ಮುಂಬಯಿಯ ಪ್ರಸಿದ್ಧ ಕಲಾ ಸಂಘಟಕ ಅಜೆಕಾರು ಬಾಲಕೃಷ್ಣ ಶೆಟ್ಟಿ ಸಂಚಾಲಕತ್ವದ ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಆಶ್ರಯದಲ್ಲಿ ಯಕ್ಷಶ್ರೀ ಹವ್ಯಾಸಿ ಬಳಗ ಪುತ್ತೂರು ಮಹಿಳಾ ಯಕ್ಷಗಾನ ತಾಳಮದ್ದಳೆ ತಂಡದ ಮುಂಬಯಿ ಪ್ರವಾಸದ ಸರಣಿ ಯಕ್ಷಗಾನ ತಾಳಮದ್ದಳೆಯ ಉದ್ಘಾಟನೆ ಕಾರ್ಯಕ್ರಮವು ಜುಲೈ 6 ರಂದು ಸಂಜೆ ಕುರ್ಲಾ ಪೂರ್ವದ ಬಂಟರ ಭವನದ ಸಂಕುಲದಲ್ಲಿರುವ ಶ್ರೀ ವಿಷ್ಣುಮೂರ್ತಿ ಜ್ಞಾನ ಮಂದಿರ ಸಭಾಂಗಣದಲ್ಲಿ ನಡೆಯಿತು. ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಸರಣಿ ತಾಳಮದ್ದಳೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅಜೆಕಾರು ಬಾಲಕೃಷ್ಣ ಶೆಟ್ಟಿ ಮುಂಬಯಿಯಲ್ಲಿ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಮಹತ್ತರ ಪಾತ್ರವಹಿಸಿದ್ದಾರೆ. ಯುವ ಜನರು, ಮಹಿಳೆಯರು ಇಂದು ಯಕ್ಷಗಾನಕ್ಕೆ ಹೆಚ್ಚು ಆಕರ್ಷಿತರಾಗುತ್ತಿರುವುದರೊಂದಿಗೆ ಯಕ್ಷಗಾನ ಕಲಿತು ಯಕ್ಷಗಾನ ಪ್ರದರ್ಶಿಸಲು ಮುಂದಾಗಿರುವುದು ಯಕ್ಷಗಾನಕ್ಕೆ ಯಾವುದೇ ಸಂಕಷ್ಟವಿಲ್ಲ ಎಂಬುದನ್ನು ತೋರಿಸುತ್ತದೆ. ಕಲೆ, ಕಲಾವಿದರನ್ನು ಗೌರವಿಸಿ ಸಹಕರಿಸುವುದು ಮುಂಬಯಿ ತುಳು ಕನ್ನಡಿಗರ ಹೆಗ್ಗಳಿಕೆ ಎಂದರು.
ಬಂಟರ ಸಂಘ ಮುಂಬಯಿ ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ನವೀನ್ ಶೆಟ್ಟಿ ಇನ್ನಾ ಬಾಳಿಕೆ ಮಾತನಾಡಿ, ಮುಂಬಯಿಯಲ್ಲಿ ಯಕ್ಷಗಾನ ತಾಳಮದ್ದಳೆ ಮೊದಲಾದ ಕಲಾ ಮಾಧ್ಯಮಗಳು ಉಳಿಯಬೇಕು. ಕಲೆಯ ಜತೆಗೆ ಕಲಾವಿದರು, ಕಲಾ ಸಂಘಟನೆಗಳು ಬೆಳೆಯಬೇಕೆಂಬ ಉದ್ದೇಶದಿಂದ ಬಾಲಕೃಷ್ಣ ಶೆಟ್ಟಿ ಕಳೆದ ಹಲವಾರು ವರ್ಷಗಳಿಂದ ನಿರಂತರ ಶ್ರಮಿಸುತ್ತಿದ್ದಾರೆ. ಅವರು ಈ ಪ್ರಯತ್ನದಿಂದ ಬಹಳಷ್ಟು ಯಶಸ್ಸು ಕಂಡಿದ್ದಾರೆ. ಮುಂಬಯಿಯಲ್ಲಿ ಯಕ್ಷಗಾನ ಕಲೆಯು ಜನಪ್ರಿಯತೆ ಪಡೆದಿದೆ ಎಂದರು.
ಬಂಟರ ಸಂಘ ಮುಂಬಯಿ ಸಿಟಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಅಶೋಕ್ ಪಕ್ಕಳ ಮಾತನಾಡಿ, ಅಜೆಕಾರು ಬಾಲಕೃಷ್ಣ ಶೆಟ್ಟಿ ಮುಂಬಯಿಯಲ್ಲಿ ಕಲಾ ಸಂಘಟಕ ಮಾತ್ರವಾಗಿರದೆ ಪ್ರಸಿದ್ಧ ಯಕ್ಷ ಗುರುವಾಗಿ ಅದೆಷ್ಟೋ ಜನರಿಗೆ ಯಕ್ಷಗಾನ ಕಲಿಸಿದ್ದಾರೆ. ಯಕ್ಷಗಾನವನ್ನು ಉಳಿಸಿ ಬೆಳೆಸುವಲ್ಲಿ ಅವರು ನೀಡುತ್ತಿರುವ ಕೊಡುಗೆ ಅಪಾರವಾಗಿದೆ. ಕಳೆದ 23 ವರ್ಷಗಳಿಂದ ಅಜೆಕಾರು ಬಾಲಕೃಷ್ಣ ಶೆಟ್ಟಿಯವರು ಅಜೆಕಾರು ಕಲಾಭಿಮಾನಿ ಬಳಗ ಎಂಬ ಸಂಘಟನೆಯನ್ನು ಕಟ್ಟಿಕೊಂಡು ಅದೆಷ್ಟೋ ನೂತನ ಕಲಾವಿದರಿಗೆ ಹಾಗೂ ಕಲಾ ಸಂಘಟನೆಗೆ ಮುಂಬಯಿಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸುವ ಅವಕಾಶ ಮಾಡಿ ಕೊಟ್ಟಿದ್ದಾರೆ. ಅವರ ಇಂತಹ ಕಾರ್ಯಕ್ರಮಕ್ಕೆ ಮುಂಬಯಿಗರು ಸದಾ ಪ್ರೋತ್ಸಾಹ ನೀಡುತ್ತಾ ಬರಬೇಕು. ಅವರ ಕಾರ್ಯಕ್ರಮಗಳು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಯಕ್ಷಶ್ರೀ ಮಹಿಳಾ ಬಳಗದ ಸಂಸ್ಥಾಪಕರಲ್ಲೊಬ್ಬರಾದ ಆಶಾಲತಾ ಕಲ್ಲೂರಾಯ ತಂಡದ ಬಗ್ಗೆ ಮಾಹಿತಿ ನೀಡಿ, ಕಳೆದ ಐದು ವರ್ಷಗಳಿಂದ ಸುಮಾರು 75 ಕಾರ್ಯಕ್ರಮಗಳನ್ನು ನೀಡಿದ್ದೇವೆ. ಇದಕ್ಕೆ ನಮಗೆ ಸದಾ ಪ್ರೋತ್ಸಾಹ ದೊರೆಯಿತು. ಇದೀಗ ತವರೂರಿನಿಂದ ಪರ ಊರಿನಲ್ಲಿ ಕಾರ್ಯಕ್ರಮ ನೀಡಬೇಕೆಂಬ ನಮ್ಮ ಉದ್ದೇಶವೂ ನೆರವೇರಿತು. ಇದು ನಮಗೆ ಬಹಳಷ್ಟು ಸಂತೋಷ ತಂದ ಕ್ಷಣವಾಗಿದೆ. ಇದಕ್ಕಾಗಿ ಮುಂಬಯಿಯ ಕಲಾ ಪ್ರೇಮಿಗಳಿಗೆ ಹಾಗೂ ಯಕ್ಷ ಗುರು ಅಜೆಕಾರು ಬಾಲಕೃಷ್ಣ ಶೆಟ್ಟಿಯವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.ಗೌರವ ಅತಿಥಿಗಳಾದ ಬಂಟರ ಸಂಘ ಮುಂಬಯಿ ಪೂರ್ವ ವಲಯ ಪ್ರಾದೇಶಿಕ ಸಮಿತಿಗಳ ಸಮನ್ವಯಕ ರವೀಂದ್ರನಾಥ್ ಎ. ಭಂಡಾರಿ, ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಚಿತ್ರಾ ಆರ್. ಶೆಟ್ಟಿ ಶುಭ ಹಾರೈಸಿದರು. ಅತಿಥಿಗಳಾಗಿ ಭಾಗವಹಿಸಿದ್ದ ಯಕ್ಷಗಾನ ಕಲಾವಿದೆ ಪ್ರವೀಣಾ ಪ್ರಕಾಶ್ ಶೆಟ್ಟಿ, ಕನ್ನಡ ಸಂಘ ಪೂವಾಯಿ ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷೆ ಪ್ರಶಾಂತಿ ದಿವಾಕರ್ ಶೆಟ್ಟಿ ಪಾಂಗಾಳ ನಾನಾಯರ ಗರಡಿ ಶುಭ ಹಾರೈಸಿದರು.
ಅತಿಥಿ ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಜೆಕಾರು ಬಾಲಕೃಷ್ಣ ಶೆಟ್ಟಿ ಅತಿಥಿ ಗಣ್ಯರನ್ನು ಗೌರವಿಸಿದರು. ಕಲಾವಿದರಿಗೆ ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು. ಸಂಘಟಕ ಕರ್ನೂರು ಮೋಹನ್ ರೈ ನಿರೂಪಿಸಿದರು. ಅಜೆಕಾರು ಬಾಲಕೃಷ್ಣ ಶೆಟ್ಟಿ ವಂದಿಸಿದರು. ಬಳಿಕ ಕಾಯಕಲ್ಪ ಯಕ್ಷಗಾನ ತಾಳಮದ್ದಳೆ ಜರಗಿತು. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೇಯಾ ಆಚಾರ್ಯ, ಮದ್ದಳೆಯಲ್ಲಿ ಕೇಶವ ಬೈಪಡಿತ್ತಾಯ, ಚೆಂಡೆಯಲ್ಲಿ ಆದಿತ್ಯ ಹೊಳ್ಳ, ಮುಮ್ಮೇಳದಲ್ಲಿ ಅರ್ಥದಾರಿಗಳಾಗಿ ವೀಣಾ ತಂತ್ರಿ, ಆಶಾಲತಾ ಕಲ್ಲೂರಾಯ, ವೀಣಾ ಸರಸ್ವತಿ ನಿಡ್ವಣ್ಣಾಯ, ಗೀತಾ ಕುದ್ವಣ್ಣಾಯ ಭಾಗವಹಿಸಿದರು. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.