ಮೂಡುಬಿದಿರೆ: ‘ಸಾರ್ವಜನಿಕ ಒಳಿತಿನೊಂದಿಗೆ ಖಾಸಗಿ ಲಾಭವನ್ನು ಬಯಸಿದಾಗ ಸಮಾಜದ ಅಭ್ಯುದಯ ಸಾಧ್ಯ’ ಎಂದು ಕೇಂದ್ರದ ಸಾಮಥ್ರ್ಯ ನಿರ್ಮಾಣ ಆಯೋಗ(ಮಾನವ ಸಂಪನ್ಮೂಲ)ದ ಸದಸ್ಯ ಡಾ. ಆರ್. ಬಾಲಸುಬ್ರಹ್ಮಣ್ಯಂ ಅಭಿಪ್ರಾಯ ಪಟ್ಟರು. ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನಲ್ಲಿ ‘ರೋಸ್ಟ್ರಮ್ – ದಿ ಸ್ಪೀಕರ್ಸ್ ಕ್ಲಬ್ ಸೋಮವಾರ ಹಮ್ಮಿಕೊಂಡ ‘ಟೀಮ್ ಇಂಡಿಯಾ ಫಾರ್ ಎ ನ್ಯೂ ಇಂಡಿಯಾ ವಿಶೇಷ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ನಾವು ಪ್ರಮುಖವಾಗಿ ಮೂರು ಬಿಕಟ್ಟನ್ನು ಎದುರಿಸುತ್ತಿದ್ದೇವೆ. ಅಗತ್ಯಕ್ಕಿಂತ ಹೆಚ್ಚು ಬಳಕೆಯ ಕಾರಣ ಪರಿಸರದ ಮೇಲಿನ ದುಷ್ಪರಿಣಾಮ, ಹೆಚ್ಚಾಗುತ್ತಿರುವ ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆ ಹಾಗೂ ಪ್ರಚಾರ ಪ್ರಿಯತೆಯ ಪರಿಣಾಮದ ಸ್ವಯಂ ಬಿಕ್ಕಟ್ಟು. ಇವುಗಳನ್ನು ಎಚ್ಚರಿಕೆಯಿಂದ ಪರಿಹರಿಸಿಕೊಳ್ಳಬೇಕಾಗಿದೆ’ ಎಂದು ಅವರು ವಿವರಿಸಿದರು. ‘ಅಭಿವೃದ್ಧಿಯನ್ನು ಕೇವಲ ವಿಜ್ಞಾನ, ತಂತ್ರಜ್ಞಾನ ಹಾಗೂ ಆರ್ಥಿಕತೆಯ ಪರಿಭಾಷೆಯಲ್ಲಿ ವಿಶ್ಲೇಷಿಸಬೇಡಿ. ಅಭಿವೃದ್ಧಿಯಲ್ಲಿ ಮಾನವ ಸಂಪನ್ಮೂಲದ ಪಾತ್ರ ಮಹತ್ತರ. ಒಬ್ಬ ಉತ್ತಮ ಉದ್ಯೋಗಿ ಮತ್ತು ಸಂಸ್ಥೆ ನಡುವಣ ಹಣ, ಬಾಂಧವ್ಯ, ಕಲಿಕೆ ಹಾಗೂ ಹೆಮ್ಮೆಯ ಸಂಬಂಧ ಬಹುಮುಖ್ಯ ಎಂದು ಅವರು ವಿವರ ನೀಡಿದರು.
‘ನಮ್ಮನ್ನು ನಾವು ನೋಡುವ ದೃಷ್ಟಿ ಬದಲಾಗಬೇಕಿದೆ. ಪಾಶ್ಚಾತ್ಯ ರಾಷ್ಟ್ರಗಳು ಬರೆದ ವ್ಯಾಖ್ಯಾನದಲ್ಲೇ ಭಾರತವನ್ನು ಇಂದಿಗೂ ವರ್ಣಿಸಬೇಡಿ. ನಮ್ಮ ನೈಜ ಸಾಮಥ್ರ್ಯದ ಬಗ್ಗೆ ಮಾಹಿತಿ ನೀಡಿ’ ಎಂದು ಸಲಹೆ ನೀಡಿದರು. ‘ಕೈ ಕಟ್ಟು ಬಾಯಿ ಮುಚ್ಚು’ ಮಾದರಿಯ ಶಿಕ್ಷಣದ ಅವಶ್ಯಕತೆ ಇಲ್ಲ. ಉತ್ತರ ಬೇಕೆನಿಸಿದಾಗ ಅಡ್ಡಿಪಡಿಸಿ, ಆಧುನಿಕ ಬದಲಾವಣೆಗೆ (ಡಿಜಿಟಲ್) ಸಕಾರಾತ್ಮಕವಾಗಿ ತೆರೆದುಕೊಳ್ಳಿ, ನೀವು ನಾಯಕರಾಗಿ ಇಲ್ಲವೇ ನಾಯಕತ್ವವನ್ನು ನಿರೂಪಿಸುವ ಗುಣಗಳನ್ನು ಬೆಳೆಸಿಕೊಳ್ಳಿ’ ಎಂದು ಹುರಿದುಂಬಿಸಿದರು.
‘ನಮ್ಮ ಆರ್ಥಿಕ ಗುರಿಯು ಲಾಭ ಹೆಚ್ಚಳಕ್ಕಿಂತ ಪ್ರತಿಫಲ ಹೆಚ್ಚಿಸುವ ಲೋಕೋದ್ಧಾರದ ಧ್ಯೇಯ ಹೊಂದಬೇಕು. ಆಗ ಪ್ರಗತಿ ಸಾಧ್ಯ’ ಎಂದ ಅವರು, ‘1,600 ವರ್ಷಗಳ ಕಾಲ ಪ್ರಗತಿಯ ಪಥದಲ್ಲಿದ್ದ ಭಾರತವು ಬ್ರಿಟಿಷ್ ಆಡಳಿತದ ಪರಿಣಾಮ ವಸಾಹತು ಮನಸ್ಥಿತಿಗೆ ಸಿಲುಕಿತು. ಈಗ ಮತ್ತೆ ಮುನ್ನಡೆಯುತ್ತಿದ್ದು, ಕರಿಮೋಡಗಳ ನಡುವೆಯೂ ಕಾಣುವ ಬೆಳ್ಳಿಗೆರೆಯ ನಮ್ಮ ಆಶಾಕಿರಣವಾಗಿರಬೇಕು’ ಎಂದರು. ‘ಬ್ರಿಟೀಷ್ ಆಡಳಿತದಿಂದಾಗಿ ನಮ್ಮ ದೇಸಿ ಜ್ಞಾನಶಾಖೆ ನಶಿಸಿತು. ಈಗ ಪ್ರಗತಿ ಪಥದಲ್ಲಿದ್ದು, ಭವಿಷ್ಯದಲ್ಲಿ ಭಾರತಕ್ಕೆ ಉದ್ಯೋಗ ಅರಸಿ ಬರುವವರ ಸಂಖ್ಯೆ ಹೆಚ್ಚಾಗಲಿದೆ. ಸ್ವಯಂ ಆಡಳಿತ ನಡೆಸಲು ಅಸಾಧ್ಯ ಎಂದ ಬ್ರಿಟೀಷರಿಗೆ ಭಾರತೀಯ ಮೂಲದ ಪ್ರಧಾನಿಯನ್ನು ನೀಡಿದ್ದೇವೆ. ಅವರ ಇಂಗ್ಲಿಷ್ ಭಾಷೆಯಲ್ಲೇ ಪಾರಮ್ಯ ಸಾಧಿಸಿದ್ದೇವೆ. ಟೆಲಿಫೋನ್ ಹೊಂದುವುದೇ ಪ್ರತಿಷ್ಠೆಯಾಗಿದ್ದ
ನೆಲದ ಹಲವಡೆ ಮೊಬೈಲ್ ಫೋನ್ ಬಳಕೆ ನಿಷೇಧಿಸುವಷ್ಟು ಮುಂದುವರಿದಿದ್ದೇವೆ. ದೇಶದ ಪ್ರಗತಿಗೆ ಹೆಮ್ಮೆ ಪಡಬೇಕು’ ಎಂದರು.
ಪರಿಸರ, ದೇಶ, ಊರು ಕುರಿತು ಗೌರವ ಪ್ರೀತಿ ಇದೆ ಎಂದಾದರೆ, ನಿಮ್ಮ ಜೀವನಶೈಲಿ ಬಗ್ಗೆ ಚಿಂತಿಸಿ. ಅನಗತ್ಯ ಬಳಕೆಯನ್ನು ನಿಲ್ಲಿಸಿ. ನೆಲದ ಕಾನೂನುಗಳನ್ನು ಪಾಲಿಸಿ. ಪ್ರಾಮಾಣಿಕವಾಗಿ ಜೀವಿಸಿ ಎಂದರು. ಪ್ರತಿಭಾ ಪಲಾಯನ ಕುರಿತ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ‘ದೇಶದ ಅಭಿವೃದ್ಧಿಗೆ ಬದ್ಧತೆ ಹೊಂದಿದ ಯುವಜನತೆ ಬೇಕಾಗಿದ್ದಾರೆಯೇ ಹೊರತು ಹಣದ ಹಿಂದೆ ಓಡುವವರಲ್ಲ. ಬದ್ಧತೆಗೆ ಪ್ರತಿಫಲ ಶತಃಸಿದ್ಧ ಎಂಬುದಕ್ಕೆ ನನ್ನ ಅನುಭವವೇ ಸಾಕ್ಷಿ’ ಎಂದರು. ವಿದ್ಯಾರ್ಥಿಗಳ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದ ಅವರು, ‘ಕೆಲಸದ ಘನತೆಯನ್ನು ಹೆಚ್ಚಿಸಬೇಕೇ ಹೊರತು ಉಚಿತ ನೀಡುವುದಲ್ಲ. ಕಟ್ಟಕಡೆಯ ಮನುಷ್ಯನಿಗೆ ನ್ಯಾಯ ಸಿಗುವ ತನಕ ಮೀಸಲಾತಿ ಇರಬೇಕು. ಆದರೆ, ಕೆನೆಪದರ ಪಾಲಿಸಬೇಕು. ಸಣ್ಣ ಸಣ್ಣ ವಿಷಯದಲ್ಲೂ ಸೂಕ್ಷ್ಮತೆ ಬೇಕು. ಮೌಲ್ಯಾಧಾರಿತ ಶಿಕ್ಷಣ ಇಂದಿನ ಅಗತ್ಯ. ಎಲ್ಲರನ್ನೂ ಸಮಾನವಾಗಿ ನೋಡುವ ಧರ್ಮ ಬೇಕು. ಖಾಸಗಿ ವಲಯದಲ್ಲೂ ಭ್ರಷ್ಟಾಚಾರ ಇದೆ. ನಿಮ್ಮ ಸಾಮಥ್ರ್ಯವನ್ನು ಸಂಭ್ರಮಿಸಿ’ ಎಂಬಿತ್ಯಾದಿ ಉತ್ತರಗಳನ್ನು ನೀಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ. ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂಯೋಜಕ ಪ್ರಸಾದ್ ಶೆಟ್ಟಿ ಇದ್ದರು. ವಿದ್ಯಾರ್ಥಿನಿ ವೃಂದಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಅವಿನಾಶ್ ಅತಿಥಿ ಪರಿಚಯಿಸಿದರು.