ವಿದ್ಯಾಗಿರಿ: ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ‘ಜರ್ನಿಯಿಸಂ’ ಕಾಲೇಜಿನ ಸೆಮಿನಾರ್ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಸಮಾಜದಲ್ಲಿ ಪತ್ರಿಕೋದ್ಯಮದ ಪಾತ್ರ ಬಹುಮುಖ್ಯ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಜಾಗರೂಕರಾಗಿ ಕಾರ್ಯ ನಿರ್ವಹಿಸಬೇಕು ಎಂದರು. ಕಲಿಕೆಯ ಕುರಿತು ಹುಮ್ಮಸ್ಸಿರಲಿ. ಆಲಸ್ಯ ಬೇಡ. ಶೈಕ್ಷಣಿಕವಾಗಿ ನೀವು ಮಾಡುವ ಕಾರ್ಯಗಳು ಕಲಿಕೆಗೆ ಸಹಕಾರಿಯೇ ಹೊರತು ಹೊರೆಯಲ್ಲ ಎಂದರು. ವ್ಯಕ್ತಿ ಎಂದಿಗೂ ಶಾಶ್ವತವಲ್ಲ ಬದಲಿಗೆ ವ್ಯಕ್ತಿತ್ವ ಮಾತ್ರ ಶಾಶ್ವತ ಆದ್ದರಿಂದ ವಿದ್ಯಾರ್ಥಿಗಳು ವ್ಯಕ್ತಿತ್ವಕ್ಕೆ ಧಕ್ಕೆ ತರುವ ಕೆಲಸಗಳಿಂದ ದೂರವಿರಿ ಎಂದು ಕಿವಿಮಾತು ಹೇಳಿದರು.ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ ಆಳ್ವಾಸ್ ಪತ್ರಿಕೋದ್ಯಮ ವಿಭಾಗದಿಂದ ತೇರ್ಗಡೆಯಾದ ಹಲವಾರು ವಿದ್ಯಾರ್ಥಿಗಳು ಪತ್ರಿಕೋದ್ಯಮದಲ್ಲಿ ಉತ್ತಮ ಹೆಸರು ಮಾಡಿದ್ದಾರೆ. ಸಮಾಜದಲ್ಲಿ ವೈದ್ಯರು ಜಾತಿ, ಧರ್ಮ, ಲಿಂಗ ಮತ್ತಿತರ ತಾರತಮ್ಯ ಇಲ್ಲದೆ ಕಾರ್ಯ ನಿರ್ವಹಿಸುವುದು ಹೇಗೆ ಅಗತ್ಯವೋ ಹಾಗೆ ಪತ್ರಕರ್ತರು ಕಾರ್ಯ ನಿರ್ವಹಿಸುವ ಅವಶ್ಯಕತೆಯಿದೆ ಎಂದರು. ವೃತ್ತಿಯ ಸಮಯದಲ್ಲಿ ನೈತಿಕ ನಿಯಮಗಳನ್ನು ಪಾಲಿಸುವುದರಿಂದ ಬೆಳೆಯಲು ಸಾಧ್ಯ ಎಂದರು. ವಿಭಾಗದ ಸಂಯೋಜಕ ಪ್ರಸಾದ ಶೆಟ್ಟಿ ಮಾತನಾಡಿ, ಜೀವನದಲ್ಲಿ ಸಿಹಿ-ಕಹಿ ನೆನಪುಗಳು ಸಹಜ ಅವುಗಳಿಂದ ಮೌಲ್ಯಗಳನ್ನು ಕಲಿಯಬೇಕು ಎಂದರು. ಪ್ರಥಮ ವರ್ಷದ ವಿದ್ಯಾರ್ಥಿಗಳು ಹಿರಿಯ ವಿದ್ಯಾರ್ಥಿಗಳಿಂದ ಪ್ರೇರಣೆ ಪಡೆಯಬಹುದು. ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳನ್ನು ನಡೆಸಲಾಯಿತು. ವಿದ್ಯಾರ್ಥಿನಿ ವೀಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.