ದ.ಕ, ಉಡುಪಿ ಹಾಗೂ ಕಾಸರಗೋಡು ಜಿಲ್ಲಾ ಕಂಬಳ ಸಮಿತಿಯ ಸರ್ವ ಸದಸ್ಯರ ಸಭೆಯಲ್ಲಿ ಮುಂದಿನ ಎರಡು ವರ್ಷಗಳ ಅವಧಿಗೆ ಸಮಿತಿಯ ಅಧ್ಯಕ್ಷರಾಗಿ ಐಕಳಬಾವ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ನೂತನ ಅಧ್ಯಕ್ಷರಿಗೆ ನಿಕಟಪೂರ್ವ ಅಧ್ಯಕ್ಷ ಎರ್ಮಾಳು ರೋಹಿತ್ ಹೆಗ್ಡೆ ಅವರು ಅಧಿಕಾರ ಹಸ್ತಾಂತರಗೈದರು. ಕಂಬಳ ಸಮಿತಿಯ ನೂತನ ಕಾರ್ಯಾಧ್ಯಕ್ಷರಾಗಿ ಗುಣಪಾಲ ಕಡಂಬ, ಪ್ರಧಾನ ಕಾರ್ಯದರ್ಶಿಯಾಗಿ ಲೋಕೇಶ್ ಶೆಟ್ಟಿ ಮುಚ್ಚೂರು ಹಾಗೂ ಕೋಶಾಧಿಕಾರಿಯಾಗಿ ಚಂದ್ರಹಾಸ ಸಾಧು ಸನಿಲ್, ತೀರ್ಪುಗಾರರ ಸಂಚಾಲಕರಾಗಿ ವಿಜಯ ಕುಮಾರ್ ಕಂಗಿನಮನೆ ಆಯ್ಕೆಯಾಗಿದ್ದಾರೆ.
ನವೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಕಂಬಳದ ಪೂರ್ವ ತಯಾರಿಯ ಬಗ್ಗೆ ಶಾಸಕ ಅಶೋಕ್ ರೈ ಮಾಹಿತಿಯಿತ್ತರು. ಕಂಬಳದ ಸೊಬಗನ್ನು ರಾಜ್ಯ ರಾಜಧಾನಿಯಲ್ಲಿ ಪಸರಿಸಲು ಎಲ್ಲರ ಬೆಂಬಲವನ್ನೂ ಶಾಸಕ ರೈ ಬಯಸಿದರು.
ನವೆಂಬರ್ನಲ್ಲಿ ಆರಂಭವಾಗಲಿರುವ ಕಂಬಳ ಋತುವನ್ನು ಶಿಸ್ತುಬದ್ಧವಾಗಿ ನಡೆಸಬೇಕು. 24 ಗಂಟೆಯೊಳಗೆ ಕಂಬಳವನ್ನು ಮುಗಿಸಬೇಕು. ಈ ಕುರಿತಾಗಿ ಸರಕಾರದ ಆದೇಶವನ್ನು ಎಲ್ಲರೂ ಪಾಲಿಸುವಂತೆ ಶಿಸ್ತು ಸಮಿತಿಯ ಅಧ್ಯಕ್ಷ ಇರ್ವತ್ತೂರು ಭಾಸ್ಕರ ಕೋಟ್ಯಾನ್ ಸಭೆಯಲ್ಲಿ ತಿಳಿಸಿದರು.
ಸೆ. 18: ಕಂಬಳ ದಿನಾಂಕ ಘೋಷಣೆ
ಕಂಬಳದ ವ್ಯವಸ್ಥಾಪಕರಿಗೆ ಕಂಬಳ ನಡೆಸುವ ಮಾರ್ಗಸೂಚಿಯನ್ನು ನೀಡಲು ಸೆ. 18ರಂದು ಸಂಜೆ 3ಕ್ಕೆ ಮೂಡುಬಿದಿರೆಯಲ್ಲಿ ಕಂಬಳ ಸಮಿತಿಯ ಸಭೆ ಕರೆಯಲಾಗಿದೆ. ಆ ದಿನದಂದೇ ಮುಂದಿನ ಸಾಲಿನ ವಿವಿಧ ಕಂಬಳಗಳ ದಿನಾಂಕವನ್ನೂ ಘೋಷಿಸಲಾಗುವುದೆಂದು ಭಾಸ್ಕರ ಕೋಟ್ಯಾನ್ ಹೇಳಿದರು.
ಸಭೆಯಲ್ಲಿ ಮೂಲ್ಕಿ ಅರಸು ಕಂಬಳದ ದುಗ್ಗಣ್ಣ ಸಾವಂತರು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಬಾರಕೂರು ಶಾಂತಾರಾಮ ಶೆಟ್ಟಿ, ಕೊಳಚೂರು ಕೊಂಡೆಟ್ಟು ಸುಕುಮಾರ ಶೆಟ್ಟಿ, ನಂದಳಿಕೆ ಶ್ರೀಕಾಂತ ಭಟ್, ಪಿ. ಆರ್. ಶೆಟ್ಟಿ, ನವೀನ್ಚಂದ್ರ ಆಳ್ವ, ಅನಿಲ್ ಶೆಟ್ಟಿ, ಸತೀಶ್ಚಂದ್ರ ಸಾಲ್ಯಾನ್, ಚಂದ್ರಹಾಸ್ ಶೆಟ್ಟಿ ಪುತ್ತೂರು, ರಕ್ಷಿತ್ ಶೆಟ್ಟಿ, ಐಕಳಬಾವ ಚಿತ್ತರಂಜನ್ ಭಂಡಾರಿ, ರವೀಂದ್ರ ಕುಮಾರ್ ಮಾಳ, ದಿನೇಶ್ ಶೆಟ್ಟಿ ಮತ್ತು ರಾಜೇಶ್ ಶೆಟ್ಟಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.
ಕಂಬಳ ಸಮಿತಿಯ ಸದಸ್ಯರು, ವ್ಯವಸ್ಥಾಪಕರು, ಕೋಣಗಳ ಯಜಮಾನರು, ಓಟಗಾರರು ಹಾಗೂ ಕಂಬಳಾಭಿಮಾನಿಗಳು ಸಭೆಯಲ್ಲಿದ್ದರು. ರಕ್ಷಿತ್ ಜೈನ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.