ಯುವ ಬಂಟರ ಸಂಘ ಪುತ್ತೂರು ತಾಲೂಕು ಇದರ ಆಶ್ರಯದಲ್ಲಿ ಯುವ ಬಂಟರ ದಿನಾಚರಣೆಯ ಪ್ರಯುಕ್ತ ಜು. 23 ರಂದು ತುಳುನಾಡ ಬಂಟೆರೆ ಪರ್ಬ 2023 ಎನ್ನುವ ವಿಶಿಷ್ಟ ಸಾಂಸ್ಕೃತಿಕ ಸ್ವರ್ಧೆಗಳು ಪುತ್ತೂರು ಎಂ.ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ನಡೆಯಲಿದೆ ಎಂದು ಯುವ ಬಂಟರ ಸಂಘದ ಅಧ್ಯಕ್ಷ ಶಶಿರಾಜ್ ರೈ ಮುಂಡಾಳಗುತ್ತುರವರು ತಿಳಿಸಿದರು. ಜು. 19 ರಂದು ಪುತ್ತೂರು ಪ್ರೆಸ್ ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತುಳುನಾಡ ಬಂಟೆರೆ ಪರ್ಬ ಕಾರ್ಯಕ್ರಮದಲ್ಲಿ ತುಳುನಾಡು ಮತ್ತು ಬಂಟ ಸಂಸ್ಕೃತಿಯ ಪ್ರದರ್ಶನಕ್ಕೆ ಮಾತ್ರ ಅವಕಾಶವನ್ನು ನೀಡಲಾಗಿದೆ. ಕಳೆದ ವರ್ಷ ನನ್ನ ಅವಧಿಯಲ್ಲಿ ಹಿರಿಯ ಬಂಟ ಚೇತನಗಳ ಸ್ಮರಣೆ ಮಾಡುವ ಬಂಟ ಸ್ಮೃತಿ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದೇವೆ. ಈ ಬಾರಿ ಗಾಂಧಿವಾದಿಯಾಗಿ ಪುತ್ತೂರಿನ ಅಭಿವೃದ್ಧಿಗೆ ಬಹಳಷ್ಟು ಕೊಡುಗೆಯನ್ನು ನೀಡಿರುವ ನಿವೃತ್ತ ತಹಶೀಲ್ದಾರ್ ಚಿಲ್ಮೆತ್ತಾರು ಕೋಚಣ್ಣ ರೈ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರಿಗೆ ಬ್ರಹ್ಮರಥವನ್ನು ಸಮರ್ಪಿಸಿದ ಜಯಕರ್ನಾಟಕ ಸಂಸ್ಥಾಪಕ ಎನ್. ಮುತ್ತಪ್ಪ ರೈ ಹಾಗೂ ಬೆಂಗಳೂರು ಬಂಟರ ಸಂಘದ ಅಧ್ಯಕ್ಷರಾಗಿ ಹಲವಾರು ಬಂಟರ ಅಭಿವೃದ್ಧಿಗೆ ಸಹಕಾರಿಯಾಗಿದ್ದ ಡಾ. ಮುಂಡಾಳಗುತ್ತು ತಿಮ್ಮಪ್ಪ ರೈರವರುಗಳ ಸ್ಮೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕನಾಟಕ ರಾಜ್ಯದ ಹೈಕೋರ್ಟ್ ನ್ಯಾಯಾಧೀಶರಾದ ಸವಣೂರು ವಿಶ್ವಜಿತ್ ಶೆಟ್ಟಿಯವರು ಬಂಟ ಸಮಾಜದ ಪರವಾಗಿ ಗೌರವ ಸ್ವೀಕರಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿಯವರು ನೇರವೇರಿಸಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ, ಮುಂಬಯಿ ಹೇರಂಬ ಗ್ರೂಪ್ನ ಆಡಳಿತ ನಿರ್ದೇಶಕ ಕನ್ಯಾನ ಸದಾಶಿವ ಶೆಟ್ಟಿ, ಇಂಟರ್ ನ್ಯಾಶನಲ್ ಸಿವಿಲ್ ಸರ್ವೆಂಟ್ ನಿತ್ಯಾನಂದ ಶೆಟ್ಟಿ, ಮುಂಬಯಿ ನಿವೃತ್ತ ಡೆಪ್ಯುಟಿ ಕಮೀಷನರ್ ಶಾರ್ಪ್ ಶೂಟರ್ ಖ್ಯಾತಿಯ ಪ್ರಕಾಶ್ ಭಂಡಾರಿ, ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಂಗಳೂರು ಮಹಾನಗರ ಪಾಲಿಕೆಯ ಜಂಟಿ ಆಯುಕ್ತೆ ವಾಣಿ ಎಸ್ ಆಳ್ವ, ಉದ್ಯಮಿಗಳಾದ ಗುಣರಂಜನ್ ಶೆಟ್ಟಿ, ಪ್ರಕಾಶ್ ರೈ ದೇರ್ಲ, ಮಾಜಿ ಶಾಸಕರಾದ ಶಕುಂತಳಾ ಟಿ.ಶೆಟ್ಟಿ, ಮಲ್ಲಿಕಾ ಪ್ರಸಾದ್ ಭಂಡಾರಿ ಸಹಿತ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಜೊತೆಯಾಗಲಿದ್ದಾರೆ.
ಈ ಕಾರ್ಯಕ್ರಮವು ಒಂದು ಈವೆಂಟ್ ರೀತಿಯಲ್ಲಿ ನಡೆಯಲಿದ್ದು, ಸಭಾ ಕಾರ್ಯಕ್ರಮವು ಚಿಕ್ಕದಾಗಿ ಚೊಕ್ಕದಾಗಿ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಖ್ಯಾತ ನಿರೂಪಕ ನಿತೇಶ್ ಶೆಟ್ಟಿ ಎಕ್ಕಾರುರವರು ಕಾರ್ಯಕ್ರಮದ ಮುಖ್ಯ ನಿರೂಪಕರಾಗಿರುತ್ತಾರೆ.
ಸಿನಿಮಾ ತಾರೆಯರು
ಈ ಕಾರ್ಯಕ್ರಮದ ಮಧ್ಯೆ ನಮ್ಮನ್ನು ರಂಜಿಸಲು ನಮ್ಮೂರಿನ ಬಂಟ ತಾರೆಯರಾದ ವಿಜಯಕುಮಾರ್ ಕೋಡಿಯಾಲ್ಬೈಲ್, ರೂಪೇಶ್ ಶೆಟ್ಟಿ, ರಚನಾ ರೈ, ಯಶ್ ಶೆಟ್ಟಿ, ದೀಪಕ್ ರೈ ಪಾಣಾಜೆ, ಸುಂದರ ರೈ ಮಂದಾರ, ಗಾಯಕ ನಿಶಾನ್ ರೈ ಮಠಂತಬೆಟ್ಟು, ಸಂಗೀತ ನಿರ್ದೇಶಕ ಪ್ರಸಾದ್ ಶೆಟ್ಟಿ, ಕಬ್ಬಡಿ ಆಟಗಾರ ಪ್ರಶಾಂತ್ ರೈ ಸೇರಿದಂತೆ ಹಲವಾರು ಮಂದಿ ಸಾಧಕರು ಭಾಗವಹಿಸಲಿದ್ದಾರೆ ಎಂದು ಶಶಿರಾಜ್ ರೈ ಮುಂಡಾಳಗುತ್ತು ತಿಳಿಸಿದರು.
ಕಾರ್ಯಕ್ರಮದ ಸಂಚಾಲಕರುಗಳಾದ ಹರ್ಷಕುಮಾರ್ ರೈ ಮಾಡಾವು, ಭಾಗ್ಯೇಶ್ ರೈ ಕೆಯ್ಯೂರು, ತಾಲೂಕು ಯುವ ಬಂಟರ ಸಂಘದ ಪ್ರಧಾನ ಕಾರ್ಯದಶಿ ರಂಜಿನಿ ಶೆಟ್ಟಿ, ಕೋಶಾಧಿಕಾರಿ ಅಶೋಕ್ ಶೆಟ್ಟಿ ಕೆ.ಸಿ, ಉಪಾಧ್ಯಕ್ಷ ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ರವಿಪ್ರಸಾದ್ ಶೆಟ್ಟಿ ಬನ್ನೂರು, ವಿದ್ಯಾಥಿ ಬಂಟರ ಸಂಘದ ಅಧ್ಯಕ್ಷ ಪವನ್ ಶೆಟ್ಟಿ ಕಂಬಳತಡ್ಡರವರುಗಳು ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.