ಭಾರತೀಯ ಭೂಸೇನೆಯ ನಿವೃತ್ತ ಸೇನಾಧಿಕಾರಿ, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ನಾಯಕ ಕ್ಯಾ. ಬೃಜೇಶ್ ಚೌಟ ಅವರು ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಬೃಜೇಶ್ ಚೌಟ ಅವರು ಕಾಲೇಜು ದಿನಗಳಲ್ಲಿಯೇ ಎನ್ ಸಿಸಿಯಲ್ಲಿ ಹೆಸರು ಮಾಡಿ ಸೇನೆಗೆ ಸೇರ್ಪಡೆಯಾಗಿದ್ದರು. ಯುಪಿಎಸ್ಸಿ ಆಯೋಜಿಸುವ ಕಂಬೈನ್ಡ್ ಡಿಫೆನ್ಸ್ ಸರ್ವಿಸಸ್ ಎಕ್ಸಾಮಿನೇಷನ್ ಪರೀಕ್ಷೆ ಹಾಗೂ ಎಸ್ಎಸ್ ಬಿ ಇಂಟರ್ವ್ಯೂನಲ್ಲಿ ತೇರ್ಗಡೆಗೊಂಡು ಚೆನ್ನೈನಲ್ಲಿರುವ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆದು ಭಾರತೀಯ ಭೂ ಸೇನೆಯ ಪ್ರತಿಷ್ಠಿತ 8 ಗೋರ್ಖಾ ರೈಫಲ್ಸ್ ನ 7 ನೇ ಬೆಟಲಿಯನ್ ನಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಅಸ್ಸಾಂ ಮತ್ತು ಮಣಿಪುರ ಸೇರಿದಂತೆ ದೇಶದ ಹಲವು ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
2011 ರಲ್ಲಿ ಸೇನೆಯಿಂದ ಸ್ವಯಂ ನಿವೃತ್ತಿ ಪಡೆದು ಹುಟ್ಟೂರಿಗೆ ಮರಳಿದ್ದ ಬೃಜೇಶ್ ಚೌಟ ಆರೆಸ್ಸೆಸ್ ಮತ್ತು ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. 2013 ರಲ್ಲಿ ಯುವ ಮೋರ್ಚಾದ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ
ಕಾರ್ಯದರ್ಶಿಯಾಗಿದ್ದರು. 2016 ರಿಂದ 19 ರವರೆಗೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಆನಂತರ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿದ್ದ ಅವರು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಲ್ಲಿ ಪ್ರಭಾರಿಯಾಗಿ ಕೆಲಸ ಮಾಡಿದ್ದರು.
2015 ರಿಂದ ಕೇರಳ, ಕರ್ನಾಟಕ, ದೆಹಲಿ, ಮಹಾರಾಷ್ಟ್ರದ ಅಸೆಂಬ್ಲಿ ಚುನಾವಣಾ ಕರ್ತವ್ಯದಲ್ಲಿ ಪಾಲ್ಗೊಂಡಿದ್ದಾರೆ. ರಾಜ್ಯ ಬಿಜೆಪಿ ಚುನಾವಣಾ ಸಮಿತಿಯ ಭಾಗವಾಗಿರುವ ಯುವ ಸಂವಾದ ಘಟಕದಲ್ಲಿ ರಾಜ್ಯ ಸಹ ಸಂಚಾಲಕರಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. 2015 ರಲ್ಲಿ ಕರಾವಳಿಯ ಜನಪದ ಕ್ರೀಡೆ ಕಂಬಳ ನಿಷೇಧಕ್ಕೊಳಗಾದ ಸಂದರ್ಭ ಅದರ ವಿರುದ್ಧ ಹೋರಾಟ ಸಂಘಟಿಸಿದವರಲ್ಲಿ ಕ್ಯಾ. ಬೃಜೇಶ್ ಚೌಟ ಒಬ್ಬರು. ಕಂಬಳಕ್ಕೆ ಒಂದು ಹಂತದ ಜಯ ಸಿಕ್ಕ ಬೆನ್ನಲ್ಲೇ ಮಂಗಳೂರು ನಗರದಲ್ಲಿಯೇ ಕಂಬಳ ಆಯೋಜಿಸಬೇಕೆಂದು ನಿಶ್ಚಯಿಸಿ, ಯುವಕರನ್ನು ಕಟ್ಟಿಕೊಂಡು ಸತತ ಆರು ವರ್ಷಗಳಿಂದ ಮಂಗಳೂರು ಕಂಬಳ ಹೆಸರಲ್ಲಿ ಕಂಬಳ ನಡೆಸುತ್ತಿದ್ದಾರೆ. ಮಂಗಳೂರು ಲಿಟ್ ಫೆಸ್ಟ್ ಆಯೋಜಕರಾಗಿ, ಸಮರ್ಥನ್ ಫೌಂಡೇಶನ್ ಟ್ರಸ್ಟಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.