ಕಂಬಳವು ತುಳುನಾಡ ರೈತಾಪಿ ಜನರ ಆಚರಣೆಯಾಗಿದ್ದು, ಬಂಟ ಬಾಂಧವರ ಉತ್ಸವವಾಗಿದ್ದು ಗ್ರಾಮೀಣ ಹಿನ್ನೆಲೆಯಲ್ಲಿ ಭಾತೃತ್ವವನ್ನೂ, ಸಾಮಾರಸ್ಯವನ್ನೂ ಬೆಳೆಸುವ ಹಾಗೂ ಬೆರೆಸುವ ಕೊಂಡಿಯೆಂದರೆ ಅತಿಶಯೋಕ್ತಿಯಾಗದು.ನೂರಾರು ವರುಷಗಳ ಇತಿಹಾಸ, ಜನ ಜೀವನ, ಸಂಸ್ಕೃತಿಯೊಂದಿಗೆ ಬೆಸೆದುಕೊಂಡ ಬಾಂಧವ್ಯದ ಈ ಕಂಬಳ ಕ್ರೀಡೆಯಲ್ಲಿ ಸಾಧನೆಯ ಕಿರೀಟವನ್ನು ತೊಟ್ಟು ಬೋಳದಗುತ್ತು ಎಂಬ ಹೆಸರನ್ನು ಎಲ್ಲೆಡೆ ಪಸರಿಸಿದವರು ಬೋಳದಗುತ್ತಿನ ಸಹೋದರರಾದ ಸತೀಶ್ ಶೆಟ್ಟಿ ಮತ್ತು ಜಗದೀಶ್ ಶೆಟ್ಟಿ. ಮುಂಡ್ಕೂರು ಸಾಂತ್ರಾಳಗುತ್ತು ದಿ|ಸಂಕಪ್ಪ ಶೆಟ್ಟಿ ಮತ್ತು ಬೋಳದಗುತ್ತು ದಿ|ಇಂದಿರಾ.ಎಸ್ ಶೆಟ್ಟಿಯವರ ಏಳು ಜನ ಮಕ್ಕಳಲ್ಲಿ ಸತೀಶ್ ಶೆಟ್ಟಿ ಮತ್ತು ಜಗದೀಶ್ ಶೆಟ್ಟಿ ಬಾಲ್ಯದ ದಿನಗಳಲ್ಲಿ ತಮ್ಮ ಮನೆಯಲ್ಲಿದ್ದ ಎರಡು ಬೋಳದಗುತ್ತಿನ ಕೋಣಗಳನ್ನು ನೋಡಿ ಮುಂದೆ ಬೋಳದಗುತ್ತಿನ ಪರವಾಗಿ ಕೋಣಗಳನ್ನು ಸ್ಪರ್ಧಿಸಬೇಕೆಂಬ ಹಂಬಲವನ್ನು ಹೊಂದಿದ್ದರು. ನಂತರ 1996ರಲ್ಲಿ ಮುಂಬೈನಲ್ಲಿ ಸಹೋದರರಿಬ್ಬರೂ ಜೊತೆಗೂಡಿ ಹೋಟೆಲೊಂದನ್ನು ಪ್ರಾರಂಭಿಸಿ ಪಡೆದ ಆದಾಯದಲ್ಲಿ 2008ರಲ್ಲಿ ಎರಡು ಕೋಣಗಳನ್ನು ಖರೀದಿಸಿ ಅನೇಕ ಕಂಬಳಕೂಟದಲ್ಲಿ ಸ್ಪರ್ಧಿಸಿದರೂ 2011ರವರೆಗೆ ಯಾವುದೇ ಪ್ರಶಸ್ತಿಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. 2012 ರಲ್ಲಿ ಕಂಬಳಕೂಟದ ನೇಗಿಲಿನ ಸೀನಿಯರ್ ವಿಭಾಗಕ್ಕೆ ಕೊಳಚೂರು ಕೊಂಡೊಟ್ಟಿನ ಸುಕುಮಾರ ಶೆಟ್ಟಿಯವರ ಅಭಯಹಸ್ತದಲ್ಲಿ ಪ್ರವೇಶವಾದರು. ನಂತರ ಮಿಯಾರ್ ನಲ್ಲಿ ನಡೆದ ಜೂನಿಯರ್ ನೇಗಿಲಿನ ವಿಭಾಗದಲ್ಲಿ ಪಾಂಚ ಮತ್ತು ಬೊಳ್ಳ ಎಂಬ ಕೋಣಗಳು ಜೋಡಿಯಾಗಿ ಸ್ಪರ್ಧಿಸಿ ಮೊದಲ ಪದಕವನ್ನು ತಂದುಕೊಟ್ಟಿತು. ಕಂಬಳಕೂಟದ ಸೀನಿಯರ್ ನೇಗಿಲಿನ ವಿಭಾಗದಲ್ಲಿ ಸತತ ಆರು ವರ್ಷಗಳ ಸೀಸನ್ ಚಾಂಪಿಯನ್ ಸರಣಿ ಶ್ರೇಷ್ಠವನ್ನು ಪಡೆದು ಬೋಳದಗುತ್ತಿನ ಹೆಸರು ಎಲ್ಲೆಡೆ ಪಸರಿಸಿ ಅಭಿಮಾನಿ ಬಳಗವೂ ಹೆಚ್ಚಾಗುತ್ತಲೇ ಹೋಯಿತು. 2019ರ ಬಾರಡಿಬೀಡು ಸೂರ್ಯ ಚಂದ್ರ ಜೋಡುಕರೆ ಕಂಬಳದಲ್ಲಿ ನೇಗಿಲಿನ ಸೀನಿಯರ್ ವಿಭಾಗದಲ್ಲಿ ಪ್ರಥಮ ಮತ್ತು ದ್ವಿತೀಯ ಬಹುಮಾನವನ್ನು ತನ್ನದಾಗಿಸಿಕೊಂಡರು. ಸುರತ್ಕಲ್ ನಲ್ಲಿ ನಡೆದ ರಾಮ ಲಕ್ಷ್ಮಣ ಜೋಡುಕರೆ ಕಂಬಳ ಹಾಗೂ 25ನೇ ವರ್ಷದ ಪಜೀರಿನಲ್ಲಿ ನಡೆದ ಜೋಡುಕರೆ ಕಂಬಳದಲ್ಲಿ ಮೂರೂ ಪದಕಗಳನ್ನು ಬೋಳದಗುತ್ತು ತಂಡ ಮುಡಿಗೇರಿಸಿಕೊಂಡಿರುವುದು ಹೆಮ್ಮೆಯ ವಿಚಾರ. ಬೋಳಾದಗುತ್ತಿನ ಒಟ್ಟು ಐದು ಕೋಣಗಳ ಪೈಕಿ ಬೊಲ್ಲ ಸೇರಿ ತದನಂತರ ಧೋನಿ ಎಂಬ ಕೋಣವು ಆರು ವರ್ಷಗಳು ಸೀನಿಯರ್ ವಿಭಾಗದಲ್ಲಿ ಸ್ಪರ್ಧಿಸಿದರೆ ಅಪ್ಪು ಮತ್ತು ಪಾಂಚ ಹಾಗೂ ಕಾಳ ಮತ್ತು ಮಂಜು ಎಂಬ ಕೋಣಗಳು ಜೋಡಿಯಾಗಿ ನೇಗಿಲಿನ ಜೂನಿಯರ್ ವಿಭಾಗದಲ್ಲಿ ಸತತ ಎರಡು ವರ್ಷಗಳು ಸ್ಪರ್ಧಿಸಿದೆ. ನಿರಂತರ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುತ್ತಿರುವ ಬೋಳದಗುತ್ತಿನ ಕೋಣಗಳ ಓಟಗಾರನಾಗಿ ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್.ಎಮ್ ಶೆಟ್ಟಿ ಹಾಗೂ ಮರೋಡಿ ಶ್ರೀಧರ್ ಹತ್ತು ವರ್ಷಗಳಿಂದ ತಂಡದಲ್ಲಿದ್ದರು. ಸರಳ,ಸಜ್ಜನ ಸಹೋದರರ ಕಂಬಳ ಕ್ಷೇತ್ರದ ಸಾಧನೆಗೆ ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನಗಳನ್ನು ಪಡೆದುಕೊಂಡಿರುತ್ತಾರೆ. ಅಷ್ಟೇ ಅಲ್ಲದೆ ಪುಂಜಾಲಕಟ್ಟೆ ಸ್ವಸ್ತಿಕ್ ಪ್ರೆಂಡ್ಸ್ ಕ್ಲಬ್ ಇದರ ವತಿಯಿಂದ ನಡೆದ 36ನೇ ವರ್ಷದ ಸಂಭ್ರಮಾಚರಣೆ ಮತ್ತು ಉಚಿತ ಸಾಮೂಹಿಕ ವಿವಾಹ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ನೀಡುವ ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡಿರುವುದು ಬಂಟ ಸಮುದಾಯಕ್ಕೊಂದು ಹೆಮ್ಮಯ ವಿಚಾರ. ಎಲ್ಲಾ ಸಂಪ್ರದಾಯ, ನಂಬಿಕೆ, ಆಚರಣೆ, ಆರಾಧನೆಗಳ ಆಧಾರವಾದ ಈ ಜನಪದ ಕ್ರೀಡೆ ಕಂಬಳವನ್ನು ಮುಂದಿನ ಪೀಳಿಗೆಯೂ ಮುಂದುವರಿಸುವಂತಾಗಬೇಕೆನ್ನುವುದು ಬೋಳಾದಗುತ್ತು ಸಹೋದರರ ಮನದಾಳದ ಮಾತು. ಸತೀಶ್ ಮಲ್ಲಿಕಾ ಶೆಟ್ಟಿ ದಂಪತಿಗಳು ಹಾಗೂ ಮಕ್ಕಳಾದ ಶಾಹಿಸ, ಕ್ರೀಷಾ ಹಾಗೂ ಜಗದೀಶ್ ಸುಷ್ಮಾ ಶೆಟ್ಟಿ ದಂಪತಿಗಳು ಮತ್ತು ಮಗ ಲವಿತ್ ಜತೆ ಸುಂದರ ಜೀವನ ನಡೆಸುತ್ತಿದ್ದಾರೆ. ಬೋಳದಗುತ್ತಿನ ಈ ಕಂಬಳ ಕ್ಷೇತ್ರದ ಸಾಧನೆ ಇನ್ನೂ ಹೆಚ್ಚಾಗಲಿ, ಸಕಲ ದೈವ ದೇವರುಗಳ ಆಶೀರ್ವಾದ ಇವರ ಮೇಲಿರಲಿ, ಹೆಚ್ಚೆಚ್ಚು ಪ್ರಶಸ್ತಿಗಳನ್ನು ಪಡೆಯುವಂತಹ ಅವಕಾಶ ಒದಗಿ ಬರಲೆನ್ನುವುದೇ ನಮ್ಮೆಲ್ಲರ ಆಶಯ. ಬಂಟ ಸಮಾಜದ ಯಶಸ್ವಿ ಸಾಧಕರು ನೀವುಗಳು. ನಿಮಗೆ ಬಂಟ್ಸ್ ನೌ ತಂಡದ ಪರವಾಗಿ ಧನ್ಯವಾದಗಳು.