ಪುಣೆಯಲ್ಲಿ ಸಾಹಿತಿ ಪಾಂಗಾಳ ವಿಶ್ವನಾಥ ಶೆಟ್ಟಿಯವರ ನೇತೃತ್ವದಲ್ಲಿ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿಯು ಕಳೆದ ೭ ವರ್ಷಗಳಿಂದ ನಿಸ್ವಾರ್ಥವಾಗಿ ಕಲಾ ಸೇವೆಯಲ್ಲಿ ತೊಡಗಿಸಿಕೊಂಡು ಪುಣೆಯಲ್ಲಿ ಯಕ್ಷಗಾನವನ್ನು ಉಳಿಸಿ ಬೆಳೆಸುವಲ್ಲಿ ಮಾಡಿರುವ ಸಾಧನೆ ಅಪಾರವಾಗಿದೆ. ಯಕ್ಷಾಗಾನವೆಂಬುದು ನಾವೆಲ್ಲ ಆರಾಧಿಸಿಕೊಂಡು ಬಂದಿರುವ ಜೀವನವನ್ನು ಸಮೃದ್ಧಗೊಳಿಸುವ ನವರಸಭರಿತವಾದ ಪರಿಪೂರ್ಣವಾದ ಕಲೆಯಾಗಿದ್ದು ಇಲ್ಲಿರುವ ಕಲಾವಿದರಿಗೆ ಯಕ್ಷಗಾನ ತರಬೇತಿಯನ್ನು ನೀಡಿರುವುದಲ್ಲದೇ ಉತ್ತಮವಾದ ವೇದಿಕೆಯನ್ನು ಕಲ್ಪಿಸಿಕೊಟ್ಟು ಯಕ್ಷಗಾನವನ್ನು ಪುಣೆಯಲ್ಲಿ ಬೆಳೆಸುವಲ್ಲಿ ಸಂಘ ವಿಶೇಷವಾದ ಶ್ರಮವಹಿಸಿದ್ದು ನಿಸ್ವಾರ್ಥವಾದ ಸಮಾಜಸೇವೆಗೆ ಉನ್ನತಮಟ್ಟದ ಯಶಸ್ಸು ದೊರಕುತ್ತದೆ ಎಂಬುದಕ್ಕೆ ಈ ಮಂಡಳಿ ಉತ್ತಮ ಉದಾಹರಣೆಯಾಗಿದೆ. ಅದಕ್ಕಾಗಿ ಈ ಸಂಸ್ಥೆಯು ಅಭಿನಂದನಾರ್ಹವಾಗಿದೆ ಎಂದು ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಅಭಿಪ್ರಾಯಪಟ್ಟರು.
ಅವರು ಪುಣೆ ಕನ್ನಡ ಸಂಘದ ದಿ. ಗುಂಡೂರಾಜ್ ಎಂ ಶೆಟ್ಟಿ ಸಭಾಗೃಹದ ಡಿ. ವಾಸು ಕುಲಾಲ್ ವಿಟ್ಲ ವೇದಿಕೆಯಲ್ಲಿ ನಡೆದ ಶ್ರೀ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿಯ 7ನೇ ವಾರ್ಷಿಕೋತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಾ ಇಂದಿನ ಕಾರ್ಯಕ್ರಮದಲ್ಲಿ ಬಂಟರ ಸಂಘದ ಕಲ್ಪವೃಕ್ಷ ಸಮಾಜಕಲ್ಯಾಣ ಯೋಜನೆಯ ಕಾರ್ಯಾಧ್ಯಕ್ಷ ಆತ್ಮೀಯರಾದ ಸತೀಶ್ ಶೆಟ್ಟಿಯವರ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಸನ್ಮಾನಿಸಿರುವುದು ಸಂಘದ ಅರ್ಥಪೂರ್ಣ ಕಾರ್ಯವಾಗಿದೆ. ಇದು ಪುಣೆ ಬಂಟರ ಸಂಘಕ್ಕೆ ದೊರೆತ ಗೌರವವೆಂದು ಭಾವಿಸುತ್ತೇನೆ. ಅಂತೆಯೇ ಇಂದಿರಾ ಸಾಲ್ಯಾನ್ ಹಾಗೂ ಕಲಾವಿದರ ಸನ್ಮಾನ ಉತ್ತಮ ಕಾರ್ಯವಾಗಿದೆ. ತುಳುನಾಡಿನಲ್ಲಿ ಯಕ್ಷಗಾನದ ಆಸಕ್ತಿಯನ್ನು ಜನರು ಕಳೆದುಕೊಳ್ಳುವ ಕಾಲಘಟ್ಟದಲ್ಲಿ ಯಕ್ಷಗಾನದ ಶ್ರೇಷ್ಠ ಭಾಗವತರಾದ ಸತೀಶ್ ಶೆಟ್ಟಿ ಪಟ್ಲರವರು ಯಕ್ಷಗಾನಕ್ಕೆ ಹೊಸ ರೂಪ ಕೊಟ್ಟು ಯುವ ಜನತೆಯನ್ನು ಯಕ್ಷಗಾನಕ್ಕೆ ಮಾರು ಹೋಗುವಂತೆ ಮಾಡಿದ ಕಲಾವಿದರಾಗಿದ್ದು ಅವರ ಫೌಂಡೇಶನ್ ಮೂಲಕ ಬಡ ಕಲಾವಿದರಿಗೆ ಆಶ್ರಯ ಹಾಗೂ ವೈದ್ಯಕೀಯ ನೆರವುಗಳನ್ನು ನೀಡಿ ಮಾನವೀಯತೆಯನ್ನು ಮೆರೆದಿದ್ದಾರೆ. ಅದೇ ರೀತಿ ಪುಣೆಯಲ್ಲಿ ಅಯ್ಯಪ್ಪ ಯಕ್ಷಗಾನದಂತಹ ಸಂಸ್ಥೆ ಯಕ್ಷಗಾನದ ಮೂಲಕ ಕಲೆಯನ್ನು ಉಳಿಸುವುದಲ್ಲದೇ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯವಾಗಿದೆ. ನಾನೂ ಶಾಲಾ ದಿನಗಳಿಂದಲೂ ಯಕ್ಷಗಾನವನ್ನು ಪ್ರೀತಿಸುತ್ತಾ ಬಂದವನು. ಮುಂದೆಯೂ ಈ ಸಂಸ್ಥೆ ಯಶಸ್ವಿಯಾಗಿ ಮುನ್ನಡೆಯಲಿ ಎಂದರು.
ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದ ಬಿಲ್ಲವ ಸಮಾಜಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ ಕಡ್ತಲ ಮಾತನಾಡಿ ಆರಾಧನಾ ಕಲೆಯೆಂದೇ ಕರೆಯಲ್ಪಡುವ ಯಕ್ಷಗಾನದ ಸೇವೆಯಲ್ಲಿ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿ ಪ್ರಾಮಾಣಿಕವಾಗಿ ತೊಡಗಿಸಿಕೊಂಡಿರುವುದು ಅಭಿನಂದನೀಯವಾಗಿದೆ. ಮಕ್ಕಳಿಗೆ ಯಕ್ಷಗಾನವನ್ನು ಕಲಿಸುವ ಮೂಲಕ ಉತ್ತಮ ಕೆಲಸ ಸಂಘದಿಂದ ಆಗುತ್ತಿದೆ. ಇಂದು ಸಮಾಜದ ಯೋಗ್ಯ ಸಾಧಕರಿಗೆ ಸನ್ಮಾನಿಸಿರುವುದು ಔಚಿತ್ಯಪೂರ್ಣವಾದ ಕಾರ್ಯವಾಗಿದೆ. ನಾವೆಲ್ಲರೂ ಯಕ್ಷಗಾನ ಕಲೆಯ ಉಳಿವಿಗೆ ಸಹಕಾರ ನೀಡಬೇಕು ಎಂದರು.
ಪುಣೆ ಬಂಟರ ಸಂಘದ ದಕ್ಷಿಣ ಪ್ರಾದೇಶಿಕ ಸಮಿತಿಯ ಕಾರ್ಯಧ್ಯಕ್ಷ ಶೇಖರ್ ಸಿ ಶೆಟ್ಟಿ ಮಾತನಾಡಿ ನಾವು ಬಾಲ್ಯದಿಂದಲೇ ಯಕ್ಷಗಾನ ಕಲೆಯನ್ನು ಪ್ರೀತಿಸುತ್ತಾ ಬಂದಿರುವೆವು. ಪುಣೆಯಲ್ಲಿ ಮಂಡಳಿ ಮಾಡುತ್ತಿರುವ ಕಲಾಸೇವೆಗೆ ಶುಭಾಶಯಗಳು. ನಾವೆಲ್ಲರೂ ಕಲಾಸೇವೆಗೆ ಪ್ರೋತ್ಸಾಹ ನೀಡೋಣ ಎಂದರು.
ಶ್ರೀ ಗುರುದೇವಾ ಸೇವಾ ಬಳಗದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಮಾತನಾಡಿ ಇಂದು ಮಂಡಳಿಯ ಮೂಲಕ ಉತ್ತಮ ಕಾರ್ಯ ಆಗುತ್ತಿದೆ. ಯಕ್ಷಗಾನದಂತಹ ಕಲೆಯನ್ನು ಉಳಿಸಲು ನಾವೆಲ್ಲರೂ ಪ್ರೋತ್ಸಾಹ ನೀಡಬೇಕಾಗಿದೆ. ಕಲಾಪೋಷಕರ ಸಹಕಾರವಿಲ್ಲದಿದ್ದರೆ ಯಕ್ಷಗಾನ ಉಳಿಯಲು ಸಾಧ್ಯವಿಲ್ಲ ಎಂದರು.
ಪುಣೆ ತುಳುಕೂಟದ ಗೌರವಾಧ್ಯಕ್ಷ ತಾರಾನಾಥ ಕೆ ರೈ ಮೇಗಿನಗುತ್ತು ಮಾತನಾಡಿ ನಾನೂ ಯಕ್ಷಗಾನ ಕಲೆಯನ್ನು ಆಸ್ವಾದಿಸುವ ಕುಟುಂಬದಿಂದ ಬಂದವನಾಗಿದ್ದು ನನ್ನ ತಂದೆಯವರು ಯಕ್ಷಗಾನ ಕಲಾವಿದರಾಗಿದ್ದರು. ಬಾಲ್ಯದಲ್ಲಿ ಯಕ್ಷಗಾನದಿಂದಲೇ ಅನ್ನದ ಬಟ್ಟಲು ತುಂಬುತಿತ್ತು. ಅಂತಹ ಕಲೆಗೆ ಪ್ರೋತ್ಸಾಹ ನೀಡುವುದು ನಮ್ಮ ಕರ್ತವ್ಯವಾಗಿದೆ. ಸಾಂಘ ಸಂಸ್ಥೆಗಳಲ್ಲಿ ಪ್ರಾಮಾಣಿಕವಾಗಿ ನಿಸ್ವಾರ್ಥಭಾವದಿಂದ ಕೆಲಸ ಮಾಡಿದರೆ ಎಲ್ಲರ ಸಹಕಾರ ಖಂಡಿತಾ ಸಿಗುತ್ತದೆ. ದಿ. ವಾಸುಕುಲಾಲ್ ವಿಟ್ಲ ಈ ಮಂಡಳಿಗೆ ಸೇವೆ ಸಲ್ಲಿಸಿದ್ದಾರೆ. ಅವರ ನೆನಪು ಸ್ಮರಣೀಯವಾಗಿದೆ ಎಂದರು.
ಬಂಟ್ಸ್ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷರಾದ ಕಟ್ಟಿಂಗೇರಿ ಮನೆ ಸುಭಾಶ್ಚಂದ್ರ ಹೆಗ್ಡೆಯವರು ಮಾತನಾಡಿ ಯಕ್ಷಗಾನ ನಮ್ಮ ಸಂಸ್ಕೃತಿ, ಸಂಸ್ಕಾರದೊಂದಿಗೆ ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕೆಂಬ ಸಂದೇಶವನ್ನು ನೀಡುವ ಸಮೃದ್ಧ ಕಲೆಯಾಗಿದೆ. ಯಕ್ಷಗಾನ ಕಲೆಯು ಪಾರ್ತಿಸುಬ್ಬನಿಂದ ಆರಂಭವಾಗಿ ಬದಲಾಗುತ್ತಾ ಇಂದಿಗೂ ಶ್ರೇಷ್ಠ ಕಲೆಯಾಗಿ ಉಳಿದಿದೆ. ಯಕ್ಷಾಗಾನ ಮಂಡಳಿಯು ಪುಣೆಯಲ್ಲಿ ಕಲೆಯನ್ನು ಉಳಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ. ಕಲಾವಿದರಿಗೆ ಪ್ರೋತ್ಸಾಹ ನೀಡುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಎಡಮಲೆ ಮದ್ದಳೆಯ ಮಾಂತ್ರಿಕ ಸುಬ್ರಮಣ್ಯ ಶಾಸ್ತ್ರಿ ಮಣಿಮುಂಡ ಮುಮ್ಮೇಳದಲ್ಲಿ ಗಣೇಶ್ ಶೆಟ್ಟಿ ಮುಂಬಯಿ, ವಾಸುದೇವ ರೈ ಬೆಳ್ಳಾರೆ, ನಾಗೇಶ್ ಕುಮಾರ್ ಪೊಳಲಿ, ವಿಕೇಶ್ ರೈ ಶೇಣಿ, ಜಗದೀಪ್ ಶೆಟ್ಟಿ, ನಯನಾ ಸಿ ಶೆಟ್ಟಿ, ನಾಗೇಶ್ ಕುಲಾಲ್ ಕಡಂದಲೆ, ಸುದರ್ಶನ್ ಸುವರ್ಣ, ಕುಮಾರಿ ಸಹನಾ ಕುಲಾಲ್ ಹಾಗೂ ಕುಮಾರಿ ನಿಶಾ ಪೂಜಾರಿ ಸಹಕರಿಸಿದರು. ಸಂಘದ ಉಪಾಧ್ಯಕ್ಷರಾದ ಚಂದ್ರಶೇಖರ ಶೆಟ್ಟಿ ನಿಟ್ಟೆ ಸ್ವಾಗತಿಸಿದರು. ಕನ್ನಡ ಮಾಧ್ಯಮ ಹೈಸ್ಕೂಲ್ ಮುಖ್ಯೋಪಾಧ್ಯಾಯರಾದ ಚಂದ್ರಕಾಂತ ಹಾರಕೂಡೆ, ನಾಗೇಶ್ ಕುಲಾಲ್ ಕಡಂದಲೆ, ಗೀತಾ ಡಿ ಪೂಜಾರಿ ಸನ್ಮಾನ ಪತ್ರ ವಾಚಿಸಿದರು. ಪತ್ರಕರ್ತ ಕಿರಣ್ ಬಿ ರೈ ಕರ್ನೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಸಂಘದ ಪದಾಧಿಕಾರಿಗಳಾದ ವಿಕೇಶ್ ರೈ ಶೇಣಿ, ಜಗದೀಪ್ ಶೆಟ್ಟಿ, ನಯನಾ ಸಿ ಶೆಟ್ಟಿ ಆಶಾ ಆರ್ ಪೂಜಾರಿ, ಶಾಲಿನಿ ಜಿ ಮೂಲ್ಯ, ನಾಗೇಶ್ ಕುಲಾಲ್, ಸುದರ್ಶನ್ ಸುವರ್ಣ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಕಾರ್ಯಕ್ರಮದಲ್ಲಿ ಪುಣೆ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಕೆಂಜಾರು ಅಜಿತ್ ಹೆಗ್ಡೆ, ಪದಾಧಿಕಾರಿಗಳಾದ ವಿವೇಕಾನಂದ ಶೆಟ್ಟಿ ಆವರ್ಸೆ, ಪ್ರಶಾಂತ್ ಶೆಟ್ಟಿ ಹೆರ್ಡೆಬೀಡು, ಸುಧಾಕರ ಸಿ ಶೆಟ್ಟಿ, ಪುಣೆ ಬಂಟ್ಸ್ ಅಸೋಸಿಯೇಷನ್ ನ ಕಾರ್ಯದರ್ಶಿ ಅರವಿಂದ ರೈ, ಪುಣೆ ಕನ್ನಡ ಸಂಘದ ವಿಶ್ವಸ್ಥರಾದ ಡಾ. ಬಾಲಾಜಿತ್ ಶೆಟ್ಟಿ, ತುಳು ಸಂಘ ಪಿಂಪ್ರಿ ಚಿಂಚ್ವಾಡ್ ಇದರ ಮಾಜಿ ಅಧ್ಯಕ್ಷರಾದ ಶ್ಯಾಮ್ ಸುವರ್ಣ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಪ್ರೀತಿ ಭೋಜನದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.