ಪಟ್ಲ ಫೌಂಡೇಶನ್ನಿನ ಸಕ್ರಿಯ ಘಟಕಗಳಲ್ಲಿ ಒಂದಾಗಿರುವ ಸುರತ್ಕಲ್ ಘಟಕದ 3 ನೇ ವರ್ಷದ ಕಾರ್ಯಕ್ರಮವು ಸುರತ್ಕಲ್ ಬಂಟರ ಸಂಘದ ಆವರಣದಲ್ಲಿ ಅಧ್ಯಕ್ಷರಾದ ಸುಧಾಕರ ಪೂಂಜರ ಅಧ್ಯಕ್ಷತೆಯಲ್ಲಿ ಜರಗಿತು. ಸುರತ್ಕಲ್ ಪರಿಸರದಲ್ಲಿ ಯಕ್ಷಗಾನದಲ್ಲಿ ವಿಶಿಷ್ಟ ಸಾಧನೆಗೈದ ಮೂರು ಮಂದಿ ಹಿರಿಯ ಕಲಾವಿದರಾದ ಸೇಸಪ್ಪ ಶೆಟ್ಟಿಗಾರ್, ಶಂಕರ್ ಜೆ ಶೆಟ್ಟಿ, ವೆಂಕಟರಮಣ ಐತಾಳ್ ಇವರನ್ನು ವೇದಿಕೆಯಲ್ಲಿ ಗೌರವಿಸಿ ಸನ್ಮಾನಿಸಲಾಯಿತು. ಸನ್ಮಾನ ಪತ್ರವನ್ನು ಕು.ಬಿಂದ್ಯಾ ಇವರು ವಾಚಿಸಿದರು. ಇತ್ತೀಚೆಗೆ ರಂಗಸ್ಥಳದಲ್ಲೇ ಕುಸಿದು ಬಿದ್ದು ಇಹಲೋಕ ತ್ಯಜಿಸಿದ ಕಟೀಲು ಮೇಳದ ಕಲಾವಿದ ಗುರುವಪ್ಪ ಬಾಯಾರ್ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಲಾಯಿತು.
ಈ ಸಂದರ್ಭದಲ್ಲಿ ಸುರತ್ಕಲ್ ಘಟಕದ ಸದಸ್ಯರಾದ ಲೀಲಾಧರ ಶೆಟ್ಟಿ ಮತ್ತು ನಾರಾಯಣ ಶೆಟ್ಟಿ ಇವರು ರೂ 1-00 ಲಕ್ಷದ ಮೊತ್ತವನ್ನು ನೀಡಿ ಯಕ್ಷಧ್ರುವ ಪಟ್ಲ ಫೌಂಡೇಶನಿನ ಟ್ರಸ್ಟಿಯಾದರು. ಈರ್ವರನ್ನೂ ಕೇಂದ್ರೀಯ ಸಮಿತಿಯ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಶಾಲು ಹೊದಿಸಿ ಅಭಿನಂದಿಸಿದರು.
ಅತಿಥಿಗಳಾದ ಶ್ರೀಕಾಂತ ಶೆಟ್ಟಿ ಬಾಳ, ಮತ್ತು ರವೀಂದ್ರ ರಾವ್ ಇವರು ತಮ್ಮ ಮಾತುಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಹೆಚ್ಚಿನ ಘಟಕಗಳನ್ನು ಹೊಂದಿರುವ ಈ ಸಂಸ್ಥೆಯು ಮುಂದೊಂದು ಅಂತರಾಷ್ಟ್ರೀಯ ಮೇರು ಪಥದ ಪ್ರಶಸ್ತಿಯನ್ನು ಗಳಿಸುವಂತಾಗಲಿ ಎಂದು ಶುಭ ಹಾರೈಸಿದರು. ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಇವರು ಮಾತನಾಡುತ್ತಾ ಯಕ್ಷಧ್ರುವ ಪಟ್ಲ ಫೌಂಡೇಶನ್ ನಲ್ಲಿ ಸುರತ್ಕಲ್ ಘಟಕವು ಉತ್ತಮ ಸಂಘಟಕರಿಂದ ಕೂಡಿದ್ದು ಅತೀ ಹೆಚ್ಚು ಟ್ರಸ್ಟಿಗಳನ್ನು ಹೊಂದಿದ್ದು ಇದೀಗ ಇನ್ನಿಬ್ಬರು ಟ್ರಸ್ಟಿಗಳು ಸೇರ್ಪಡೆಗೊಂಡಿರುವುದು ಸುರತ್ಕಲ್ ಘಟಕವು ಇತರ ಘಟಕಗಳಿಗೆ ಮಾದರಿಯಾಗಿ ಬೆಳೆಯುತ್ತಿದೆ ಎಂದರು.
ಅಧ್ಯಕ್ಷರಾದ ಸುಧಾಕರ ಎಸ್ ಪೂಂಜ ಇವರು ಮಾತನಾಡುತ್ತಾ ಕೇಂದ್ರ ಸಮಿತಿಯ ನಿಯಮ ನಿಬಂಧನೆಯಂತೆ ಸುರತ್ಕಲ್ ಘಟಕವು ಯಕ್ಷಗಾನ ಕಲಾ ಮಾತ್ರವಲ್ಲದೆ ಇತರ ಸಾಂಸ್ಕೃತಿಕ ಕಲೆಗೂ ಪ್ರೊತ್ಸಾಹ ನೀಡುತ್ತಾ ನೊಂದ ಕಲಾವಿದರಿಗೆ ಸದಾ ಪ್ರೋತ್ಸಾಹ ನೀಡುವಲ್ಲಿ ಕೆಲಸ ಮಾಡುತ್ತಿದೆ ಎಂದರು.
ಘಟಕದ ಗೌರವಾಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿ ಸ್ವಾಗತಿಸಿದರು. ಕೇಂದ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಪುರುಷೋ ಭಂಡಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಘಟಕದ ಪ್ರಧಾನ ಕಾರ್ಯದರ್ಶಿ ಬಾಳ ಗಂಗಾಧರ ಪೂಜಾರಿ ಚೇಳ್ಯಾರು ವಂದಿಸಿದರು.
ಶ್ರೀಮತಿ ಸುಧಾ ಕಾರ್ಯಕ್ರಮ ನಿರ್ವಹಿಸಿದರು. ಮುಖ್ಯ ಅತಿಥಿಗಳಾಗಿ ಶಿವರಾಮ ಕೋಟ್ಯಾನ್, ಸುರೇಶ್ ನಾಯ್ಕ್, ಮಹಿಳಾ ಘಟಕದ ಅಧ್ಯಕ್ಷರಾದ ಪೂರ್ಣಿಮ ಯತೀಶ್ ರೈ, ಟ್ರಸ್ಟಿಗಳಾದ ಸಂತೋಷ ಕುಮಾರ್, ದೇವೇಂದ್ರ ಕೆ. ಶೆಟ್ಟಿ, ಕೃಷ್ಣ ಶೆಟ್ಟಿ, ಶ್ರೀಮತಿ ಸಹನಾ ರಾಜೇಶ್ ರೈ ಮತ್ತು ಕೇಂದ್ರೀಯ ಸಮಿತಿಯ ಸಿಎ ಸುದೇಶ್ ರೈ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ಜ್ಞಾನ ಶಕ್ತಿ ಸುಬ್ರಹ್ಮಣ್ಯ ಯಕ್ಷಗಾನ ಮಂಡಳಿ ಪಾವಂಜೆ ಇವರಿಂದ ತ್ರಿಜನ್ಮ ಮೋಕ್ಷ ಎಂಬ ಯಕ್ಷಗಾನ ಬಯಲಾಟ ನಡೆಯಿತು.