ಬೈಂದೂರು ಬಂಟರ ಯಾನೆ ನಾಡವರ ಸಂಘದ ಸಭಾ ಭವನದಲ್ಲಿ ನೂತನ ಪದಾಧಿಕಾರಿಗಳ ಪದ ಪ್ರದಾನ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿವೇತನ ವಿತರಣೆ, ನಿವೃತ್ತ ಶಿಕ್ಷಕರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಉದ್ಘಾಟಿಸಿದರು. ಬಳಿಕ ಮಾತನಾಡಿ, ಬಂಟ ಸಮಾಜ ಇವತ್ತು ಜಾಗತಿಕ ಮಟ್ಟದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದೆ. ಶೈಕ್ಷಣಿಕವಾಗಿ ಸಮಾಜ ಜಾಗೃತವಾದಾಗ ಮಾತ್ರ ಬೆಳವಣಿಗೆ ಮತ್ತು ಬದಲಾವಣೆ ಸಾಧ್ಯವಿದೆ. ಹಾಗೆ ಸಮುದಾಯವನ್ನು ಒಟ್ಟುಗೂಡಿಸುವ ದೃಷ್ಟಿಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅತ್ಯಂತ ಔಚಿತ್ಯ ಪೂರ್ಣವಾಗಿದೆ ಎಂದರು.
ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಜೀವನ, ದಾರಿ, ಕನಸುಗಳನ್ನು ನನಸು ಮಾಡಿಕೊಳ್ಳಲು ಸರಿಯಾದ ಮಾರ್ಗದರ್ಶನದ ಅಗತ್ಯತೆ ಇದೆ. ವಿದ್ಯಾರ್ಥಿ ವೇತನಕ್ಕಿಂತ ಮಾಹಿತಿ ತರಬೇತಿ ಶಿಬಿರಗಳಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಲಾಭ ದೊರೆಯುತ್ತದೆ. ಜ್ಞಾನವನ್ನು ವಿಸ್ತರಿಸಿಕೊಂಡು ಸಮಾಜದಲ್ಲಿ ಸತ್ಪ್ರಜೆಗಳಾಗಿ ಬಾಳಲು ಅವಶ್ಯವಿರುವ ಮಾಹಿತಿ ಹಾಗೂ ತರಬೇತಿಗಳನ್ನು ಪಡೆದುಕೊಳ್ಳಬೇಕು. ಉತ್ತಮ ಜನರ ಸಹವಾಸ ಗೆಳೆತನ ಬೆಳೆಸಿಕೊಂಡರೆ ಮಾತ್ರ ನಮ್ಮ ಜೀವನ ಉತ್ತಮವಾಗಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನೂತನ ಅಧ್ಯಕ್ಷ ಸಾಲಗದ್ದೆ ಶಶಿಧರ ಶೆಟ್ಟಿ ಸ್ವಾಗತಿಸಿದರು. ನೂತನ ಮಹಾ ಪೋಷಕ ಸದಸ್ಯರನ್ನು ಗೌರವಿಸಲಾಯಿತು. ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಿ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಚಿತ್ತೂರು ಮಂಜಯ್ಯ ಶೆಟ್ಟಿ, ಕೋಶಾಧಿಕಾರಿ ಉಪ್ಪುಂದ ಎನ್. ರಘುರಾಮ ಶೆಟ್ಟಿ, ಉದ್ಯಮಿ ತಗ್ಗರ್ಸೆ ನಾರಾಯಣ ಹೆಗ್ಡೆ, ಕುಂದಾಪುರ ಬಂಟರ ಯಾನೆ ನಾಡವರ ಮಾತೃ ಸಂಘದ ಸಂಚಾಲಕ ಆವರ್ಸೆ ಸುಧಾಕರ ಶೆಟ್ಟಿ, ಕರ್ನಾಟಕ ಸರ್ಕಾರದ ನಿವೃತ್ತ ಹೆಚ್ಚುವರಿ ಕಾರ್ಯದರ್ಶಿ ಬಿ. ಎನ್. ಶೆಟ್ಟಿ, ಸಂಘದ ನೂತನ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಹಾಗೂ ನಾಮ ನಿರ್ದೇಶನ ಸದಸ್ಯರು ಉಪಸ್ಥಿತರಿದ್ದರು. ವಿಶ್ವನಾಥ ಶೆಟ್ಟಿ ನಿರೂಪಿಸಿ, ಪ್ರಧಾನ ಕಾರ್ಯದರ್ಶಿ ಬಿ. ನಿತಿನ್ ಶೆಟ್ಟಿ ವಂದಿಸಿದರು.