ಮಹಿಳಾ ದಿನಾಚರಣೆಯು ಕೇವಲ ಪ್ರಶಂಸೆಗಷ್ಟೇ ಮೀಸಲಾಗಿರಬಾರದು. ಅದು ಸ್ವ ವಿಮರ್ಶೆಗೂ ವೇದಿಕೆಯಾಗಬೇಕು. ಏನದರೂ ತಪ್ಪು, ಲೋಪಗಳು ಕಂಡುಬಂದರೆ ಮುಕ್ತ ಮನಸ್ಸಿನಿಂದ ಒಪ್ಪಿಕೊಂಡು ತಿದ್ದಿಕೊಳ್ಳುವ ಗುಣವನ್ನು ನಾವು ಬೆಳೆಸಿಕೊಳ್ಳಬೇಕು. ಅದು ದೊಡ್ಡದೊಂದು ಬದಲಾವಣೆಗೆ ನಾಂದಿ ಹಾಡಿ ನಮ್ಮನ್ನು ನೆಮ್ಮದಿ ಹಾಗೂ ಯಶಸ್ಸಿನತ್ತ ಕೊಂಡೊಯ್ಯಲಿದೆ.
ಮಹಿಳೆಯರು ಸದಾ ಗೌರವಿಸಲ್ಪಡುತ್ತಿರಬೇಕು. ಅದಕ್ಕೆ ಬೇಕಾದ ವೇದಿಕೆಯನ್ನು ಎಲ್ಲರೂ ಸೇರಿ ನಿರ್ಮಿಸೋಣ ಎಂದು ಸುರತ್ಕಲ್ ಬಂಟರ ಸಂಘದ ಮಹಿಳಾ ವೇದಿಕೆಯ ಅಧ್ಯಕ್ಷೆ ಚಿತ್ರಾ ಜೆ. ತಿಳಿಸಿದರು.
ಸುರತ್ಕಲ್ ಬಂಟರ ಭವನದಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ನಡೆದ ಗಣೇಶ್ ಎಚ್. ಆರ್ ಅವರಿಂದ ಯೋಗ ಪ್ರಾಣ ವಿದ್ಯಾ ಚಿಕಿತ್ಸಾ ವಿಧಾನ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಶಿಬಿರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಾಣ ಯೋಗ ಚಿಕಿತ್ಸಾ ವಿಧಾನದಿಂದ ಮನಸ್ಸು ಹಗುರವಾಗುತ್ತದೆ. ದೇಹ ನಿಯಂತ್ರಣದಲ್ಲಿರುತ್ತದೆ. ಪ್ರಾಣ ಯೋಗ ಮಾಡುವವರಲ್ಲಿ ಶ್ರದ್ಧೆ, ಭಕ್ತಿ ಮುಖ್ಯ ಎಂದು ಗಣೇಶ್ ಎಚ್.ಆರ್. ಯೋಗ ಪ್ರಾಣ ವಿದ್ಯಾ ಚಿಕಿತ್ಸಾ ವಿಧಾನದ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ನೀಡಿ ಮಾತನಾಡಿದರು. ಸಮಾರಂಭದಲ್ಲಿ ಗಣೇಶ್ ಎಚ್ ಆರ್ ಅವರನ್ನು ಮಹಿಳಾ ವೇದಿಕೆಯಿಂದ ಗೌರವಿಸಲಾಯಿತು.
ಸಮಾರಂಭದಲ್ಲಿ ಮಹಿಳಾ ವೇದಿಕೆಯ ಮಾಜೀ ಅಧ್ಯಕ್ಷರಾದ ಆಶಾ ಶೆಟ್ಟಿ, ಬೇಬಿ ಶೆಟ್ಟಿ, ಮಹಿಳಾ ವೇದಿಕೆಯ ಉಪಾಧ್ಯಕ್ಷೆ ಭವ್ಯಾ ಎ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸರೋಜ ಟಿ ಶೆಟ್ಟಿ, ಕೋಶಾಧಿಕಾರಿ ಶೈಲಾ ಎಸ್. ಶೆಟ್ಟಿ, ಜತೆ ಕಾರ್ಯದರ್ಶಿ ರಾಜೇಶ್ವರಿ ಡಿ. ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಭಾರತಿ ಡಿ. ಶೆಟ್ಟಿ, ಸಾಂಸ್ಕ್ರತಿಕ ಕಾರ್ಯದರ್ಶಿ ಕೇಸರಿ ಪೂಂಜ ಕ್ರೀಡಾ ಕಾರ್ಯದರ್ಶಿ ಅಕ್ಷತಾ ಜಿ ಶೆಟ್ಟಿ, ಉಪಸ್ಥಿತರಿದ್ದರು. ರೇಖಾ ಶೆಟ್ಟಿ ಪಡ್ರೆ ಪ್ರಾರ್ಥನೆಗೈದರು. ಚಿತ್ರಾ ಜೆ ಶೆಟ್ಟಿ ಸ್ವಾಗತಿಸಿದರು. ಭಾರತಿ ಜಿ ಶೆಟ್ಟಿ ವಂದಿಸಿದರು. ಸುಧಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.