ಮೀರಾ ಭಯಂದರ್ ಮಹಾನಗರ ಪಾಲಿಕೆಯು ಮೀರಾ ರೋಡಿನ ವಿದ್ಯಾ ನಗರಿಯ ಫಸ್ಟ್ ಸ್ಟೆಪ್ ಗ್ಲೋಬಲ್ ಶಾಲೆಯ ಬಳ್ಳಿ ಸೌತ್ ಇಂಡಿಯನ್ ಭವನ ನಿರ್ಮಾಣದ ಶಿಲಾನ್ಯಾಸವನ್ನು ಉತ್ತರ ಮುಂಬಯಿಯ ಸಂಸದ ಗೋಪಾಲ್ ಸಿ ಶೆಟ್ಟಿ ಮತ್ತು ಮೀರಾ ಭಯಂದರ್ ನ ಶಾಸಕ ಪ್ರತಾಪ್ ಸರ್ ನಾಯಕ್ ಅವರೊಂದಿಗೆ ಮುಂಬಯಿ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ್ ಕೆ ಶೆಟ್ಟಿ ಯವರು ಜೂನ್ 28 ರಂದು ನೆರವೇರಿಸಿದರು. ಅನಂತರ ಧಾರ್ಮಿಕ ಪೂಜಾ ಕಾರ್ಯಗಳು ಬಂಟರ ಸಂಘದ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಧ್ಯಕ್ಷ ಮಾಣಿ ಗುತ್ತು ಶಿವಪ್ರಸಾದ್ ಶೆಟ್ಟಿ ದಂಪತಿಯ ಯಜಮಾನಿಕೆಯಲ್ಲಿ ವೇದಮೂರ್ತಿ ಕೃಷ್ಣರಾಜ ತಂತ್ರಿಯವರು ನಡೆಸಿದರು.
ಪೂಜಾ ಕಾರ್ಯಗಳು ನಡೆದ ಬಳಿಕ ಬಂಟರ ಸಂಘ ಮುಂಬಯಿಯ ಆಯೋಜನೆಯಲ್ಲಿ ತುಳು ಕನ್ನಡಿಗರ ಸಹಕಾರದೊಂದಿಗೆ ಮೀರಾ ರೋಡಿನ ಠಾಕೂರ್ ಮಾಲ್ ಮತ್ತು ಪ್ರಸಾದ್ ಇಂಟರ್ ನ್ಯಾಷನಲ್ ಹೋಟೆಲ್ ಬಳಿ ಇರುವ ಭಾರತರತ್ನ ಗಾನ ಸಾಮ್ರಾಟ ಲತಾ ಮಂಗೇಶ್ಕರ್ ನಾಟ್ಯ ಗೃಹ ಆಡಿಟೋರಿಯಂನಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಸಂಸದ ಗೋಪಾಲ್ ಶೆಟ್ಟಿ ಅವರು ಮಾತನಾಡುತ್ತಾ ಈ ಪರಿಸರದ ಜನಪ್ರಿಯ ಶಾಸಕ ಪ್ರತಾಪ್ ಸರ್ ನಾಯಕ್ ರವರು ದಕ್ಷಿಣ ಭಾರತೀಯರಿಗೆ ಅನುಕೂಲವಾಗುವ ರೀತಿಯಲ್ಲಿ ಸೌತ್ ಇಂಡಿಯನ್ ಭವನ ನಿರ್ಮಾಣದ ಕನಸು ನಿಜಕ್ಕೂ ಶ್ಲಾಘನೀಯ. ಪ್ರಥಮ ಬಾರಿಗೆ ಮಹಾನಗರ ಪಾಲಿಕೆಯು ದಕ್ಷಿಣ ಭಾರತೀಯರಿಗೆ ಭವನ ನಿರ್ಮಿಸಿ ಕೊಡುವ ಯೋಜನೆಯನ್ನು ರೂಪಿಸಿಕೊಂಡಿರುವುದು ನಮ್ಮೆಲ್ಲರಿಗೂ ಸಂತಸ ತಂದಿದೆ ಎಂದರು. ಮುಂದಿನ ಚುನಾವಣೆಯ ಒಳಗೆ ಲೋಕಾರ್ಪಣೆಗೊಳ್ಳಲಿ. ಇದಕ್ಕೆ ದಕ್ಷಿಣ ಭಾರತೀಯರು ಹಾಗೂ ಮಹಾರಾಷ್ಟ್ರದ ಜನರ ದೇಣಿಗೆ ಕೂಡ ಸೇರಿಕೊಳ್ಳಲಿ. ಅತೀ ಸುಂದರವಾಗಿ ನಿರ್ಮಾಣಗೊಳ್ಳುತ್ತಿರುವ ಮೀರಾ ಭಯಂದರ್ ನಗರಕ್ಕೆ ಈ ಭವನ ಇನ್ನಷ್ಟು ಶೋಭೆಯನ್ನು ತರಲಿದೆ. ಮುಂಬಯಿಯ ಮರಾಠಿಗರು ಹಿಂದೂ ಧರ್ಮದ ರಕ್ಷಣೆ ಯಾ ಕಾರ್ಯದಲ್ಲಿ ಹೆಚ್ಚು ತೊಡಗಿಕೊಂಡವರು, ಅದರಂತೆ ದಕ್ಷಿಣ ಭಾರತೀಯರು ಕೂಡ ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ ಜನರು ಹಿಂದೂ ಧರ್ಮದ ಮತ್ತು ದೇಶ ರಕ್ಷಣೆಯ ಕಾರ್ಯದಲ್ಲಿ ತೊಡಗಿಕೊಂಡವರಾಗಿದ್ದಾರೆ. ಬಂಟರ ಸಂಘ ಮುಂಬಯಿ ನಗರದಲ್ಲಿ ಬೇರೆ ಬೇರೆ ಕ್ಷೇತ್ರಗಳಲ್ಲಿ ವಿವಿಧ ಸಾಧನೆ ಸೇವೆಗಳನ್ನು ಮಾಡುತ್ತಿದೆ. ಅದರಲ್ಲೂ ಶಿಕ್ಷಣಕ್ಕೆ ಮಹತ್ವವಾದ ಕೊಡುಗೆಯನ್ನು ನೀಡಿದೆ. ಬಂಟ ಸಮಾಜದ ಬಂಧುಗಳು ಯಾವುದೇ ಪ್ರದೇಶದಲ್ಲಿದ್ದರೂ ಕೂಡ ಅವರ ಸೇವಾ ಕಾರ್ಯಗಳು ಅಪೂರ್ವವಾಗಿದೆ. ಎಲ್ಲರನ್ನೂ ಒಗ್ಗಟ್ಟಿನಿಂದ ಕೊಂಡು ಹೋಗುವ ಸಂಘಟಕರಾಗಿದ್ದಾರೆ.ಮುಂದಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಪ್ರತೀ ಸಮಾಜದ ಜನರಿಗೂ ಭವನ ನಿರ್ಮಾಣವಾಗುವಂತೆ ಪ್ರತಾಪ್ ಸರ್ ನಾಯಕ್ ಅವರ ಕನಸಿಗೆ ನಾವೆಲ್ಲರೂ ಸಹಕಾರ ನೀಡುವ ಎಂದು ನುಡಿದರು.
ಮುಂಬಯಿ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ್ ಕೆ ಶೆಟ್ಟಿ ಅವರು ಸ್ವಾಗತಿಸುತ್ತಾ ಮೀರಾ ಭಯಂದರ್ ಪರಿಸರದಲ್ಲಿ ಲಕ್ಷಾಂತರ ದಕ್ಷಿಣ ಭಾರತೀಯರು ವಾಸ್ತವ ಇದ್ದಾರೆ. ಅವರೆಲ್ಲರಿಗೂ ಅನುಕೂಲವಾಗುವಂತೆ ದಕ್ಷಿಣ ಭಾರತೀಯ ಭವನ ವೇಗದಲ್ಲಿ ನಿರ್ಮಾಣಗೊಂಡು ಲೋಕಾರ್ಪಣೆ ಗೊಳ್ಳಲಿ. ಮೀರಾ ಭಯಂದರ್ ಪರಿಸರದಲ್ಲಿ ಬಂಟರ ಸಂಘದ ಪ್ರಾದೇಶಿಕ ಸಮಿತಿ ಜನಪರ ಸೇವೆಗಳನ್ನು ಮಾಡಿ ಈ ನಗರದ ಅಭಿವೃದ್ಧಿಗೆ ಮತ್ತು ಸೌಂದರ್ಯಕ್ಕೆ ಶ್ರಮಿಸುತ್ತಿದೆ. ಪ್ರತಿ ವರ್ಷ ಸಮಾಜದ ಬಂಧುಗಳಿಗೆ ಕೋಟ್ಯಾಂತರ ರೂಪಾಯಿಗಳನ್ನು ವಿದ್ಯಾಭ್ಯಾಸಕ್ಕೆ ನೀಡುತ್ತಿದೆ ಹಾಗೂ ತುಳು ಕನ್ನಡಿಗರಿಗೆಲ್ಲರಿಗೂ ವಿವಿಧ ರೀತಿಯ ಸಹಕಾರವನ್ನು ನೀಡುತ್ತಾ ಬಂದಿದೆ. ಮುಂದೆ ದಕ್ಷಿಣ ಭಾರತೀಯ ಭವನ ಬಂಟರ ಸಂಘದ ಆಡಳಿತಕ್ಕೆ ನೀಡಿದರೆ ಸಮರ್ಥ ರೀತಿಯಲ್ಲಿ ನಿರ್ವಹಿಸುತ್ತೇವೆ ಎಂದು ನುಡಿದರು.
ವೇದಿಕೆಯಲ್ಲಿ ಬಂಟರ ಸಂಘ ಮುಂಬಯಿಯ ಉಪಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು, ಜೊತೆ ಕೋಶಾಧಿಕಾರಿ ಮುಂಡಪ್ಪ ಪಯ್ಯಡೆ, ಬೊರಿವಿಲಿ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಡಾ. ಪಿ ವಿ ಶೆಟ್ಟಿ, ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಮಾಣಿ ಗುತ್ತು ಶಿವಪ್ರಸಾದ್ ಆರ್ ಶೆಟ್ಟಿ, ಸಂಚಾಲಕ ಗಿರೀಶ್ ಆರ್.ಶೆಟ್ಟಿ ತೆಳ್ಳಾರ್, ಸಲಹೆಗಾರರಾದ ಕಿಶೋರ್ ಶೆಟ್ಟಿ ಕುತ್ಯಾರ್, ಕಾಶಿ ಮೀರಾ ಭಾಸ್ಕರ್ ಶೆಟ್ಟಿ, ಉಪ ಕಾರ್ಯಾಧ್ಯಕ್ಷ ಉದಯ ಶೆಟ್ಟಿ ಪೆಲತ್ತೂರು, ಗೌರವ ಪ್ರಧಾನ ಕಾರ್ಯದರ್ಶಿ ರವೀಂದ್ರ ಶೆಟ್ಟಿ ಕೊಟ್ರಪಾಡಿ ಗುತ್ತು, ಜೊತೆ ಕೋಶಾಧಿಕಾರಿ ದಾಮೋದರ್ ಎನ್.ಶೆಟ್ಟಿ, ಜೊತೆ ಕಾರ್ಯದರ್ಶಿ ರಮೇಶ್ ಶೆಟ್ಟಿ ಸಿದ್ದಕಟ್ಟೆ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಜಾತಾ ಪಿ.ಶೆಟ್ಟಿ, ಯುವ ವಿಭಾಗದ ಕಾರ್ಯಧ್ಯಕ್ಷೆ
ಶ್ರುತಿ ಡಿ.ಶೆಟ್ಟಿ, ಸಾಗರ್ ಡಿ.ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ವಿಶೇಷ ಸಹಕಾರ ನೀಡಿದ ಭಾರತೀಯ ಜನತಾ ಪಕ್ಷದ ಮುಖಂಡ ಎರ್ಮಾಳ್ ಹರೀಶ್ ಶೆಟ್ಟಿ, ಪ್ರಾದೇಶಿಕ ಸಮಿತಿಯ ಪದಾಧಿಕಾರಿಗಳಾದ ಬಂಟರ ಸಂಘ ಜೋಗೇಶ್ವರಿ – ದಹಿಸರ್ ಪ್ರಾದೇಶಿಕ ಸಮಿತಿಯ ನಿಟ್ಟೆ ಎಂ ಜಿ ಶೆಟ್ಟಿ, ವಸಾಯಿ – ದಹಾಣು ಪ್ರಾದೇಶಿಕ ಸಮಿತಿಯ ಕಾರ್ಯಧ್ಯಕ್ಷ ಹರೀಶ್ ಪಾಂಡು ಶೆಟ್ಟಿ, ಭಾರತೀಯ ಜನತಾ ಪಕ್ಷದ ಮೀರಾ ಭಯಂದರ್ ಜಿಲ್ಲೆಯ ಉಪಾಧ್ಯಕ್ಷ ಮುನ್ನಲಾಯಿಗುತ್ತು ಸಚ್ಚಿದಾನಂದ ಶೆಟ್ಟಿ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮವನ್ನು ಮುಂಬಯಿ ಬಂಟರ ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯದರ್ಶಿ ಜಯ ಎ ಶೆಟ್ಟಿ ಅವರು ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಕ ಬಾಬಾ ಪ್ರಸಾದ್ ಅರಸ ನಿರ್ವಹಿಸಿದರು. ರವೀಂದ್ರ ಶೆಟ್ಟಿ ಕೊಟ್ರಪಾಡಿ ಗುತ್ತು ಧನ್ಯವಾದವಿತ್ತರು.