ಬಂಟ್ಸ್ ಕತಾರ್ ಆಡಳಿತ ಮಂಡಳಿಯು ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಕತಾರ್ ನಲ್ಲಿ ಮೊದಲ ಬಾರಿಗೆ ಆಗಸ್ಟ್ 15 ರಂದು ಕತಾರಿನ ಲಯನ್ ಗಾರ್ಡನ್ ಕ್ಲಬ್ ಹೌಸ್ ನಲ್ಲಿ ಬಹಳ ವಿಜೃಂಭಣೆಯಿಂದ ಆಯೋಜಿಸಿತ್ತು. ಜತೆ ಕಾರ್ಯದರ್ಶಿ ಚಿದಾನಂದ ರೈಯವರು ನೆರೆದ ಸದಸ್ಯರನ್ನು ಸ್ವಾಗತಿಸುವುದರೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಸಂಪ್ರದಾಯದಂತೆ ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಕತಾರ್ ನಲ್ಲಿ ನೆಲೆಸಿರುವ ಎಲ್ಲರ ಒಗ್ಗೂಡುವಿಕೆಯಿಂದ ಇಂತಹ ವಿನೂತನ ಕಾರ್ಯಕ್ರಮದ ಮುಖಾಂತರ ತುಳುನಾಡಿನ ಕಲೆ ಮತ್ತು ಸಂಸ್ಕೃತಿಯನ್ನು ಕತಾರ್ ನಲ್ಲಿ ಪರಿಚಯಿಸಲು ಸಾಧ್ಯವೆಂದು ಅಧ್ಯಕ್ಷರಾದ ನವೀನ ಶೆಟ್ಟಿ ಇರುವೈಲ್ ರವರು ಅಭಿಪ್ರಾಯಪಡಿಸಿ, ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
ಸೌರಭ್ ಶೆಟ್ಟಿಯವರು ವಿಶಿಷ್ಟ ರೀತಿಯಲ್ಲಿ ಆಟಿ ತಿಂಗಳ ಮಹತ್ವವನ್ನು ತಿಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಸ್ಥಾಪಕಾಧ್ಯಕ್ಷರಾದ ಡಾ| ಮೂಡಂಬೈಲ್ ರವಿ ಶೆಟ್ಟಿ ಹಾಗೂ ಮಾಜಿ ಅಧ್ಯಕ್ಷರಾದ ನವನೀತ್ ಶೆಟ್ಟಿಯವರು ಮಾತನಾಡಿ, ವಿನೂತನವಾಗಿ ಕಾರ್ಯಕ್ರಮವನ್ನು ಆಯೋಜಿಸಿ ಪರಿಚಯಿಸಿದ ಆಡಳಿತ ಮಂಡಳಿಯ ಕಾರ್ಯವೈಖರಿಯನ್ನು ಪ್ರಶಂಸಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಆಟಿ ತಿಂಗಳ ವಿಶಿಷ್ಟ ರೀತಿಯ ತಿಂಡಿ ತಿನಸುಗಳನ್ನು ಒದಗಿಸಿದ ಸದಸ್ಯರಿಗೆ ಸ್ಮರಣಿಕೆಯಿತ್ತು ಗೌರವಿಸಲಾಯಿತು.
ನೆರೆದವರೆಲ್ಲರೂ ಸದಸ್ಯರು ರುಚಿಯಾಗಿ ಮನೆಯಲ್ಲಿ ತಯಾರಿಸಿದ ತುಳುನಾಡಿನ ವಿಶಿಷ್ಟ ಆಹಾರ ಪದಾರ್ಥಗಳನ್ನು ಸವಿದು ಸಂಭ್ರಮಿಸಿದರು. ಸರಿ ಸುಮಾರು 50 ಕ್ಕೂ ಮಿಕ್ಕಿ ತಯಾರಿಸಿದ ತುಳುನಾಡಿನ ವಿಶಿಷ್ಟ ಆಹಾರ ಪದಾರ್ಥಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಸುಧೀರ್ ಶೆಟ್ಟಿ ಮತ್ತು ಅಮಿತ್ ಶೆಟ್ಟಿ ಅವರು ತಮ್ಮ ಮಧುರ ಗಾಯನದ ಮೂಲಕ ನೆರೆದವರನ್ನು ರಂಜಿಸಿದರು. ಸುಮಂತ್ ಶೆಟ್ಟಿಯವರು ಕಾರ್ಯಕ್ರಮವನ್ನು ನಿರೂಪಿಸಿದರು. ಮನರಂಜನಾ ಕಾರ್ಯದರ್ಶಿ ಅಕ್ಷಿನಿ ವಿಘ್ನೇಶ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು.