ಗೋವಿನ ಪ್ರತಿಯೊಂದು ಉತ್ಪನ್ನವೂ ಪವಿತ್ರವಾದುದು. ಕೃಷಿ, ಗೋವು ಮತ್ತು ಮನುಷ್ಯನ ನಡುವೆ ಅವಿನಾಭಾವ ಸಂಬಂಧವಿದೆ ಎಂದು ಉಡುಪಿ ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಹೇಳಿದರು. ಅವರು ಹಾರಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಕಾಮಧೇನು, ಕಲ್ಪತರು ಸೇವಾ ಸಮಿತಿ ಅಶ್ರಯದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜರಗಿದ ಗೋ ಸಮಾವೇಶ ಮತ್ತು ಕೃಷಿ ಮೇಳ ಉದ್ಘಾಟಿಸಿದರು.
ಕೃಷಿಗೆ ಗೋವು ಪೂರಕ. ಯುವ ಪೀಳಿಗೆ ಕೃಷಿ, ಗೋವಿನ ಮಹತ್ವ ಅರಿಯುವಂತಾಗಲಿ. ಸಮ್ಮೇಳನವು ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಪ್ರೇರಣೆಯಾಗಲಿ ಎಂದರು.
ಗೋವಿನಲ್ಲಿ 33 ಕೋಟಿ ದೇವತೆಗಳ ಆಶ್ರಯವಿದೆ. ದೇವಸ್ಥಾನಕ್ಕೆ ತೆರಳಿ ಪೂಜಿಸುವುದಕ್ಕಿಂತ ಮನೆಯಲ್ಲೇ ಗೋವಿನ ಸಾಕಾಣಿಕೆ, ಆರಾಧನೆ ಅಧಿಕ ಪುಣ್ಯದಾಯಕ ಎಂದರು.
5 ರೂ. ಹೆಚ್ಚಳ :
ಕೃಷಿಕ ಹಾಗೂ ಹೈನುಗಾರರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತಿಲ್ಲ. ಪ್ರತಿಕೂಲ ವಾತಾವರಣವಿದೆ. ಹಾಲಿನ ಉತ್ಪಾದನೆ ಕುಸಿತಗೊಂಡಿದೆ. ಆದ್ದರಿಂದ ಹಾಲಿಗೆ ಕನಿಷ್ಠ 5 ರೂ. ಹೆಚ್ಚುವರಿಯಾಗಿ ದೊರೆಯಬೇಕು ಎಂದು ರವಿರಾಜ ಹೆಗ್ಡೆ ಕೊಡವೂರು ಹೇಳಿದರು.
ಸಮಿತಿ ಗೌರವಾಧ್ಯಕ್ಷ ಎಚ್. ಪ್ರಕಾಶ್ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಹಾರಾಡಿ ದೇವಸ್ಥಾನದ ಆಡಳಿತ ಮೊಕ್ತೇಸರ ಎಚ್. ರತ್ನಾಕರ ಶೆಟ್ಟಿ, ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಅರ್ಚಕ ನರಸಿಂಹ ಸೋಮಯಾಜಿ, ಗಣೇಶೋತ್ಸವ ಸಮಿತಿಯ ಜ್ಞಾನ ವಸಂತ ಶೆಟ್ಟಿ, ಕುಕ್ಕುಡೆ ದೇವಸ್ಥಾನ ಆಡಳಿತ ಮೊಕ್ತೇಸರ ಜಗದೀಶ ಶೆಟ್ಟಿ, ಸಾಲಿಕೇರಿ ದೇವಸ್ಥಾನದ ಆಡಳಿತ ಮೊಕ್ತೇಸರ ಬಾಲಕೃಷ್ಣ ಶೆಟ್ಟಿಗಾರ್, ಪಂಚಾಯತ್ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಉದ್ಯಮಿ ಸಂದೀಪ ಶೆಟ್ಟಿ ಉಡುಪಿ, ಸಮಿತಿ ಅಧ್ಯಕ್ಷ ರಾಘವ ಶೆಟ್ಟಿ, ನಂಚಾರು ಗೋ ಶಾಲೆಯ ರಾಜೇಂದ್ರ ಚಕ್ಕೇರ, ಗ್ರಾ. ಯೋಜನೆಯ ರಮೇಶ್, ರಾಘವೇಂದ್ರ ಮತ್ತಿತರರಿದ್ದರು.
ಪಶುಪಾಲನೆ ಮತ್ತು ಅದ ರಿಂದಾಗುವ ಪ್ರಯೋಜನ ಕುರಿತು ಪ್ರವೀಣ್ ಸರಳಾಯ, ಪಶು ಆರೋಗ್ಯದ ಬಗ್ಗೆ ಡಾ| ಮಂಜುನಾಥ್ ಅಡಿಗ, ಮೋಹನ್ರಾಜ್ ಅವರು ಕೃಷಿ ಬಗ್ಗೆ ಮಾಹಿತಿ ನೀಡಿದರು. ಸಾಧಕರನ್ನು ಸಮ್ಮಾನಿಸಲಾಯಿತು.
ಸಮಿತಿ ಕಾರ್ಯದರ್ಶಿ ಚಂದ್ರ ಶೇಖರ ಶೆಟ್ಟಿ ಸ್ವಾಗತಿಸಿ, ನಿವೃತ್ತ ಮುಖ್ಯೋಪಾಧ್ಯಾಯ ದಿನಕರ ಆರ್. ಶೆಟ್ಟಿ ಪ್ರಸ್ತಾವನೆಗೈದರು. ಕೆ.ಸಿ. ಅಮೀನ್, ರಾಂ ಶೆಟ್ಟಿ ಸಮ್ಮಾನಿತರನ್ನು ಪರಿಚಯಿಸಿ, ಸತೀಶ್ಚಂದ್ರ ಶೆಟ್ಟಿ ಚಿತ್ರಪಾಡಿ ನಿರೂಪಿಸಿದರು.