ಹೊಸದಾಗಿ ಆಯ್ಕೆಯಾಗಿರುವ ಶಾಸಕರಿಗೆ ಬಜೆಟ್ ಮೇಲೆ ಚರ್ಚಿಸಲು ಸೋಮವಾರ ಸ್ಪೀಕರ್ ಯು.ಟಿ ಖಾದರ್ ಅವಕಾಶ ಮಾಡಿಕೊಟ್ಟರು. ಈ ವೇಳೆ ಬೈಂದೂರು ಬಿಜೆಪಿ ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು ಕೋಳಿ ಕಥೆ ಹೇಳಿ ಸರ್ಕಾರಕ್ಕೆ ಅಭಿವೃದ್ದಿ ಪಾಠ ಮಾಡಿ ಗಮನ ಸೆಳೆದರು.
ಬಡವರ ಮನೆಗೆ ಅಕ್ಕಿ ಮುಟ್ಟಿಸುವ ಯೋಚನೆ ಮತ್ತು ಯೋಜನೆ ಯಾವುದೇ ಸರ್ಕಾರ ಮಾಡಿದ್ದರೂ ಅಭಿನಂದನೀಯ. ಆದರೆ, ಯಾವುದೇ ದೇಶ ಅಥವಾ ರಾಜ್ಯದ ಬಂಡವಾಳ ವೆಚ್ಚ ಹೆಚ್ಚಾದರಷ್ಟೇ ಅಭಿವೃದ್ಧಿ ಸಾಧ್ಯ. ನಮ್ಮಲ್ಲಿ ವಿದ್ಯಾಕೇಂದ್ರಗಳು ಸಾಕಷ್ಟಿವೆ. ಮೀನುಗಾರಿಕೆ ಸೇರಿದಂತೆ ಹಲವು ಉದ್ಯಮಗಳಿವೆ. ದುಡಿಯುವ ಕೈಗಳಿಗೆ ಆಧಾರ ಕೊಟ್ಟರೆ ಬಡತನ ದೂರಾಗುತ್ತದೆ. ಜನಪ್ರಿಯ ಯೋಜನೆಗಳು ಬಡತನವನ್ನು ಅಣಕಿಸುತ್ತಿವೆಯೋ? ಆಡಳಿತವನ್ನು ಅಣಕಿಸುತ್ತಿವೆಯೋ ಎಂದು 5 ಗ್ಯಾರಂಟಿಗಳ ಹೆಸರು ಹೇಳದೆಯೇ ಟೀಕಿಸಿದರು.
ಇದನ್ನು ಪುಷ್ಟೀಕರಿಸುವಂತೆ ಕಥೆಯೊಂದನ್ನೂ ಹೇಳಿದ ಅವರು, ಕೋಳಿಯ ಪುಕ್ಕ ಕಿತ್ತಾಗ ಜೀವಂತ ಕೋಳಿ ನೋವಿನಿಂದ ಒದ್ದಾಡುತ್ತಿರುತ್ತದೆ. ಪುಕ್ಕ ಕಿತ್ತ ನಂತರ ಅದೇ ವ್ಯಕ್ತಿ ಎರಡೆರಡು ಅಕ್ಕಿ ಕಾಳು ಹಾಕುತ್ತಾ ಹೋಗುತ್ತಾನೆ. ಆ ಕೋಳಿಯೂ ಅವನ ಹಿಂದೆ ಹೋಗುತ್ತದೆ. ಬಡತನ ಅಣಕಿಸುವ ವಿಷಯ ಆಗಬಾರದು. ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ ಆಸ್ಪತ್ರೆ, ಶಾಲೆ, ಕಾಲುಸಂಕಗಳಿಗೆ ಒದ್ದಾಡುತ್ತಿದ್ದೇವೆ. ಕೊಲ್ಲೂರು ಮೂಕಾಂಬಿಕೆ, ವರಾಹಿ, ಕೆಪಿಸಿಯಂತಹ ಅನೇಕ ಆದಾಯ ತರುವ ಯೋಜನೆಗಳು ನಮ್ಮಲ್ಲಿವೆ. ರೆಕ್ಕೆ-ಪುಕ್ಕ ಬಲಿತ ಹಕ್ಕಿಗಳಾಗೋಣ, ಅಕ್ಕಿ ಕಾಳಿನ ಹಿಂದೆ ಹೋಗುವ ಹಕ್ಕಿಗಳಾಗುವುದು ಬೇಡ ಎಂದು ಮಾರ್ಮಿಕವಾಗಿ ನುಡಿದರು.