ಪುಣೆ ಬಂಟರ ಸಂಘದ ವತಿಯಿಂದ ಸಂಘದ ಸಾಂಸ್ಕೃತಿಕ ಸಮಿತಿಯ ಆಶ್ರಯದಲ್ಲಿ ಎ.೧೪ ರಂದು ಓಣಿಮಜಲು ಜಗನ್ನಾಥ ಶೆಟ್ಟಿ ಸಾಂಸ್ಕೃತಿಕ ಬಂಟರ ಭವನದಲ್ಲಿ ಬಿಸು ಪರ್ಬ, ಜಾಗತಿಕ ಬಂಟರ ದಿನಾಚರಣೆ ಹಾಗೂ ಭವನದ ೫ ನೇ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಭವನದ ಆರತಿ ಶಶಿಕಿರಣ್ ಶೆಟ್ಟಿ ಚಾವಡಿಯಲ್ಲಿ ಬೆಳಗ್ಗೆ ಸಾರ್ವಜನಿಕ ಸತ್ಯನಾರಾಯಣ ಪೂಜೆಯನ್ನು ನೆರವೇರಿಸಲಾಯಿತು. ಸಾಯಿಬಾಬಾ ಹಾಗೂ ನಿತ್ಯಾನಂದ ಸ್ವಾಮಿಗಳ ಅಭಿಷೇಕ ಆರತಿಯನ್ನು ಮಾಡಲಾಯಿತು. ಬಿಸು ಕಣಿಯನ್ನು ಪೂಜಿಸಲಾಯಿತು . ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿಯವರು ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಿದರು. ನಂತರ ಭವನದ ಆವರಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಹಾರಾರ್ಪಣೆ ಮಾಡಲಾಯಿತು. ಬಂಟ ಗೀತೆಯನ್ನು ಮೊಳಗಿಸಿ ಗೌರವ ಸಲ್ಲಿಸಲಾಯಿತು.
ನಂತರ ನಡೆದ ಕಾನೂನು ಮಾಹಿತಿ ಕಾರ್ಯಾಗಾರ ನಡೆದಿದ್ದು ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ, ಪ್ರಸಿದ್ಧ ವಕೀಲರಾದ ಪ್ರಸಾದ್ ಕುಲಕರ್ಣಿ, ಅಡ್ವೊಕೇಟ್ ದೀಪಕ್ ಕುಲಕರ್ಣಿ, ಅಡ್ವೊಕೇಟ್ ಹರಿಪ್ರಸಾದ್ ಶೆಟ್ಟಿ, ಅಡ್ವೊಕೇಟ್ ಶಶಿ ಶೆಟ್ಟಿ ಹಾಗೂ ಪುಣೆ ಬಂಟರ ಸಂಘದ ಕಾನೂನು ಸಮಿತಿ ಕಾರ್ಯಾಧ್ಯಕ್ಷ ಗಣೇಶ್ ಶೆಟ್ಟಿ, ಸಂಘದ ಉಪಾಧ್ಯಕ್ಷರಾದ ಪ್ರವೀಣ್ ಶೆಟ್ಟಿ ಪುತ್ತೂರು ಪ್ರಧಾನ ಕಾರ್ಯದರ್ಶಿ ಕೆಂಜಾರು ಅಜಿತ್ ಹೆಗ್ಡೆ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಲತಾ ಎಸ್ ಶೆಟ್ಟಿ, ಸಂಘದ ಉತ್ತರ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಗಣೇಶ್ ಪೂಂಜಾ, ದಕ್ಷಿಣ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಶೇಖರ್ ಸಿ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಉದಯ್ ಶೆಟ್ಟಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿಯವರು ಮಾತನಾಡಿ ಇಂದಿನ ದಿನ ಬಿಸು ಹಬ್ಬ, ವಿಶ್ವ ಬಂಟರ ದಿನಾಚರಣೆ ಹಾಗೂ ಬಂಟರ ಭವನದ ದಿನಾಚರಣೆಯಾಗಿದ್ದು ಪ್ರತೀವರ್ಷ ಆಚರಿಸುತ್ತಾ ಬಂದಿದ್ದೇವೆ. ಬಂಟರ ಭವನ ನಿರ್ಮಾಣದ ನಂತಹ ಸಮಾಜಕ್ಕೆ ನೆರವಾಗುವ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದೇವೆ. ನಾವು ಮಾಡುತ್ತಿರುವ ಪ್ರತಿಯೊಂದು ಕಾರ್ಯಕ್ರಮಗಳೂ ಸಮಾಜ ಬಾಂಧವರಿಗೆ ಒಂದಲ್ಲ ಒಂದು ರೀತಿಯಲ್ಲಿ ಉಪಯೋಗವಾಗಬೇಕೆಂಬ ಉದ್ದೇಶ ನಮ್ಮದಾಗಿದ್ದು ಇಂದು ಪ್ರಸಿದ್ಧ ವಕೀಲರನ್ನು ಕರೆದು ನಮಗೆ ಕಾನೂನಿನ ಕೆಲವೊಂದು ಅಗತ್ಯ ಮಾಹಿತಿಗಳನ್ನು ತಿಳಿದುಕೊಳ್ಳಲು ನೆರವಾಗಲಿದೆ. ಸಂಘದ ಪ್ರಯೊಂದು ಕಾರ್ಯಕ್ರಮಗಳಿಗೂ ಸಂಘದ ಎಲ್ಲಾ ಪದಾಧಿಕಾರಿಗಳು, ಮಹಿಳಾ ವಿಭಾಗ, ಯುವ ವಿಭಾಗ, ಉತ್ತರ ಮತ್ತು ದಕ್ಷಿಣ ಪ್ರಾದೇಶಿಕ ಸಮಿತಿಗಳ ಸಹಕಾರ ನೀಡಿ ಬೆಂಬಲಿಸುತ್ತಿರುವುದು ಸಮಾಜಕ್ಕೆ ಮತ್ತಷ್ಟು ಕೆಲಸ ಮಾಡಲು ಹುರುಪು ನೀಡುತ್ತದೆ. ಅಂತೆಯೇ ಯಕ್ಷಗುರು ಕಟೀಲು ಸದಾನಂದ ಶೆಟ್ಟಿಯವರ ಮೂಲಕ ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ತಾರನಾಥ ರೈ ಮೇಗಿನಗುತ್ತು ಇವರ ನೇತೃತ್ವದಲ್ಲಿ ಯಕ್ಷಗಾನ ತರಬೇತಿಯನ್ನು ಆರಂಭಿಸಲಾಗಿದ್ದು ಇಂದಿನ ದಿನ ನಮ್ಮ ಸಾಂಸ್ಕೃತಿಕ ಸಮಿತಿಯ ಆಶ್ರಯದಲ್ಲಿ ಮಕ್ಕಳಿಗೆ ಯಕ್ಷಗಾನ, ನಾಟಕ, ನೃತ್ಯ, ಹಾಡುಗಾರಿಕೆ ಮುಂತಾದ ಸಾಂಸ್ಕೃತಿಕ ವೇದಿಕೆಯೊಂದನ್ನು ಆರಂಭಿಸಿದ್ದೇವೆ. ಮುಂದೆ ನಿರಂತರವಾಗಿ ವಿವಿಧ ಕಲಾ ಪ್ರಕಾರಗಳ ತರಬೇತಿಗಳನ್ನು ನಡೆಸಲು ಉದ್ದೇಶಿಸಿದ್ದೇವೆ ಎಂದರು.
ಅಡ್ವೊಕೇಟ್ ದೀಪಕ್ ಕುಲಕರ್ಣಿಯವರು ಲೇಬರ್ ಕಾನೂನಿನ ಬಗ್ಗೆ ಮಾಹಿತಿ ನೀಡಿದರು. ಅಡ್ವೊಕೇಟ್ ಪ್ರಸಾದ್ ಕುಲಕರ್ಣಿಯವರು ಅಪರಾಧ, ಬಂಧನ, ಅಪಘಾತ, ಆಕಸ್ಮಿಕ ಸಾವು, ಆಹಾರ ಕಲ ಬೆರಕೆ ಇವುಗಳ ಬಗ್ಗೆ ಮಾಹಿತಿ ನೀಡಿದರು. ಅಡ್ವೊಕೇಟ್ ಹರಿಪ್ರಸಾದ್ ಶೆಟ್ಟಿಯವರು ಲೀವ್ ಲೀವ್ & ಲೈಸನ್ಸ್ ಅಗ್ರಿಮೆಂಟ್ ಹಾಗೂ ವೀಲುನಾಮೆಯ ಬಗ್ಗೆ ಪೂರಕ ಮಾಹಿತಿ ನೀಡಿದರು. ಅಡ್ವೊಕೇಟ್ ಶಶಿ ಶೆಟ್ಟಿಯವರು ಕೌಟುಂಬಿಕ ಹಿಂಸೆ ಹಾಗೂ ವಿವಾಹ ವಿಚ್ಚೇದನ ಕಾನೂನಿನ ಬಗ್ಗೆ ವಿವರಿಸಿದರು. ಸಭಿಕರ ಪ್ರಶ್ನೆಗಳಿಗೆ ಉತ್ತರಿಸಿದರು. ಸಂಘದ ಸಾಮಾಜಿಕ ಜಾಲತಾಣ ವಿಭಾಗದ ಕಾರ್ಯಾಧ್ಯಕ್ಷರಾದ ಕಿಶೋರ್ ಹೆಗ್ಡೆ ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ ವಂದಿಸಿದರು. ಕರಾಕ್ರಮದಲ್ಲಿ ಸಂಘದ ಪದಾಧಿಕಾರಿಗಳು, ಮಹಿಳಾ ವಿಭಾದ ಸದಸ್ಯರು, ಯುವ ವಿಭಾಗದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಬಿಸು ಪರ್ಬದ ನಿಮಿತ್ತ ಸಾಂಪ್ರದಾಯಿಕ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಸಂದರ್ಭ ಮುಂದಿನ ಆಗಸ್ಟ್ ತಿಂಗಳಲ್ಲಿ ಸಂಘದ ಸದಸ್ಯರ ಮೂಲಕ ಯಕ್ಷಗಾನ ಪ್ರದರ್ಶನ ಏರ್ಪಡಿಸುವ ಸಲುವಾಗಿ “ಪ್ರಸಂಗ ಪುಸ್ತಕವನ್ನು ” ಕಟೀಲು ಸದಾನಂದ ಶೆಟ್ಟಿಯವರು ಸಂತೋಷ್ ಶೆಟ್ಟಿಯವರಿಗೆ ಹಸ್ತಾಂತರಿಸಿದರು.