ನಮ್ಮ ದೇವಾಲಯದ ವತಿಯಿಂದ ಕಳೆದ 21 ವರ್ಷಗಳಿಂದ ಉಚಿತವಾಗಿ ಇಂಗ್ಲಿಷ್ ಮಾಧ್ಯಮ ಶಾಲೆಯನ್ನು ನಡೆಸುತ್ತಿದ್ದು, ಪ್ರತಿ ವರ್ಷ ಉಚಿತ ಪುಸ್ತಕ ಹಾಗೂ ಇತರ ಶಾಲಾ ಪರಿಕರ, ಪ್ರತಿಭಾ ಪುರಸ್ಕಾರವನ್ನು ನೀಡುತ್ತಾ ಬಂದಿದ್ದೇವೆ. ಇಂದಿನ ಮಕ್ಕಳೇ ಮುಂದಿನ ಭವಿಷ್ಯ. ಆದ್ದರಿಂದ ವಿದ್ಯೆಗೆ ಸದಾ ಪ್ರೋತ್ಸಾಹ ನೀಡುತ್ತಿದ್ದೇನೆ. ಮನುಷ್ಯನಲ್ಲಿರುವ ಹಣ, ಸಂಪತ್ತು ಕಳವಾಗಬಹುದು. ಆದರೆ ವಿದ್ಯೆ ಎಂದಿಗೂ ಕಳವು ಮಾಡಲಾಗದ ಸಂಪತ್ತು. ಕುಸುಮೋದರ ಶೆಟ್ಟಿ ಅವರು ಭವಾನಿ ಫೌಂಡೇಶನ್ ಮುಖಾಂತರ 4-5 ಶಾಲೆಗಳನ್ನು ದತ್ತು ಪಡೆದು ಮುನ್ನಡೆಸುವಂತಹ ಒಳ್ಳೆಯ ಕಾರ್ಯ ಮಾಡುತ್ತಿದ್ದಾರೆ. ಮಕ್ಕಳು ಕಲಿತು ದೊಡ್ಡವರಾದ ಬಳಿಕ ನಮ್ಮನ್ನು ಸಾಕಿ ಬೆಳೆಸಿದ ತಂದೆ ತಾಯಿ, ವಿದ್ಯೆ ಕಲಿಸಿದ ಗುರು ಹಾಗೂ ನಮಗೆ ಸಹಕರಿಸಿದ ಸಮಾಜದ ಋಣವನ್ನು ಎಂದಿಗೂ ಮರೆಯಬಾರದು ಎಂದು ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಅಧ್ಯಕ್ಷ ಧರ್ಮದರ್ಶಿ ಅಣ್ಣಿ ಸಿ ಶೆಟ್ಟಿ ಅವರು ನುಡಿದರು.
ಫನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಸಭಾಂಗಣದಲ್ಲಿ ಶ್ರೀ ಮೂಕಾಂಬಿಕಾ ಚಾರಿಟೇಬಲ್ ಮಂಡಳದ ವತಿಯಿಂದ ಆಯೋಜಿಸಲಾಗಿದ್ದ 21 ನೇ ವಾರ್ಷಿಕ ಉಚಿತ ಪುಸ್ತಕ ವಿತರಣೆ, ಶಾಲಾ ಪರಿಕರಗಳ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಕ್ಕಳು ಒಳ್ಳೆಯ ರೀತಿಯಲ್ಲಿ ಕಲಿತು, ಒಳ್ಳೆಯ ಸಂಸ್ಕಾರ ಪಡೆದು ಉತ್ತಮ ನಾಗರೀಕರಾಗಬೇಕು. ಅಡ್ಡ ದಾರಿ ಹಿಡಿಯಬಾರದು. ನಮ್ಮ ಹಿಂದಿನ ದೇವಾಲಯ ಒಳ್ಳೆಯದೇ ಇತ್ತು. ಅದನ್ನು ಕಟ್ಟಲು ತುಂಬಾ ಕಷ್ಟ ಪಟ್ಟಿದ್ದೇವೆ. ಅದನ್ನು ಕೆಡವುವಾಗ ತುಂಬಾ ಬೇಸರವಾಗಿದೆ. ಆದರೆ ಸಿಡ್ಕೋದಿಂದ ದೇವಾಲಯದ ಎದುರು ಜಾಗ ದೊರಕಿರುವುದರಿಂದ ಅನಿವಾರ್ಯವಾಗಿ ದೇವಾಲಯ ಕೆಡವಬೇಕಾಯಿತು. ನೂತನ ಶಿಲಾಮಯ ದೇವಾಲಯದ ಕಲ್ಲು ಕೆತ್ತನೆ ಕೆಲಸ ಮುಗಿಯುತ್ತಿದ್ದು, ತಾಯಿಯ ಅನುಗ್ರಹದಿಂದ, ದಾನಿಗಳ ಸಹಕಾರದಿಂದ ಎಲ್ಲಾ ಕೆಲಸಗಳು ಒಳ್ಳೆಯ ರೀತಿಯಲ್ಲಿ ಆಗಲಿದೆ ಎಂಬ ಭರವಸೆಯಿದೆ. ನಮ್ಮ ಸಮಿತಿಯ ಸದಸ್ಯರು ಒಳ್ಳೆಯ ರೀತಿಯಲ್ಲಿ ಸಹಕರಿಸುತ್ತಿದ್ದಾರೆ. ಎಲ್ಲರ ಮೇಲೂ ತಾಯಿ ಮೂಕಾಂಬಿಕೆಯ ಅನುಗ್ರಹ ಸದಾ ಇರಲಿ ಎಂದರು.
ಅತಿಥಿಗಳಾಗಿ ಭವಾನಿ ಫೌಂಡೇಶನ್ ಟ್ರಸ್ಟ್ ಇದರ ಸ್ಥಾಪಕಾಧ್ಯಕ್ಷ ಕುಸುಮೋದರ ಶೆಟ್ಟಿ, ಫೆಡರೇಶನ್ ಆಫ್ ಹೋಟೆಲ್ ಆಂಡ್ ರೆಸ್ಟೋರೆಂಟ್ ಅಸೋಸಿಯೇಷನ್ ಮಹಾರಾಷ್ಟ್ರ ಇದರ ಉಪಾಧ್ಯಕ್ಷ ಶ್ಯಾಮ್ ಎನ್ ಶೆಟ್ಟಿ, ಶ್ರೀ ಮೂಕಾಂಬಿಕಾ ಚಾರಿಟೇಬಲ್ ಮಂಡಳದ ಅಧ್ಯಕ್ಷ ನಂದಿಕೂರು ಜಗದೀಶ್ ಶೆಟ್ಟಿ, ಉಪಾಧ್ಯಕ್ಷ ದೆಪ್ಪುಣಿಗುತ್ತು ಚಂದ್ರಹಾಸ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಹರೀಶ್ ಶೆಟ್ಟಿ ಪಡುಬಿದ್ರೆ, ಕೋಶಾಧಿಕಾರಿ ರತ್ನಾ ಟಿ.ಗೌಡ, ಬಂಟರ ಸಂಘ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ ಜತೆ ಕಾರ್ಯದರ್ಶಿ ರಮೇಶ್ ಶೆಟ್ಟಿ ಸಿದ್ಧಕಟ್ಟೆ, ಬಿಲ್ಲವರ ಅಸೋಸಿಯೇಷನ್ ನವಿಮುಂಬಯಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ವಿ.ಕೆ ಪೂಜಾರಿ, ಐಸ್ ಬರ್ಗ್ ಎಂಜಿನಿಯರಿಂಗ್ ಮಾಲಕ ರಾಮ್ ದಾಸ್ ಡಿ.ಶೆಟ್ಟಿ, ಉದ್ಯಮಿ ಸತೀಶ್ ಆರ್.ಶೆಟ್ಟಿ, ರಾಘವೇಂದ್ರ ಎಂಟರ್ ಪ್ರೈಸಸ್ ನ ರಾಜೇಂದ್ರ ಶೆಟ್ಟಿ, ದೇವಾಲಯದ ಉಪಾಧ್ಯಕ್ಷ ಕೆ. ಎಂ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸಂದೀಪ್ ಡಿ.ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ನಯನಾ ಮಡಿವಾಳ ಉಪಸ್ಥಿತರಿದ್ದರು.
ಅತಿಥಿ ಗಣ್ಯರು ದೀಪ ಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ಮಹಿಳಾ ಮಂಡಳಿಯವರು ಪ್ರಾರ್ಥನೆಗೈದರು. ದೇವಾಲಯದ ಪ್ರಧಾನ ಕಾರ್ಯದರ್ಶಿ ಸುರೇಶ್ ಎಸ್. ಕೋಟ್ಯಾನ್ ಅತಿಥಿ ಗಣ್ಯರನ್ನು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಮಂಡಳದ ಪದಾಧಿಕಾರಿಗಳು ಅತಿಥಿಗಳನ್ನು ಗೌರವಿಸಿದರು. ಹರೀಶ್ ಶೆಟ್ಟಿ ಪಡುಬಿದ್ರೆ ಪ್ರತಿಭಾ ಪುರಸ್ಕೃತರ ಯಾದಿಯನ್ನು ಓದಿದರು. ಈ ಸಂದರ್ಭದಲ್ಲಿ 1ರಿಂದ 10ನೇ ತರಗತಿ ವರೆಗಿನ ಪರಿಸರದ 1,500 ಮಕ್ಕಳಿಗೆ ಶಾಲಾ ಪರಿಕರಗಳನ್ನು ವಿತರಿಸಲಾಯಿತು. ಶ್ರೀ ಮೂಕಾಂಬಿಕಾ ವಿದ್ಯಾಲಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಕಳೆದ ಸಾಲಿನ ಎಸ್ ಎಸ್ ಸಿ, ಎಚ್ ಎಸ್ ಸಿ ಪ್ರತಿಭಾವಂತ 100 ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ಮತ್ತು ಆರ್ಥಿಕ ನೆರವು ನೀಡಿ ಗೌರವಿಸಲಾಯಿತು. ಕೊನೆಯಲ್ಲಿ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು.