ತುಳುನಾಡಿನ ಜನಪ್ರಿಯ ಕ್ರೀಡೆಗಳಲ್ಲಿ ಕಂಬಳ ಅತೀ ಪುರಾತನವಾದುದು. ಅಗಾಧ ಇತಿಹಾಸವನ್ನು ಹೊಂದಿರುವ ಕಂಬಳವು ಕಾಲಕ್ಕೆ ತಕ್ಕಂತೆ ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಬದಲಾವಣೆ ಹೊಂದುತ್ತಿದ್ದರೂ ಇವತ್ತಿಗೂ ಕೂಡ ಅದೇ ಹಿಂದಿನ ಸೊಗಡನ್ನು ಕಾಪಾಡಿಕೊಂಡು ಬಂದಿದೆ. ಕಂಬಳವು ಬರೀ ಕ್ರೀಡೆಯಲ್ಲ ತುಳುನಾಡಿನ ಜನರ ಕೃಷಿಯ ಸಂಕೇತವಾಗಿದೆ. ಕೆಸರು ಗದ್ದೆಯಲ್ಲಿ ಕೋಣಗಳನ್ನು ಓಡಿಸುವ ಈ ಕಂಬಳವು ಕ್ರೀಡೆಗಿಂತ ಹೆಚ್ಚಾಗಿ ಒಂದು ಕಲೆ ಎಂದೇ ಹೇಳಬಹುದು. ಈ ಕಲೆಯನ್ನು ಪ್ರಾರಂಭಿಸಿದ ಕೀರ್ತಿ ನಮ್ಮ ಹಿರಿಯರಿಗೆ ಸಲ್ಲುತ್ತದೆ. ಮೊದಲೆಲ್ಲ ಕೃಷಿ ಮಾಡುವ ಗದ್ದೆಯಲ್ಲೇ ಕಂಬಳ ನಡೆಯುತ್ತಿತ್ತು.


ಆದರೆ ಪ್ರಸ್ತುತ ಗದ್ದೆಗಳು ಕಾಣ ಸಿಗುವುದೇ ಕಡಿಮೆಯಾದ ಕಾರಣ ಕಂಬಳಕ್ಕಾಗಿಯೇ ಬೇಕಾಗಿ ವಿಶೇಷ ಕರೆಯನ್ನು (ಕೆಸರಿನ ಗದ್ದೆಯನ್ನು) ನಿರ್ಮಿಸುತ್ತಾರೆ. ಗದ್ದೆಯ ಮಣ್ಣು, ಮರಳು ಮಣ್ಣು ನೀರು ಹಾಕಿ ಇದನ್ನು ತಯಾರು ಮಾಡುತ್ತಾರೆ. ಕೋಣಗಳು ಓಡಿಸಲು ತಯಾರು ಮಾಡುವ ಸ್ಥಳವನ್ನು ಪಂಥ್ ಎಂದು ಹಾಗೂ ಓಡಿ ಬಂದ ಕೋಣವು ಮುಕ್ತಾಯಕ್ಕೆ ತಲುಪುವ ಗೆರೆಯನ್ನು ಮಂಜೊಟ್ಟಿ ಎಂದು ಕರೆಯುತ್ತಾರೆ. ಕೋಣಗಳ ವಯಸ್ಸಿನ ಆಧಾರದ ಮೇಲೆ ಜೂನಿಯರ್ ಮತ್ತು ಸೀನಿಯರ್ ಎಂದು ಎರಡು ವಿಭಾಗ ಮಾಡುತ್ತಾರೆ. ಕೋಣಗಳ ಹಲ್ಲನ್ನು ಎಣಿಸಿ ವಯಸ್ಸನ್ನು ನಿರ್ಧರಿಸಲಾಗುತ್ತದೆ. ಕಂಬಳ ಗದ್ದೆಯಲ್ಲಿ ಒಂಟಿಗದ್ದೆ ಹಾಗೂ ಜೋಡಿಗದ್ದೆ ಎಂಬ 2 ಬಗೆಯಿದೆ. ಜೋಡಿಗದ್ದೆಯಲ್ಲಿ 2 ಗದ್ದೆಗಳು ಇರುತ್ತದೆ. ಉದಾಹರಣೆಗೆ ಲವ-ಕುಶ, ಕೋಟಿ-ಚೆನ್ನಯ ಈ ರೀತಿಯ ಹೆಸರಿನ ಜೋಡಿ ಗದ್ದೆ ಇರುತ್ತದೆ.

ಕಂಬಳದಲ್ಲಿ ನೇಗಿಲು ಹಿರಿಯ, ನೇಗಿಲು ಕಿರಿಯ, ಹಗ್ಗ ಹಿರಿಯ, ಹಗ್ಗ ಕಿರಿಯ, ಕನೆ ಹಲಗೆ, ಅಡ್ಡ ಹಲಗೆ ಎಂಬ 6 ವಿಭಾಗದಲ್ಲಿ ಸ್ಪರ್ಧೆಗಳು ನಡೆಯುತ್ತವೆ. ಈ ಸ್ಪರ್ಧೆಯಲ್ಲಿ 2 ಗದ್ದೆಯಲ್ಲಿ ಕೋಣವನ್ನು ಓಡಿಸಲಾಗುತ್ತದೆ. ಯಾವ ಕೋಣ ಮುಕ್ತಾಯದ ಗೆರೆಯನ್ನು ಬೇಗ ತಲುಪುತ್ತದೆಯೋ ಆ ಕೋಣ ಮುಂದಿನ ಸುತ್ತಿಗೆ ಆಯ್ಕೆಯಾಗುತ್ತದೆ. ಹೀಗೆ ಆಯ್ಕೆಯಾದ ಕೋಣಗಳಿಗೆ ಕೊನೆಗೆ ಫೈನಲ್ ಸ್ಪರ್ಧೆ ಇರುತ್ತದೆ. ಇದರಲ್ಲಿ ಯಾವ ಕೋಣ ಮೊದಲು ಹೋಗಿ ಮುಕ್ತಾಯದ ಗೆರೆಯನ್ನು ತಲುಪುತ್ತದೆಯೋ ಆ ಕೋಣ ಕಂಬಳದಲ್ಲಿ ಗೆಲ್ಲುತ್ತದೆ. ಗೆದ್ದ ಕೋಣಗಳಿಗೆ ಹಾಗೂ ಅದರ ಯಜಮಾನರಿಗೆ ಚಿನ್ನದ ಪದಕವನ್ನು ಬಹುಮಾನದ ರೂಪವಾಗಿ ನೀಡಿ ಗೌರವಿಸಲಾಗುತ್ತದೆ.

ಕಂಬಳದ ಕೋಣವನ್ನು ಸಾಕಲು ದಿನಕ್ಕೆ 1,500ರಂತೆ ತಿಂಗಳಿಗೆ 45,000ಕ್ಕಿಂತಲೂ ಹೆಚ್ಚು ಖರ್ಚು ಇದೆ. ಕಂಬಳದ ಕೋಣ ಸಾಕುವುದೆಂದರೆ, ಕೋಣದ ಯಾಜಮಾನರಾಗುವುದೆಂದರೆ ಅದೊಂದು ಪ್ರತಿಷ್ಟೆಯ ಹಾಗೂ ಗೌರವದ ಸಂಕೇತವಾಗಿದೆ. ಕಂಬಳದ ಕೋಣ ಮನೆಯಲ್ಲಿದೆ ಅಂದರೆ ಅದೊಂದು ಹೆಮ್ಮೆಯ ಸಂಗತಿ. ತಾವೇ ಗೆಲ್ಲಬೇಕು, ತಮಗೇ ಬಹುಮಾನ ಬರಬೇಕೆಂದು ಕಂಬಳಕ್ಕೆ ಸ್ಪರ್ಧಿಸುವುದಿಲ್ಲ. ಬದಲಾಗಿ ತಮ್ಮ ಹೆಸರು ತಮ್ಮ ಊರಿನ ಹೆಸರಿಗಾಗಿ ಕಂಬಳಕ್ಕೆ ಸ್ಪರ್ಧಿಸುತ್ತಾರೆ. ನಮ್ಮ ತುಳುನಾಡಿನ ಕಂಬಳ ಎಂದೆಂದಿಗೂ ನಿಷೇಧವಾಗದೆ ಮುಂದೆಯೂ ಕಂಬಳ ಮುಂದುವರಿಯಲಿ ಎಂದು ಹೇಳುತ್ತಾ “ಕಂಬುಲ ನನ ದುಂಬುಲ”ವಾಗಿರಲಿ. ಕಂಬಳವು ಜೂಜಿನ ಆಟವಾಗದೆ ನೆಮ್ಮದ್ದಿ ಖುಷಿ ತರುವಂತಹ ಕ್ರೀಡೆಯಾಗಲಿ ಎಂಬುದೇ ನಮ್ಮೆಲ್ಲರ ಆಶಯ.
-ಮಲ್ಲಿಕಾ ಜೆ.ಬಿ. ಅನಂತಾಡಿ





































































































