ಧರ್ಮದೈವ ಪ್ರೊಡಕ್ಷನ್ ಲಾಂಛನದಲ್ಲಿ ನಿತಿನ್ ರೈ ಕುಕ್ಕುವಳ್ಳಿ ನುಳಿಯಾಲು ನಿರ್ದೇಶನದಲ್ಲಿ ಬಿಳಿಯಾರು ರಾಕೇಶ್ ಭೋಜರಾಜ ಶೆಟ್ಟಿಯವರ ನಿರ್ಮಾಣದಲ್ಲಿ ತಯಾರಾದ ಧರ್ಮದೈವ ತುಳು ಸಿನಿಮಾ ಭಾರತ್ ಸಿನಿಮಾಸ್ ನಲ್ಲಿ ತೆರೆ ಕಂಡಿತು. ಅತಿಥಿಗಳು ದೀಪ ಬೆಳಗಿಸುವ ಮೂಲಕ ಸಿನಿಮಾ ಬಿಡುಗಡೆ ಮಾಡಿ ಶುಭ ಹಾರೈಸಿದರು. ಬಳಿಕ ಮಾತಾಡಿದ ಹಿರಿಯ ರಂಗಕರ್ಮಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರು, “ಧರ್ಮದೈವ ಈಗಾಗಲೇ ದೇಶ ವಿದೇಶಗಳಲ್ಲಿ ಪ್ರೀಮಿಯರ್ ಶೋ ಪ್ರದರ್ಶನ ಕಂಡಿದೆ. ನೋಡಿದವರೆಲ್ಲರೂ ಸಿನಿಮಾ ಕುರಿತು ಮುಕ್ತವಾಗಿ ಶ್ಲಾಘಿಸಿದ್ದಾರೆ. ಬಹಳ ಕಠಿಣ ಪರಿಶ್ರಮದಿಂದ ಸಿನಿಮಾ ಮಾಡಿದ್ದಾರೆ. ಎಲ್ಲರೂ ಸಿನಿಮಾ ನೋಡಿ ಆಶೀರ್ವದಿಸಿ” ಎಂದರು.
ಮುಂಬಯಿ ಹೇರಂಭ ಇಂಡಸ್ಟ್ರಿಸ್ ನ ಸಿಎಂಡಿ ಕನ್ಯಾನ ಸದಾಶಿವ ಶೆಟ್ಟಿ ಮಾತನಾಡಿ, “ಧರ್ಮದೈವ ತುಳುನಾಡಿನ ಕಾರಣಿಕ ಶಕ್ತಿಗಳ ಕುರಿತಾದ ಸಿನಿಮಾ. ಸಿನಿಮಾ ಗೆಲ್ಲಲು ಪ್ರೇಕ್ಷಕರ ಬೆಂಬಲ ಬೇಕೇ ಬೇಕು. ಎಲ್ಲರೂ ಸಿನಿಮಾ ನೋಡಿ ಗೆಲ್ಲಿಸಿ” ಎಂದರು. ದೇವದಾಸ್ ಕಾಪಿಕಾಡ್ ಮಾತನಾಡಿ, “ಧರ್ಮದೈವ ಸಿನಿಮಾ ದೈವಗಳ ಕುರಿತು ಯಾವುದೇ ವಿಡಂಬನೆ ಇಲ್ಲದೆ ತುಳುನಾಡಿನ ದೈವಗಳ ಶಕ್ತಿಯನ್ನು ಜಗತ್ತಿಗೆ ಪರಿಚಯಿಸುವ ಸಿನಿಮಾ. ಇಂದು ಮಲಯಾಳಂ ಸಿನಿಮಾಗಳು ಸಾಲು ಸಾಲು ಗೆಲ್ಲುತ್ತಿವೆ. ತುಳು ಸಿನಿಮಾ ರಂಗದಲ್ಲೂ ಅಂಥ ವಿಭಿನ್ನ ಸಿನಿಮಾಗಳು ಬರಬೇಕು” ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಮಾತಾಡಿ, “ಕೋರ್ಟ್ ಕಚೇರಿಗಳ ಮೇಲಿನ ನಂಬಿಕೆಗಿಂತ ಧರ್ಮದೈವದ ಚಾವಡಿಯಲ್ಲಿ ಸಿಗುವ ತೀರ್ಪು ದೊಡ್ಡದು ಅನ್ನೋ ನಂಬಿಕೆ ಇರುವುದು ತುಳುನಾಡಿನಲ್ಲಿ ಕಾಣಲು ಸಾಧ್ಯ. ದೈವದ ಇಚ್ಛೆಯಿಲ್ಲದೆ ಏನೂ ನಡೆಯುವುದಿಲ್ಲ. ಇಂಥ ಉತ್ತಮ ಪ್ರಯತ್ನಕ್ಕೂ ದೈವಗಳೇ ಕಾರಣ. ಮುಂದೆಯೂ ತುಳು ಚಿತ್ರರಂಗದಲ್ಲಿ ಉತ್ತಮ ಸಿನಿಮಾಗಳು ಬರಲಿ” ಎಂದರು. ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರು ಮಾತಾಡಿ, “ಸಿನಿಮಾದಲ್ಲಿ ನಾನು ಟೈಟಲ್ ಹಾಡನ್ನು ಹಾಡಿದ್ದೇನೆ. ಸಿನಿಮಾವನ್ನು ತುಳುನಾಡಿನ ಜನರು ಸಿನಿಮಾವನ್ನು ಗೆಲ್ಲಿಸುತ್ತಾರೆಂಬ ವಿಶ್ವಾಸವಿದೆ” ಎಂದರು.
ವೇದಿಕೆಯಲ್ಲಿ ಉದ್ಯಮಿ ಕೆ ಕೆ ಶೆಟ್ಟಿ, ತುಳು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಆರ್. ಧನರಾಜ್, ಪ್ರಕಾಶ್ ಪಾಂಡೇಶ್ವರ್, ಸ್ವರಾಜ್ ಶೆಟ್ಟಿ, ರಮೇಶ್ ರೈ ಕುಕ್ಕುವಳ್ಳಿ, ಚೇತನ್ ರೈ ಮಾಣಿ, ಭೋಜರಾಜ್ ವಾಮಂಜೂರ್, ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕಳ, ಇಸ್ಮಾಯಿಲ್ ಮೂಡುಶೆಡ್ಡೆ, ಪ್ರದೀಪ್ ಆಳ್ವ, ಭಾಸ್ಕರ್ ರೈ ಕುಕ್ಕುವಳ್ಳಿ, ಕೆ ಕೆ ಪೇಜಾವರ, ದಯಾನಂದ ಕತ್ತಲ್ ಸಾರ್, ಸುಹಾನ್ ಆಳ್ವ, ರೂಪಾ ವರ್ಕಾಡಿ, ಚಂದ್ರಹಾಸ ಆಳ್ವ, ಹೇಮಂತ್ ಸುವರ್ಣ, ನಿರ್ಮಾಪಕ ಬಿಳಿಯಾರು ರಾಕೇಶ್ ಭೋಜರಾಜ ಶೆಟ್ಟಿ, ನಿರ್ದೇಶಕ ನಿತಿನ್ ರೈ ಕುಕ್ಕವಳ್ಳಿ ನುಳಿಯಾಲು ಮತ್ತಿತರರು ಉಪಸ್ಥಿತರಿದ್ದರು. ಲಿಖಿತ್ ರೈ ಕಾರ್ಯಕ್ರಮ ನಿರ್ವಹಿಸಿದರು.
“ಧರ್ಮ ದೈವ” ಸಿನಿಮಾ ಮಂಗಳೂರಿನಲ್ಲಿ ರೂಪವಾಣಿ, ಭಾರತ್ ಸಿನಿಮಾಸ್, ಪಿವಿಆರ್, ಸಿನಿಪೊಲಿಸ್, ಸುರತ್ಕಲ್ ನಲ್ಲಿ ಸಿನಿಗ್ಯಾಲಕ್ಸಿ, ನಟರಾಜ್, ಪಡುಬಿದ್ರೆಯಲ್ಲಿ ಭಾರತ್ ಸಿನಿಮಾಸ್, ಉಡುಪಿಯಲ್ಲಿ ಕಲ್ಪನ, ಭಾರತ್ ಸಿನಿಮಾಸ್, ಮಣಿಪಾಲದಲ್ಲಿ ಐನಾಕ್ಸ್, ಭಾರತ್ ಸಿನಿಮಾಸ್, ಕಾರ್ಕಳದಲ್ಲಿ ಪ್ಲಾನೆಟ್, ರಾಧಿಕಾ, ಪುತ್ತೂರಿನಲ್ಲಿ ಭಾರತ್ ಸಿನಿಮಾಸ್ ಬೆಳ್ತಂಗಡಿಯಲ್ಲಿ ಭಾರತ್ ಚಿತ್ರಮಂದಿರದಲ್ಲಿ ಸಿನಿಮಾ ತೆರೆಕಂಡಿದೆ. ಈ ನಾಡಿನ ರೈತಾಪಿ ಜನರು ತಮ್ಮ ಬೇಸಾಯ, ಕೃಷಿ, ತೋಟಗಾರಿಕೆ ಮುಂತಾದ ಕ್ಷೇತ್ರಗಳಲ್ಲಿ ತುಳುನಾಡಿನ ದೈವ ದೇವರು, ನೇಮ- ಕೋಲ-ತಂಬಿಲ, ನಾಗಾರಾಧನೆ, ದೈವಾರಾಧನೆ ಮೂಲಕ ಈ ಮಣ್ಣಿನ, ಬದುಕಿನ ಕಥೆಯನ್ನು ಕಟ್ಟಿಕೊಡುವ ತುಳು ಚಲನಚಿತ್ರ “ಧರ್ಮ ದೈವ” ಬೆಳ್ಳಿ ತೆರೆಯಲ್ಲಿ ಮೂಡಿಬಂದಿದೆ.
ಸಿನಿಮಾ ಕುರಿತು: ಉಡುಪಿ, ಮಂಗಳೂರು ಮತ್ತು ಪುತ್ತೂರಿನ ಯುವಕರು ತಾವೇ ಸೇರಿಕೊಂಡು “ಧರ್ಮದೈವ ಪ್ರೊಡಕ್ಷನ್ಸ್ ಲಾಂಛನದಲ್ಲಿ” “ಧರ್ಮ ದೈವ” ಎಂಬ ಹೆಸರಿನಲ್ಲಿ ಒಂದು ಪೂರ್ಣ ಚಲನಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಯುವ ನಿರ್ಮಾಪಕ ಬಿಳಿಯೂರು ರಾಕೇಶ್ ಭೋಜರಾಜ ಶೆಟ್ಟಿ, “ಧರ್ಮದೈವ” ತುಳು ಚಲನ ಚಿತ್ರವನ್ನು ಭಕ್ತಿ ಶಕ್ತಿ ಶ್ರದ್ಧೆಯಿಂದ ನಿರ್ಮಾಣ ಮಾಡಿ ಕೊಟ್ಟಿರುವರು. ನಿತಿನ್ ರೈ ಕುಕ್ಕುವಳ್ಳಿ ನುಳಿಯಾಲು ಕಥೆ ಬರೆದು ಈ ಚಿತ್ರವನ್ನು ನಿರ್ದೇಶಸಿದ್ದಾರೆ. ಈ ಚಿತ್ರಕ್ಕೆ ಚಿತ್ರಕಥೆ- ಸಂಭಾಷಣೆಯನ್ನು ಹಮೀದ್ ಪುತ್ತೂರು ಬರೆದಿದ್ದಾರೆ. ಅರುಣ್ ರೈ ಪುತ್ತೂರು ಇವರ ಛಾಯಾಗ್ರಹಣ, ಸಂಗೀತ ಮತ್ತು ಹಿನ್ನೆಲೆ ಸಂಗೀತ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಇವರ ಶಿಷ್ಯ ನಿಶಾನ್ ರೈ ಮಠಂತಬೆಟ್ಟು, ಸಾಹಿತ್ಯ :ಕೆ.ಕೆ ಪೇಜಾವರ್, ಸುಮಂತ್ ಬೈಲಾಡಿ, ಹಿನ್ನೆಲೆ ಗಾಯನ: ಖ್ಯಾತ ಯಕ್ಷಗಾನ ಭಾಗವತರು ಪಟ್ಲ ಸತೀಶ್ ಶೆಟ್ಟಿ, ಕು.ಸಮನ್ವಿ ಆರ್.ರೈ ನುಳಿಯಾಲು, ಚಿತ್ರ ಸಂಕಲನ: ರಾಧೇಶ್ ರೈ ಮೊಡಪ್ಪಾಡಿ ಮತ್ತು ಶ್ರೀನಾಥ್ ಪವಾರ್, ನಿರ್ಮಾಣದಲ್ಲಿ ಸುಧೀರ್ ಕುಮಾರ್ ಕಲ್ಲಡ್ಕ ಮತ್ತು ರಾಕೇಶ್ ಶೆಟ್ಟಿ ಜಿ ಅವರ ಸಹಕಾರವು ಈ ಚಿತ್ರಕ್ಕಿದೆ. ಚಿತ್ರದಲ್ಲಿ ದೈವದ ನಂಬಿಕೆ- ಇರುವಿಕೆಯನ್ನು ಮಾತ್ರ ಸಾದರ ಪಡಿಸಲಾಗಿದೆ. ನವರಸ ಭರಿತವಾಗಿರುವ “ಧರ್ಮದೈವ” ತುಳು ಚಲನ ಚಿತ್ರದ ತಾರಾಗಣದಲ್ಲಿ ರಮೇಶ್ ರೈ ಕುಕ್ಕುವಳ್ಳಿ, ಚೇತನ್ ರೈ ಮಾಣಿ, ದೀಪಕ್ ರೈ ಪಾಣಾಜೆ, ರೂಪಶ್ರೀ ವರ್ಕಾಡಿ, ದಯಾನಂದ ರೈ ಬೆಟ್ಟಂಪಾಡಿ, ಭರತ್ ಶೆಟ್ಟಿ, ರವಿ ಸಾಲ್ಯಾನ್ (ಸ್ನೇಹಿತ್), ಸಂದೀಪ್ ಪೂಜಾರಿ, ಪುಷ್ಪರಾಜ್ ಬೊಳ್ಳಾರ್, ರಂಜನ್ ಬೋಳೂರ್, ಕೌಶಿಕ್ ರೈ ಕುಂಜಾಡಿ, ದೀಕ್ಷಾ ಡಿ.ರೈ, ಹಾಗೂ ಗ್ರೇಷಿಯಲ್ ಕಲಿಯಂಡ ಕೊಡಗು ಮೊದಲಾದವರು ಅಭಿನಯಿಸಿದ್ದಾರೆ.