ಆಷಾಡ, ಶ್ರಾವಣ ಮಾಸ ಬಂತೆಂದರೆ ಹೆಚ್ಚಿನ ಮನೆಗಳಲ್ಲಿ ಸಾಮಾನ್ಯವಾಗಿ ಪತ್ರೊಡೆ ತಿಂಡಿ ಮಾಡುವ ರೂಢಿ ಇಂದಿಗೂ ಇದೆ. ಅದರಲ್ಲೂ ಇತ್ತೀಚೆಗೆ ಹಳ್ಳಿಗಳಿಗಿಂತ ನಗರ ವಾಸಿಗಳೇ ಕೆಸವಿನ ಎಲೆಗಳನ್ನು ಹೆಚ್ಚು ಆಹಾರದಲ್ಲಿ ಬಳಸುತ್ತಾರೆ ಎಂಬ ವಿಚಾರ ಆಶ್ಚರ್ಯವಾದರೂ ಸತ್ಯ. ಮೂಲತಃ ದಕ್ಷಿಣ ಕನ್ನಡ, ಉತ್ತರಕನ್ನಡ, ಶಿವಮೊಗ್ಗಗಳಲ್ಲಿನ ನಿವಾಸಿಗಳು ಮಹಾರಾಷ್ಟ್ರ, ಮುಂಬಯಿ, ಬೆಂಗಳೂರು ನಗರ ಪ್ರದೇಶಗಳಲ್ಲಿ ವಾಸಿಸುವವರು ಹೆಚ್ಚು ಬಳಸುತ್ತಾರೆ.
ಆಹಾರದಲ್ಲಿ ನೈಸರ್ಗಿಕವಾಗಿ ಋತುಮಾನದಲ್ಲಿ ಸಿಗುವ ಕೆಸು ಆರೋಗ್ಯಕ್ಕೆ ವಿಶೇಷ ರಕ್ಷಣೆ ನೀಡುತ್ತದೆ ಎಂದು ಕೆಸುವಿನ ಎಲೆಯಲ್ಲಿ ಮಾಡುವ ಖಾದ್ಯವನ್ನು ಕೇಂದ್ರ ಆಯಷ್ ಸಚಿವಾಲಯದ ಆಯುಷ್ ವೈದ್ಯ ಪದ್ದತಿಯು ಸಾಂಪ್ರದಾಯಕ ಆಹಾರ ಎಂಬ ಹೆಗ್ಗಳಿಕೆ ನೀಡಿದೆ. ಸಚಿವಾಲಯ ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದ 26 ಸಂಪ್ರದಾಯಿಕ ಆಹಾರಗಳಲ್ಲಿ ಪತ್ರೊಡೆಯೂ ಸೇರಿದೆ. ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ಉಪಯೋಗಿಸುವುದು ಮಾತ್ರವಲ್ಲ ಹೆಚ್ಚಿನ ಸಸ್ಯಹಾರ ಹೋಟೆಲ್ ಗಳಲ್ಲಿ, ಆಷಾಢ ಕೂಟಗಳಲ್ಲಿ ಪತ್ರೊಡೆ ಮೆನುಗಳಲ್ಲಿ ಕಾಣಸಿಗುತ್ತದೆ.
ಮಳೆ ಬಂತೆಂದರೆ ಹಿತ್ತಲು, ಗದ್ದೆ, ತೋಟದಲ್ಲಿ ಹೆಚ್ಚು ನೀರು ನಿಲ್ಲುವ ಸ್ಥಳ, ಕೆರೆ, ಬಾವಿಕಟ್ಟೆಯ ಸುತ್ತಾ, ಬಚ್ಚಲು ಮನೆಯ ಹಿಂಬದಿ, ತಗ್ಗು ಪ್ರದೇಶ ಅಥವಾ ಹೆಚ್ಚು ತೇವವಿರುವ ಪ್ರದೇಶಗಳಲ್ಲಿ ಹೃದಯದ ಆಕಾರದಲ್ಲಿ ಬಾನಿಗೆ ಮುಖವಾಗಿ ಮಲಗಿದಂತೆ ಇರುವ ಕೆಸುವಿನ ಎಲೆ, ಗಡ್ಡೆ, ದಂಟು, ಎಲೆಗಳನ್ನು ಆಹಾರವಾಗಿ ಬಳಸಲಾಗುತ್ತದೆ. ವೈವಿದ್ಯಮಯ ಖಾದ್ಯಗಳಿಗೆ ಅದರಲ್ಲೂ ಪತ್ರೊಡೆ ಸಿಹಿ, ಖಾರ, ಹುಳಿ ವಿಶ್ರಣದ ರುಚಿಯಲ್ಲಿ ಮೂಡಿದಾಗ ಬಾಯಿ ಚಪ್ಪರಿಸಿ ತಿನ್ನುವವರೆ ಹೆಚ್ಚು.
ಕೆಸುವಿನ ಎಲೆಗಳನ್ನು ಚೆನ್ನಾಗಿ ಒರಸಿ ಅದರ ನಾರು ತೆಗೆದು ನೆನಸಿ ಇಟ್ಟ ಅಕ್ಕಿ, ಹುಳಿ, ಬೆಲ್ಲ, ಉಪ್ಪು, ಕೊತ್ತಂಬರಿ, ಮೆಂತೆ, ಒಣಮೆಣಸ್ಸು, ತೆಂಗಿನಕಾಯಿ ಕಡೆದು ಎಲೆಯ ಎರಡು ಮಗ್ಗುಲಿಗೆ ಕಡೆದು ಇಟ್ಟ ಹಿಟ್ಟನ್ನು ಹಚ್ಚಿ ಸುರುಳಿ ಮಾಡಿ ಇದನ್ನು ಆವಿ ಪಾತ್ರೆಯಲ್ಲಿ ಬೇಯಿಸಬೇಕು. ಬೆಂದು ಆರಿದ ಮೇಲೆ ತೆಳ್ಳಗೆ ಕತ್ತರಿಸಿ ಹಂಚಿಗೆ ಎಣ್ಣೆ ಅಥವಾ ತುಪ್ಪ ಒರಸಿ ಎರಡು ಮಗ್ಗುಲುಗಳನ್ನು ಕಾಯಿಸಿ ಬಿಸಿ, ಬಿಸಿ ತಿನ್ನಲು ಬಹುರುಚಿ.
ಇನ್ನೊಂದು ವಿಧದಲ್ಲೂ ಪತ್ರೊಡೆ ಮಾಡಬಹುದು. ಮೇಲೆ ಹೇಳಿದಂತೆ ಮಸಾಲೆ ಕಡೆದು ಅದಕ್ಕೆ ಕೆಸವಿನ ಎಲೆಗಳನ್ನು ಕತ್ತರಿಸಿ ಮಸಾಲೆಗೆ ಹಾಕಿ ಆವಿ ಪಾತ್ರೆಯಲ್ಲಿ ಇಡ್ಲಿ ಬೇಯಿಸಿದಂತೆ ಬೇಯಿಸಿ ತೆಗೆದು ಸಣ್ಣ ತುಂಡು ಕಾಯಿಸಿ ಬೆಣ್ಣೆ, ತುಪ್ಪದೊಂದಿಗೆ ಸವಿಯಬಹುದು. ಮತ್ತೊಂದು ಬಗೆಯಲ್ಲಿ ಕೆಸವಿನ ಎಲೆಗಳನ್ನು ಸಣ್ಣ ತುಂಡುಗಳನ್ನಾಗಿ ಕಡೆದ ಮಸಾಲೆಗೆ ಹಾಕಿ ಆವಿಯಲ್ಲಿ ಬೆಯಿಸಿ ತೆಗೆದು ಸಣ್ಣ ತುಂಡುಗಳಾಗಿ ಮಾಡಿ ಪದಾರ್ಥಕ್ಕೆ ಕಡೆದ ಮಸಾಲೆ ಒಳಗೆ ಸೇರಿಸಿ ಸಣ್ಣ ಉರಿಯಲ್ಲಿ ಸ್ವಲ್ಫ ಹೊತ್ತು ಕುದಿಸಬೇಕು. ಹೀಗೆ ಮನೆಯ ಹಿತ್ತಲು ತೋಟಗಳಲ್ಲಿ ಬೆಳೆದ ಕೆಸವಿನ ಎಲೆಗಳು ಜನಪ್ರಿಯ ತಿನಿಸಾಗಿ ಮಾಡುತ್ತಾರೆ.
ಅರಣ್ಯ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಬೆಳೆಯುವ ಕೆಸವಿನ ಎಲೆ ಪೋಷಾಕಂಶಗಳ ಆಗರ. ಕೆಸವಿನ ದಂಟು ಎಲೆಯಲ್ಲಿ ಅದ್ಬುತ ಔಷದೀಯ ಗುಣಗಳನ್ನು ಹೊಂದಿದೆ. ಸಾಕಷ್ಟು ಕ್ಯಾಲೋರಿ ಹೊಂದಿರುವ ಅಧಿಕ ಕಾರ್ಬನ್, ಪ್ರೋಟಿನ್ ಹಾಗೂ ಕಬ್ಬಿಣಾಂಶವನ್ನು ಹೊಂದಿರುವ ಉತ್ತಮ ಸಸ್ಯಮೂಲ. ವಿಟಮಿನ್, ಬಿ.ಸಿ.ಇ., ಪ್ರೋಟಾಷಿಯಂ, ತಾಮ್ರ, ರಜಕ ಮೆಗ್ನಿಷಿಯಂ ಇದರಲ್ಲಿ ಹೇರಳವಾಗಿದೆ ಎನ್ನುತ್ತಾರೆ ಆಹಾರ ತಜ್ಞರು. ಶ್ರಿಮಂತ ಪೋಷಕಾಂಶಗಳ ಆಗರ. ಆಂಟಿ ಆಕ್ಸಿಡೆಂಟ್ ಅಂಶ ಇದರಲ್ಲಿ ಹೆಚ್ಚಿದೆ. ರೋಗ ನಿರೋಧಕವಾಗಿಯೂ ಕೆಲಸ ಮಾಡುತ್ತದೆ. ಮಳೆಗಾಲದಲ್ಲಿ ಮೈ ಬೆಚ್ಚಗಿಡಲು ಕೆಸವಿನ ಎಲೆ ಸೇವನೆ ಲಾಭದಾಯಕ. ಕೆಸವಿನ ಎಲೆ ಆಹಾರ ಶರೀರದ ಉಷ್ಣಾಂಶ ಹೆಚ್ಚಿಸುತ್ತದೆ. ಕೆಸವಿನ ಎಲೆಗಳಲ್ಲಿ ಔಷಧೀಯ ಅಂಶ ಹೊಂದಿದೆ. ವರ್ಷದಲ್ಲಿ 5 ಸಲವಾದರೂ ಕೆಸವಿನ ಎಲೆ ಸೇವನೆ ಆರೋಗ್ಯಕ್ಕೆ ಉತ್ತಮ. ಅದಕ್ಕಾಗಿ ಅಷ್ಟಮಿ, ಚೌತಿ, ದಸರಾ, ಕದಿರು ಕಟ್ಟುವ ಹಬ್ಬ, ನವರಾತ್ರಿ ಹೀಗೆ ವಿಶೇಷ ದಿನಗಳಲ್ಲಿ ಕೆಸವಿನ ಎಲೆ ಪದಾರ್ಥ ಸೇವನೆ ರೂಢಿಯಲ್ಲಿದೆ.
ಮರಕೆಸು ಹೆಚ್ಚು ರುಚಿ ಇದ್ದು ಇದರ ಎಲೆಗಳು ಈಗ ನಗರ ಪ್ರದೇಶದಲ್ಲಿ ಮಾರುವವರ ಸಂಖ್ಯೆ ಹೆಚ್ಚಾಗಿದೆ. ಹಳ್ಳಿಯ ಜನ ಬೆಟ್ಟ, ಕಾಡುಗಳಲ್ಲಿ ಮರಕೆಸು ಧಾರಾಳವಾಗಿ ಸಿಗುತ್ತದೆ. ದೊಡ್ಡ, ದೊಡ್ಡ ಮರಗಳ ಸಂದಿನಲ್ಲಿ ಮರದ ಪೊಟರಿನಲ್ಲಿ ಪರಾವಲಂಬಿ ಸಸ್ಯವಾಗಿ ಬೆಳೆಯುವ ಇದರ ಎಲೆಗಳನ್ನು ಕಿತ್ತು ಆಷಾಢ ಶುರುವಾಗುತ್ತಲೇ ನಗರ ಪ್ರದೇಶಗಳಿಗೆ ಸರಭರಾಜು ಮಾಡುತ್ತಾರೆ. ಒಂದು ಕಟ್ಟಿನಲ್ಲಿ 10 ರಿಂದ 12 ಎಲೆಗಳು ಇದ್ದು 20 ರಿಂದ 25 ರೂಪಾಯಿಗಳಿಗೆ ಮಾರಾಟವಾಗುತ್ತದೆ.
ಮರಕೆಸುವಿನ ಎಲೆಗೆ ಸ್ವಲ್ಫ ಹೆಚ್ಚು ರೇಟು. ಮುಂಬಯಿ ಮಾರುಕಟ್ಟೆಯಲ್ಲಿ ವರ್ಷದ 12 ತಿಂಗಳು ಕೆಸವಿನ ಎಲೆ ದೊರೆತು ಶ್ರಾವಣ ಹಾಗೂ ಆಷಾಢ ತಿಂಗಳಲ್ಲಿ ಬರುವ ಕೆಸವಿನ ಎಲೆ ಬಾಯಿ ತುರಿಕೆ ಇಲ್ಲದೆ, ರುಚಿಯಾಗಿದ್ದು ಅಗ್ಗವಾಗಿರುತ್ತದೆ.
ಹಿಂದಿನವರು ಪ್ರಕೃತಿ ಜನ್ಯ ವಸ್ತುವನ್ನು ಆಹಾರವಾಗಿ ಬಳಸುತ್ತಿದ್ದರು. ತೋಟ ಗದ್ದೆಗಳಲ್ಲಿ ಮಳೆಗಾಲದ ಸಮಯದಲ್ಲಿ ಹೇರಳವಾಗಿ ಬೆಳೆಯುವ ಪಾರಂಪರಿಕ ಆಹಾರ ಪದಾರ್ಥ ಕೆಸು. ಕೆಲವರು ಕೆಸು ಎನ್ನದೆ ಪತ್ರೊಡೆ ಎಲೆ ಎಂದು ಕರೆಯುತ್ತಾರೆ. ಹಿಂದಿಯಲ್ಲಿ ಅರ್ಬಿ, ಮರಾಠಿಯಲ್ಲಿ ಅಲೂ ಎನ್ನುತ್ತಾರೆ. ಕೆಸವಿನ ಎಲೆ ಬೆಳೆಗಾರರು ತಮ್ಮ ಉದ್ಯಮದಲ್ಲಿ ಕಳೆದ 5 ವರ್ಷಗಳಿಂದ ಕೈ ಸುಟ್ಟುಕೊಂಡಿಲ್ಲವಂತೆ. ಹಾಗಾದರೆ ಕೆಸವಿನ ಎಲೆಗೆ ಇತ್ತೀಚಿಗೆ ಡಿಮಾಂಡ್ ಇದೆ ಎನ್ನಬಹುದು.
ಒಟ್ಟಿನಲ್ಲಿ ಆಷಾಢ, ಶ್ರಾವಣ, ಹಬ್ಬ ಹರಿದಿನಗಳ ನೆಪದಲ್ಲಿಯಾದರೂ ಪತ್ರೊಡೆ ಸೇವಿಸುತ್ತಾ ಇರೋಣ. ನಮ್ಮ ಸಂಪ್ರದಾಯಕ ಆಹಾರ ಪದ್ದತಿಗೊಂದು ಜೈ.
ಲತಾ ಸಂತೋಷ ಶೆಟ್ಟಿ ಮುದ್ದುಮನೆ.