ತಾ 23.07.2023 ರಂದು ಸಾಂತಕ್ರೂಸ್ ಪೇಜಾವರ ಮಠದಲ್ಲಿ ಜರುಗಿದ ತೋನ್ಸೆ ವಿಜಯ್ ಕುಮಾರ್ ಶೆಟ್ಟಿ ಅವರ ಕಲಾಜಗತ್ತು ಬಳಗದ ವತಿಯಿಂದ ನಡೆದ ಆಟಿಯ ಗೌಜಿ, ಗಮ್ಮತ್ತು ಕಾರ್ಯಕ್ರಮವು ನೆರೆದವರ ಮನಸೂರೆಗೊಂಡಿತು ಎಂಬುದಕ್ಕೆ ನಿರಂತರ ಕರತಾಡನವೇ ಸಾಕ್ಷಿಯಾಗಿತ್ತು. ಕಾರ್ಯಕ್ರಮದ ಚಾಲನೆಯೇ ಒಂದು ವಿನೂತನ ಕಲ್ಪನೆಯಾಗಿತ್ತು. ನಮ್ಮ ತುಳುನಾಡಿನ ಎಲ್ಲಾ ಬಗೆಯ ತರಕಾರಿಗಳನ್ನು ವೇದಿಕೆ ಮೇಲೆ ತಂದು ಅವುಗಳನ್ನು, ಅದರಲ್ಲೂ ದೊಡ್ಡ ಹಲಸಿನ ಹಣ್ಣನ್ನು ಕೊಯ್ದು ಕಾರ್ಯಕ್ರಮ ಶುರು ಮಾಡಿದ್ದು ಒಂದು ವಿನೂತನ ಪ್ರಯೋಗವಾಗಿತ್ತು. ಬಹುಷಃ ಇಂತಹ ಆಲೋಚನೆಗಳು ವಿಜಯ್ ಕುಮಾರ್ ಶೆಟ್ಟಿಯಂತವರಿಗೆ ಮಾತ್ರ ಮಾಡಲು ಸಾಧ್ಯ.
ನಮ್ಮ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ, ಸುವಾಸನೆ ಭರಿತ, ದೇಹಕ್ಕೆ ಅಗತ್ಯವಾದ ಎಲ್ಲಾ ಬಗೆಯ ಶಕ್ತಿಗಳನ್ನು ನೀಡುವ ತರಕಾರಿಗಳನ್ನು ಒಟ್ಟು ಮಾಡಿ ಅದನ್ನು ಅಲ್ಲಿಯೇ ಶುಚಿ ಮಾಡಿ, ಅಡುಗೆ ತಯಾರಿಸಿ ಅದನ್ನು ಅಥಿತಿ, ಅಭ್ಯಗತರಿಗೆ ಉಣ ಬಡಿಸಿದ ಪರಿ ಸಾಮಾನ್ಯರ ಕಲ್ಪನೆಗೆ ಮೀರಿದ್ದಾಗಿತ್ತು.
ಬಿಡದೆ ಸುರಿಯುತ್ತಿದ್ದ ಮಳೆಯ ನಡುವೆಯೂ ಈ ಸಮಾರಂಭದಲ್ಲಿ ಭಾಗವಹಿಸಲು ಆಗಮಿಸಿದ ಕಲಾಜಗತ್ತು ಹಾಗೂ ವಿಜಯ್ ಕುಮಾರ್ ಶೆಟ್ಟಿಯವರ ಅಭಿಮಾನಿಗಳ ಉತ್ಸಾಹಕ್ಕೆ ಚ್ಯುತಿ ಬಾರದಂತೆ ಒಂದು ಸುಂದರ ಸಂಜೆಯ ಈ ಕಾರ್ಯಕ್ರಮ ಎಲ್ಲರ ನೆನಪಿನಲ್ಲಿ ಉಳಿಯುವ ಕಾರ್ಯಕ್ರಮವಾಗಿತ್ತು. ಆರಂಭದಲ್ಲಿ ವಿವಿಧ ಆಹ್ವಾನಿತ ತಂಡಗಳಿಂದ ಸಮೂಹ ಭಜನೆ, ಗೀತಾ ವೈಭವ ಜರುಗಿ ನೆರೆದವರ ಮನಸೂರೆಗೊಂಡಿತು. ತದನಂತರ ಸತೀಶ್ ಶೆಟ್ಟಿ ಕಣಾಂಜಾರ್ ಬರೆದ ಪ್ರಶಸ್ತಿ ವಿಜೇತ ಕಿರುನಾಟಕ ‘ಎಣ್ಣಿನೊಂಜಿ ಆಯಿನೊಂಜಿ’ ಇದರಲ್ಲಿ ಕಲಾಜಗತ್ತು ಬಳಗದ ಕಲಾವಿದರು ಬಾಗವಹಿಸಿ ತಮ್ಮ ಅತ್ಯುತ್ತಮ ಅಭಿನಯದಿಂದ ನೆರೆದವರ ಕಣ್ಣು ಮುಂಜಾಗುವಂತೆ ಮಾಡಿದರು. ನಂತರ ಅಮೀತಾ ಜತ್ತನ್ನ ತಂಡದ ಮಕ್ಕಳ ಅದ್ಭುತ ಪ್ರದರ್ಶನ ಸಭಿಕರಿಂದ ಬಾರೀ ಮೆಚ್ಚುಗೆ ಪಡೆಯಿತು.
ತದನಂತರ ರಾಷ್ಟ್ರೀಯ ಖ್ಯಾತಿಯ ಯೋಗಪಟು ಶ್ರೀಮತಿ ಜಯಂತಿ ದೇವಾಡಿಗ ಇವರು ತಮ್ಮ ಶಿಷ್ಯೆಯೊಂದಿಗೆ ವಿವಿಧ ರೀತಿಯ ಯೋಗಗಳನ್ನು ಪ್ರದರ್ಶಿಸಿ ಉತ್ತಮ ಆರೋಗ್ಯಕ್ಕೆ ಯೋಗ ಒಂದು ರಾಮಬಾಣ ಎಂದು ತಮ್ಮ ಯೋಗಗಳಿಂದಲೇ ಪ್ರತಿಪಾದಿಸಿದರು. ನಂತರ ತಮ್ಮ ವಸ್ತು ಕಲಾಪ್ರದರ್ಶನ, ಪೈಂಟಿಂಗ್ ಗಳಿಂದ ದೇಶದೆಲ್ಲೆಡೆ ಮನ್ನಣೆ ಪಡೆದ ಪ್ರಶಸ್ತಿ ವಿಜೇತ ಕಲಾಕಾರ ಜಗತ್ ಪಾಲ್ ಶೆಟ್ಟಿಯವರ ಕಲಾವಸ್ತು ಪ್ರದರ್ಶನ ಮೇಳ ನಡೆದು ಜನಮೆಚ್ಚುಗೆ ಪಡೆಯಿತು. ನಂತರ ಕಲಾ ಜಗತ್ತಿನ ಹೆಸರಾಂತ ನಾಟಕ ‘ಪಗರಿದ ಮಂಚ’ ಇದರ ಒಂದು ದ್ರಶ್ಯವು ಸಭಿಕರ ಕರತಾಡನದ ಮದ್ಯೆ ಪ್ರದರ್ಶಿಸಲ್ಪಟ್ಟಿತು.
ಬಹುಷಃ ಸಾಧ್ಯತೆ ಇದ್ದಿದ್ದರೆ ಪೇಜಾವರ ಮಠದ ಅಂಗಳದಲ್ಲಿ ಆಟಿಯ ವಿಶೇಷತೆಯಾದ ಕೆಸರುಗದ್ದೆ ಓಟವನ್ನೂ ವಿಜಯ್ ಕುಮಾರ್ ಶೆಟ್ಟಿಯವರು ಏರ್ಪಡಿಸುತ್ತಿದ್ದರೇನೋ…?ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಗೌರವ ಪ್ರಶಸ್ತಿ ನೀಡಲಾಯಿತು. ಹತ್ತು ಜನ ಅರ್ಹರಿಗೆ ‘ಆಟಿದ ಮಾನದಿಗೆ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮುಖ್ಯವಾಗಿ ಖ್ಯಾತ ಸಮಾಜ ಸೇವಕಿ, ಸಕಲ ಗುಣ ಸಂಪನ್ನೆ, ವಿಚಾರವಾದಿ ಮನೋರಮಾ ಎನ್ ಶೆಟ್ಟಿ (ಮಾಜಿ ಉಪ ಕಾರ್ಯದರ್ಶಿ, ಮಹಿಳಾ ಬಂಟರ ಸಂಘ), ಖ್ಯಾತ ಸಮಾಜ ಸೇವಕಿ ಲತಾ ಪ್ರಭಾಕರ ಶೆಟ್ಟಿ ( ಮಾಜಿ ಅಧ್ಯಕ್ಷರು,ಬಂಟರ ಸಂಘ ಮುಂಬಯಿ), ಶ್ರೀಯತಿ ಸರೋಜಿನಿ ಶೆಟ್ಟಿಗಾರ್ ( ಅಧ್ಯಕ್ಷರು ಪದ್ಮಶಾಲಿ ಸಂಘ ಮುಂಬಯಿ), ವೀಣಾ ಪ್ರಭು ( ಪ್ರಸಿದ್ಧಿ ಪಡೆದ ಅಡುಗೆ ತಜ್ಞರು), ಸರಳಾ ಆರ್.ಶೆಟ್ಟಿ, ಶಕುಂತಳಾ.ಕೆ.ಕೊಟ್ಯಾನ್ (ಅಧ್ಯಕ್ಷ ರು ಮಹಿಳಾ ವಿಭಾಗ ಬಿಲ್ಲವರ ಅಸೋಸಿಯೇಶನ್ ಮುಂಬಯಿ) ಅಲ್ಲದೇ ಮುಂಬೈಯ ಹೆಸರಾಂತ ಮೇಕಪ್ ಆರ್ಟಿಸ್ಟ್, ಚಲನಚಿತ್ರದ ಮೇಕಪ್ ಮ್ಯಾನ್ ಕೂಡಾ ಆಗಿರುವ ಮಂಜುನಾಥ ಶೆಟ್ಟಿಗಾರ್ ಇವರೆಲ್ಲರನ್ನೂ ವಿಶೇಷ ರೀತಿಯಲ್ಲಿ ಗೌರವಿಸಲಾಯಿತು. ಅಲ್ಲದೇ ವಿಶೇಷ ಆಮಂತ್ರಿತರಾಗಿ ಊರಿನಿಂದ ಬಂದ ಖ್ಯಾತ ತುಳು ಭಾಷೆ, ಸಾಹಿತ್ಯ, ಸಂಸ್ಕೃತಿಯ ಅಪಾರ ಪಾಂಡಿತ್ಯ ಇರುವ ತ್ರಿವಳಿ ವಿದ್ವಾಂಸರಾದ ಡಾ. ವೈ. ಎನ್. ಶೆಟ್ಟಿ, ಕೆ.ಕೆ.ಪೇಜಾವರ, ಸಾಯಿನಾಥ್ ಶೆಟ್ಟಿ ಕಟೀಲು ಇವರನ್ನು ಕೂಡಾ ಸನ್ಮಾನಿಸಿ ಸತ್ಕಾರ ಮಾಡಿದರು.
ವಿಶೇಷ ಆಕರ್ಷಣೆಯಾಗಿ ಊರಿನಿಂದ ಬಂದ ಈ ಮೂವರು ತ್ರಿವಳಿ ವಿದ್ವಾಂಸರ ಸಮಾಗಮದ ಮಿಲನ ಮುಂಬಯಿಗರ ಹಲವು ಪ್ರಶ್ನೆಗಳಿಗೆ, ಅನುಮಾನಗಳಿಗೆ, ಉತ್ತರ ದೊರಕುವಂತೆ ಮಾಡಿತು. ತುಳುಭಾಷೆ, ಸಂಸ್ಕೃತಿ, ಆಚಾರ, ವಿಚಾರ, ಸಂಪ್ರದಾಯ, ಆಟಿ ತಿಂಗಳ ವಿಶೇಷತೆ ಇವೆಲ್ಲವನ್ನೂ ಸಾಮಾನ್ಯರಿಗೂ ಅರ್ಥವಾಗುವಂತೆ ವಿವರಿಸಿದರು. ನಡು ನಡುವೆ ಸಭಿಕರ ಪ್ರಶ್ನೆಗಳಿಗೂ ಉತ್ತರಿಸಿ ಅವರ ಮನ ತಣಿಸಿದರು. ಹೀಗೆ ಭಜನೆ, ಸಾಹಿತ್ಯ, ಹಾಸ್ಯ, ಕಲಾಪ್ರದರ್ಶನ, ಸನ್ಮಾನ, ಯೋಗ, ನಾಟ್ಯ, ನಾಟಕ, ತುಳು ಸಂಸ್ಕೃತಿಯ ಅನಾವರಣ, ತುಳುನಾಡಿನ ತಿಂಡಿ ತಿನಿಸುಗಳ ರಸದೌತಣ ಎಲ್ಲವೂ ಒಂದೇ ಜಾಗದಲ್ಲಿ ದೊರಕುವಂತೆ ಮಾಡಿದ ಕಲಾಜಗತ್ತಿನ ಗುರಿಕಾರ, ಹೆಮ್ಮೆಯ ನಾಟಕಕಾರ ಡಾ. ತೋನ್ಸೆ ವಿಜಯ್ ಕುಮಾರ್ ಶೆಟ್ಟಿಯವರು ಹಾಗೂ ಅವರ ಇಡೀ ತಂಡವನ್ನು ಚಪ್ಪಾಳೆ ತಟ್ಟಿ ಅಭಿನಂದಿಸಲೇಬೇಕು. ಕೊನೆಗೆ ನಡೆದ ಪ್ರೀತಿ ಭೋಜನದಲ್ಲಿ ನಮ್ಮ ತುಳುನಾಡಿನ ಎಲ್ಲಾ ಬಗೆಯ ಪದಾರ್ಥಗಳನ್ನು ಸಭಿಕರಿಗೆ ಉಣ ಬಡಿಸಲಾಯಿತು.
ಅತಿಥಿಗಳಾಗಿ ಜಯಕೃಷ್ಣ ಶೆಟ್ಟಿ, ಕೃಷ್ಣ ಡಿ. ಶೆಟ್ಟಿ, ಪುರಂದರ ಶೆಟ್ಟಿ, ನಿತ್ಯಾನಂದ ಕೋಟ್ಯಾನ್, ರತ್ನಾಕರ್ ಶೆಟ್ಟಿ ಬಾನ್ಸುರಿ ಮುಲುಂಡ್, ಅನಿಲ್ ಶೆಟ್ಟಿ ಏಳಿಂಜೆ, ಶುಭಲಕ್ಷ್ಮೀ ಶೆಟ್ಟಿ, ವಿಠ್ಠಲ್ ಪೂಜಾರಿ, ಪ್ರಸಾದ್ ಕೆ. ಶೆಟ್ಟಿ, ಜಗತ್ಪಾಲ್ ಶೆಟ್ಟಿ, ತೇಜಾಕ್ಷಿ ಶೆಟ್ಟಿ, ವಾಸುದೇವ ಶೆಟ್ಟಿ ಮಾರ್ನಾಡ್, ವನಿತಾ ನೋಂಡ, ದೇವಕಿ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು. ಸಮಾರಂಭದ ಸಮಾರೋಪ ಸಮಾರಂಭದಲ್ಲಿ ಜಯಕೃಷ್ಣ ಪರಿಸರ ಸಮಿತಿಯ ಅಧ್ಯಕ್ಷ ಶ್ರೀ ಜಯಕೃಷ್ಣ ಶೆಟ್ಟಿ ಇವರು ಮಾತನಾಡುತ್ತಾ, ಇಂಥಹ ಅಚ್ಚುಕಟ್ಟಾದ, ಸಾಂಸ್ಕೃತಿಕ ನೆಲೆಯನ್ನು ಒಳಗೊಂಡಂತಹ ಕಾರ್ಯಕ್ರಮ ಕಂಡು ಮಹದಾನಂದವಾಯಿತು. ನನಗೆ ಊರಿನಲ್ಲೇ ಇರುವ ಅನುಭವವಾಯಿತು. ಇಂಥಹ ಕಾರ್ಯಕ್ರಮಗಳು ಮುಂಬಯಿಯಲ್ಲಿ ನಿರಂತರ ಜರುಗುತ್ತಿರಬೇಕು ಎಂದು ವಿಜಯ್ ಕುಮಾರ್ ಶೆಟ್ಟಿ ಯವರನ್ನು ಕೊಂಡಾಡಿದರು.
– ಸತೀಶ್ ಎಮ್ ಶೆಟ್ಟಿ ಕಣಾಂಜಾರು.