ಮೂಡುಬಿದಿರೆ: ಈ ಭೂಮಿಯು ನಮಗಾಗಿಯೇ ನಿರ್ಮಿತವಾಗಿದೆ ಹಾಗೂ ನಮಗಾಗಿಯೇ ಕಾರ್ಯನಿರ್ವಹಿಸುತ್ತಿದೆ ಎಂಬ ಮನುಷ್ಯನ ಅಹಂ ಬಾವ ಹಾಗೂ ಮೂರ್ಖತನದ ಪರಮಾವಧಿಯಿಂದ ಜೀವ ವೈವಿಧ್ಯದ ಮೇಲೆ ಭರಿಸಲಾಗದ ನಷ್ಟ ಉಂಟಾಗುತ್ತಿದೆ ಎಂದು ಆಳ್ವಾಸ್ ಕಾಲೇಜಿನ ಪ್ರಾಚಾರ್ಯ ಡಾ ಕುರಿಯನ್ ನುಡಿದರು
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ(ಐಐಎಸ್ಸಿ) ಎನರ್ಜಿ ಆ್ಯಂಡ್ ವೆಟ್ಲ್ಯಾಂಡ್ಸ್ ರಿಸರ್ಚ್ ಗ್ರೂಪ್, ಹಾಗೂ ಆಳ್ವಾಸ್ ಕಾಲೇಜಿನ ಸಸ್ಯಶಾಸ್ತ್ರ ಹಾಗೂ ಪ್ರಾಣಿಶಾಸ್ತ್ರ ವಿಭಾಗದ ಆಶ್ರಯದಲ್ಲಿ ಕೆರೆ ಸಮ್ಮೇಳನದ ಪೂರ್ವಭಾವಿಯಾಗಿ ಆಯೋಜಿಸಿದ್ದ- ‘ಪ್ರೀ ಲೇಕ್ ಕಾರ್ಯಾಗಾರ’’ ವನ್ನು ಉದ್ಘಾಟಿಸಿ ಮಾತನಾಡಿದರು.
ತಾನೇ ಬಲಿಯಾಗುತ್ತಿರುವುದರಿಂದ ಜಾಗೃತಿಯ ಮಂತ್ರ
ಮನುಷ್ಯ ತನ್ನ ವರ್ತನೆಯ ಸಮಸ್ಯೆಯಿಂದಾಗಿ ಇಂದು ಪ್ರಕೃತಿಯ ಮೇಲೆ ಸವಾರಿ ಮಾಡುತ್ತಾ ಸಾಗಿದ್ದಾನೆ. ನಮ್ಮಲ್ಲಿರುವ ‘ಚಲ್ತಾ ಹೇ’ (ನಡಿತದೆ) ಎಂಬ ಉಡಾಫೆಯ ಮನೋಭಾವ ಸಮಸ್ಯೆಗೆ ಮೂಲ ಕಾರಣ. ಮನುಷ್ಯ, ಪ್ರಕೃತಿಯ ಭಾಗವಾಗಿರುವ ಉಳಿದ ಜೀವ ರಾಶಿಗೆ ಸಮಸ್ಯೆಯಾಗಿದೆಯೆಂದು ಜೀವ ವೈವಿಧ್ಯತೆಯ ಸಂರಕ್ಷಣೆಯ ಕುರಿತು ಕಾಳಜಿ ವಹಿಸುತ್ತಿಲ್ಲ, ಮನುಷ್ಯ ಸತ್ವಃ ತಾನೇ ಪ್ರಕೃತಿಯ ಮುನಿಸಿಗೆ ಇಡಾಗುತ್ತಿರುವುದರಿಂದ ಜಾಗೃತಿಯ ಮಂತ್ರ ಜಪಿಸುತ್ತಿದ್ದಾನೆ ಎಂದರು.
ವಾಸ್ತವದ ನಿರಾಕರಣೆಯಲ್ಲಿ ಮನುಷ್ಯ
ಜಗತ್ತಿನ ಇಡೀ ಮನುಕುಲ ವಾಸ್ತವದ ನಿರಾಕರಣೆಯಲ್ಲಿ ಜೀವಿಸುತ್ತಿದೆ. ಜಾಗತಿಕ ತಾಪಮಾನ ಹಾಗೂ ಹವಾಮಾನದ ದುಷ್ಪರಿಣಾಗಳಿಂದಾಗಿ ಮಂಜುಗಡ್ಡೆಗಳು ಕರಗುತ್ತಿವೆ, ಓಝೋನ್ ಪದರ ಸವಕಳಿ ಹೊಂದುತ್ತಿದೆ, ವಾಯು ಮಾಲಿನ್ಯ ವಿಪರೀತ ಮಟ್ಟಕೇರಿದೆ, ಆದರೂ ಈ ನೆಲೆಯಲ್ಲಿ ಜಗತ್ತು ಕಾರ್ಯೋನ್ಮುಖವಾಗುತ್ತಿರುವುದು ಗೋಚರಿಸುತ್ತಿಲ್ಲ ಎಂದರು.
ತಾಪಮಾನ ತಡೆಗಟ್ಟುವ ಉಪಕ್ರಮ ರೂಪಿಸಬೇಕು
ಜಾಗತಿಕ ತಾಪಮಾನ ಹೆಚ್ಚಳದಿಂದ ಸರ್ವಜೀವಿಗಳೂ ತತ್ತರಿಸುವ ದಿನ ದೂರವಿಲ್ಲ. ತಾಪಮಾನ ತಡೆಗಟ್ಟುವ ಉಪಕ್ರಮ ರೂಪಿಸಿಕೊಳ್ಳಬೇಕಿದೆ. ನಾವು ನಮ್ಮ ನಿಯಂತ್ರಣವನ್ನು ಕಳೆದಕೊಂಡ ಕ್ಷಣದಲ್ಲಿ ಬೇರೆಯವರು ನಮ್ಮನ್ನು ನಿಯಂತ್ರಿಸಲು ಪ್ರಾರಂಭಿಸುತ್ತಾರೆ. ನಮ್ಮ ನಡವಳಿಕೆ ಜೀವ ವಿರೋಧಿಯಾಗಿದ್ದಾರೆ, ಅದನ್ನು ನಿಲ್ಲಿಸಿ ಎಂದು ಕರೆ ನೀಡಿದರು.
ವಿವಿಧ ವಿಷಯಗಳ ಕಾರ್ಯಾಗಾರಗಳು
ಸಂಶೋಧಕ ವ್ರಿಜುಲಾಲ್ -ಹಕ್ಕಿ ಹಾಗೂ ಚಿಟ್ಟೆಗಳ ಕುರಿತು, ಆಳ್ವಾಸ್ನ ಸ್ನಾತಕೋತ್ತರ ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಪಕ ಡಾ ಕೇಶವಚಂದ್ರ ಕೆ- ಸಸ್ಯಗಳ ಗುರುತಿಸುವ ಕುರಿತು, ಲೈಯಾನಾ ಟ್ರಸ್ಟ್ನ ಕ್ಷೇತ್ರ ಸಂಶೋಧಕಿ ಶರಣ್ಯ, ಕೆರೆ ಸಮ್ಮೇಳನ 2024ರ ಕಾರ್ಯಕಾರಿ ಕಾರ್ಯದರ್ಶಿ ಡಾ ವಿನಯ್- ನೀರು ಹಾಗೂ ಜೀವ ಪರಿಸರ ವ್ಯವಸ್ಥೆಯ ಕುರಿತು, ಸಂತ ಅಲೋಷಿಯಸ್ ಡೀಮ್ಡ್ ಟುಬಿ ವಿವಿಯ ಪ್ರಾಣಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಪಕ ಕಿರಣ್ ವಾಟಿ- ಕೀಟ ಹಾಗೂ ಜೇಡಗಳು- ಪ್ರಕೃತಿಯ ವಿಸ್ಮಯ, ವಿಷಯದ ಕುರಿತು ಕಾರ್ಯಗಾರ ನಡೆಸಿದರು. ಮಂಗಳೂರು ವಿವಿ ಕಾಲೇಜು, ಮಂಗಳೂರಿನ ಕಾರ್ಸ್ಟ್ರೀಟ್ ಕಾಲೇಜು ಹಾಗೂ ಭುವನೇಂದ್ರ ಕಾಲೇಜಿನಿಂದ ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ಉಪನ್ಯಾಸಕರು ಭಾಗವಹಿಸಿದ್ದರು.
ಸಮಾರೋಪ ಸಮಾರಂಭದಲ್ಲಿ ಆಳ್ವಾಸ್ ಕಾಲೇಜಿನ ಮೌಲ್ಯಾಮಾಪನ ಕುಲಸಚಿವ ಡಾ ನಾರಾಯಣ ಶೆಟ್ಟಿ, ಶೈಕ್ಷಣಿಕ ಕುಲಸಚಿವ ಡಾ ರವೀಂದ್ರನ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪದವಿ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥೆ ಪವಿತ್ರಾ ಉಪಸ್ಥಿತರಿದ್ದರು. ಸುನೈನಾ ಹಾಗೂ ಗಗನಾ ಲೋಕೇಶ್ ನಿರೂಪಿಸಿ, ವೈಶವಿ ಹಾಗೂ ಮೇಘಾ ಬಿವಿ ವಂದಿಸಿದರು.