ಕನ್ನಡ ಸಂಘ ಬಹರೈನ್ ಆಶ್ರಯದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ.) ಮಂಗಳೂರು, ಇದರ ಬಹರೈನ್ ಸೌದಿ ಘಟಕದ ತೃತೀಯ ವಾರ್ಷಿಕೋತ್ಸವ “ಪಟ್ಲ ಸಂಭ್ರಮ – 2023” ಅಕ್ಟೋಬರ್ 20 ರಂದು ಸ್ಥಳೀಯ ಕನ್ನಡ ಭವನ ಸಭಾಂಗಣದಲ್ಲಿ ವಿಜೃಂಬಣೆಯಿಂದ ನೆರವೇರಿತು. ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ಯಕ್ಷಧ್ರುವ ಪಟ್ಲ ಫೌಂಡೇಶನ್, ಕತಾರ್ ಘಟಕದ ಗೌರವಾಧ್ಯಕ್ಷರಾದ ಡಾ. ಮೂಡಂಬೈಲು ರವಿ ಶೆಟ್ಟಿ, ಅಭ್ಯಾಗತರಾಗಿ ಶ್ರೀಮತಿ ಶೋಭಾ ಪುರುಷೋತ್ತಮ ಪೂಂಜ, ಸ್ಥಾಪಕಾಧ್ಯಕ್ಷ ಯಕ್ಷಧ್ರುವ ಶ್ರೀ ಪಟ್ಲ ಸತೀಶ್ ಶೆಟ್ಟಿ ಪಾಲ್ಗೊಂಡಿದ್ದರು. ಅತಿಥಿ ಗಣ್ಯರರಿಂದ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮ ಶುಭಾರಂಭಗೊಂಡಿತು.
ಈ ಬಾರಿಯ ಪಟ್ಲ ಸಂಭ್ರಮದಲ್ಲಿ ಅಭಿನವ ವಾಲ್ಮೀಕಿ ಬಿರುದಾಂಕಿತ ಬೊಟ್ಟಿಕೆರೆ ಪುರುಷೋತ್ತಮ ಪೂಂಜರ ಸಂಸ್ಮರಣೆಯನ್ನು ಹಮ್ಮಿಕೊಂಡಿದ್ದು, ತಾಯ್ನಾಡಿಂದ ಆಗಮಿಸಿದ್ದ ಪೂಂಜರ ಶಿಷ್ಯ ಶ್ರೀ ದೀವಿತ್ ಕೋಟ್ಯಾನ್ ರವರು ಪೂಂಜರಿಗೆ ನುಡಿನಮನ ಸಲ್ಲಿಸಿದರು. ಶ್ರೀಮತಿ ಶೋಭಾ ಪುರುಷೋತ್ತಮ ಪೂಂಜರನ್ನು ಶಾಲು ಸ್ಮರಣಿಕೆ, ಹಣ್ಣುಹಂಪಲು, ಸಮ್ಮಾನ ಪತ್ರದ ಮೂಲಕ ಗೌರವಿಸಲಾಯಿತು. ಮುಖ್ಯ ಅತಿಥಿ ಡಾ.ಮೂಡಂಬೈಲು ರವಿ ಶೆಟ್ಟಿಯವರನ್ನು ಸಾಂಪ್ರದಾಯಿಕವಾಗಿ ಸಮ್ಮಾನಿಸಲಾಯಿತು.
ಅತಿಥಿಗಳ ಭಾಷಣದಲ್ಲಿ ಡಾ ರವಿ ಶೆಟ್ಟಿಯವರು ಅಶಕ್ತ ಕಲಾವಿದರಿಗೆ ವಿವಿಧ ಯೋಜನೆಗಳ ಸೇವಾ ಸಹಾಯನ್ನು ದೇಶವಿದೇಶಗಳ ಕಲಾಭಿಮಾನಿಗಳ ಸಹಕಾರದಿಂದ ನೀಡುತ್ತಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಯಶೋಗಾಥೆಯನ್ನು ಅಭಿನಂದಿಸಿದರು. ಸ್ಥಾಪಕಾಧ್ಯಕ್ಷರಾದ ಶ್ರೀ ಪಟ್ಲ ಸತೀಶ್ ಶೆಟ್ಟಿಯವರು ಕೀರ್ತಿಶೇಷ ಬೊಟ್ಟಿಕೆರೆ ಬೊಟ ಫೌಂಡೇಶನ್ ವಿವಿಧ ಯೋಜನೆಗಳು, ಯಕ್ಷಶಿಕ್ಷಣ ಅಭಿಯಾನದ ಬಗ್ಗೆ ಉಲ್ಲೇಖಿಸಿದರು. ಬಹರೈನ್ ಸೌದಿ ಘಟಕದ
ಗೌರವಾಧ್ಯಕ್ಷರಾದ ಶ್ರೀ ಸುಭಾಶ್ಚಂದ್ರ ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಧ್ಯೇಯೋದ್ದೇಶಗಳು ಸಾಕಾರವಾಗುವಂತೆ ಶುಭಹಾರೈಸಿದರು. ವೇದಿಕೆಯಲ್ಲಿ ಕನ್ನಡ ಸಂಘ ಬಹರೈನ್ ಅಧ್ಯಕ್ಷರಾದ ಶ್ರೀ ಅಮರನಾಥ್ ರೈ, ಘಟಕದ ಗೌರವ ಶ್ರೀ ಗೋಪಾಲ್ ಶೆಟ್ಟಿ, ಕಲಾಪೋಷಕ ಶ್ರೀ ರವಿ ಕರ್ಕೇರ, ಸೌದಿ ಅರೇಬಿಯ ಉಪಸ್ಥಿತರಿದ್ದರು. ಪಟ್ಲ ಸಂಭ್ರಮದ ಕಲಾಪೋಷಕರನ್ನು ಗೌರವ ಸ್ಮರಣಿಕೆಯ ಮೂಲಕ ಅಭಿನಂದಿಸಲಾಯಿತು.
ಸ್ಥಾಪಕಾಧ್ಯಕ್ಷರಾದ ಶ್ರೀ ರಾಜೇಶ್ ಬಿ. ಶೆಟ್ಟಿಯವರು ಪ್ರಾಸ್ತಾವಿಕ ನುಡಿಯನ್ನಾಡಿದರು. ಶ್ರೀ ಕಮಲಾಕ್ಷ ಅಮೀನ್ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಶ್ರೀ ನರೇಂದ್ರ ಶೆಟ್ಟಿ ವಂದನಾರ್ಪಣೆಗೈದರು. ಸಾಂಪ್ರದಾಯಿಕ ವಿಶೇಷ ರಂಗಸ್ಥಳ – ದಿ. ಬೊಟ್ಟಿಕೆರೆ ಪುರುಷೋತ್ತಮ ಪೂಂಜ ರಂಗಮಂಟಪದಲ್ಲಿ ಪುರುಷೋತ್ತಮ ಪೂಂಜ ವಿರಚಿತ “ಮಾನಿಷಾದ” ಯಕ್ಷಗಾನ ಪ್ರದರ್ಶನವನ್ನು ಬಹರೈನ್ ಹಾಗೂ ಸೌದಿಯ ಯಕ್ಷಗಾನ ಕಲಾವಿದರು ಮತ್ತು ಅತಿಥಿ ಕಲಾವಿರ ಸಮಾಗಮದಲ್ಲಿ ನೂರಾರು ಕಲಾಪ್ರೇಕ್ಷಕರು ವೀಕ್ಷಿಸಿದರು. ನಾಟ್ಯಗುರು ಶ್ರೀ ದೀಪಕ್ ರಾವ್ ಪೇಜಾವರ್ ರವರ ನಿರ್ದೇಶನದಲ್ಲಿ ಸ್ಥಳೀಯ ಕಲಾವಿದರು, ತಾಯ್ನಾಡಿಂದ ಆಗಮಿಸಿದ್ದ ತೆಂಕು- ಬಡಗು ತಿಟ್ಟಿನ ಸುಪ್ರಸಿದ್ಧ ಯಕ್ಷಗಾನ ಕಲಾವಿದ ಶ್ರೀ ಶಶಿಕಾಂತ್ ಶೆಟ್ಟಿ ಕಾರ್ಕಳರವರು ಸ್ವೈರಿಣಿ ಹಾಗೂ ಸೀತೆಯ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದರು. ಯುವ ಹಿಮ್ಮೇಳವಾದಕ ಶ್ರೀ ರೋಹಿತ್ ಉಚ್ಚಿಲ್ ರು ತಮ್ಮ ಚೆಂಡೆ – ಮದ್ದಳೆಯ ಕೈಚಳಕದಿಂದ ಮಿಂಚಿದರು. ದುಬೈಯ ಹಿರಿಯ ಯಕ್ಷಗಾನ ಕಲಾವಿದ, ನಾಟ್ಯಗುರು ಶ್ರೀ ಶೇಖರ್ ಶೆಟ್ಟಿಗಾರ್ ಕಿನ್ನಿಗೋಳಿಯವರು ಶ್ರೀರಾಮನ ಪಾತ್ರದಲ್ಲಿ ಹೃದಯಂಗಮವಾಗಿ ಅಭಿನಯಿಸಿದರು.
ಯಕ್ಷಧ್ರುವ ಶ್ರೀ ಪಟ್ಲ ಸತೀಶ್ ಶೆಟ್ಟಿಯವರ ಸಿರಿಕಂಠದ ಭಾಗವತಿಕೆ, ಯುವ ಭಾಗವತ ಶ್ರೀ ರೋಶನ್ ಎಸ್. ಕೋಟ್ಯಾನ್ ಸುಶ್ರಾವ್ಯ ಭಾಗವತಿಕೆಯೊಂದಿಗೆ ಸ್ಥಳೀಯ ಹಿಮ್ಮೇಳ ಕಲಾವಿದರಾದ ಧನಂಜಯ ಕಿನ್ನಿಗೋಳಿ, ಗಣೇಶ್ ಕಟೀಲು, ಅಕ್ಷಿತ್ ಸುವರ್ಣ ಪಾಲ್ಗೊಂಡಿದ್ದರು. ಹಿರಿಯ ಕಲಾವಿದ ಶ್ರೀ ಮೋಹನ್ ಎಡನೀರು ನಿರ್ವಹಣೆ ಸಹಕಾರ ನೀಡಿದ್ದರು. ಘಟಕದ ಪ್ರಧಾನ ಸಂಚಾಲಕ ಶ್ರೀ ರಾಮಪ್ರಸಾದ್ ಅಮ್ಮೆನಡ್ಕ ವೇಷಭೂಷಣ ಹಾಗೂ ಸಮಗ್ರ ನಿರ್ವಹಣೆ ವಹಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಸಭಿಕರಿಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು.