ಬಾಷೆ, ಪ್ರೀತಿ, ಮೋಹ ತಿಳಿಸುವಲ್ಲಿ ಮೊದಲಾಗಿ ನಮ್ಮ ಮನೆಯೇ ಪಾಠಶಾಲೆ ಮತ್ತು ಮೊದಲ ಗುರುವೇ ತಾಯಿ. ಇದು ನಮ್ಮ ತುಳುನಾಡ ತಾಯಂದಿರು ತಿಳಿದುಕೊಳ್ಳಬೇಕು. ಇಂದಿನ ಮಕ್ಕಳು ಬೇರೆ ಎಲ್ಲಾ ಬಾಷೆಗಳನ್ನು ಶಾಲೆ ಅಥವಾ ಪರಿಸರದಲ್ಲಿ ಕಲಿತುಕೊಳ್ಳುತ್ತಾರೆ. ಆದರೆ ನಮ್ಮ ಮಾತೃ ಭಾಷೆ ಮನೆಯಿಂದಲೇ ಬರಬೇಕು. ಇದು ತಂದೆ ತಾಯಂದಿರ ಕರ್ತವ್ಯವಾಗಿದೆ. ಇದರಿಂದ ನಮ್ಮ ತುಳುನಾಡ ಸಂಸ್ಕ್ರತಿ ಸಂಸ್ಕಾರ ಮಕ್ಕಳಿಗೆ ತಿಳಿದುಕೊಳ್ಳಲು ಮತ್ತು ಉಳಿಯಲು ಸಾದ್ಯ. ತುಳುನಾಡ ಸಂಸ್ಕ್ರತಿ, ಆಚಾರ ವಿಚಾರಗಳ ಬಗ್ಗೆ ಅರಿತು ಜೀವನದಲ್ಲಿ ಮುನ್ನಡೆಯುವ ನಾವು ಗರ್ವದಿಂದ ಹೇಳಬಹುದು ನಾನೊಬ್ಬ ತುಳುವ ಎಂದು. ಅಂತಹ ಶಕ್ತಿ ತುಳು ಭಾಷೆಗಿದೆ. ನಮ್ಮ ತುಳುನಾಡ ಜಾನಪದ ಸಂಸ್ಕ್ರತಿ, ದೈವಾರಾಧನೆ, ನಾಗಾರಾಧನೆ ಆಚಾರ ವಿಚಾರ ಸಂಸ್ಕಾರ ಇವೆಲ್ಲವನ್ನು ಅರಿತವರು ನಮ್ಮ ಮಕ್ಕಳಿಗೆ ತಿಳಿಸಿಕೊಡುವ ಕಾರ್ಯ ಮಾಡಬೇಕು ಹಾಗೂ ಮಕ್ಕಳಲ್ಲಿ ತಿಳಿದುಕೊಳ್ಳುವ ಮನಸ್ಸು ಮೂಡಿ ಬರಬೇಕು. ಇದು ಮಾತೃ ಹೃದಯದಿಂದ ಮಾತ್ರ ಸಾದ್ಯ ಎಂದು ಸದಾನಂದ ಗ್ರೂಪ್ ಆಫ್ ಹೋಟೆಲ್ಸ್ ನ ಸಿ.ಎಂ.ಡಿ ಸದಾನಂದ ಕೆ ಶೆಟ್ಟಿ ನುಡಿದರು.
ಆಗಸ್ಟ್ 15ರಂದು ಪುಣೆ ತುಳುಕೂಟದ 25ನೇ ವಾರ್ಷಿಕೊತ್ಸವ ಮತ್ತು ರಜತ ಮಹೋತ್ಸವಕ್ಕೆ ಚಾಲನೆ ಸಮಾರಂಭವು ಪುಣೆಯ ಗಣೇಶ್ ನಗರದ ಕನ್ನಡ ಸಂಘದ ಶ್ರೀಮತಿ ಶಕುಂತಲಾ ಜಗನ್ನಾಥ್ ಶೆಟ್ಟಿ ಆಡಿಟೋರಿಯಂನಲ್ಲಿ ನಡೆದ ಸಭಾ ವೇದಿಕೆಯ ಮುಖ್ಯ ಅತಿಥಿಯಾಗಿ ಮಾತನಾಡಿದ ಸದಾನಂದ ಶೆಟ್ಟಿಯವರು, ನಮ್ಮ ಮೂಲ ಸಂಸ್ಕ್ರತಿ ಪಾಶ್ಚಾತ್ಯರ ದಬ್ಬಾಳಿಕೆ ಮತ್ತು ಇಲ್ಲಿಯ ಕೆಲವರ ವಂಚನೆಯಿಂದ ನಾಶವಾಗಿದೆ. ಇದರ ಪುನರ್ಜೀವನ ಇಂದಿನ ದಿನಗಳಲ್ಲಿ ಸ್ವಲ್ಪ ಮಟ್ಟದಲ್ಲಿ ಆಗುತ್ತಿದೆ. ಇದಕ್ಕೆ ಸಹಕಾರಿಯಾಗಿ ನಾವು ತುಳುವರು ಕೂಡಾ ನಮ್ಮ ಸಂಸ್ಕ್ರತಿಯನ್ನು ಬೆಳೆಸುವ ಜೊತೆಯಲ್ಲಿ ದೇಶದ ಸಂಸ್ಕ್ರತಿ ಬೆಳವಣಿಗೆಗೆ ಸಹಕಾರಿಯಾಗುವಂತಹ ಕಾರ್ಯಮಾಡಬೇಕು ಹಾಗೂ ಪುಣೆ ತುಳುಕೂಟದ ಯೋಜನೆಗಳಿಗೆ ನನ್ನ ಸಂಪೂರ್ಣ ಸಹಕಾರವಿದೆ ಎಂದರು.
ತುಳುಕೂಟದ ಅಧ್ಯಕ್ಷರಾದ ದಿನೇಶ್ ಶೆಟ್ಟಿ ಕಳತ್ತೂರುರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾದ ಪುಣೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ ಗಣೇಶ್ ಹೆಗ್ಡೆ ಪುಣ್ಚೂರು, ಪುಣೆ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಸಿಂಪೋನಿ ಹೋಟೆಲ್ಸ್ ನ ಸಿ.ಎಂ.ಡಿ ಅಜಿತ್ ಹೆಗ್ಡೆ, ಪಂಜುರ್ಲಿ ಗ್ರೂಪ್ ಆಫ್ ಹೋಟೆಲ್ಸ್ ನ ಸಿ.ಎಂ.ಡಿ ರಾಜೇಂದ್ರ ಶೆಟ್ಟಿ, ಹಿರಿಯ ಸಾಧಕರಾದ ಶಬರಿ ಇಂಡಸ್ಟ್ರಿಯಲ್ ಹಾಸ್ಪಿಟಾಲಿಟಿ ಪ್ರೈ.ನ ಆಡಳಿತ ನಿರ್ದೇಶಕ 2024ರ ಸಾಲಿನ ಆರ್ಯಭಟ ಪ್ರಶಸ್ತಿ ಪುರಷ್ಕ್ರತ ಕೆ.ಕೆ. ಶೆಟ್ಟಿ, ಪುಣೆಯ ಖ್ಯಾತ ಕೈಗಾರಿಕೋದ್ಯಮಿ ಸಮಾಜ ಸೇವಕ, ಪುಣೆ ಕುಲಾಲ ಸಂಘದ ಮಾಜಿ ಅಧ್ಯಕ್ಷ ಸದಾಶಿವ ಬಂಜನ್, ಪುಣೆಯ ಖ್ಯಾತ ಹೋಟೆಲ್ ಉದ್ಯಮಿ ಸಮಾಜ ಸೇವಕ ಕೆ.ಕೆ. ಪೂಜಾರಿ, ತುಳುಕೂಟದ ಗೌರವಾಧ್ಯಕ್ಷ ಮೋಹನ್ ಶೆಟ್ಟಿ ಎಣ್ಣೆಹೊಳೆ, ಸ್ಥಾಪಕಾಧ್ಯಕ್ಷ ಜಯ ಶೆಟ್ಟಿ, ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು, ತುಳು ಕೂಟದ ಉಪಾಧ್ಯಕ್ಷರುಗಳಾದ ಮಾಧವ ಶೆಟ್ಟಿ, ಉದಯ್ ಶೆಟ್ಟಿ ಕಳತ್ತೂರು, ಶೇಖರ್ ಪೂಜಾರಿ, ಪ್ರ.ಕಾರ್ಯದರ್ಶಿ ರಾಜಾರಾಮ್ ಶೆಟ್ಟಿ, ಕೋಶಾಧಿಕಾರಿ ಸಿಎ ಮನೋಹರ್ ಶೆಟ್ಟಿ, ರಜತ ಮಹೋತ್ಸವ ಸಮಿತಿಯ ಕಾರ್ಯದರ್ಶಿ ನಗ್ರಿಗುತ್ತು ರೋಹಿತ್ ಶೆಟ್ಟಿ, ಕೂಟದ ಮಹಿಳಾ ಕಾರ್ಯಾಧ್ಯಕ್ಷೆ ಪ್ರಿಯಾ ಎಚ್.ದೇವಾಡಿಗ, ಸಾಂಸ್ಕ್ರತಿಕ ಕಾರ್ಯಾಧ್ಯಕ್ಷ ಸಂತೋಷ್ ಶೆಟ್ಟಿ ಎಣ್ಣೆಹೊಳೆ, ಯುವ ವಿಬಾಗದ ಕಾರ್ಯಾಧ್ಯಕ್ಷ ಅಭಿಜಿತ್ ಶೆಟ್ಟಿ, ಮಹಿಳಾ ಕಾರ್ಯಾಧ್ಯಕ್ಷೆ ಶೃತಿ ಜೆ ಶೆಟ್ಟಿಯವರು ಉಪಸ್ಥಿರಿದ್ದರು.
ಅತಿಥಿ ಗಣ್ಯರನ್ನು ತುಳುನಾಡ ಸಾಂಪ್ರದಾಯಿಕ ಶೈಲಿಯಲ್ಲಿ ಸ್ವಾಗತಿಸಲಾಯಿತು. ಅಧ್ಯಕ್ಷರು, ಅತಿಥಿ ಗಣ್ಯರು ವಾರ್ಷಿಕೋತ್ಸವನ್ನು ಉದ್ಘಾಟಿಸಿದರು. ಗೀತಾ ಡಿ.ಪೂಜಾರಿ, ಅಕ್ಷತಾ ಎಸ್. ಭಟ್, ರಾಧಿಕಾ ಪೂಜಾರಿ ಪ್ರಾರ್ಥನೆಗೈದರು. ಉಪಾಧ್ಯಕ್ಷ ಉದಯ ಶೆಟ್ಟಿ ಕಳತ್ತೂರು ಸ್ವಾಗತಿಸಿದರು. ಪ್ರಿಯಾ ದೇವಾಡಿಗ ತುಳುಕೂಟದ ವಾರ್ಷಿಕ ವರದಿ ಸಲ್ಲಿಸಿದರು. ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಪುಣೆ ತುಳುಕೂಟ ಸದಸ್ಯರಿಂದ, ಮಕ್ಕಳಿಂದ, ವಿವಿದ ನಾಟ್ಯ ತಂಡಗಳಿಂದ ವೈವಿದ್ಯಮಯ ಮನೋರಂಜನಾ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರಗಿದವು. ಪ್ರವೀಣ್ ಶೆಟ್ಟಿ ಪುತ್ತೂರುರವರ ಆಯೋಜಕತ್ವದಲ್ಲಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಮಾಯದ ದೈವ ಪಂಜುರ್ಲಿ ಎಂಬ ಪುಣ್ಯ ಕಥಾ ಭಾಗವನ್ನು ಆಡಿ ತೋರಿಸಿದರು. ಪುಣೆ ತುಳುಕೂಟದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುವಲ್ಲಿ ಕೂಟದ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು, ಮಹಿಳಾ ವಿಭಾಗದ ಸದಸ್ಯರು, ಯುವ ವಿಭಾಗದ ಸದಸ್ಯರು ಮತ್ತು ತುಳು ಅಭಿಮಾನಿಗಳು ಶಕ್ತಿ ಮೀರಿ ಸಹಕರಿಸಿದರು. ನಂತರ ತುಳುನಾಡ ಸಾಂಪ್ರದಾಯಕ ಶೈಲಿಯ ಪ್ರೀತಿ ಭೋಜನ ಜರಗಿತು. ಅಕ್ಷತಾ ಸುಜಿತ್ ಶೆಟ್ಟಿ ಮತ್ತು ತಾರಾನಾಥ್ ಶೆಟ್ಟಿ ಮಡಂತ್ಯಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ತಾಯಿ ಬಾಷೆ, ನಮ್ಮ ಸಂಸ್ಕ್ರತಿ ಎಂದರೆ ನಮಗೆ ಎಷ್ಟು ಪ್ರೀತಿ, ಮಮತೆ ಇದೆ ಎಂಬುದನ್ನು ಎಲ್ಲೇ ಹೋದರೂ ತೋರಿಸಿ ಕೊಟ್ಟವರು ತುಳುನಾಡ ಬಂಧುಗಳು. ತುಳುವರು ಎಲ್ಲಾ ಜಾತಿ ಧರ್ಮದವರನ್ನು ಒಗ್ಗೂಡಿಸಿ ನಡೆಯುವ ರೀತಿಯೇ ಬೇರೆ. ಅದರ ವಿಶಿಷ್ಟತೆಯೇ ಬೇರೆ. ನಾವು ನಮ್ಮೂರಿನಿಂದ ಇಲ್ಲಿ ಬಂದು ನೆಲೆ ಕಂಡರೂ ನಮಗೆ ಇಲ್ಲಿ ಬೆನ್ನೆಲುಬಾಗಿ ಕೇಳುವವರು ಯಾರೂ ಇಲ್ಲ ಎಂದು ಕೊರಗುವ ಸಮಯದಲ್ಲಿ ತುಳುಕೂಟ ಇದೆ ಎಂಬುದನ್ನು ಇಲ್ಲಿ ತೋರಿಸಿಕೊಟ್ಟಿದ್ದಾರೆ. ಮಾತೃ ಭಾಷೆ ನಮಗೆ ಎಷ್ಟು ಪವಿತ್ರ ಮತ್ತು ಗೌರವವನ್ನು ತಂದು ಕೊಡುತ್ತದೆ ಎಂಬುದನ್ನು ಎಲ್ಲಾ ಸಮಾಜದ ಬಾಂಧವರು ಅರಿತು ಕೊಂಡಿದ್ದಾರೆ ಮತ್ತು ಒಗ್ಗೂಡಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಇದನ್ನೆಲ್ಲಾ ನಾವು ತುಳುವರಲ್ಲಿ ಕಾಣಬಹುದು. ನಮ್ಮ ತಾಯಿ, ಭೂಮಿ, ತುಳುನಾಡ ಸಂಬಂಧವನ್ನು ಮತ್ತು ತುಳು ಭಾಷೆ ಸಂಸ್ಕ್ರತಿಯನ್ನು ಯಾರಿಂದಲೂ ತುಂಡರಿಸಲು ಸಾದ್ಯವಿಲ್ಲ. ಪುಣೆ ತುಳುಕೂಟದ ಪ್ರೋತ್ಸಾಹಕನಾಗಿ ನಿಮ್ಮ ಜೊತೆಯಲ್ಲಿ ಸದಾ ಇದ್ದೇನೆ. – ಗಣೇಶ್ ಶೆಗ್ದೆ ಪುಣ್ಚೂರು, ಅಧ್ಯಕ್ಷರು ಬಂಟ್ಸ್ ಅಸೋಸಿಯೇಷನ್ ಪುಣೆ.
ತುಳುಕೂಟ 25 ವರ್ಷಗಳ ಸುದೀರ್ಘ ಹಾದಿಯಲ್ಲಿ ಹಲವಾರು ಸೇವಾ ಕಾರ್ಯಗಳನ್ನು ಮಾಡುತ್ತಾ ತುಳುವರ ಆಚಾರ ವಿಚಾರಗಳನ್ನು ತಿಳಿಸುತ್ತಾ, ನಮ್ಮ ತುಳು ಸಂಸ್ಕ್ರತಿಯ ಬೆಳವಣಿಗೆಗೆ ಬಹಳಷ್ಟು ಕೊಡುಗೆಯನ್ನು ನೀಡುತ್ತಾ ಬಂದಿದೆ. ಇದರ ಸ್ಥಾಪಕರಿಂದ ಹಿಡಿದು ಇಂದಿನವರೆಗಿನ ಅಧ್ಯಕ್ಷರುಗಳ ಕೊಡುಗೆ ಬಹಳ ಇದೆ. ಇದೀಗ ರಜತ ಸಂಭ್ರಮದಲ್ಲಿರುವ ತುಳುಕೂಟ ರಾಮ ಲಕ್ಷ್ಮಣನಂತಿರುವ ದಿನೇಶ್ ಶೆಟ್ಟಿ, ಪ್ರವೀಣ್ ಶೆಟ್ಟಿಯವರು ಜವಾಬ್ದಾರಿ ವಹಿಸಿಕೊಂಡು ತುಳುವರಿಗೆ ಸಹಕಾರಿಯಾಗುವಂತಹ ಕಾರ್ಯ ಯೋಜನೆಗಳಿಗೆ ಇಳಿದಿದ್ದಾರೆ. ಸಮಾಜ ಸೇವೆಯಿಂದ ಸಮಾಜ ಕಟ್ಟಬಹುದು ಎಂಬುದನ್ನು ಮನದಲ್ಲಿಟ್ಟುಕೊಂಡು ತುಳುವರ ಆಶೋತ್ತರಗಳಿಗೆ ಸ್ಪಂದಿಸುತ್ತಾ ಕಷ್ಟ ಸುಖಗಳಲ್ಲಿ ಭಾಗಿಗಳಾಗುತ್ತಾ ಮುನ್ನಡೆಯುವ ನಿಮ್ಮ ಹೃದಯ ವೈಶಾಲ್ಯತೆಯ ಸೇವೆಗೆ ನಮ್ಮ ಸಹಕಾರ ಸದಾ ಇದೆ. – ಅಜಿತ್ ಹೆಗ್ಡೆ, ಪ್ರ.ಕಾರ್ಯದರ್ಶಿ ಬಂಟರ ಸಂಘ ಪುಣೆ.
ನಮ್ಮ ಹಿರಿಯರು ಮಾಡಿದ ದೈವ ದೇವರ ಸೇವೆ, ಸಮಾಜ ಸೇವೆ ಮತ್ತು ಧರ್ಮ ನೀತಿ ಸತ್ಯದ ನಡೆಯಲ್ಲಿ ನಮ್ಮನ್ನು ಬೆಳೆಸಿದ್ದಾರೆ. ನಾವು ನಂಬಿದ ಪಂಜುರ್ಲಿ ದೈವದ ಮೇಲಿನ ಭಯ ಭಕ್ತಿಯಿಂದ ನ್ಯಾಯ ಸತ್ಯದ ಹಾದಿಯಲ್ಲಿ ನಡೆಯಬೇಕು ಎಂಬ ನನ್ನ ತಾಯಿಯ ಮಾತಿನಂತೆ ನಡೆಯುವವ ನಾನು. ಇದೇ ನಮ್ಮ ತುಳುನಾಡ ಸಂಸ್ಕ್ರತಿ ಎಂದು ತಿಳಿಯಿರಿ. ನಮ್ಮ ತಂದೆ ತಾಯಿಯೇ ದೇವರು ಎಂದು ನಂಬಿ ನಡೆಯಬೇಕು. ಇದರಿಂದ ಒಳ್ಳೆಯ ಪ್ರತಿಫಲ ಸಿಗಲು ಸಾಧ್ಯ. ತುಳುನಾಡ ಭಾಷೆ, ಕಲೆ, ಸಂಸ್ಕ್ರತಿ, ಆಚಾರ ವಿಚಾರಗಳು ದೈವ ಶಕ್ತಿಯನ್ನು ತಿಳಿದು ಮುನ್ನಡೆದರೆ ಜೀವನದಲ್ಲಿ ಯಾವ ಭಯವೂ ಇಲ್ಲ. ಪುಣೆ ತುಳುಕೂಟದ ಮೂಲಕ ನಡೆಯುವ ತುಳುನಾಡಿನ ಬಾಂಧವರ ಸೇವೆಗೆ ನನ್ನ ಸಂಪೂರ್ಣ ಸಹಕಾರವಿದೆ. – ರಾಜೇಂದ್ರ ವಿ ಶೆಟ್ಟಿ, ಸಿ.ಎಂ.ಡಿ ಪಂಜುರ್ಲಿ ಗ್ರೂಪ್ ಆಫ್ ಹೋಟೆಲ್ಸ್ ಪುಣೆ – ಹುಬ್ಬಳ್ಳಿ
ಚಿತ್ರ, ವರದಿ : ಹರೀಶ್ ಮೂಡಬಿದ್ರಿ