ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಪದವಿ ಮಾನವಿಕ ವಿಭಾಗದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ತಂಡ ವಿಟ್ಲದ ಕನ್ಯಾನದ ಭಾರತ ಸೇವಾಶ್ರಮ ಟ್ರಸ್ಟ್ಗೆ ಭೇಟಿ ನೀಡಿದರು. ಭಾರತ ಸೇವಾಶ್ರಮ ಟ್ರಸ್ಟ್ನ ಮುಖ್ಯಸ್ಥ ಈಶ್ವರ್ ಭಟ್ ಮಾತನಾಡಿ, ಸೇವಾಹಿ ಪರಮೋ ಧಮರ್ಃ ಎಂಬ ಸಾಲು ಸೇವೆಯೇ ಧರ್ಮಗಳಲ್ಲಿ ಶ್ರೇಷ್ಠ ಎಂದು ಸಾರುತ್ತದೆ. ವಿದ್ಯಾರ್ಥಿಗಳಿಗೆ ಪಾಲಕರ ಮಹತ್ವವನ್ನು ವಿವರಿಸಿದ ಅವರು, ಎಂದೂ ಹೆತ್ತ ತಂದೆ ತಾಯಿಯನ್ನು ಅನಾಥರನ್ನಾಗಿಸಬೇಡಿ. ಕಳೆದ 60 ವರ್ಷಗಳಿಂದ ಭಾರತ ಸೇವಾಶ್ರಮವನ್ನು ನಡೆಸಿಕೊಂಡು ಬರುತ್ತಿದ್ದೇವೆ.
ಈ ಆಶ್ರಮದಲ್ಲಿರುವ ಹೆಚ್ಚಿನ ವೃದ್ಧರ ಮಕ್ಕಳು ಉತ್ತಮ ಸ್ಥಿತಿವಂತರು. ಆದರೆ ತಮ್ಮ ಪೋಷಕರನ್ನು ವೃದ್ಧಾಶ್ರಮಕ್ಕೆ ಸೇರಿಸಿರುವುದು ದುರಾದೃಷ್ಟಕರ ಎಂದರು. ಈ ಆಶ್ರಮದಲ್ಲಿ ಅನಾಥ ಮಕ್ಕಳಿಗೆ, ಅನಾಥರಿಗೆ, ವೃದ್ಧರಿಗೆ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದ್ದು, 250ಕ್ಕೂ ಅಧಿಕ ಜನರಿಗೆ ಆಶ್ರಯ ನೀಡಲಾಗಿದೆ ಎಂದರು. ವಿದ್ಯಾರ್ಥಿಗಳಿಗೆ ಸೇವಾಶ್ರಮದ ಹುಟ್ಟಿನ ಬಗೆ, ಆಶ್ರಮ ಬೆಳೆದು ಬಂದ ಹಾದಿಯನ್ನು ತಿಳಿಸಿದರು.
ನಿವಾಸಿಗಳ ಮನೊರಂಜನೆಗಾಗಿ ವಿದ್ಯಾರ್ಥಿಗಳು ವಿವಿಧ ಚಟುವಟಿಕೆ ಹಾಗೂ ನೃತ್ಯ, ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಿದರು. ದಿನಬಳಕೆಗೆ ಉಪಯೋಗವಾಗುವ ಸಾಮಾಗ್ರಿಗಳು ಮತ್ತು ದೇಣಿಗೆಯನ್ನು ಆಶ್ರಮಕ್ಕೆ ವಿದ್ಯಾರ್ಥಿಗಳಿಂದ ಹಸ್ತಾಂತರಿಸಲಾಯಿತು. ವಿದ್ಯಾರ್ಥಿಗಳು ಆಶ್ರಮದ ಬಂಧುಗಳಿಗೆ ಸಿಹಿ ತಿಂಡಿಗಳನ್ನು ಹಂಚಿದರು. ಆಶ್ರಮದ ಆವರಣದಲ್ಲಿ ವಿದ್ಯಾರ್ಥಿಗಳು ಗಿಡವನ್ನು ನೆಟ್ಟರು. ಒಟ್ಟು 53 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಆಳ್ವಾಸ್ ಪದವಿ ಮಾನವಿಕ ವಿಭಾಗದ ಮುಖ್ಯಸ್ಥೆ ಸಂಧ್ಯಾ ಕೆ.ಎಸ್, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಚಂದ್ರಶೇಖರ ಮಯ್ಯ ಮಾರ್ಗದರ್ಶನ ನೀಡಿದರು.