ತುಳು ಭಾಷೆಯ ಬಗ್ಗೆ ಕೀಳರಿಮೆ ಬೇಡ. ಪಂಚ ದ್ರಾವಿಡ ಭಾಷೆಗಳಲ್ಲಿ ತುಳು ಒಂದಾಗಿದ್ದು, ನಾವೆಲ್ಲರೂ ತುಳು ಭಾಷೆ ಉಳಿವಿಗಾಗಿ ಪ್ರಯತ್ನಿಸೋಣ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು. ತುಳು ಭವನದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 30 ನೇ ವರ್ಷದ ಸಂಭ್ರಮ, ಅಮೃತ ಸೋಮೇಶ್ವರ ನೂತನ ಸಭಾಂಗಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ತುಳು ಭಾಷೆಗೆ ಅಮೃತ ಸೋಮೇಶ್ವರ ಅವರ ಸೇವೆ, ಕೊಡುಗೆ ಅಪಾರ. ಅವರ ಹೆಸರಿನಲ್ಲಿ ಸಭಾಂಗಣ ನಿರ್ಮಿಸಿ ಅವರಿಗೆ ಗೌರವ ನೀಡುವ ಕೆಲಸ ಅಕಾಡೆಮಿಯಿಂದ ನಡೆದಿದೆ ಎಂದರು.
ತುಳು ಭಾಷೆಗೆ ರಾಜ್ಯದ ಸ್ಥಾನಮಾನ ಮತ್ತು 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳ್ಳಬೇಕು ಎಂದು ದೊಡ್ಡ ಮಟ್ಟಿನ ಪ್ರಯತ್ನ ಈಗಾಗಲೇ ನಡೆದಿದೆ. ಆದರೆ ಅದಕ್ಕೆ ಸರಿಯಾದ ಪ್ರತಿಫಲ ಸಿಕ್ಕಿಲ್ಲ. ವೀರಪ್ಪ ಮೊಯಿಲಿ ಅವರು ತುಳು ಭಾಷೆಯ ಮುಖ್ಯಮಂತ್ರಿ. ತುಳು ಸಾಹಿತ್ಯದ ಜತೆ ಜತೆಗೇ ಬೆಳೆದಿದ್ದಾರೆ. ಅವರು ಕೂಡಾ ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದರು. ಕೆಲವಾರು ಕಾರಣಗಳಿಂದ ಇದರ ಅನುಷ್ಠಾನ ಸಾಧ್ಯವಾಗಿಲ್ಲ ಎಂದರು. ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಮಾತನಾಡಿ, ತುಳು ಎಲ್ಲರನ್ನು ಒಟ್ಟುಗೂಡಿಸುವ ಭಾಷೆಯಾಗಿದ್ದು, ಇಲ್ಲಿನ ವ್ಯಾಪಾರ, ವ್ಯಾವಹಾರಿಕ ಭಾಷೆಯಾದ ತುಳುವನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದು. ತುಳು ಭಾಷೆಗೆ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ತುಳುನಾಡಿನ ಧ್ವನಿಯಾಗಿ ಕೆಲಸ ಮಾಡುತ್ತೇನೆ ಎಂದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಟಿ ಶೆಟ್ಟಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಎ ಸಿ ಭಂಡಾರಿ, ಹಿರಿಯ ಸಂಶೋಧಕಿ ಡಾ ಇಂದಿರಾ ಹೆಗ್ಡೆ, ಸದಸ್ಯರಾದ ಅಕ್ಷಯಾ ಆರ್ ಶೆಟ್ಟಿ, ವಕೀಲ ಕುಂಬ್ರ ದುರ್ಗಾ ಪ್ರಸಾದ್ ರೈ ಉಪಸ್ಥಿತರಿದ್ದರು.