ತಾಲೂಕಿನಲ್ಲಿ ಅತಿವೃಷ್ಟಿಯಿಂದ ನೆರೆ ಬಂದಾಗ, ಕೊರೊನಾ ಸಂದರ್ಭದಲ್ಲಿ ನೊಂದವರಿಗೆ ಹೃದಯಪೂರ್ವಕವಾಗಿ ನೆರವಾಗಿದ್ದನ್ನು ಇಂದಿಗೂ ಅವರು ಸ್ಮರಿಸುತ್ತಿರುವುದು ನನಗೆ ಸಾರ್ಥಕತೆ ತಂದಿದೆ. ರಸ್ತೆ, ಕಿಂಡಿ ಅಣೆಕಟ್ಟು, ಶಾಲಾ ಕಾಲೇಜು ಕಟ್ಟಡ, ಗ್ರಂಥಾಲಯ ನಿರ್ಮಾಣ, ಧಾರ್ಮಿಕ ಶ್ರದ್ಧಾ ಕೇಂದ್ರಗಳ ನಿರ್ಮಾಣ ಸೇರಿದಂತೆ ದಾಖಲೆಯಾಗಿ 3500 ಕೋಟಿ ರೂ. ಅನುದಾನ ತಂದಿದ್ದು ಮುಂದೆ ಎರಡನೇ ಬಾರಿ 50 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲ್ಲಿಸಿದರೆ ತಾಲೂಕನ್ನು ದೇಶಕ್ಕೆ ಮಾದರಿ ತಾಲೂಕಾಗಿ ಅಭಿವೃದ್ಧಿ ಪಡಿಸುತ್ತೇನೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು. ಮಡಂತ್ಯಾರ್, ನಡ, ಕಲ್ಲೇರಿಯಲ್ಲಿ ಗುರುವಾರ ಚುನಾವಣ ಬಹಿರಂಗ ಪ್ರಚಾರ ಸಭೆ ನಡೆಸಿ ತಾಲೂಕಿನಲ್ಲಿ ತನ್ನ ಅವಧಿಯಲ್ಲಿ ಆದ ಅಭಿವೃದ್ಧಿ ವಿಚಾರ ಮುಂದಿಟ್ಟು ಜನರಲ್ಲಿ ಮತ ಯಾಚಿಸಿದರು.
ಮುಂದಿನ ಎರಡು ವರ್ಷದಲ್ಲಿ ತಾಲೂಕಿನಲ್ಲಿ ಯಾವುದೇ ಮಣ್ಣಿನ ರಸ್ತೆ ಇಲ್ಲದ ರೀತಿಯಲ್ಲಿ ರಸ್ತೆಗಳ ಅಭಿವೃದ್ಧಿ ಮಾಡುವೆ. ತಾಲೂಕಿನ ವಿದ್ಯಾವಂತ ಯುವಕರು ದೂರದ ಊರಿಗೆ ಉದ್ಯೋಗಕ್ಕೆ ವಲಸೆ ಹೋಗದೆ ಸ್ಥಳೀಯವಾಗಿ ಉದ್ಯೋಗ ಸಿಗುವ ನಿಟ್ಟಿನಲ್ಲಿ ಉಜಿರೆಯಲ್ಲಿ 108 ಎಕರೆ ಪ್ರದೇಶದಲ್ಲಿ ಕೈಗಾರಿಕಾ ವಲಯ ಪ್ರಾರಂಭಿಸಿ ವಿವಿಧ ಕೈಗಾರಿಕೆ ಆರಂಭಿಸಲಾಗುವುದು.
ತಾಲೂಕಿನಲ್ಲಿ ಶಾಂತಿ ಸಾಮರಸ್ಯ ಬೆಳೆಯುವ ರೀತಿಯಲ್ಲಿ ಎಲ್ಲ ಸಮಾಜವನ್ನು ಸಮಾನ ರೀತಿಯಲ್ಲಿ ಕಾಣುತ್ತಾ ಎಲ್ಲಾ ಸಮಾಜದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ರಾಜ್ಯ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಕಳೆದ ಬಾರಿ ಹರೀಶ್ ಪೂಂಜರನ್ನು ಶಾಸಕರನ್ನಾಗಿ ಮಾಡಿದ ಫಲ ತಾಲೂಕಿನ ಜನ ಅನುಭವಿಸುತ್ತಿದ್ದಾರೆ. ರಾಜ್ಯಕ್ಕೆ ಮಾದರಿ 3,500 ಕೋಟಿ ರೂ.ಅನುದಾನ ತಂದವರನ್ನು ಮತ್ತೂಮ್ಮೆ ಶಾಸಕರನ್ನಾಗಿ ಮಾಡಿದರೆ 7,000 ಕೋಟಿ ರೂ.ಗೂ ಅಧಿಕ ಅನುದಾನ ತಂದು ತಾಲೂಕನ್ನು ಕಂಡರಿಯದ ರೀತಿಯಲ್ಲಿ ಅಭಿವೃದ್ಧಿ ಪಡಿಸಲಿದ್ದಾರೆ ಎಂದರು.
ಕಾಮಿಡಿ ಕಿಲಾಡಿ ಖ್ಯಾತಿಯ ಅನಿಶ್ ವೇಣೂರು, ಹಿತೇಶ್ ಕಾಪಿನಡ್ಕ ಮಾತನಾಡಿದರು. ಬೆಳ್ತಂಗಡಿ ಮಂಡಲ ಬಿಜೆಪಿ ಅಧ್ಯಕ್ಷ ಜಯಂತ್ ಕೋಟ್ಯಾನ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಗಣೇಶ್ ಗೌಡ, ಶ್ರೀನಿವಾಸ್ ರಾವ್, ಮಡಂತ್ಯಾರು ಗ್ರಾ.ಪಂ. ಅಧ್ಯಕ್ಷ ಶಶಿಪ್ರಭಾ, ಮಾಜಿ ಅಧ್ಯಕ್ಷ ಗೋಪಾಲಕೃಷ್ಣ, ಮಚ್ಚಿನ ಗ್ರಾ.ಪಂ. ಅಧ್ಯಕ್ಷ ಚಂದ್ರಕಾಂತ ನಿಡ್ಡಾಜೆ, ಎಪಿಎಂಸಿ ಮಾಜಿ ಸದಸ್ಯ ಸೆಲೆಸ್ಟೀನ್, ಅಭ್ಯರ್ಥಿ ಪ್ರಮುಖ್ ಜಯಾನಂದ್ ಗೌಡ, ಕುವೆಟ್ಟು ಮಹಾಶಕ್ತಿ ಕೇಂದ್ರ ಅಧ್ಯಕ್ಷ ದಾವೋದರ ಗೌಡ, ಹಿರಿಯರಾದ ದಾಮೋದರ ಸಾಲಿಯಾನ್, ಪದ್ಮನಾಭ ಅರ್ಕಜೆ, ಮಂಡಲ ಪದಾಧಿಕಾರಿಗಳು, ಸ್ಥಳೀಯ ಜನಪ್ರತಿನ ಕಾರ್ಯಕರ್ತರು ಉಪಸ್ಥಿತರಿದ್ದರು. ವಸಂತ ಮರಕಡ ಪ್ರಾಸ್ತಾವಿಸಿ ಮಾತನಾಡಿದರು. ಮಡಂತ್ಯಾರು, ಕಲ್ಲೇರಿಯಲ್ಲಿ ಪ್ರಚಾರ ನಡೆಸಿದರು. ಈ ವೇಳೆ ಸಾವಿರಾರು ಕಾರ್ಯಕರ್ತರು, ಪಕ್ಷದ ಪ್ರಮುಖ ಮುಖಂಡರು ಭಾಗವಹಿಸಿದರು.