ಎಲ್ಲೂರು ಗ್ರಾಮದ ಉಳ್ಳೂರಿನಲ್ಲಿ ಗೋಶಾಲೆಗೆ ಮೀಸಲಿಟ್ಟಿರುವ 3.96 ಎಕ್ರೆ ಸರಕಾರಿ ಜಮೀನಿನಲ್ಲಿ ಶುಕ್ರವಾರ ಅದಮಾರು ಮಠಾಧೀಶರಾದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅವರು ಗೋಪೂಜೆ ನೆರವೇರಿಸಿ, ಗೋಶಾಲೆ ಮತ್ತು ಗೋರುದ್ರ ಭೂಮಿ ನಿರ್ಮಾಣ ಯೋಜನೆಗೆ ಮುಹೂರ್ತ ನೆರವೇರಿಸಿದರು. ಗೋಪೂಜೆ ನೆರವೇರಿಸಿದ ಅದಮಾರು ಶ್ರೀ ಆಶೀರ್ವಚನ ನೀಡಿ, ಭಾರತೀಯ ಪರಂಪರೆಯಲ್ಲಿ ಗೋವುಗಳಿಗೆ ವಿಶೇಷ ಮಹತ್ವವಿದೆ. ಗೋಪಾಲನೆ, ಸಂರಕ್ಷಣೆಗೆ ಒತ್ತು ನೀಡುವ ಮೂಲಕ ಸನಾತನ ಧರ್ಮದ ಪರಿಪಾಲನೆ ಸಾಧ್ಯವಿದೆ. ಗೋವುಗಳು ನಮಗೆ ಉತ್ತಮ ಜ್ಞಾನವನ್ನು ನೀಡುತ್ತವೆ. ಗೋಶಾಲೆಗಳು ವೃದ್ಧಾಶ್ರಮದಂತೆ ಆಗಿರದೇ ಗೋವುಗಳ ಬಗ್ಗೆ ಸಂಶೋಧನಾತ್ಮಕ ಮಾಹಿತಿಗಳನ್ನು ನೀಡುವ ಮಾದರಿ ಕೇಂದ್ರವಾಗಿ ಬೆಳೆಯಬೇಕಿವೆ ಎಂದರು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ನನ್ನ ಹಲವು ವರ್ಷಗಳ ಸಂಕಲ್ಪವಾಗಿರುವ ಗೋ ರುದ್ರ ಭೂಮಿ ಸ್ಥಾಪನೆಯ ಬಗ್ಗೆ ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿದ್ದೆವು. ಅದರಂತೆ ಕಾಪು ತಾಲೂಕಿನಲ್ಲಿ ಪ್ರಪ್ರಥಮ ಸರಕಾರಿ ಗೋಶಾಲೆ ನಿರ್ಮಿಸಿ, ಅದರಲ್ಲೇ ಗೋ ರುದ್ರ ಭೂಮಿ ಸ್ಥಾಪಿಸಲಾಗುವುದು. ಸರಕಾರ, ಶಾಸಕರ ನಿಧಿಯ ಜತೆಗೆ ಸ್ನೇಹಿತರ ಮೂಲಕ ದೇಣಿಗೆಯನ್ನು ಸಂಗ್ರಹಿಸಿ, ರಾಜ್ಯಕ್ಕೇ ಮಾದರಿಯಾಗುವ ರೀತಿಯಲ್ಲಿ ಅಧಿಕೃತ ಗೋ ಶಾಲೆ ನಿರ್ಮಾಣಕ್ಕೆ ಆದ್ಯತೆ ನೀಡುತ್ತೇವೆ ಎಂದರು. ಕಾಪು ತಾಲೂಕು ಮುಖ್ಯ ಪಶು ವೈದ್ಯಾಧಿಕಾರಿ ಅರುಣ್ ಹೆಗ್ಡೆ ಪ್ರಸ್ತಾವನೆಗೈದು, ತಾಲೂಕಿಗೊಂದು ಗೋಶಾಲೆ ನಿರ್ಮಾಣ ಕಾರ್ಯಕ್ರಮದಡಿ ಗೋಶಾಲೆ ನಿರ್ಮಾಣಕ್ಕೆ 3.96 ಎಕರೆ ಜಾಗ ಮಂಜೂರಾಗಿದ್ದು 50ಲಕ್ಷ ರೂ. ಅನುದಾನ ಕೂಡಾ ಬಿಡುಗಡೆಯಾಗಿತ್ತು. ಆದರೆ ತಾಂತ್ರಿಕ ಕಾರಣದಿಂದ ಯೋಜನೆ ಅನುಷ್ಠಾನ ವಿಳಂಭವಾಗಿತ್ತು. ಈಗ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಾಗ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅನುದಾನ ಬಿಡುಗಡೆಗೊಂಡ ಬಳಿಕ ಕಾಪು ತಾಲೂಕಿನ ಪ್ರಥಮ ಸರಕಾರಿ ಗೋಶಾಲೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದರು.
ಕಾಪು ತಹಶೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ, ಕಂದಾಯ ನಿರೀಕ್ಷಕ ಸುಧೀರ್ ಕುಮಾರ್ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಎಲ್ಲೂರು ಗ್ರಾ. ಪಂ. ಅಧ್ಯಕ್ಷ ಜಯಂತ್ ಕುಮಾರ್, ಮಾಜಿ ಜಿ.ಪಂ. ಸದಸ್ಯೆ ಶಿಲ್ಪಾ ಜಿ. ಸುವರ್ಣ, ಮಾಜಿ ತಾ.ಪಂ. ಸದಸ್ಯ ಕೇಶವ ಮೊಯ್ಲಿ, ಪಶು ವೈದ್ಯ ಡಾ| ವಿಜಯ್ ಕುಮಾರ್, ತಾ.ಪಂ. ಸಹಾಯಕ ಅಭಿಯಂತರೆ ಚಂದ್ರಕಲಾ, ಎಲ್ಲೂರು ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ಪ್ರದೀಪ್ ಅತಿಥಿಗಳಾಗಿದ್ದರು.
ಬಿಜೆಪಿ ಕ್ಷೇತ್ರಾಧ್ಯಕ್ಷ ಶ್ರೀಕಾಂತ್ ನಾಯಕ್, ಪ್ರಮುಖರಾದ ಸುಧಾಮ ಶೆಟ್ಟಿ, ಅನಿಲ್ ಕುಮಾರ್, ಗಾಯತ್ರಿ ಡಿ. ಪ್ರಭು, ಜಯಶ್ರೀ ಹರೀಶ್, ಗೀತಾಂಜಲಿ ಸುವರ್ಣ, ವೀಣಾ ಶೆಟ್ಟಿ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಗೋಪಾಲಕೃಷ್ಣ ರಾವ್, ನವೀನ್ ಎಸ್.ಕೆ., ಶ್ರೀಧರ ಅಮೀನ್, ಸಂತೋಷ್ ಸುವರ್ಣ, ನಾಗೇಶ್ ರಾವ್, ಮಿಥುನ್ ಹೆಗ್ಡೆ, ಶ್ರೀನಿವಾಸ ಶರ್ಮ, ಸತೀಶ್ ಶೆಟ್ಟಿ ಗುಡ್ಡೆಚ್ಚಿ, ಗ್ರಾ.ಪಂ. ಸದಸ್ಯರು, ಮಾಜಿ ಮತ್ತು ಹಾಲಿ ಜನಪ್ರತಿನಿಧಿಗಳು, ಬಿಜೆಪಿ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.