ಪುಣೆಯ ಬಂಟ ಸಮಾಜದ ಪ್ರತಿಷ್ಠಿತ ಸಂಸ್ಥೆಗಳಲ್ಲೊಂದಾದ ಬಂಟ್ಸ್ ಅಸೋಸಿಯೇಷನ್ ಪುಣೆ ಇದರ ನೂತನ ಅಧ್ಯಕ್ಷರಾಗಿ ಪುಣೆಯ ಉದ್ಯಮಿ, ಸಮಾಜ ಸೇವಕ ನಗ್ರಿಗುತ್ತು ರೋಹಿತ್ ಡಿ ಶೆಟ್ಟಿಯವರು ಸರ್ವಾನುಮತದಿಂದ ಅವಿರೋದವಾಗಿ ಆಯ್ಕೆಯಾದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ರೇಷ್ಮಾ ಅರ್ ಶೆಟ್ಟಿಯವರು ಅವಿರೋದವಾಗಿ ಆಯ್ಕೆಯಾದರು. ಬಂಟ್ಸ್ ಅಸೋಸಿಯೇಷನ್ ಪುಣೆ ಇದರ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ 8 ರಂದು ಪುಣೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ ಗಣೇಶ್ ಹೆಗ್ಡೆ ಪುಣ್ಚೂರುರವರ ಅಧ್ಯಕ್ಷತೆಯಲ್ಲಿ ಪುಣೆಯ ಕ್ಯಾಂಪ್ ನಲ್ಲಿಯ ಪೂನಾ ಕ್ಲಬ್ ನ ಬ್ಯಾಂಕ್ವೇಟ್ ಹಾಲ್ ನಲ್ಲಿ ಜರಗಿತು. ಈ ಸಂದರ್ಭದಲ್ಲಿ 2024-26 ರ ಸಾಲಿಗೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷರನ್ನಾಗಿ ರೋಹಿತ್ ಡಿ ಶೆಟ್ಟಿಯವರನ್ನು ಸಭೆಯಲ್ಲಿ ಸರ್ವಾನುಮತದಿಂದ ಅವಿರೋದವಾಗಿ ಆಯ್ಕೆ ಮಾಡಲಾಯಿತು ಹಾಗೂ ಕಾರ್ಯಕಾರಿ ಸಮಿತಿ ಮಹಿಳಾ ವಿಭಾಗ ಮತ್ತು ಯುವ ವಿಭಾಗದ ನೂತನ ಸಮಿತಿಯನ್ನು ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರೋಹಿತ್ ಶೆಟ್ಟಿ ಯವರಿಗೆ ಗಣೇಶ್ ಹೆಗ್ಡೆಯವರು ಪುಷ್ಪಗುಚ್ಚ ನೀಡಿ ಅಭಿನಂದಿಸಿ ಗೌರವಿಸಿದರು.
ನಗ್ರಿಗುತ್ತು ರೋಹಿತ್ ಡಿ ಶೆಟ್ಟಿ : ಪುಣೆಯಲ್ಲಿ ಉದ್ಯಮಿಯಾಗಿರುವ ರೋಹಿತ್ ಡಿ ಶೆಟ್ಟಿಯವರು ಮೂಲತಃ ಬಂಟ್ವಾಳದ ಪ್ರಸಿದ್ಧ ಸಜಿಪ ಮಾಗಣೆಯ ನಗ್ರಿಗುತ್ತು ಮನೆತನದವರು. ತುಳುನಾಡಿನ ಬಹಳಷ್ಟು ಮಂದಿಯಂತೆ ಹೊರ ರಾಜ್ಯ ಮಹಾರಾಷ್ಟ್ರಕ್ಕೆ ಉದ್ಯಮವನ್ನು ಅರಸಿ ಬಂದು ಪುಣೆಯಲ್ಲಿ ಸಣ್ಣ ಮಟ್ಟದಲ್ಲಿ ಹೋಟೆಲ್ ಉದ್ಯಮವನ್ನು ಪ್ರಾರಂಭಿಸಿ ಹಂತ ಹಂತವಾಗಿ ಮೇಲೇರಿ ನಂತರ ಪುಣೆ, ಔರಂಗಬಾದ್, ಮುಂಬಯಿಯಲ್ಲಿ ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡು ಪುಣೆ ಮುಂಬಯಿ ಮಹಾ ಹೆದ್ದಾರಿಯಲ್ಲಿ ಫುಡ್ ಮಾಲ್ ಉದ್ಯಮದಲ್ಲೂ ಯಶಸ್ಸನ್ನು ಕಂಡವರು. ನಂತರ ತಮ್ಮ ತವರೂರು ಮಂಗಳೂರು, ಅಡ್ಯಾರ್, ಬಂಟ್ವಾಳ ಮೊದಲಾದ ಕಡೆ ವಿವಿಧ ರೀತಿಯ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಉದ್ಯಮದ ಜೊತೆಯಲ್ಲಿ ನಮ್ಮ ಭಾಷೆ, ಕಲೆ, ಸಂಸ್ಕ್ರತಿಗೆ ಪ್ರೋತ್ಸಾಹ ನೀಡುವ ಜೊತೆಯಲ್ಲಿ ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲೂ ಸೇವೆಗೈಯುತಿದ್ದಾರೆ.
ಪುಣೆ ತುಳುಕೂಟದ ಪ್ರಾರಂಭದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಮಾಡಿದ ಇವರು ನಂತರ ಪುಣೆಯಲ್ಲಿ ಶ್ರೀ ಗುರುದೇವ ಸೇವಾ ಬಳಗದ ಸ್ಥಾಪನೆಗೆ ಕಾರಣೀಕರ್ತರಾಗಿ ಸುಮಾರು 22 ವರ್ಷಗಳಿಂದ ಪ್ರಧಾನ ಕಾರ್ಯದರ್ಶಿಯಾಗಿ ಧಾರ್ಮಿಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೇ ಪುಣೆ ಬಂಟ್ಸ್ ಅಸೋಸಿಯೇಷನ್ ನ ಪ್ರಧಾನ ಕಾರ್ಯದರ್ಶಿಯಾಗಿ ನಂತರ ಉಪಾಧ್ಯಕ್ಷರಾಗಿ ಸಮಾಜ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ನವೆಂಬರ್ ನಲ್ಲಿ ನಡೆಯಲಿರುವ ಪುಣೆ ತುಳುಕೂಟದ ರಜತ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸುತ್ತಿದ್ದಾರೆ. ಆಧ್ಯಾತ್ಮ ಧಾರ್ಮಿಕ ಶ್ರದ್ದಾ ಭಕ್ತಿಗೆ ಹೆಚ್ಚು ಒತ್ತು ನೀಡುವ ಇವರು ತನ್ನ ಊರಿನ ಹಲವಾರು ದೇವಸ್ಥಾನ, ದೈವಸ್ಥಾನಗಳ ಜೀರ್ಣೋದ್ದಾರ ಸಮಿತಿಯಲ್ಲಿ ಗುರುತಿಸಿಕೊಂಡಿದ್ದು, ಹಲವೆಡೆ ಟ್ರಸ್ಟಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಟೀಲು ಅಮ್ಮನವರ ಪರಮ ಭಕ್ತರಾದ ಇವರು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಈ ಹಿಂದಿನ ಎರಡು ಬಾರಿಯ ಬ್ರಹ್ಮಕಲಶೋತ್ಸವ ಹಾಗೂ ಪೊಳಲಿ ರಾಜರಾಜೇಶ್ವರಿ ಅಮ್ಮನವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಪುಣೆ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ನಿಸ್ವಾರ್ಥ ಸೇವೆಯ ಮೂಲಕ ಅಮ್ಮನವರ ಕೃಪೆಗೆ ಪಾತ್ರರಾಗಿದ್ದಾರೆ. ನಂದಾವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಉಪಾಧ್ಯಕ್ಷರಾಗಿಯೂ ಧಾರ್ಮಿಕ ಸೇವೆ ಸಲ್ಲಿಸಿದ್ದಾರೆ. ಒಡಿಯೂರು ಕ್ಷೇತ್ರ ಮತ್ತು ಶ್ರೀ ಗುರುದೇವಾನಂದ ಸ್ವಾಮಿಜಿಯವರ ಭಕ್ತರಾದ ರೋಹಿತ್ ಶೆಟ್ಟಿಯವರು ಕ್ಷೇತ್ರದ ಪ್ರತಿಯೊಂದು ಕಾರ್ಯಕ್ರಮದಲ್ಲೂ ಪಾಲ್ಗೊಂಡು ತಮ್ಮ ಸೇವೆಯನ್ನು ನೀಡುತಿದ್ದಾರೆ. ಅಲ್ಲದೇ ಈ ಹಿಂದೆ ನಡೆದ ಕ್ಷೇತ್ರದ ಬೆಳ್ಳಿ ಮಹೋತ್ಸವದ ಸಂದರ್ಭದಲ್ಲಿ ಸ್ವಾಮಿಜಿಯವರ ಷಷ್ಟ್ಯಬ್ದ ಸಂಭ್ರಮದಲ್ಲಿ ಕೇಂದ್ರ ಸಮಿತಿಯ ಉಪಾಧ್ಯಕ್ಷರಾಗಿ, ಪುಣೆ ಸಮಿತಿಯ ಅಧ್ಯಕ್ಷರಾಗಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ತನ್ನ ತಂದೆಯವರ ಊರಾದ ನಾಳ ದುರ್ಗಾಪರಮೇಶ್ವರಿ ದೇವಸ್ಥಾನದ ದೈವಸ್ಥಾನವನ್ನು ತನ್ನ ಸೇವೆಯಾಗಿ ಕಟ್ಟಿಸಿದ್ದಾರೆ. ನಗ್ರಿಗುತ್ತು ಶಾಲೆಯ ಟ್ರಸ್ಟಿಯಾಗಿ, ನಡುಮೊಗೆರು ಶಾಲೆಯ ಮಕ್ಕಳಿಗೆ ಪ್ರತಿ ವರ್ಷ ಬ್ಯಾಗ್ ಪುಸ್ತಕ ವಿತರಣೆಯ ಕಾರ್ಯವನ್ನು ಮಾಡುತ್ತಿದ್ದಾರೆ. ಸಾಮಾಜಿಕ ಸೇವಾ ಕ್ಷೇತ್ರ ಧಾರ್ಮಿಕ ಕ್ಷೇತ್ರ, ಶೈಕ್ಷಣಿಕ, ಕಲಾ ಕ್ಷೇತ್ರಗಳಿಗೆ ಪ್ರೋತ್ಸಾಹಕರಾಗಿ ಸೇವೆ ಮಾಡುತ್ತಿರುವ ಇವರು ಪುಣೆಯ ಹಾಗೂ ಊರಿನ ವಿವಿಧ ಸಂಘ ಸಂಸ್ಥೆಗಳ ಸಮಿತಿ ಸದಸ್ಯರಾಗಿ ಸಾಮಾಜಿಕ ಸೇವೆಯನ್ನು ಮಾಡುತ್ತಿದ್ದಾರೆ. ಇವರ ಕಾಲಾವಧಿಯಲ್ಲಿ ಸಂಘವು ಮತ್ತಷ್ಟು ಸಮಾಜಾಭಿವೃದ್ದಿ ಕಾರ್ಯ ಯೋಜನೆಗಳ ಮೂಲಕ ಉತ್ತರೋತ್ತರ ಅಭಿವೃದ್ದಿಯನ್ನು ಹೊಂದಲಿ ಎಂದು ರೋಹಿತ್ ಶೆಟ್ಟಿಯವರಿಗೆ ಶುಭ ಹಾರೈಸುತ್ತಿದ್ದೇವೆ.
ಶ್ರೀಮತಿ ರೇಷ್ಮಾ ರವೀಂದ್ರ ಶೆಟ್ಟಿ : ಮೂಲತಃ ಉಡುಪಿ ಅತ್ರಾಡಿಯ ಮುದ್ರಾಡಿ ಸುಂದರ್ ಶೆಟ್ಟಿ ಮತ್ತು ಅತ್ರಾಡಿ ಪರಿಮಳ ಎಸ್ .ಶೆಟ್ಟಿಯವರ ಮಗಳಾದ ರೇಷ್ಮಾ ಅರ್ ಶೆಟ್ಟಿಯವರು ಮುಂಬಯಿಯಲ್ಲಿ ಜನಿಸಿ ವಿಧ್ಯಾಭಾಸವನ್ನು ಮುಂಬಯಿಯಲ್ಲಿ ಮುಗಿಸಿ ಹಾಗೂ ಫ್ಯಾಷನ್ ಡಿಸೈನ್ ನಲ್ಲಿ ಪದವಿ ಪಡೆದಿದ್ದಾರೆ. ಪುಣೆ ಬಂಟ್ಸ್ ಅಸೋಸಿಯೇಷನ್ ನ ಸಕ್ರೀಯ ಪದಾಧಿಕಾರಿಯಾದ ರವೀಂದ್ರ ಶೆಟ್ಟಿಯರನ್ನು ವಿವಾಹವಾಗಿ ಪುಣೆಯಲ್ಲಿ ನೆಲೆಸಿದ್ದಾರೆ. ಶಿಕ್ಷಕಿಯಾಗಿರುವ ಇವರು ಬಂಟ್ಸ್ ಅಸೋಸಿಯೇಷನ್ ನ ಸ್ಥಾಪಕ ಸದಸ್ಯೆಯಾಗಿ, ಮಹಿಳಾ ವಿಭಾಗದಲ್ಲಿ ವಿವಿಧ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಕಳೆದ ಬಾರಿ ಮಹಿಳಾ ವಿಭಾಗದ ಜತೆ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ಇವರು ಇದೀಗ ಬಂಟ್ಸ್ ಅಸೋಸಿಯೇಷನ್ ನ ಮಹಿಳಾ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.
ವರದಿ : ಹರೀಶ್ ಮೂಡುಬಿದಿರೆ