ವಿದ್ಯಾಗಿರಿ: ‘ಮಾಧ್ಯಮದಲ್ಲಿ ವೃತಿ ಬದುಕು ಕಂಡುಕೊಳ್ಳುವವರಿಗೆ ಸ್ವಚ್ಛ ಮನಸ್ಸು ಮುಖ್ಯ’ ಎಂದು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಹೇಳಿದರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ
ವಿಭಾಗದ ಶಿಕ್ಷಕ- ರಕ್ಷಕರ ಸಭೆಯಲ್ಲಿ ಅವರು ಮಾತನಾಡಿದರು. ಸಮಾಜದಲ್ಲಿ ಪತ್ರಿಕೋದ್ಯಮದ ಪಾತ್ರ ಬಹುಮುಖ್ಯ. ನಿರ್ಮಲ ಮನಸ್ಸಿನಿಂದ ಸಮಾಜದ ಸ್ವಾಸ್ಥ್ಯತೆ ಕಾಪಾಡುವ ಜವಾಬ್ದಾರಿಯನ್ನು ಪತ್ರಕರ್ತ ಹೊಂದಿರಬೇಕು. ಪತ್ರಕರ್ತನ ಕರ್ತವ್ಯದಲ್ಲಿ ಒಳಿತು- ಕೆಡುಕುಗಳೆರಡೂ ಅಡಕವಾಗಿದೆ ಎಂದರು.
ವಿದ್ಯಾರ್ಥಿ ಮೇಲೆ ಶಿಕ್ಷಕರು ತೋರಿಸುವ ವಿಶ್ವಾಸವು, ಆ ವಿದ್ಯಾರ್ಥಿ ಮೇಲಿನ ನಂಬಿಕೆಯನ್ನು ಸೂಚಿಸುತ್ತದೆ. ವಿದ್ಯಾರ್ಥಿ ಜೀವನದಲ್ಲಿ ವಿಶ್ವಾಸಾರ್ಹತೆ ಗಳಿಸುವುದು ಮುಖ್ಯ ಎಂದರು. ಆಳ್ವಾಸ್ ಕಾಲೇಜಿನ ಆಡಳಿತ ಅಧಿಕಾರಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಆಳ್ವಾಸ್ ಎಂದರೆ ವಿದ್ಯಾಸಾಗರ. ಇಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆಯ ಅವಕಾಶವೂ ಅಧಿಕ. ತಮ್ಮ ಮನೆಯ ಮಕ್ಕಳು ಆಳ್ವಾಸ್ನಲ್ಲಿ ಕಲಿಯಬೇಕು ಎಂಬ ಹಂಬಲ ಹಲವರದ್ದು ಎಂದರು. ಪತ್ರಿಕೋದ್ಯಮ ವಿಭಾಗ ಹಾಗೂ ವಿದ್ಯಾರ್ಥಿಗಳ ಕಾರ್ಯನಿರ್ವಹಿಸುವ ರೀತಿ ನಿಜಕ್ಕೂ ಪ್ರಶಂಸಾರ್ಹ. ಮಕ್ಕಳನ್ನು ಉತ್ತಮ ವಿದ್ಯಾಸಂಸ್ಥೆಗೆ ಕಳುಹಿಸಿದ ಪೋಷಕರಾದ ನೀವೆಲ್ಲರೂ ಧನ್ಯರು ಎಂದರು.
ವಿದ್ಯಾರ್ಥಿಗಳು ಕಲಿಕೆಯ ಸಂದರ್ಭದಲ್ಲಿ ನಿರ್ವಹಿಸಿದ ವಿವಿಧ ಕಾರ್ಯಗಳನ್ನು ವಿಡಿಯೊ ಮೂಲಕ ಪ್ರಸ್ತುತ ಪಡಿಸಲಾಯಿತು. ವಿದ್ಯಾರ್ಥಿ ಅಕ್ಷಯ ಅನಿಸಿಕೆ ವ್ಯಕ್ತಪಡಿಸಿ, ‘ಆಳ್ವಾಸ್ ಪತ್ರಿಕೋದ್ಯಮ ನನ್ನ ಭವಿಷ್ಯಕ್ಕೆ ಬುನಾದಿ ಹಾಡಿತು.
ನಿರಂತರ ಕಲಿಕೆಯ ಜತೆ ವೃತ್ತಿ ಜೀವನವನ್ನು ನಿರ್ವಹಿಸಬಲ್ಲ ಆತ್ಮ ವಿಶ್ವಾಸ ಮೂಡಿಸುವಲ್ಲಿ ಸಹಕರಿಸಿದೆ. ಪ್ರಾಧ್ಯಾಪಕರು ಹಾಗೂ ಸಹಪಾಠಿಗಳಿಗೆ ಕೃತಜ್ಞತೆಗಳು’ ಎಂದರು.
ಪೋಷಕರಾದ ಅಬ್ದುಲ್ ಮಜೀದ್, ಯಶವಂತ್ ಮಿಜಾರ್, ಮಹಾದೇವಿ, ಹೇಮಾ ಹಾಗೂ ಆಶಾ ಅಭಿಪ್ರಾಯ ವ್ಯಕ್ತಪಡಿಸಿ, ‘ಆಳ್ವಾಸ್ ಪತ್ರಿಕೋದ್ಯಮಕ್ಕೆ ಸೇರಿದ ಬಳಿಕ ನಮ್ಮ ಮಕ್ಕಳ ವ್ಯಕ್ತಿತ್ವದಲ್ಲಿ ಪ್ರಗತಿಯಾಗಿದೆ. ಅವರು ಬಹಳ ಹೊತ್ತು ಕೆಲಸ ಮಾಡುತ್ತಾರೆ. ಆದರೆ, ಆ ಪರಿಶ್ರಮದ ಫಲವನ್ನು ಕಣ್ಣೆದುರು ನೋಡಿ ಖುಷಿಯಾಗುತ್ತಿದೆ’ ಎಂದರು.
ಆಳ್ವಾಸ್ ಪತ್ರಿಕೋದ್ಯಮ ವಿಭಾಗದ ಸಂಯೋಜಕ ಪ್ರಸಾದ್ ಶೆಟ್ಟಿ ಸ್ವಾಗತಿಸಿ, ಸಹಾಯಕ ಪ್ರಾಧ್ಯಾಪಕ ಹರ್ಷವರ್ಧನ ಪಿ.ಆರ್ ವಂದಿಸಿದರು. ವಿದ್ಯಾರ್ಥಿ ಅವಿನಾಶ್ ಕಟೀಲ್ ಹಾಗೂ ಪ್ರಖ್ಯಾತ ಭಂಡಾರಿ ನಿರೂಪಿಸಿದರು.