಿಕಂಠನ್, ಉಪಾಧ್ಯಕ್ಷ ಸುಬ್ರಮಣ್ಯ ಹೆಬ್ಬಾಗಿಲು ಅವರಿಗೆ ಕರ್ನಾಟಕ ಸಂಘದ ಅಧ್ಯಕ್ಷರು ಮತ್ತು ವ್ಯವಸ್ಥಾಪನಾ ಸಮಿತಿ ಸದಸ್ಯರು ಹಸ್ತಾಂತರಿಸಿದರು. ಕರ್ನಾಟಕ ಸಂಘ ಕತಾರ್ ವತಿಯಿಂದ 2022 – 23ನೇ ಸಾಲಿನ ವ್ಯವಸ್ಥಾಪನ ಸಮಿತಿ ಸದಸ್ಯರಾಗಿದ್ದ ಸಂಜನಾ ಜೀವನ್ ಅವರು ಭಾರತಕ್ಕೆ ಮರಳುತ್ತಿರುವ ಹಿನ್ನೆಲೆಯಲ್ಲಿ ಬೀಳ್ಕೊಡಲಾಯಿತು.
ಸಂಘದ ಅಧ್ಯಕ್ಷ ರವಿ ಶೆಟ್ಟಿ ಸ್ವಾಗತಿಸಿ, ಭಾವನಾ ನವೀನ್ ವಂದಿಸಿದರು. ಭುವನಾ ಸೂರಜ್ ಕಾರ್ಯಕ್ರಮ ನಿರೂಪಿಸಿದರು.