ಇಲ್ಲಿ ನೆಲೆಸಿರುವ ಕರ್ನಾಟಕದ ಸದಸ್ಯರು ಹಾಗೂ ಅವರ ಪರಿವಾರದವರಿಗಾಗಿ ವಿಹಾರ ಕೂಟವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು. ವಿಹಾರ ಕೂಟದಲ್ಲಿ ನೂರಾರು ಸದಸ್ಯರು ಆಸಕ್ತಿಯಿಂದ ತಮ್ಮ ಪರಿವಾರ ಸಮೇತ ಭಾಗಿಯಾಗಿ ಬೆಳಗ್ಗಿನಿಂದ ಸಂಜೆಯವರೆಗೂ ಸಂಭ್ರಮಿಸಿದರು.
ಸರ್ವೋತ್ತಮ ಶೆಟ್ಟಿ ಅವರ ಸಾರಥ್ಯದಲ್ಲಿ ಅಬುಧಾಬಿ ಕರ್ನಾಟಕ ಸಂಘದ ಪದಾಧಿಕಾರಿಗಳೆಲ್ಲಾ ಒಂದಾಗಿ ಸುಮಾರು ಐದು ವರುಷಗಳ ಅನಂತರ ಈ ವಿಹಾರ ಕೂಟವನ್ನು ಏರ್ಪಡಿಸಿದ್ದರು. ಬಸ್ ಪ್ರಯಾಣದ ಮೂಲಕ ಅಲ್ ಐನ್ ಪರಿಸರದಲ್ಲಿರುವ ಹಿಲ್ ಪಾರ್ಕ್ ನಲ್ಲಿ ಎಲ್ಲರೂ ಒಂದಾಗಿ ಒಂದೇ ಪರಿವಾರವೆಂಬಂತೆ ನಲಿದು ಸಂಭ್ರಮಿಸಿದರು.
ರುಚಿಕರವಾದ ತಿಂಡಿ- ತಿನಿಸುಗಳು, ಊಟ ಮಾತ್ರವಲ್ಲದೇ ಜಾನಪದ ನೃತ್ಯ, ರಸ ಪ್ರಶ್ನೆ, ಮನೋರಂಜನಾತ್ಮಕವಾದ ಆಟೋಟ ಸ್ವರ್ಧೆಗಳನ್ನು ಈ ಸಂದರ್ಭದಲ್ಲಿ ಆಯೋಜಿಸಿದ್ದು ಎಲ್ಲರೂ ಈ ಚಟುವಟಿಕೆಗಳಲ್ಲಿ ಭಾಗಿಯಾಗಿ ಬೆಳಗ್ಗಿನಿಂದ ಸಂಜೆಯವರೆಗೂ ಸಂತೋಷದಿಂದ ಕಾಲ ಕಳೆದರು. ಚಳಿಗಾಲದಲ್ಲಿ ತುಂತುರು ಮಳೆ ಕೂಡ ಬರುತಿದ್ದರೂ ಸದಸ್ಯರ ಉತ್ಸಾಹಕ್ಕೇನೂ ಕೊರತೆಯಿರಲಿಲ್ಲ. ತಮ್ಮ ತಾಯ್ನಾಡಿನಿಂದ ಸಾವಿರಾರು ಮೈಲು ದೂರವಿದ್ದರೂ ಒಂದೇ ಕುಟುಂಬದಂತೆ ಬೆರೆತು ಒಂದಷ್ಟು ಸಮಯ ಸಂತೋಷವಾಗಿ ಕಾಲ ಕಳೆಯಲು ಇಂತಹ ಒಂದು ವಿಹಾರ ಕೂಟವನ್ನು ಏರ್ಪಡಿಸಿದ್ದ ಅಬುದಾಭಿ ಕರ್ನಾಟಕ ಸಂಘದ ಕಾರ್ಯವೈಖರಿ ನಿಜಕ್ಕೂ ಶ್ಲಾಘನೀಯ.