ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಅಂಗವಾಗಿ ಬಂಟ್ಸ್ ಹಾಸ್ಟೇಲ್ ನ ಓಂಕಾರ ನಗರದಲ್ಲಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯ ದೇವಸ್ಥಾನಗಳ ಬಂಟ ಆಡಳಿತ ಮೊಕ್ತೇಸರರಿಗೆ ಗೌರವಾರ್ಪಣೆ ಕಾರ್ಯಕ್ರಮ ಬುಧವಾರ ಬೆಳಗ್ಗೆ ನಡೆಯಿತು.
ಪ್ರಾಸ್ತಾವಿಕ ಮಾತನ್ನಾಡಿದ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ಅವರು, “ಬಂಟ ಎಂದರೆ ಅದೊಂದು ಜಾತಿಯಲ್ಲ ಅದೊಂದು ಧರ್ಮ. ಯಾಕೆಂದರೆ ಬಂಟ ಸಮುದಾಯಕ್ಕೆ ಸಮಾಜದಲ್ಲಿ ಅದರದ್ದೇ ಆದ ಐತಿಹ್ಯವಿದೆ. ಇಂದು ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಬಂಟರನ್ನು ಸ್ಥಾನ ಪಲ್ಲಟ ಮಾಡುವಂತಹ ಯೋಜನೆ ಹಿಂದಿನಿಂದ ನಡೆಯುತ್ತಿದೆ. ಹೀಗಾಗಿ ಬಂಟರು ಸಂಘಟಿತರಾಗಬೇಕು. ನಮ್ಮ ಹಕ್ಕು, ಕರ್ತವ್ಯಗಳನ್ನು ಮರೆಯದೆ ನಮ್ಮತನವನ್ನು ಉಳಿಸಿಕೊಳ್ಳಬೇಕು” ಎಂದರು. ಕಾರ್ಯಕ್ರಮವನ್ನು ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಬಳಿಕ ಸಭೆಯನ್ನು ಉದ್ದೇಶಿಸಿ ಆಶಯದ ನುಡಿಗಳನ್ನಾಡಿದ ಜಾನಪದ ವಿದ್ವಾಂಸ ಡಾ.ವೈ.ಎನ್. ಶೆಟ್ಟಿ ಅವರು, “ಎಲ್ಲಿ ಭೂಮಿ ಶ್ವಾಸವನ್ನು ಪಡೆಯುತ್ತದೆಯೋ ಅಲ್ಲಿ ದೇವರಿದ್ದಾನೆ. ಭೂಮಿಯಡಿ ದೀಪ ಇಟ್ಟರೂ 24 ಗಂಟೆಗಳ ಕಾಲ ದೀಪ ಉರಿಯುತ್ತಿದ್ದರೆ ಅಲ್ಲಿ ದೇವರ ಇರುವಿಕೆ ಇರುತ್ತದೆ. ದೇವರಿಗೆ ಮೂರು ಹೊತ್ತು ಪೂಜೆ ನಡೆಯುತ್ತದೆ. ಅದನ್ನು ನಿರ್ವಹಿಸುವವರು ಮೊಕ್ತೇಸರರು. ಬಂಟ ಸಮುದಾಯದಲ್ಲಿ ದೇವಸ್ಥಾನ, ದೈವಸ್ಥಾನಗಳ ಜವಾಬ್ದಾರಿ ನಿರ್ವಹಿಸುತ್ತಿರುವ ನೂರಾರು ಮಂದಿ ಹಿರಿಯರಿದ್ದಾರೆ. ಅವರನ್ನು ಗುರುತಿಸಿ ಸನ್ಮಾನಿಸುವ ಬಂಟರ ಸಂಘದ ಕಾರ್ಯಕ್ರಮ ಸ್ತುತ್ಯರ್ಹವಾದುದು” ಎಂದರು.
ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಅಪ್ಪಣ್ಣ ಹೆಗ್ಡೆ ಮಾತನಾಡಿ, “ದೇವರ ಗುಡಿಯಲ್ಲಿದ್ದ ಗಣಪನನ್ನು ಇಲ್ಲಿ ಬಯಲಿನಲ್ಲಿ ಕೂರಿಸಿ ಪೂಜಿಸಲಾಗುತ್ತಿದೆ. ಬಂಟರು ದೈವಭಕ್ತರು. ಜಿಲ್ಲೆಯ ಬಹುತೇಕ ದೇವಸ್ಥಾನಗಳಲ್ಲಿ ಹೆಚ್ಚಿನ ಕೊಡುಗೆ ನೀಡುವುದು ಬಂಟರೇ ಆಗಿದ್ದಾರೆ. ಆದರೂ ಸಮುದಾಯದಲ್ಲಿ ಪರಸ್ಪರ ಭಿನ್ನಮತದಿಂದಾಗಿ ಒಗ್ಗಟ್ಟು ಕಾಣೆಯಾಗುತ್ತಿದೆ. ನಾವು ಒಗ್ಗಟ್ಟಿನಿಂದ ಇದ್ದರೆ ನಮ್ಮನ್ನು ಯಾರೂ ಅಲ್ಲಾಡಿಸಲು ಸಾಧ್ಯವಿಲ್ಲ. ಇದನ್ನು ಬಂಟ ಸಮಾಜ ಅರ್ಥ ಮಾಡಿಕೊಳ್ಳಬೇಕು” ಎಂದರು. ಉದ್ಯಮಿ ಎ.ಜೆ ಶೆಟ್ಟಿ ಮಾತನಾಡಿ, “ಬಂಟ ಸಮುದಾಯ ಒಟ್ಟು ಸೇರಿದರೆ ಇಲ್ಲಿ ದೇವಸ್ಥಾನ ನಿರ್ಮಿಸುವುದು ಕಷ್ಟವೇನಲ್ಲ. ಮುಂದಿನ ದಿನಗಳಲ್ಲಿ ಬಂಟ ಸಮುದಾಯದ ಹಿರಿಯರು ಆ ನಿಟ್ಟಿನಲ್ಲಿ ಯೋಚಿಸಬೇಕು” ಎಂದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಅಪ್ಪಣ್ಣ ಹೆಗ್ಡೆ, ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಡಾ.ಎ.ಜೆ. ಶೆಟ್ಟಿ, ಮಲಬಾರ್ ದೇವಸ್ವಂ ಬೋರ್ಡ್ ಸದಸ್ಯ ಶಂಕರ್ ರೈ ಮಂಟಾಡಿ, ದ.ಕ. ಜಿಲ್ಲಾ ಸಂಚಾಲಕ ಬಿ.ನಾಗರಾಜ್ ಶೆಟ್ಟಿ, ಕಾಸರಗೋಡು ಜಿಲ್ಲಾ ಸಂಚಾಲಕ ಸಂಜೀವ ಶೆಟ್ಟಿ, ಬಂಟರ ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಂ. ಶೆಟ್ಟಿ, ಕೋಶಾಧಿಕಾರಿ ಸಿ.ಎ. ರಾಮ ಮೋಹನ್ ರೈ, ಸಂಜೀವ ಶೆಟ್ಟಿ ಸಂಪಿಗೆ ಅಡಿ ಮತ್ತಿತರರು ಉಪಸ್ಥಿತರಿದ್ದರು. ಸಂಚಾಲಕ ಬಿ ಶೇಖರ ಶೆಟ್ಟಿ ಸನ್ಮಾನಿತರನ್ನು ಪರಿಚಯಿಸಿದರು. ಪುರುಷೋತ್ತಮ ಭಂಡಾರಿ ಅಡ್ಯಾರ್ ಕಾರ್ಯಕ್ರಮ ನಿರೂಪಿಸಿದರು. ಸಮನ್ವಯಕಾರರಾದ ಉಲ್ಲಾಸ್ ಶೆಟ್ಟಿ ಪೆರ್ಮುದೆ ಅತಿಥಿಗಳನ್ನು ಸ್ವಾಗತಿಸಿದರು. ಸತೀಶ್ ಶೆಟ್ಟಿ ಕೊಡಿಯಾಲ್ ಬೈಲ್ ವಂದನಾರ್ಪಣೆಗೈದರು.