ಯಕ್ಷಗಾನ ಕಲಾವಿದರ ಶ್ರೇಯೋಭಿವೃದ್ಧಿಗಾಗಿ ಪ್ರಖ್ಯಾತ ಭಾಗವತರಾದ ಪಟ್ಲ ಸತೀಶ್ ಶೆಟ್ಟಿಯವರು ತನ್ನ ಸಮಾನ ಮನಸ್ಕ ಅಭಿಮಾನಿ ಬಂಧುಗಳೊಂದಿಗೆ 2015 ರಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಾನದಲ್ಲಿ ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸಂಸ್ಥೆಯನ್ನು ಸ್ಥಾಪಿಸಿ, ಆ ಮೂಲಕ ಟ್ರಸ್ಟ್, 8 ವರ್ಷಗಳಲ್ಲಿ ಸರಿಸುಮಾರು 11 ಕೋಟಿಗೂ ಅಧಿಕ ಮೊತ್ತವನ್ನು ವಿವಿಧ ಸೇವಾ ಯೋಜನೆಗಳಿಗಾಗಿ ವೆಚ್ಚ ಮಾಡಿರುತ್ತದೆ. ಈಗಾಗಲೇ ದೇಶ ವಿದೇಶಗಳಲ್ಲಿ ಒಟ್ಟು 38 ಘಟಕಗಳನ್ನು ಹೊಂದಿದ್ದು , ನವೆಂಬರ್ 2ನೇ ತಾರೀಕಿನಂದು 39ನೇ ಘಟಕವು ಗೋವಾದ ಪಣಜಿಯ ಇನ್ಸ್ಟಿಟ್ಯೂಟ್ ಮೆನೆಜಸ್ ಬ್ರಗಾನ್ಙಾ ಸಭಾಗೃಹದಲ್ಲಿ ಉದ್ಘಾಟನೆಯಾಗಲಿದೆ.
ಈ ಕಾರ್ಯಕ್ರಮಕ್ಕೆ ಭಾರತ ಸರಕಾರದ ರಾಜ್ಯ ಸಚಿವರಾದ ಶ್ರೀ ಶ್ರೀಪಾದ ನಾಯ್ಕ್ ಅವರು ಉದ್ಘಾಟಕರಾಗಿ ಆಗಮಿಸಲಿದ್ದಾರೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಪ್ರಧಾನ ಅರ್ಚಕರಾದ ವಿದ್ವಾನ್ ಕಮಲಾದೇವಿ ಪ್ರಸಾದ ಅಸ್ರಣ್ಣ ರವರು ಆಶೀರ್ವಚನ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಗೌರವಾಧ್ಯಕ್ಷರಾದ ಶ್ರೀ ಕನ್ಯಾನ ಸದಾಶಿವ ಶೆಟ್ಟಿಯವರು ವಹಿಸಿಕೊಳ್ಳಲಿದ್ದು, ಗೋವಾ ಘಟಕದ ಅಧ್ಯಕ್ಷರಾದ ಉದ್ಯಮಿ ಗಣೇಶ್ ಶೆಟ್ಟಿ ಹಾಗೂ ಗೌರವಾಧ್ಯಕ್ಷರಾದ ಉದ್ಯಮಿ ವಿಜಯೇಂದ್ರ ಶೆಟ್ಟಿಯವರು ಗೌರವ ಉಪಸ್ಥಿತರಿರುವರು.
ಕಾರ್ಯಕ್ರಮದಲ್ಲಿ ಅಮೃತೇಶ್ವರಿ ಮೇಳ, ಕಮಲಶಿಲೆ ಮೇಳ ಮತ್ತು ಮಾರಣಕಟ್ಟೆ ಮೇಳದ ಮೂರು ಕಲಾವಿದರನ್ನು ಸನ್ಮಾನಿಸಿ ಆರ್ಥಿಕ ನೆರವನ್ನು ಘಟಕದ ಮೂಲಕ ನೀಡಲಾಗುವುದು. ಕೊನೆಯಲ್ಲಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ, ನಡೂರು ಮಂದಾರ್ತಿ ಇವರಿಂದ ಶಿವದೂತ ಪಂಜುರ್ಲಿ ಯಕ್ಷಗಾನ ಪ್ರದರ್ಶನ ಜರಗಲಿದೆ.