ಕರ್ನಾಟಕದ ದೂರದ ಊರುಗಳಿಂದ ನೀವೆಲ್ಲಾ ಈ ಮುಂಬಯಿ ಮಹಾನಗರಕ್ಕೆ ಬಂದು ನೆಲೆಸಿ ಸಂಘ – ಸಂಸ್ಥೆಗಳನ್ನು ಕಟ್ಟುವುದರ ಜೊತೆಗೆ ಸಮಾಜಪರ ಕೆಲಸಗಳನ್ನು ಮಾಡುತ್ತಿರುವಿರಿ. ಕರ್ನಾಟಕ ಸಂಘ ಅಂಧೇರಿ ಮುಖಾಂತರ ಕಳೆದ ಹತ್ತು ವರ್ಷಗಳಿಂದ ಯಾವುದೇ ಜಾತಿ – ಭೇದವಿಲ್ಲದೆ ನೀವು ವಿಧವೆಯರಿಗೆ ಮಾಸಾಶನ, ಆರ್ಥಿಕವಾಗಿ ಹಿಂದುಳಿದವರಿಗೆ ಶೈಕ್ಷಣಿಕ ಹಾಗೂ ವೈದ್ಯಕೀಯ ನೆರವನ್ನು ನೀಡುತ್ತಾ ಬಂದಿರುವಿರಿ. ಅಲ್ಲದೆ ಪ್ರತಿ ತಿಂಗಳು ಮನೆ – ಮನೆಗಳಲ್ಲಿ ಕನ್ನಡ ಎಂಬ ಕಾರ್ಯಕ್ರಮವನ್ನು ಆಯೋಜಿಸಿ ಯುವ ಜನಾಂಗದವರಲ್ಲಿ ಕನ್ನಡದ ಅಭಿರುಚಿ ಉಂಟು ಮಾಡುತ್ತಿದ್ದೀರಿ. ನಿಮ್ಮ ಕನ್ನಡ ಪರ ಹಾಗೂ ಸಮಾಜಪರ ಸೇವಾ ಕಾರ್ಯಗಳು ತುಂಬಾ ಮೆಚ್ಚುವಂತದ್ದು.
ಮಹಾರಾಷ್ಟ್ರದಲ್ಲಿ ಅಂದಾಜು 45 ಲಕ್ಷ ಜನ ಕನ್ನಡಿಗರಿದ್ದಾರೆ. 35ಕ್ಕೂ ಮಿಕ್ಕಿ ಕನ್ನಡ ಮಾಧ್ಯಮ ಶಾಲೆಗಳು ಮುಂಬಯಿಯಲ್ಲಿ ಇವೆ ಎಂಬುದಾಗಿ ತಿಳಿದು ಬಂದಿದೆ. ನಾಡಿನ ನೆಲ – ಜಲ – ಭಾಷೆಯ ಮೇಲೆ ನೀವೆಲ್ಲ ಅಪಾರ ಪ್ರೀತಿ ತೋರಿಸುತ್ತಿದ್ದೀರಿ. ಸಂಘ – ಸಂಸ್ಥೆಗಳ ಮುಖೇನ ನೀವೆಲ್ಲ ಸೇರಿ ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯಕ್ರಮಗಳನ್ನು ಈ ಮುಂಬಯಿ ಮಹಾನಗರದಲ್ಲಿ ಮಾಡುತ್ತಾ ಬರುತ್ತಿರುವುದು ಅಭಿನಂದನೀಯ. ಯಾವುದೇ ಸಹಾಯ, ಸಹಕಾರ ನೀಡಲು ಒಳ್ಳೆಯ ಮನಸ್ಸುಳ್ಳವರಿಂದ ಮಾತ್ರ ಸಾಧ್ಯ. ಕನ್ನಡವನ್ನು ಕಟ್ಟುವ ಕಾಯಕವು ಇಲ್ಲಿ ಸಂಘ – ಸಂಸ್ಥೆಗಳಿಂದ ನಿರಂತರವಾಗಿ ನಡೆಯುತ್ತಿರಬೇಕು. ಕನ್ನಡ ಸಂಸ್ಕೃತಿ, ಭಾಷೆಯ ಉನ್ನತಿಗೆ ಶ್ರಮಿಸುತ್ತಿರುವ ಸಂಘಗಳಿಗೆ ಸರಕಾರವು ವಿಶೇಷ ಅನುದಾನ ನೀಡುವ ಬಗ್ಗೆ ನಮ್ಮ ಇಲಾಖೆಯಿಂದ ಶಕ್ತಿ ಮೀರಿ ಕೆಲಸ ಮಾಡುತ್ತೇವೆ. ಇಂದು ಕನ್ನಡದ ಕಾರ್ಯಕ್ರಮದ ಮೂಲಕ ಹಬ್ಬದ ವಾತಾವರಣವನ್ನು ನೀವು ನಿರ್ಮಾಣ ಮಾಡಿದ್ದೀರಿ. ಮುಂಬಯಿ ಮಹಾನಗರದ ಕರ್ನಾಟಕದವರು ಶಕ್ತಿವಂತರು ಎಂದು ಕನ್ನಡ ಸಂಸ್ಕೃತಿ ಮತ್ತು ಹಿಂದುಳಿದ ವರ್ಗಗಳ ಇಲಾಖೆಯ ಸಚಿವರೂ ಹಾಗೂ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಿ, ಕರ್ನಾಟಕ ಸರಕಾರ ಇದರ ಅಧ್ಯಕ್ಷರಾದ ಶಿವರಾಜ್ ತಂಗಡಗಿಯವರು ನುಡಿದರು.
ಅವರು ಕುರ್ಲಾ ಪೂರ್ವದ ರಾಧಾಬಾಯಿ ಟಿ. ಭಂಡಾರಿ ಸಭಾಗೃಹ ಬಂಟರ ಭವನದಲ್ಲಿ ಕರ್ನಾಟಕ ಸಂಘ ಅಂಧೇರಿ ಪ್ರಸ್ತುತ ಪಡಿಸಿದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರಕಾರ, ಮುಂಬೈಯ ವಿವಿಧ ಕನ್ನಡಪರ ಸಂಘ – ಸಂಸ್ಥೆಗಳ ಸಹಯೋಗದಲ್ಲಿ ರಾಷ್ಟ್ರಭಕ್ತಿ, ನಾಡ ಪ್ರೀತಿ ಎಂಬ ಧ್ಯೇಯದೊಂದಿಗೆ ಹೊರನಾಡ ಕನ್ನಡ ಸಂಸ್ಕೃತಿ ಸಂಭ್ರಮ – 2023 ಮತ್ತು ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸವಿನೆನಪು, ಡಾ. ಎಂ.ಎನ್. ರಾಜೇಂದ್ರ ಕುಮಾರ್ ರವರಿಗೆ ಸಹಕಾರ ಭೂಷಣ ಪ್ರಶಸ್ತಿ ಪ್ರಧಾನದ ಉದ್ಘಾಟನಾ ಸಮಾರಂಭದಲ್ಲಿ ದೀಪವನ್ನು ಪ್ರಜ್ವಲಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕರ್ನಾಟಕ ಸರಕಾರ ಸಭಾಪತಿಗಳು, ಕರ್ನಾಟಕ ವಿಧಾನ ಪರಿಷತ್ ಬಸವರಾಜ ಹೊರಟ್ಟಿ ಅವರು ಮಾತನಾಡಿ, ಕರ್ನಾಟಕದಿಂದ ಹೊರಗಿದ್ದವರು ತುಂಬಾ ಒಗ್ಗಟ್ಟಿನಲ್ಲಿರುತ್ತಾರೆ. ಕನ್ನಡದ ಬಗ್ಗೆ ಅವರಿಗೆ ಅಭಿಮಾನ ಇರುತ್ತದೆ ಎಂಬುದಕ್ಕೆ ಮುಂಬಯಿ ನಗರದ ನೀವೆಲ್ಲಾ ಕನ್ನಡಿಗರು ಸಾಕ್ಷಿಯಾಗಿದ್ದೀರಿ. ನಿಮ್ಮ ಸ್ವಚ್ಛ ಕನ್ನಡ ಮತ್ತು ನಡವಳಿಕೆಯನ್ನು ಕಂಡು ತುಂಬಾ ಸಂತೋಷವಾಯಿತು. ಸಾಮಾನ್ಯ ಜನರಾಗಿ ಮುಂಬಯಿ ಮಹಾನಗರಕ್ಕೆ ಬಂದು ಕಠಿಣ ಪರಿಶ್ರಮದಿಂದ ನೀವು ಪ್ರತಿಯೊಂದು ಕ್ಷೇತ್ರದಲ್ಲಿ ಮಾಡಿರುವ ಸಾಧನೆ, ಸೇವೆಯಿಂದ ತುಂಬಾ ಹೆಮ್ಮೆಯಾಗುತ್ತದೆ. ನಾವು ಕೆಟ್ಟದನ್ನು ಬಯಸದೆ ನಮ್ಮ ಜನ್ಮಭೂಮಿ ಹಾಗೂ ಕರ್ಮಭೂಮಿಯನ್ನು ಪ್ರೀತಿಸಿ ಸೇವೆಯನ್ನು ಸಲ್ಲಿಸಬೇಕು. ಬೆಂಗಳೂರಿನಲ್ಲಿ ಶೇ.23 ಜನರು ಕನ್ನಡಿಗರಿದ್ದಾರೆ. ಬಾಕಿ ಉಳಿದವರು ವಿವಿಧ ರಾಜ್ಯದಿಂದ ಬಂದವರಾಗಿರುವರು. ಮಹಾರಾಷ್ಟ್ರದಲ್ಲಿ 45 ಲಕ್ಷ ಕನ್ನಡಿಗ ಜನರಿದ್ದಾರೆ. ನೀವೆಲ್ಲಾ ಜನ್ಮಭೂಮಿ ತೊರೆದು ಕರ್ಮಭೂಮಿ ಮುಂಬಯಿಯಲ್ಲಿ ನೆಲೆಸಿದರೂ ತಮ್ಮ ನಾಡಿನ ಆಚಾರ – ವಿಚಾರ, ಕಲೆ, ಸಂಸ್ಕೃತಿಯನ್ನು ಬಿಟ್ಟವರಲ್ಲ. ಮಹಾರಾಷ್ಟ್ರದ ಜನತೆಯೊಂದಿಗೆ ನೀವು ತುಂಬಾ ಸೌಹಾರ್ದತೆ, ಹೊಂದಾಣಿಕೆ, ಒಳ್ಳೆಯ ಸಂಬಂಧವನ್ನು ಇಟ್ಟುಕೊಂಡು ಬಾಳುತ್ತಿದ್ದೀರಿ. ನಿಮ್ಮಿಂದ ನಾವು ಕಲಿಯಬೇಕಾದದ್ದು ತುಂಬಾ ಇದೆ. ಮುಂಬಯಿ ಕನ್ನಡಿಗರು ಕರ್ನಾಟಕ ರಾಜ್ಯಕ್ಕೆ ದೊಡ್ಡ ಹೆಸರನ್ನು, ಕೊಡುಗೆಯನ್ನು ಕೊಟ್ಟಿದ್ದಾರೆ ಎಂದು ಹೇಳಲು ಅಭಿಮಾನವಾಗುತ್ತದೆ ಎಂದ ಬಸವರಾಜ ಹೊರಟ್ಟಿ ಅವರು ಮಂಗಳೂರು, ಉಡುಪಿ ಕಡೆಯ ಜನರು ತುಂಬಾ ಪ್ರಾಮಾಣಿಕರು ಹಾಗೂ ಕಠಿಣ ಪರಿಶ್ರಮಿಗಳು. ತಾವು ಗಳಿಸಿದ್ದನ್ನು ಇನ್ನೊಬ್ಬರಿಗೆ ಹಂಚುವ ದೊಡ್ಡ ಗುಣ ಅವರಲ್ಲಿದೆ. ನೀವೆಲ್ಲಾ ಸೇರಿ ಸಂಘ – ಸಂಸ್ಥೆಗಳ ಮುಖೇನ ಸಮಾಜ ಪರ ಹಾಗೂ ನಾಡು ನುಡಿಯ ಸೇವೆಯನ್ನು ಮಾಡುತ್ತಿದ್ದೀರಿ. ಕರ್ನಾಟಕ ಸಂಘ ಅಂಧೇರಿಯ ಸಮಾಜ ಪರ ಹಾಗೂ ಕನ್ನಡಪರ ಕಾರ್ಯ ಚಟುವಟಿಕೆಗಳು ಶ್ಲಾಘನೀಯವಾದುದು. ನಿಮ್ಮ ಸಂಸ್ಥೆಗೆ ನನ್ನ ತಾಯಿಯ ಹೆಸರಲ್ಲಿರುವ ಟ್ರಸ್ಟ್ ನಿಂದ 5 ಲಕ್ಷ ರೂ. ನೀಡುತ್ತೇನೆ. ಅದನ್ನು ನಿರಖು ಠೇವಣಿಯಲ್ಲಿಟ್ಟು ಅದರ ಬಡ್ಡಿಯಿಂದ ನೀವು ಶ್ರೇಷ್ಠ ಸಾಧಕರಿಗೆ ಹಾಗೂ ಸೇವಕರಿಗೆ ಪ್ರಶಸ್ತಿಯನ್ನು ವರ್ಷಂಪ್ರತಿ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಅಧ್ಯಕ್ಷರು, ಕರ್ನಾಟಕ ಸರಕಾರ ಮಾರಾಟ ಮಹಾಮಂಡಲ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರು ಡಾ.ಎಮ್. ಎನ್. ರಾಜೇಂದ್ರ ಕುಮಾರ್ ಅವರಿಗೆ ಸಹಕಾರ ಭೂಷಣ ಪ್ರಶಸ್ತಿ, ಖ್ಯಾತ ಶಿಕ್ಷಣ ತಜ್ಞರು ಸಾಹಿತಿಗಳ ಹಾಗೂ ಚಿಂತಕರು ಬೆಂಗಳೂರು ಪ್ರೊಫೆಸರ್ ಕೆ. ಇ. ರಾಧಾಕೃಷ್ಣನ್ ಅವರಿಗೆ ಕರುನಾಡ ಚೇತನ ಪ್ರಶಸ್ತಿಯನ್ನು ಪ್ರಧಾನಿಸಲಾಯಿತು. ಅಲ್ಲದೇ ಕರ್ನಾಟಕ ಸರಕಾರ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ನಿಕಟಪೂರ್ವ ಅಧ್ಯಕ್ಷ ಡಾ. ಸಿ. ಸೋಮಶೇಖರ (ಐ.ಎ.ಎಸ್.) ಹಾಗೂ ಸಮಾಜ ಸೇವಕರಾದ ಎಸ್ ಕೆ . ಸುಂದರ್, ಹಿರಿಯ ರಂಗ ಕಲಾವಿದ ಉಮೇಶ್ ಶೆಟ್ಟಿ, ತುಮಕೂರಿನ ಉದ್ಯಮಿ ಅಮರ್ ನಾಥ್ ಶೆಟ್ಟಿ ಕೆಂಜೂರು, ಅಣ್ಣಿ ಸಿ ಶೆಟ್ಟಿ, ಡಾ ಶ್ರೀಧರ್ ಶೆಟ್ಟಿ, ಯುವ ಗಾಯಕ ಭರತ್ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಹೇರಂಭ ಇಂಡಸ್ಟ್ರೀಸ್ ನ ಸಿಎಂಡಿ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ವಹಿಸಿದ್ದರು. ವೇದಿಕೆಯಲ್ಲಿದ್ದ ಎಲ್ಲಾ ಅತಿಥಿ ಗಣ್ಯರನ್ನು ಕರ್ನಾಟಕ ಸಂಘದ ಸಂಸ್ಥಾಪಕ ಕೃಷ್ಣ ಶೆಟ್ಟಿ ಹಾಗೂ ಪದಾಧಿಕಾರಿಗಳು ಶಾಲು ಹೊದಿಸಿ, ಹೂಗುಚ್ಛ ಸ್ಮರಣಿಕೆ ನೀಡಿ ಗೌರವಿಸಿದರು. ಕಾರ್ಯಕ್ರಮವನ್ನು ದಯಾಸಾಗರ್ ಚೌಟ ಹಾಗೂ ಅದ್ಯಪಾಡಿ ಬಾಲಕೃಷ್ಣ ಶೆಟ್ಟಿ ನಿರ್ವಹಿಸಿದರು. ಅಪಾರ ಸಂಖ್ಯೆಯಲ್ಲಿ ಕನ್ನಡಾಭಿಮಾನಿಗಳು, ವಿವಿಧ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.