ರಚನಾತ್ಮಕ ಸಂಬಂಧ ಏರ್ಪಡಿಸಲು ಕಾರ್ಯ ಮತ್ತು ಸಮಾಜದ ವ್ಯಕ್ತಿಗಳ ಪರಸ್ಪರ ಸಂಬಂಧ ಬೆಳೆಯಲು ಮರದ ರೆಂಬೆಗಳಂತೆ ಸಂಘದ ವಲಯ ಸಮಿತಿಗಳು ರಚನೆಯಾಗಬೇಕು. ಅದೇ ರೀತಿ ನಮ್ಮ ಬಂಟರ ಸಂಘದ ಪೂರ್ವ ವಲಯ ಸ್ಥಾಪನೆಯಾಗಿ ಸಂಘಕ್ಕೆ ಮತ್ತೊಂದು ಕೈ ಬಲ ದೊರಕಿದೆ. ಸಮಾಜದ ಅಭಿವೃದ್ದಿಗಾಗಿ ಮಾಡುವ ಕಾರ್ಯ ಯೋಜನೆಗಳು ಸಂಘದ ಉದ್ದೇಶದಂತೆ ಸಂಘಟಿತರಾಗಿ ನಾವೆಲ್ಲರೂ ಒಂದೇ ಕಾರ್ಯ ಮಾರ್ಗದಲ್ಲಿ ನಡೆಯಬೇಕು. ನಮ್ಮ ಸಂಘದ ಮುಖಾಂತರ ನಡೆಯುವ ಕಾರ್ಯಕ್ರಮದಲ್ಲಿ ತಾವೆಲ್ಲರೂ ಭಾಗಿಗಲಾಬೇಕು. ಯಾವುದೇ ರೀತಿಯ ಕಾರ್ಯಕ್ರಮವಿರಲಿ ನಮ್ಮ ಕಾರ್ಯಕ್ರಮ ಎಂಬ ಭಾವನೆ ನಿಮ್ಮಲ್ಲಿರಲಿ. ಪೂರ್ವ ವಲಯ ಪ್ರಥಮ ಬಾರಿಗೆ ಅರಶಿನ ಕುಂಕುಮ ಕಾರ್ಯಕ್ರಮ ಆಯೋಜನೆಯ ಮೂಲಕ ಶುಭ ಕಾರ್ಯವನ್ನು ಮಾಡಿದೆ. ಅರಶಿನ ಕುಂಕುಮ ಹಿಂದೂ ಸಂಸ್ಕ್ರತಿಯ ಮಹಿಳೆಯರು ಆಚರಿಸುವ ಶುಭ ಪರ್ವ. ಇದರ ಮಹತ್ವವನ್ನು ಅರಿತು ನಾವೆಲ್ಲರೂ ಭಾಗಿಗಳಾಗಿ ಉತ್ತಮ ಕಾರ್ಯಕ್ರಮ ಮೂಡಿ ಬಂದಿದೆ. ಪೂರ್ವ ವಲಯಕ್ಕೆ ಶುಭವನ್ನು ಕೋರುತ್ತೇನೆ ಎಂದು ಪುಣೆ ಬಂಟರ ಸಂಘದ ಮಹಿಳಾ ಕಾರ್ಯಾಧ್ಯಕ್ಷೆ ಸುಲತಾ ಎಸ್ ಶೆಟ್ಟಿ ನುಡಿದರು.
ಪುಣೆ ಬಂಟರ ಸಂಘದ ನೂತನವಾಗಿ ಸ್ಥಾಪನೆಯಾದ ಪೂರ್ವ ವಲಯ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಅರಶಿನ ಕುಂಕುಮ ಕಾರ್ಯಕ್ರಮವು ಕಾರ್ಯಾಧ್ಯಕ್ಷೆ ಶ್ರೀಮತಿ ಕೃತಿ ಎಲ್ ಶೆಟ್ಟಿ ನೇತೃತ್ವವದಲ್ಲಿ ಎಪ್ರಿಲ್ 7ರಂದು ವಿಮಾನನಗರದ ಸಿಗ್ನೇಚರ್ ಫೈನ್ ಡೈನಿಂಗ್ ರೆಸ್ಟೊರೆಂಟ್ನ ಬ್ಯಾಂಕ್ವೆಟ್ ಹಾಲ್ನಲ್ಲಿ ಗೌರವ ಮುಖ್ಯ ಅತಿಥಿಯಾಗಿ ಪುಣೆ ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಲತಾ ಎಸ್.ಶೆಟ್ಟಿ, ಗೌರವ ಅತಿಥಿಯಾಗಿದ್ದ ಪ್ರಮುಖ ಸ್ತ್ರೀರೋಗ ತಜ್ಞೆ ಡಾ. ಪ್ರೀತಿಕಾ ಶಶಿ ಶೆಟ್ಟಿ ಆಗಮಿಸಿದ್ದರು. ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ, ಪದಾಧಿಕಾರಿಗಳಾದ ಸತೀಶ್ ಶೆಟ್ಟಿ, ಸುಧೀರ್ ಶೆಟ್ಟಿ ಕಣಂಜಾರು ಕೊಳಕೆ ಬೈಲು, ಕಿಶೋರ್ ಹೆಗ್ಡೆ, ಪೂರ್ವ ವಲಯದ ಕಾರ್ಯಾಧ್ಯಕ್ಷ ಸುನಿಲ್ ಶೆಟ್ಟಿಯವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಮೊದಲಿಗೆ ಅತಿಥಿ ಗಣ್ಯರು ಪದಾಧಿಕಾರಿಗಳು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಾರಾ ಜಯರಾಂ ಶೆಟ್ಟಿ ಪ್ರಾರ್ಥನೆಗೈದರು. ಪೂರ್ವ ವಲಯದ ಕಾರ್ಯಾಧ್ಯಕ್ಷೆ ಕೃತಿ ಎಲ್ ಶೆಟ್ಟಿ ಸ್ವಾಗತಿಸಿದರು. ಅತಿಥಿ ಗಣ್ಯರನ್ನು ಶಾಲು ಫಲಪುಷ್ಪ ನೀಡಿ ಗೌರವಿಸಲಾಯಿತು. ಉಪಸ್ಥಿತರಿದ್ದ ಗಣ್ಯರು ಪೂರ್ವ ವಲಯದ ಸ್ಥಾಪನೆಗೆ ಶುಭ ಕೋರಿ ಸಾಂಧರ್ಭಿಕವಾಗಿ ಮಾತನಾಡಿದರು. ಕೃತಿ ಎಲ್ ಶೆಟ್ಟಿಯವರನ್ನು ಬಂಟರ ಸಂಘದ ವತಿಯಿಂದ ಸತ್ಕರಿಸಲಾಯಿತು. ಸುಧೀರ್ ಶೆಟ್ಟಿ, ಕಿಶೋರ್ ಹೆಗ್ಡೆ, ಸುನೀಲ್ ಶೆಟ್ಟಿ ಮತ್ತು ಸಂಘ ಸಂಸ್ಥೆಗಳ ಅಧ್ಯಕ್ಷರುಗಳನ್ನು ಸತ್ಕರಿಸಲಾಯಿತು. ಪುಣೆಯ ವಿವಿದ ಸಂಘ ಸಂಸ್ಥೆಗಳ ಮಹಿಳಾ ವಿಬಾಗದ ಕಾರ್ಯಾಧ್ಯಕ್ಷೆಯರು, ಪದಾಧಿಕಾರಿಗಳು, ಹೆಚ್ಚಿನ ಸಂಖ್ಯೆಯ ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪರಸ್ಪರ ಅರಶಿನ ಕುಂಕುಮ ಹಚ್ಚಿ ಶುಭ ಕೋರಿದರು. ಪೂರ್ವ ವಲಯದ ಪದಾಧಿಕಾರಿಗಳು, ಮಹಿಳಾ ಪದಾಧಿಕಾರಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಮಹಿಳಾ ವಿಭಾಗದ ಕಾರ್ಯದರ್ಶಿ ಶಾಲಿನಿ ಎಂ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಚಿತ್ರ, ವರದಿ – ಹರೀಶ್ ಮೂಡಬಿದಿರೆ