ಓರ್ವ ನಿಷ್ಠಾವಂತ ಸ್ವಯಂ ಸೇವಕ, ಸಮಾಜಮುಖಿ ಸಂಘಟಕ ಹಾಗೂ ಪ್ರಾಮಾಣಿಕ ಲೆಕ್ಕ ಪರಿಶೋಧಕ ಸಿಎ ಅಶೋಕ ಶೆಟ್ಟಿ ಎಂ ಅವರು ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಪದವಿಗೆ ಸ್ಪರ್ಧಿಸುತ್ತಿದ್ದು, ಚುನಾವಣೆಯಲ್ಲಿ ತಾನು ಯಶಸ್ಸು ಸಂಪಾದಿಸುವೆನೆಂಬ ಆತ್ಮ ವಿಶ್ವಾಸದಲ್ಲಿದ್ದಾರೆ. ಕಾರಣ ಅವರು ಈಗಾಗಲೆ ತನ್ನ ಸಾಮಾಜಿಕ, ಸಾರ್ವಜನಿಕ ಸಂಘಟನೆಗಳಲ್ಲಿ ದುಡಿದ ಅನುಭವ ಹೊಂದಿದ್ದು ನಗರದಲ್ಲಿ ವ್ಯಾಪಕ ಜನಪ್ರಿಯತೆ ಗಳಿಸಿಕೊಂಡಿದ್ದಾರೆ.
ಕಾರ್ಕಳ ಸಂಬೆಟ್ಟು ಶೀನಪ್ಪ ಶೆಟ್ಟಿ ಮತ್ತು ಮುಲ್ಲಾಡ್ ಲಕ್ಷ್ಮಿ ಶೆಟ್ಟಿ ದಂಪತಿಯವರಿಗೆ ಕಿರಿಯ ಪುತ್ರನಾಗಿ ಜನಿಸಿದ ಅಶೋಕ ಶೆಟ್ಟಿ ಅವರು ತನ್ನ ಸಿಎ ಪದವಿಯನ್ನು ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿ ಪೂರೈಸಿ ಬಳಿಕ ತನ್ನದೇ ಆದ ಲೆಕ್ಕ ಪರಿಶೋಧನೆ ಸಂಸ್ಥೆಯನ್ನು ಹುಟ್ಟು ಹಾಕಿ ಓರ್ವ ಯಶಸ್ವಿ ಜನಪ್ರಿಯ ಲೆಕ್ಕ ಪರಿಶೋಧಕರೆಂಬ ಪ್ರಸಿದ್ಧಿ ಪಡೆದಿದ್ದಾರೆ. ಎಂ.ಎಂ.ಎಸ್ ಎಂಡ್ ಕೊ. ಎಂಬ ಸಂಸ್ಥೆಯ ಸ್ಥಾಪನೆ ಮುಖಾಂತರ ಅನೇಕ ಪ್ರತಿಷ್ಠಿತ ಕಂಪೆನಿಗಳು ಹಾಗೂ ಬ್ಯಾಂಕ್ ಗಳ ಲೆಕ್ಕಪರಿಶೋಧಕರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಯುತರು ಮೂಲತಃ ಓರ್ವ ಸಾಮಾಜಿಕ, ಸಾಮುದಾಯಿಕ ಕಳಕಳಿ ಇರುವ ಸಂಘಟಕ ಹಾಗೂ ಸಮಾಜ ಸೇವಕರಾಗಿದ್ದು ಅನೇಕ ಜನಪರ ಚಟುವಟಿಕೆಗಳಿಂದ ಗುರುತಿಸಿ ಕೊಂಡಿದ್ದಾರೆ.
ರಾಜ್ಯ ಒಕ್ಕಲಿಗರ ಸಂಘ ಸಪ್ತಗಿರಿ ಕಿದ್ವಾಯಿ ಸೇರಿದಂತೆ ಅದೆಷ್ಟೋ ಸಂಸ್ಥೆಗಳು ಹಾಗೂ ಆಸ್ಪತ್ರೆಗಳ ಲೆಕ್ಕ ಪರಿಶೋಧನಾ ಹೊಣೆ ಅಶೋಕ್ ಶೆಟ್ಟಿ ಅವರ ಪಾಲಿಗಿದೆ. 1994 ರಿಂದ 2008 ರ ತನಕ ಬೆಂಗಳೂರು ಬಂಟರ ಸಂಘದ ಆಂತರಿಕ ಲೆಕ್ಕ ಪರಿಶೋಧಕರಾಗಿ ದುಡಿದ ಅನುಭವವೂ ಇರುವುದರಿಂದ ಸಂಘದ ಚಟುವಟಿಕೆಗಳ ಕುರಿತಂತೆ ಆಳವಾದ ಅನುಭವ ಅಶೋಕ ಶೆಟ್ಟಿ ಅವರಿಗಿದೆ. 2004 ರಿಂದ 2014 ರವರೆಗೆ ಹಾಗೂ 2022 ರಿಂದ 2024 ರವರೆಗೆ ಹೀಗೆ ಎರಡು ಅವಧಿಗೆ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ದುಡಿದ ದೀರ್ಘ ಅನುಭವವೂ ಶ್ರೀಯುತರಿಗಿದೆ.
ಲಯನ್ಸ್ ಕ್ಲಬ್ ಜಯಮಹಲ್ ಇದರ ಕಾರ್ಯದರ್ಶಿಯಾಗಿ, ಬಳಿಕ ಅಧ್ಯಕ್ಷರಾಗಿ ಲಯನ್ಸ್ ವೃದ್ಧಾಶ್ರಮ ಸೇವಾ ಸಂಸ್ಥೆಯ ಕೋಶಾಧಿಕಾರಿಯಾಗಿ ಸಾರ್ವಜನಿಕ ಸೇವೆಗೈದ ಜನಪ್ರಿಯತೆಯೂ ಸಿಎ ಅಶೋಕ ಶೆಟ್ಟರಿಗಿದೆ. 2022 ರಿಂದ 2025 ರೈ ವರೆಗೆ ವೈಟ್ ಫೀಲ್ಡ್ ಎಕ್ಸ್ಪೋರ್ಟ್ ಪ್ರಮೋಶನ್ ಪಾರ್ಕ್ ಇಂಡಸ್ಟ್ರಿಯಲ್ ಅಸೋಸಿಯೇಷನ್ ಇದರ ಖಜಾಂಚಿ ಸ್ಥಾನವನ್ನು ನಿರ್ವಹಿಸುತ್ತಿದ್ದಾರೆ. ಇನ್ನು ಇವರ ಸಾರ್ವಜನಿಕ ಸೇವೆಯನ್ನು ಉಪೇಕ್ಷಿಸುವಂತಿಲ್ಲ. 2020 ರಲ್ಲಿ ಸುಮಾರು 25000 ಕಿಟ್ ಗಳನ್ನು ವಿತರಿಸಿ ತನ್ನ ಮಾನವೀಯ ಅಂತಃಕರಣವನ್ನು ಪರಿಚಯಿಸಿ ಕೊಂಡಿದ್ದಾರೆ. 2021 ರಲ್ಲಿ ಕೋವಿಡ್ ಕ್ಯಾರ್ ಸೆಂಟರ್ ಗಳನ್ನು ನಡೆಸಿ ಜನರಲ್ಲಿ ಕೋವಿಡ್ ಕುರಿತ ಮಾಹಿತಿ ನೀಡಿ ಜನಜಾಗೃತಿಗೊಳಿಸಿದ್ದು ಮಾತ್ರವಲ್ಲದೇ ಆಹಾರ ಕಿಟ್ ಹಂಚುವ ಮೂಲಕ ತನ್ನ ಉದಾತ್ತ ಗುಣವನ್ನು ತೋರ್ಪಡಿಸಿ ಓರ್ವ ಆಪತ್ಬಾಂಧವ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2022 ರಲ್ಲಿ ಓರ್ವ ಸ್ವಯಂ ಸೇವಕನ ನೆಲೆಯಲ್ಲಿ ಸುಮಾರು ಎರಡೂವರೆ ಕೋಟಿ ಧನ ಸಂಗ್ರಹ ಮಾಡಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಕಿಂಚಿತ್ ಸೇವೆ ನೀಡಿದ ಕೃತಕೃತ್ಯತೆ ಭಾವ ಹೊಂದಿದ್ದಾರೆ. 2016 ರಿಂದ 2024ರ ಸಮಯ ಮುಲ್ಲಾಡ್ ಸರ್ಕಾರಿ ಶಾಲೆಯ ಪುನಃ ನಿರ್ಮಾಣ ಮತ್ತು ವ್ಯವಸ್ಥಾಪನ ಕೆಲಸದಲ್ಲಿ ತೊಡಗಿಸಿಕೊಂಡು ತನ್ನ ಶಿಕ್ಷಣ ಪ್ರೇಮವನ್ನು ಮೆರೆದಿದ್ದು ಶಿಕ್ಷಣ ವಂಚಿತ ವಿದ್ಯಾರ್ಥಿ ಗಳಿಗೆ ಶಿಕ್ಷಣ ಒದಗಿಸಲು ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ. ಅಗರಿ ಮನೆತನದ ಗಡಿಕಾರರಾದ ಯಜಮಾನ ಕೃಷ್ಣ ಮಾರ್ಲರವರ ಸುಪುತ್ರಿ ವಿಭಾರೊಂದಿಗೆ ವಿವಾಹವಾಗಿ ಸಂತೃಪ್ತ ಜೀವನ ನಡೆಸುತ್ತಿದ್ದಾರೆ.
ಈ ರೀತಿ ವ್ಯಾಪಕ ಸುದೀರ್ಘ ಆಡಳಿತಾತ್ಮಕ ಅನುಭವಗಳಿಂದ ಮುಪ್ಪುರಿಗೊಂಡ ಓರ್ವ ಮುತ್ಸದ್ದಿ ಬೆಂಗಳೂರು ಬಂಟರ ಸಂಘದ ಆಡಳಿತ ಚುಕ್ಕಾಣಿ ಹಿಡಿದರೆ ಸಂಘದ ಕೀರ್ತಿ ಬಿತ್ತರವನ್ನು ಇನ್ನಷ್ಟು ಎತ್ತರಕ್ಕೆ ಏರಿಸುವಲ್ಲಿ ಸಂಶಯವಿಲ್ಲ. ಅಶೋಕ್ ಶೆಟ್ಟಿ ಮತ್ತು ಅವರ ನೇತೃತ್ವದ ಇಡೀ ತಂಡ ಚುನಾವಣೆಯಲ್ಲಿ ಯಶಗಳಿಸುವ ಮೂಲಕ ಬೆಂಗಳೂರು ಪ್ರದೇಶದ ಬಂಟರ ಆಶೋತ್ತರಗಳಿಗೆ ಧನಾತ್ಮಕ ರೀತಿಯಲ್ಲಿ ಸ್ಪಂದಿಸಲಿ ಎನ್ನುವ ಆಶಯ ನಮ್ಮದು.
ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು